ಅಲ್ಲಮನು ಏರಿದ ಸಮಾಧಿ ಸ್ಥಿತಿಯು ಕೇವಲ ಮಾತಲ್ಲ, ವಾಕ್​ಬ್ರಹ್ಮ

6-67e2f3fd24184
Published on
ಇದು ಅಲ್ಲಮನು ಕೈಗೊಂಡ ಎರಡನೆಯ ಮಹಾಯಾನ. ಅವನು ಉತ್ತರದಿಕ್ಕಿನಲ್ಲಿ ನಾನಾ ಪುಣ್ಯಕ್ಷೇತ್ರಗಳನ್ನು ನಿರೀಕ್ಷಿಸಿದ. ಕ್ಷೇತ್ರಮಹಿಮೆಗಳನ್ನು ಕಳೆದುಕೊಂಡವುಗಳಿಗೆ ಪುಣ್ಯವರಗಳನ್ನು ಕೊಟ್ಟು ಪ್ರಾಣಪ್ರತಿಷ್ಠೆಯನ್ನು ಮಾಡಿದ. ಉತ್ತರಭಾರತದ ನಾನಾ

ಕಡೆ ಅರುವತ್ತೆಂಟು ತೀರ್ಥಕ್ಷೇತ್ರಗಳಿದ್ದವು. ಅವುಗಳನ್ನೆಲ್ಲಾ ಸಮೀಕ್ಷಿಸಿದ. ಅಲ್ಲಮನನ್ನು ಕಂಡ ಅಲ್ಲಿಯ ತೀರ್ಥಕರು ಮುದಗೊಂಡರು. ಈ ಸಂದರ್ಭವನ್ನು ಶಿವಗಣಪ್ರಸಾದಿ ಮಹಾದೇವಯ್ಯ ಕಂಡ ಬಗೆ ಹೀಗಿದೆ:

ಆ ಮಹಾತೀರ್ಥಂಗಳ ಕೈಯೊಳ್ ಪೂಜೆಗೊಂಡು,/ತನ್ನ ಪರಮಾನಂದರಸವೆಂಬ ನಿರ್ಮಲಗಂಗಾಂಬುಕಣಮಂ/ಆ ಸಕಲ ತೀರ್ಥಂಗಳಿಗೆ ಕಾರುಣ್ಯದಿಂದಿತ್ತು/ ನಿತ್ಯನಿರ್ಮಳ ಪದಮಂ ಕೊಟ್ಟು (ಶೂನ್ಯ. ಸಂ ಪುಟ 181) -ಅಲ್ಲಮನ ಮಹಾಯಾನದಲ್ಲಿ ಗಿರಿಕಂದರಗಳು ಕಂಡದ್ದೇನೋ ನಿಜ. ಅವನ ಒಂದೊಂದು ಹೆಜ್ಜೆ ಶಿವನೇ ಊರಿದ ಹೆಜ್ಜೆಗಳಾದುವು. ನೂರಾರು ದೇಶಗಳ ಜನರು ಅಲ್ಲಮನ ಮಹಾಮಹಿಮೆಗೆ ತಲೆಬಾಗಿದರು.

ಅವನು ಕೇದಾರಕ್ಕೆ ಬರುವಾಗ ಹಲವು ಪ್ರಯಾಗಗಳನ್ನು ದಾಟಿಬಂದ. ಅಲ್ಲಿ ಹಿಮದ ರಾಶಿಯೇ ತುಂಬಿತ್ತು. ಶಿವಗಣ ಪ್ರಸಾದಿಯು ‘ಶ್ರೀ ಕೇತಾರಮಂ ಪೊಕ್ಕು ಅತ್ಯುತ್ಕಟ ಹಿಮವಂ ಗೆಲ್ದು’ ಎಂದಿದ್ದಾನೆ! ಉತ್ತರಭಾರತದಲ್ಲಿ ಹರಿದ್ವಾರ-ಹೃಷಿಕೇಶ ಇವುಗಳನ್ನು ದಾಟಿದ ಮೇಲೆ ದೇವಪ್ರಯಾಗ ಮುಂತಾದ ಪುಣ್ಯಕ್ಷೇತ್ರಗಳು ಬರುತ್ತವೆ. ಅಲ್ಲೆಲ್ಲಾ ಹಿಮದ ಪ್ರಮಾಣ ಕಡಿಮೆ. ಆದರೆ, ಬದರಿ-ಕೇದಾರಗಳು ಆರು ತಿಂಗಳು ಹಿಮ; ಉಳಿದ ಆರು ತಿಂಗಳು ಸಹ್ಯಹಿಮ. ಬೀಸುಗಾಳಿ, ಥಂಡಿ, ಮೈಕೊರೆಯುವಂಥ ಚಳಿ ಇರುತ್ತದೆ. ಇದು ಈಗಿನ ಅನುಭವ. ಆದರೆ, ಎಂಟುನೂರು ವರ್ಷಗಳ ಹಿಂದೆ ಚಳಿ- ಗಾಳಿ- ಹಿಮ ಸಹಜವಾಗಿ ಹೆಚ್ಚಾಗಿದ್ದ ಕಾಲ. ಆದರೆ, ಅಲ್ಲಮನು ಎಂಥ ಪರಿಸರಕ್ಕೂ ವಾತಾವರಣಕ್ಕೂ ಯೋಗಪೂರ್ಣತೆಯಿಂದ ಅಂತರ್ಗತಗೊಳ್ಳಬಲ್ಲ. ಈ ರಹಸ್ಯವನ್ನು ತಿಳಿದ ಶಿವಗಣಪ್ರಸಾದಿಯು ‘ಅತ್ಯುತ್ಕಟ ಹಿಮವಂಗೆಲ್ದು’-ಎಂದು ಕೈವಾರಿಸಿದ್ದಾನೆ.

