ಕರೊನಾ ಎದುರಿಸಲು ಸಜ್ಜಾಗಿದೆ ರಾಜ್ಯ: ಏನಾದರೂ ನಿಭಾಯಿಸಲು ಸಮರ್ಥ- ಪರಿಸ್ಥಿತಿ ಕೈ ಮೀರದು ಎಂಬ ನಂಬಿಕೆಯಲ್ಲಿ ತಜ್ಞರು

Coronavirus Feb 20-10
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಇಡೀ ವಿಶ್ವವನ್ನೇ ನಡುಗಿಸಿ ಅರ್ಥವ್ಯವಸ್ಥೆಯನ್ನೇ ಬುಡಮೇಲು ಮಾಡಿರುವ ಕರೊನಾ, ರಾಜ್ಯದಲ್ಲಿ ಯಾವ ಮಟ್ಟಿನ ಹಾನಿ ಮಾಡಲಿದೆ ಎಂಬುದು ಇನ್ನೂ ಲೆಕ್ಕಕ್ಕೆ ಸಿಗುತ್ತಿಲ್ಲ. ಆದರೆ ಮುಂದೆ ಯಾವುದೇ ಪರಿಸ್ಥಿತಿ ಎದುರಾದರೂ ಅದನ್ನು ಸಮರ್ಥವಾಗಿ ನಿಭಾಯಿಸಲು ಸರ್ಕಾರ ಸಿದ್ಧವಾಗುತ್ತಿದೆ. ಕರೊನಾಗೆ ಔಷಧ ಇಲ್ಲವಾದರೂ ನಿಯಂತ್ರಣಕ್ಕೆ ಅಗತ್ಯವಾದ ಎಲ್ಲ ಮೂಲಸೌಕರ್ಯವನ್ನು ಸರ್ಕಾರ ಮಾಡಿಕೊಂಡಿದೆ. ಇಟಲಿ, ಅಮೆರಿಕ ದೇಶಗಳಲ್ಲಿ, ತಮಿಳುನಾಡು, ಗುಜರಾತ್ ಮತ್ತಿತರ ರಾಜ್ಯಗಳಲ್ಲಿ ಪರಿಸ್ಥಿತಿ ಕೈ ಮೀರುತ್ತಿರುವುದರಿಂದ ರಾಜ್ಯದಲ್ಲಿ ಎಂಥದ್ದೇ ಸ್ಥಿತಿ ನಿರ್ವಣವಾದರೂ ಸರ್ಕಾರ ಸನ್ನದ್ಧವಾಗುತ್ತಿದೆ. ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಅಗತ್ಯವಿರುವಷ್ಟು ಹಾಸಿಗೆ, ಐಸಿಯು, ಆಕ್ಸಿಜನ್, ವೆಂಟಿಲೇಟರ್ ಮಾತ್ರವಲ್ಲದೆ ನಿಗಾ ವಹಿಸಲು ಬೇಕಾದ ತಂತ್ರಜ್ಞಾನ ಬಳಸಿಕೊಂಡಿದೆ.

ಸಾವು ತಡೆಯುವುದೇ ಮುಖ್ಯ: ರಾಜ್ಯದಲ್ಲಿ ಈಗ ನಡೆಯುತ್ತಿರುವ ಪರೀಕ್ಷೆಯಲ್ಲಿ 43.54 ರೋಗಿಗಳಿಗೊಬ್ಬರಂತೆ ಪಾಸಿಟಿವ್ ದೃಢವಾಗುತ್ತಿದೆ. ಗುಣವಾಗುತ್ತಿರುವವರ ಪ್ರಮಾಣ ಶೇ.16 ಇದೆ. ಸಾವಿನ ಸಂಖ್ಯೆ ತಗ್ಗಿಸಬೇಕು ಎಂಬುದು ಸರ್ಕಾರದ ಉದ್ದೇಶವಾಗಿದ್ದು, ಆ ನಿಟ್ಟಿನಲ್ಲಿ ಪ್ರಯತ್ನ ನಡೆಸಿದೆ.

