

ನಿವೇದನೆ ಎಂದರೆ ನೈವೇದ್ಯ ಎಂದರ್ಥ. ಈ ಜಗತ್ತಿನ ಬಹು ದೊಡ್ಡ ಸತ್ಯವೆಂದರೆ ಯಾವುದೂ ನನ್ನದಲ್ಲ ಎಂಬುದೇ ಆಗಿದೆ. ‘ಪಾಡಿದರೆ ಎನ್ನ ಒಡೆಯನ ಪಾಡುವೆ’ ಎಂಬ ದಾಸರ ನುಡಿಗಳ ಅರ್ಥವೆಂದರೆ ಭಗವಂತನೇ ಸರ್ವಸ್ವ, ಎಂದ ಮೇಲೆ ಅವನಿಗೆ ನನ್ನ ಆತ್ಮವನ್ನು ಅರ್ಪಿಸಬೇಕು. ಈ ಜಗತ್ತಿನಲ್ಲಿ ಯಾರೇ ಎಷ್ಟೇ ಪ್ರೀತಿಸಿದರೂ ಅಂತ್ಯದಲ್ಲಿ ಆತ್ಮವೇ ಅತ್ಯಂತ ಪ್ರಿಯವಾದುದು. ಹಾಗೆಂದ ಮೇಲೆ ಅರ್ಪಿಸುವುದಾದರೆ ಆತ್ಮವನ್ನೇ ನಿವೇದಿಸುವುದು ಎಂಬ ಗುರಿಯನ್ನು ಸಾಧಕ ಹೊಂದಿರಬೇಕು.
ಸಂಸ್ಕೃದಲ್ಲಿ ಒಂದು ಶ್ಲೋಕವಿದೆ - ‘ಧಾರಾನ್, ಸುತಾನ್, ಪ್ರಿಯಾನ್, ಪ್ರಾಣಾನ್, ಪರಸ್ಮೈ ಸನ್ನಿವೇದಯೇತ್ | ಆತ್ಮನಸ್ತು ಕಾಮಾಯಂ ಸರ್ವಂ ಪ್ರಿಯಂ ಭವತಿ || - ಇದರ ಸಾರಾಂಶ, ಮಡದಿ, ಮಕ್ಕಳು, ಪ್ರಿಯವಾದವರು, ಅತಿ ಪ್ರಿಯವಾದದ್ದು ಮಾತ್ರ ಅಂದರೆ ನಮ್ಮ ಆಂತರ್ಯದಲ್ಲಿರುವ ಆತ್ಮ ಎಂಬುದನ್ನು ಒತ್ತಿ ಹೇಳುತ್ತದೆ. ಇದನ್ನೇ ಭಗವಂತನ ಪಾದಾರವಿಂದಗಳಲ್ಲಿ ನಿವೇದಿಸಿಕೊಳ್ಳುವುದೇ ಆತ್ಮ ನಿವೇದನೆ ಎಂದರ್ಥ.
ಭಕ್ತಿಯು ಪರಾಕಾಷ್ಠೆಯ ಮಜಲನ್ನು ಏರಿದಾಗಲೇ ಆತ್ಮ ನಿವೇದನೆಯ ಮನಸ್ಥಿತಿ ಉಂಟಾಗುತ್ತದೆ. ಸಾಮಾನ್ಯವಾಗಿ ನಿವೇದನೆ ಎಂದಾಕ್ಷಣ ಪುಷ್ಪ, ತುಳಸಿ, ಫಲವನ್ನು, ಅಡುಗೆ ಮಾಡಿದ ರುಚಿಕರವಾದ ವಿವಿಧ ಬಗೆಯ ಭಕ್ಷ್ಯಗಳನ್ನು, ವಸ್ತ್ರಗಳನ್ನು, ಆಭರಣಗಳನ್ನು ಇತ್ಯಾದಿ ನೈವೇದ್ಯ ಮಾಡುವುದು ಅತಿ ಸುಲಭ, ಆದರೆ ತನಗೆ ಅತ್ಯಂತ ಪ್ರಿಯವಾದ ಆತ್ಮನಿವೇದನೆ ಸುಲಭವಲ್ಲ. ಅದು ಭಗವಂತನಲ್ಲಿ ಪರಿಪೂರ್ಣತೆಯಿಂದ ಶರಣಾಗತಿ ಹೊಂದುವುದು. ಈ ಘಟ್ಟವನ್ನು ತಲುಪಿದಾತನ ಸರ್ವ ಜವಾಬ್ದಾರಿಯನ್ನು ಭಗವಂತನೇ ವಹಿಸಿಕೊಳ್ಳುತ್ತಾನೆ.
