VIDEO | ಕುಟುಂಬಕ್ಕೆ ಹೆಗಲಾಗಲು ರಸ್ತೆ ಬದಿ ರುಚಿಕರ ಆಹಾರ ಮಾರುತ್ತಿರುವ ಮಕ್ಕಳು!

The Story Of Two Brothers Who Run Food Stall In Amritsar To Support Family
Published on

ಪಂಜಾಬ್: ತಮ್ಮ ಹೊಟ್ಟೆ ತುಂಬಿಸಿಕೊಳ್ಳುವುದಕ್ಕಾಗಿ ಬೀದಿ ಬದಿಯಲ್ಲಿ ಆಹಾರದ ಅಂಗಡಿ ನಡೆಸುವವರನ್ನು ನಾವು ನೋಡಿಯೇ ಇರುತ್ತೇವೆ. ಪಂಜಾಬಿನ ಅಮೃತಸರದಲ್ಲೂ ಅದೇ ರೀತಿಯ ಪುಟ್ಟ ಅಂಗಡಿಯಿದೆ, ಆದರೆ ಅದನ್ನು ನೋಡಿಕೊಳ್ಳುತ್ತಿರುವವರು ಮಾತ್ರ ಚಿಕ್ಕ ಸಹೋದರರು. ಈ ಮಕ್ಕಳ ವಿಡಿಯೋ ಸದ್ಯ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಇಶಾನ್​ಜೀತ್ ಸಿಂಗ್ (16) ಮತ್ತು ಶಾನ್​ಜೀತ್ ಸಿಂಗ್(8) ಕಳೆದ ಸುಮಾರು 10 ದಿನಗಳಿಂದ ಗಾಡಿಯಲ್ಲಿ ರುಚಿಕರವಾದ ಖಾದ್ಯಗಳನ್ನು ಮಾರುತ್ತಿದ್ದಾರೆ. ಅಂಗಡಿಗೆ ಗುರು ಕೃಪಾ ಫುಡ್ ಸ್ಟಾಲ್ ಎಂದು ಹೆಸರಿಡಲಾಗಿದೆ. ಆರ್ಥಿಕ ಸಂಕಷ್ಟ ಇವರನ್ನು ಈ ಪರಿಸ್ಥಿತಿಗೆ ದೂಡಿದೆ. ತಮ್ಮ ಕುಟುಂಬಕ್ಕೆ ಹೊರೆಯಾಗದೇ, ಸಹಾಯ ಮಾಡಲು ಈ ಪೋರರು ಕೆಲಸಕ್ಕಿಳಿದಿದ್ದಾರೆ.

ಇವರ ಗಾಡಿ ಅಂಗಡಿಯಲ್ಲಿ ಪಿಜಾ ಕುಲ್ಚಾ, ಕಡಿ ಚಾವಲ್, ಮೋಮೋಸ್ ಸೇರಿದಂತೆ ಹಲವು ಪದಾರ್ಥಗಳು ದೊರೆಯುತ್ತವೆಯಂತೆ. ಶಾಲೆ ಮುಗಿಸಿ ಸಂಜೆ 4ರಿಂದ 11 ಗಂಟೆ ವರೆಗೆ ಕಷ್ಟಪಟ್ಟು ದುಡಿಯುತ್ತಾರೆ. ನಿತ್ಯ ಬಂದು ಎಲ್ಲವನ್ನೂ ಸ್ವತಃ ಜೋಡಿಸಿಟ್ಟು, ಗ್ರಾಹಕರಿಗೆ ಉಣಬಡಿಸುತ್ತಿದ್ದಾರೆ.

ಹಟಿಂಡರ್​ ಸಿಂಗ್ ಎನ್ನುವವರು ಈ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಟ್ವಿಟರ್​ನಲ್ಲಿ 20 ಸಾವಿರಕ್ಕೂ ಅಧಿಕ ವೀಕ್ಷಣೆಯನ್ನು ಕಂಡು ವಿಡಿಯೋ ವೈರಲ್ ಆಗುತ್ತಿದೆ. ಹಲವು ನೆಟ್ಟಿಗರು ಸಹೋದರರ ಪರಿಸ್ಥಿತಿಗೆ ಮರುಗಿದ್ದಾರೆ. ಇನ್ನು ಕೆಲವರು ಆರ್ಥಿಕ ಸಹಾಯ ನೀಡುವುದಾಗಿ ಕಮೆಂಟ್ ಮಾಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net