ಟೆಸ್ಟಿಂಗ್ ಪ್ರಮಾಣ: ರಾಜ್ಯದಲ್ಲಿ ಕರೊನಾ ಕಾಣಿಸಿಕೊಂಡಾಗ ದಿನಕ್ಕೆ 100 ಟೆಸ್ಟ್ ಮಾತ್ರ ಮಾಡಲಾಗುತ್ತಿತ್ತು. ಆದರೆ ಪ್ರಯೋ

ಗಾಲಯಗಳನ್ನು ಹೆಚ್ಚಿಸಿದಂತೆ ಈಗ ದಿನಕ್ಕೆ ಸುಮಾರು 3000 ಟೆಸ್ಟ್ ಮಾಡಲಾಗುತ್ತಿದೆ. ಈಗ 17 ಲ್ಯಾಬ್​ಗಳಿದ್ದು ಏಪ್ರಿಲ್ ಅಂತ್ಯಕ್ಕೆ 27ಕ್ಕೆ ಏರಿ, ಮೇ ತಿಂಗಳ ಅಂತ್ಯದಲ್ಲಿ 60 ಲ್ಯಾಬ್​ಗಳು ಸಿದ್ಧವಾಗಲಿವೆ.

ಆಸ್ಪತ್ರೆಗಳಲ್ಲಿ ಸೌಲಭ್ಯ: ಸರ್ಕಾರ 31 ಸರ್ಕಾರಿ ಆಸ್ಪತ್ರೆಗಳನ್ನು ಕರೊನಾ ಆಸ್ಪತ್ರೆಗಳೆಂದು ಗುರುತಿಸಿದ್ದು, 5665 ಐಸಿಯು ಹಾಸಿಗೆಗಳಿವೆ. ಆ ಪೈಕಿ 3899 ಹಾಸಿಗೆಗಳಿಗೆ ಕೇಂದ್ರಿಕೃತ ಆಕ್ಸಿಜನ್ ವ್ಯವಸ್ಥೆ ಅಳವಡಿಸಲಾಗಿದೆ. 372 ವೆಂಟಿಲೇಟರ್​ಗಳಿವೆ. ಖಾಸಗಿ ಆಸ್ಪತ್ರೆಗಳಲ್ಲಿ 1984 ಐಸಿಯು ಹಾಸಿಗೆಗಳಿದ್ದು, 856 ವೆಂಟಿಲೇಟರ್​ಗಳಿವೆ. ಇದಲ್ಲದೆ 323 ಆಸ್ಪತ್ರೆಗಳಲ್ಲಿ 54396 ಹಾಸಿಗೆಗಳನ್ನು ಕಾಯ್ದಿರಿಸಲಾಗಿದೆ. ಇದರಲ್ಲಿ

149 ಖಾಸಗಿ ಆಸ್ಪತ್ರೆಗಳ 33943 ಹಾಸಿಗೆಗಳು, 174 ಸರ್ಕಾರಿ ಆಸ್ಪತ್ರೆಗಳ 20403 ಹಾಸಿಗೆಗಳಿವೆ. ಎಲ್ಲ ಜಿಲ್ಲಾ ಆಸ್ಪತ್ರೆಗಳಲ್ಲೂ 50ರಿಂದ 100 ಹಾಸಿಗೆಗಳಿಗೆ ಕೇಂದ್ರೀಕೃತ ಆಕ್ಸಿಜನ್ ಅಳವಡಿಸಲಾಗಿದೆ.

