

ಮುಂಬೈ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತೀಯ ಸರಕುಗಳ ಮೇಲೆ ಹೆಚ್ಚುವರಿ ಶೇ. 25 ಸುಂಕ ವಿಧಿಸಿದ್ದರ ಪರಿಣಾಮ ಹೂಡಿಕೆದಾರರು ಅನಿಶ್ಚಿತತೆ ಅನುಭವಿಸಿದರೂ, ಗುರುವಾರ ವಹಿವಾಟಿನ ಕೊನೆಯಲ್ಲಿ ಮಾಹಿತಿ ತಂತ್ರಜ್ಞಾನ ಮತ್ತು ಬ್ಯಾಂಕಿಂಗ್ ಷೇರುಗಳಲ್ಲಿನ ಖರೀದಿಯಿಂದಾಗಿ ಭಾರತೀಯ ಷೇರು ಮಾರುಕಟ್ಟೆ ಏರಿಕೆ ದಾಖಲಿಸಿತು.
ದಿನದ ಕನಿಷ್ಠ ಮಟ್ಟದಿಂದ ಸುಮಾರು 926 ಅಂಕಗಳಷ್ಟು ಚೇತರಿಕೆ ಕಂಡ ಸೆನ್ಸೆಕ್ಸ್, ಕೊನೆಯಲ್ಲಿ 79.27 ಅಂಕ ಏರಿಕೆಯೊಂದಿಗೆ 80,623.26ರಲ್ಲಿ ಸ್ಥಿರವಾಯಿತು. ದಿನದ ಹೆಚ್ಚಿನ ಸಮಯ ಸೆನ್ಸೆಕ್ಸ್ ಕೆಂಪು ವಲಯದಲ್ಲೇ ಇತ್ತು. 79,811.29ರ ಕನಿಷ್ಠ ಮಟ್ಟವನ್ನೂ ತಲುಪಿತ್ತು. ಆದರೆ, ಕೊನೆಯ ಕ್ಷಣದ ಖರೀದಿಯಿಂದಾಗಿ ನಷ್ಟವನ್ನು ಸರಿದೂಗಿಸಿಕೊಂಡು 80,737.55ರ ಗರಿಷ್ಠ ಮಟ್ಟವನ್ನು ತಲುಪಿತು.
ನಿಫ್ಟಿ 21.95 ಅಂಕ ಏರಿಕೆಯೊಂದಿಗೆ 24,596.15ಕ್ಕೆ ಮುಕ್ತಾಯಗೊಂಡಿತು. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಬುಧವಾರ 4,999.10 ಕೋಟಿ ರೂ. ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ ಎಂದು ವಿನಿಮಯ ಕೇಂದ್ರ ತಿಳಿಸಿದೆ. ಜಾಗತಿಕ ತೈಲ ಮಾನದಂಡ ಬ್ರೆಂಟ್ ಕ್ರೂಡ್ ಶೇ. 0.72 ಏರಿಕೆಯೊಂದಿಗೆ ಪ್ರತಿ ಬ್ಯಾರೆಲ್ಗೆ 67.37 ಡಾಲರ್ಗೆ ತಲುಪಿತು.