ಇಲ್ಲಿ ನಮಗೆದುರಾಗುವ ಪ್ರಶ್ನೆ ಎಂದರೆ ಹೇಗೆ ಆತ್ಮ ನಿವೇದನೆ ಮಾಡಿಕೊಳ್ಳಬೇಕು? ಇದು ಸಾಧ್ಯವೇ? ಇತ್ಯಾದಿ. ಆತ್ಮವನ್ನೇ ಪರಿಪೂರ್ಣವಾಗಿ ಸಮರ್ಪಿಸುವುದು ಎಂದರೆ ನಿಜವಾಗಿಯೂ ಕಷ್ಟಸಾಧ್ಯವೇ ಸರಿ. ಆದರೆ ಈವರೆವಿಗೆ ಭಗವಂತನ ವಿಚಾರವನ್ನು ಅಹರ್ನಿಷಿ ಚಿಂತಿಸುತ್ತಾ ಜಪ, ಧ್ಯಾನ, ಸಾಧನೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡವರಿಗೆ ಆತ್ಮನಿವೇದನೆ ಅತ್ಯಂತ ಸುಲಭ ಎಂದೆನಿಸುತ್ತದೆ. ಕಾರಣ ಭಗವಂತ ನಿಜವಾದ ಭಕ್ತರ ಪರಾಧೀನ. ಸಂಪೂರ್ಣವಾಗಿ ಆತ್ಮನಿವೇದನೆ ಮಾಡಿಕೊಂಡವರ ಅಧೀನದಲ್ಲಿರುತ್ತಾನೆ ಎಂಬುದಕ್ಕೆ ಅನೇಕಾನೇಕ ಸಾಕ್ಷ್ಯಾಧಾರಗಳುಂಟು.
ಈ ನಿಟ್ಟಿನಲ್ಲಿ ಭಗವಾನ್ ಶ್ರೀ ರಾಮಕೃಷ್ಣ ಪರಮಹಂಸರ ಸಾಧನಾಪರ್ವದಲ್ಲಿ ನಾವು ಪರಮಹಂಸರು ತಮ್ಮ ಆತ್ಮವನ್ನು ಭವತಾರಿಣಿಯಲ್ಲಿ ಸಮರ್ಪಿಸಿಕೊಂಡು ಜಗನ್ಮಾತೆಯೇ ಅವರ ಜೀವನವನ್ನು, ಯೋಗಕ್ಷೇಮವನ್ನು ಯಾವ ರೀತಿಯಲ್ಲಿ ಸಲುಹಿದಳು ಎಂಬುದನ್ನು ಕಾಣಬಹುದಾಗಿದೆ. ಒಂದು ಉದಾಹರಣೆಯ ಮೂಲಕ ಭಗವಂತನಲ್ಲಿ ಆತ್ಮನಿವೇದನೆ ಹೇಗೆ ಅನುಷ್ಠಾನಕ್ಕೆ ತರಬಹುದು ಮತ್ತು ಹಾಗೇನಾದರೂ ಸಮರ್ಪಿತವಾಯಿತು ಎಂದರೆ ಹೇಗೆ ಪರಮಹಂಸರು ಅಭಯಹಸ್ತ ನೀಡುತ್ತಿದ್ದರು ಎಂಬುದನ್ನು ಅರಿಯಬಹುದಾಗಿದೆ.