ಅಲ್ಲಮನು ಸಪಾದಲಕ್ಷ ಪರ್ವತಗಳಂ ತಿರುಗುತ್ತಾನೆ. ಆ ಪರ್ವತಗಳಲ್ಲಿ ಅನೇಕ ಗುಹೆಗಳು ಇದ್ದವು. ಆ ಗುಹೆಗಳಲ್ಲೊಂದು ಗುಹೆಯನ್ನು ಹೊಕ್ಕು ಪದ್ಮಾಸನದಲ್ಲಿ ಕುಳಿತುಕೊಂಡ. ಮನಸ್ಸನ್ನು ಏಕಾಗ್ರಗೊಳಿಸಿದ. ಅವನ ಮನಸ್ಸು ನಿರ್ಭಾವಗೊಂಡಿತು. ಆಗ ಅಲ್ಲಮನು ನಿಜಸಮಾಧಿಗೆ ಏರಿದನು.

ಅಲ್ಲಮನು ಎಲ್ಲ ಯೋಗದ ಬಗೆಗಳನ್ನು ಬಲ್ಲವನೇ. ಅವನು ಸ್ಥೂಲ-ಸೂಕ್ಷ್ಮ-ಕಾರಣ ಶರೀರಗಳನ್ನು ಮೀರಿದವನು. ಪಂಚಕೋಶಗಳ ಹಂಗನ್ನು ಹರಿದವನು. ಷಟ್​ಚಕ್ರಗಳನ್ನು ಬೇಧಿಸಿ ನಿರಾಮಯನಾದವನು. ಅಲ್ಲಮನು ತುರ್ಯಾತೀತ ಸ್ಥಿತಿಯಲ್ಲಿ ಸಮಾಧಿಗೊಂಡ. ಅಲ್ಲಮನು ಸಮಾಧಿಸ್ಥಿತಿಗೆ ಏರಿದ ಬಗೆಯನ್ನು ಶಿವಗಣಪ್ರಸಾದಿ ಮಹಾದೇವಯ್ಯ ಹೇಳುವ ಬಗೆಯಿದು:

ಅಚಲ ಸಿಂಹಾಸನದಲ್ಲಿ ನಿಶ್ಚಲವೆಂಬ ಮಂಟಪವು/ಸಂಚಲದೋವರಿಯೊಳಗೆ ರುಚಿಗಳೆಲ್ಲವ ನಿಲಿಸಿ/ ಪಂಚರತ್ನದ ಶಿಖರ ಮಿಂಚುವ ಕೋಟಿಯ ಕಳಶ/ವಚನಚಿತ್ರದ ಪುಷ್ಪದ ರಚನೆ/ ನವರಂಗದಲ್ಲಿ ಖೇಚರಾದಿ ಗಮನವನ್ನು ವಿಚಾರಪರ ನುಂಗಿ/ಗೊಗೇಶ್ವರ ನಿಂದ ನಿಲುವು ಸಚರಾಚರವ ಮೀರಿತ್ತು (ಶೂನ್ಯ.ಸಂ, ಪುಟ 181)- ಈ ವಚನವು ಡಾ.ಎಲ್.ಬಸವರಾಜು ಸಂಪಾದಿಸಿರುವ ‘ಅಲ್ಲಮ ವಚನ ಚಂದ್ರಿಕೆ’(ವಚನ-166)ಯಲ್ಲಿದೆ. ಸ್ವಲ್ಪ ವ್ಯತ್ಯಾಸದೊಂದಿಗೆ ಉಕ್ತವಾಗಿದೆ.

ಇದೊಂದು ರೂಪಕಾತ್ಮಕ ವಚನ ರಚನೆ. ಮೊದಲು ಇದರ ವಾಚ್ಯಾರ್ಥವನ್ನು ತಿಳಿಯೋಣ: ‘ಅಚಲವಾದ ಅಧಿಷ್ಠಾನ. ಅಲುಗಾಡದ ಮಂಟಪ. ಸಂಚಲದ ಓವರಿ. ಅಲ್ಲಿ ಎಲ್ಲ ಬಗೆಯ ರುಚಿಗಳು ನಿಲಗೊಂಡಿವೆ. ಅವನ ಎದುರು ಐದು ರತ್ನದಂಥ ಶಿಖರಗಳಿವೆ. ಶಿಖರದ ತುದಿಯಲ್ಲಿ ಮಿಂಚುವ ಕಳಶವುಂಟು. ಅಲ್ಲಿ ಮಾತುಗಳೆಂಬ ಪುಷ್ಪದ ರಚನೆ ಘೊಷಿಸುತ್ತಿದೆ. ಆ ದೇಗುಲದ ನವರಂಗದಲ್ಲಿ ಖೇಚರರ ಗಮನವನ್ನು ವಿಚಾರವು ನುಂಗಿದೆ. ಅಲ್ಲಮನು ನಿಂದ ನಿಲುವು ಸಚರಾಚರವನ್ನು ಮೀರಿದೆ’. ಈ ವಚನದ ಕೊನೆಯ ಪಾದದಲ್ಲಿ ‘ನಿಂದ ನಿಲುವು ಸಚಾರಚರವ ಮೀರಿತ್ತು’ ಎಂದಿದೆಯಷ್ಟೆ. ನಮ್ಮ ಐಂದ್ರಿಯ ಗ್ರಹಿಕೆಗಳು ಸ್ಥೂಲಸೂಕ್ಷ್ಮಗಳಲ್ಲಿ ಒಂದಿಷ್ಟು ಉಂಟು. ಅದೇ ರೀತಿ ಚರದಲ್ಲೂ ಉಂಟು; ಅಚರದಲ್ಲೂ ಉಂಟು! ಅಲ್ಲಮನ ಸಮಾಧಿಸ್ಥಿತಿಯು ‘ಅಚಲ ಸಿಂಹಾಸನ’ ಮತ್ತು ‘ನಿಶ್ಚಲ ಮಂಟಪ’ ಎಂಬ ರೂಪಕದ ಭಾಷೆಯಲ್ಲಿದೆ. ಇದೆಲ್ಲವೂ ‘ಪಂಚರತ್ನದ ಶಿಖರ’, ‘ಕೋಟಿ ಕಳಶ’ ಎಂಬ ರೂಪಕದಲ್ಲಿ ನೆಲೆಗೊಳ್ಳುತ್ತದೆ.

ಮೇಲಿನ ವಚನವು ಬೆಡಗಿನ ರೂಪಕದಲ್ಲಿದೆಯಷ್ಟೆ. ಮಹಲಿಂಗನು ಈ ವಚನಕ್ಕೆ ನೀಡಿರುವ ವ್ಯಾಖ್ಯಾನವೊಂದರಲ್ಲಿ ಸಮಾಧಿಸ್ಥಿತಿಯನ್ನು ಎರಡು ಮಾತುಗಳಲ್ಲಿ ವ್ಯಂಜಿಸಿದ್ದಾನೆ.

ಮೊದಲ ಮಾತು ‘ವಾಗ್ಬ›ಹ್ಮ’ ಎರಡನೆಯ ಮಾತು ‘ವಿವೇಕಗಮನಾಗಮನ’. ಅಲ್ಲಮನು ಏರಿದ ಸಮಾಧಿ ಸ್ಥಿತಿಯು ಕೇವಲ ಮಾತಲ್ಲ. ಅದು ವಾಕ್​ಬ್ರಹ್ಮ. ವಾಕ್ಕಿನ ನಾಲ್ಕನೆಯ ಸ್ಥಾನದಲ್ಲಿದ್ದರೆ; ಅಲ್ಲಿ ಮಾತಿಲ್ಲದ ಸ್ಥಿತಿ ಇರುತ್ತದೆ; ಅಲ್ಲಿ ಗಮನವೂ ಇಲ್ಲ ಅಗಮನವೂ ಇಲ್ಲವೆಂಬುದು ಮಹಲಿಂಗನ ಇಂಗಿತ! ಅಲ್ಲಮನು ಸಮಾಧಿಸ್ಥಿತಿಯಿಂದ ಹೊರಬಂದ. ಅವನು ಇದ್ದ ಹಿಮಗುಹೆಯಿಂದ ಹೊರಬಂದು ಕಲ್ಯಾಣದ ಕಡೆ ಹೋಗುವುದೆಂದು ನಿಶ್ಚಯಿಸಿಕೊಂಡ.(ಲೇಖಕರು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳು. ಕನ್ನಡ ಹಾಗೂ ಸಂಸ್ಕೃತ ವಿದ್ವಾಂಸರು, ಪ್ರತಿಕ್ರಿಯಿಸಿ: vvsudina@gmail.com, mallepuram@gmail.com)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net