ರಾಮಕೃಷ್ಣ ಪರಮಹಂಸರ ಅನೇಕಾನೇಕ ಭಕ್ತರಲ್ಲಿ ಕಾಳೀಪದ ಘೊಷ್ ಒಬ್ಬ. ಒಮ್ಮೆ ಪರಮಹಂಸರೊಂದಿಗೆ ದಕ್ಷಿಣೇಶ್ವರದಿಂದ ಕೊಲ್ಕತ್ತಾ ನಗರಕ್ಕೆ ಗಂಗಾ ನದಿಯಲ್ಲಿ ದೋಣಿಯಲ್ಲಿ ಸಾಗುತ್ತಿದ್ದ ಸಮಯ. ಹಠಾತ್ ಪರಮ ಭಕ್ತನಾದ ಕಾಳೀಪದ ಘೊಷ್ ಪರಮಹಂಸರ ಪಾದಪದ್ಮಗಳನ್ನು ಭದ್ರವಾಗಿ ಹಿಡಿದುಕೊಂಡು ಗದ್ಗದಿತನಾಗಿ, ‘ಪ್ರಭುವೇ, ನಾನು ಪರಮ ನೀಚ, ನೀವಾದರೋ ದಯಾಸಾಗರ, ದಯಮಾಡಿ ನನ್ನನ್ನು ರಕ್ಷಿಸಿ, ನಾನು ಸಂಪೂರ್ಣ ನಿಮ್ಮ ಚರಣಾರವಿಂದಗಳಲ್ಲಿ ಸಮರ್ಪಿಸಿಕೊಂಡು ಬಿಟ್ಟಿದ್ದೇನೆ’ ಎಂದು ಅಳತೊಡಗಿದ. ಪರಮಹಂಸರು ಅಪಾರ ಕರುಣೆಯಿಂದ ಕಾಳೀಪದನನ್ನು ಸಮಾಧಾನಪಡಿಸಿ, ‘ಮಗೂ, ನಿನಗೇನು ಬೇಕು?’ ಎಂದು ವಿಚಾರಿಸುತ್ತಾರೆ.
ಕಣ್ಣೀರಿನ ಕೋಡಿಯನ್ನು ಹರಿಸುತ್ತಾ ಆತ ಹೀಗೆ ಬೇಡಿಕೊಳ್ಳುತ್ತಾನೆ: ‘ಪ್ರಭು, ನಾನು ಈ ಪ್ರಪಂಚವನ್ನು ಬಿಟ್ಟು ತೆರಳುವಾಗ, ನನ್ನ ಮನಸ್ಸಿನಲ್ಲಿ ನನ್ನ ಸುತ್ತಲೂ ನಿಬಿಡ ಅಂಧಕಾರ ಆವರಿಸುತ್ತದೆ. ಆ ಸ್ಥಿತಿಯಲ್ಲಿ ನನ್ನ ಮಡದಿ, ಮಕ್ಕಳು, ಬಂಧು, ಬಳಗ ಯಾರೂ ಸಹಾಯ ಮಾಡಲಾರರು. ಗುರುದೇವ, ನಿನ್ನನ್ನು ಬಿಟ್ಟರೆ ನನಗಾರೂ ಇಲ್ಲ ಎಂಬ ಸತ್ಯದ ಅರಿವು ನನಗಾಗಿದೆ. ಆದ್ದರಿಂದ, ಆ ಅಂಧಕಾರಮಯ ಪರಿಸ್ಥಿತಿಯಲ್ಲಿ ದಿವ್ಯ ಜ್ಯೋತಿ ಸ್ವರೂಪರಾದ ನೀವು ನನ್ನ ಕೈಹಿಡಿದು ನನ್ನನ್ನು ಮುಕ್ತಿಯ ಪಥಕ್ಕೆ ಕರೆದೊಯ್ಯಬೇಕು’.
ಈ ಸಂದರ್ಭದಲ್ಲಿ ಪರಮಹಂಸರು, ನಿನ್ನ ಪ್ರಾರ್ಥನೆಯನ್ನು ಈಡೇರಿಸುತ್ತೇನೆ ಎಂದು ಅಭಯ ನೀಡುತ್ತಾರೆ. ನಂತರ ರಾಮಕೃಷ್ಣರು, ‘ಈ ಅಭಯವನ್ನು ಪಡೆಯಲೋಸುಗ ಗಂಗಾ ನದಿಯ ಮಧ್ಯೆ ಈ ತೆರನಾದ ಪರಿಸ್ಥಿತಿಯನ್ನು ನಿರ್ವಿುಸಿದೆಯಾ?’ ಎಂದು ಕಾರುಣ್ಯ ಭಾವದಿಂದ ಆಶೀರ್ವದಿಸುತ್ತಾರೆ. ಈ ಘಟನೆಯಿಂದ ನಮಗರಿವಾಗುವುದು ನವವಿಧ ಭಕ್ತಿಯಲ್ಲಿ ಅತ್ಯಂತ ಕಠಿಣವಾದದ್ದು ಎಂದರೆ ಆತ್ಮನಿವೇದನೆ. (ಲೇಖಕರು ಶ್ರೀ ರಾಮಕೃಷ್ಣ ಸೇವಾಶ್ರಮ, ಪಾವಗಡದ ಅಧ್ಯಕ್ಷರು. ಪ್ರತಿಕ್ರಿಯಿಸಿ: vvsudina@gmail.com, swajapa@gmail.com)