ಉಪಕರಣ ಲಭ್ಯತೆ: ಸರ್ಕಾರದ ಬಳಿ 18.33 ಲಕ್ಷ ಎನ್ 95 ಮಾಸ್ಕ್, 12.05 ಲಕ್ಷ ಪಿಪಿಇ ಕಿಟ್ ಇವೆ. 49 ಲಕ್ಷ 3 ಪದರದ ಮಾಸ್ಕ್, 2.11 ಲಕ್ಷ ರ್ಯಾಪಿಡ್ ಟೆಸ್ಟ್ ಕಿಟ್, 1580 ವೆಂಟಿಲೇಟರ್, ಪ್ರತಿನಿತ್ಯ 50,800 ಲೀಟರ್ ಸ್ಯಾನಿಟೈಸರ್ ತಯಾರಿಸಲು 33 ಔಷಧ ಉತ್ಪಾದನಾ ಸಂಸ್ಥೆ ಹಾಗೂ 29 ಡಿಸ್ಟಿಲರಿಗಳಿಗೆ ಆದೇಶ ನೀಡಿದೆ.

ವಾರ್ ರೂಂ: ಪ್ರತಿ ಪಂಚಾಯಿತಿಯಿಂದ ಹಿಡಿದು ನಗರಗಳ ವಾರ್ಡ್ ತನಕ

ಪಾಸಿಟಿವ್ ಇರುವವರನ್ನು ಟ್ರಾ್ಯಕಿಂಗ್ ಮಾಡುವಂಥ ವಾರ್ ರೂಂ ಸ್ಥಾಪಿಸಿದೆ. ಇಲ್ಲಿ ಸಾರ್ವಜನಿಕರಿಗೆ ಮಾಹಿತಿ ಸಿಗುವ ವ್ಯವಸ್ಥೆ ಮಾಡಲಾಗಿದೆ. ಕ್ವಾರಂಟೈನ್​ನಲ್ಲಿ ಇರುವವರು ಬೇರೆ ಕಡೆ ಹೋಗದಂತೆ ಎಚ್ಚರಿಕೆ ತೆಗೆದು ಕೊಳ್ಳಲಾಗಿದೆ. ಟೆಲಿ ಐಸಿಯು ದಿನದ 24 ಗಂಟೆ ಕಾರ್ಯ ನಿರ್ವಹಿಸುತ್ತಿದೆ.

ಹೋರಾಟಕ್ಕೆ ಸಿದ್ಧ ಸಾವಿರಾರು ಮಂದಿ

ಇದುವರೆಗೆ 69,257 ಜನರಿಗೆ ತರಬೇತಿ ನೀಡಲಾಗಿದೆ. ಜತೆಗೆ 60 ಮೆಡಿಕಲ್ ಕಾಲೇಜಿನ 22 ಸಾವಿರ ಸಿಬ್ಬಂದಿ ಕರೊನಾ ವಿರುದ್ಧ ಹೋರಾಡಲು ಸಜ್ಜುಗೊಂಡಿದ್ದಾರೆ. ಸರ್ಕಾರಿ ಮೆಡಿಕಲ್ ಕಾಲೇಜುಗಳಲ್ಲಿ ಇರುವ 3169 ತಜ್ಞ ವೈದ್ಯರು, ಖಾಸಗಿ ಕಾಲೇಜಿನ 5635 ತಜ್ಞ ವೈದ್ಯರು ಹಾಗೂ ಡೀಮ್್ಡ ವಿವಿಗಳ 3653 ತಜ್ಞ ವೈದ್ಯರು, ಎರಡು ಇಎಸ್​ಐ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಗಳ 12462 ಜನ ವೈದ್ಯರು ಸಹ ಅಗತ್ಯ ಬಿದ್ದರೆ ಸೇವೆ ನೀಡಲು ಸಿದ್ಧರಾಗಿದ್ದಾರೆ.

ಪ್ರಮುಖಾಂಶಗಳು

ಫೀವರ್ ಕ್ಲಿನಿಕ್: ಬೆಂಗಳೂರು ನಗರದ 31 ಸೇರಿ, ರಾಜ್ಯದಲ್ಲಿ ಒಟ್ಟು 450. ಇಲ್ಲೇ ಸಾಮಾನ್ಯ ರೋಗಗಳ ಪರೀಕ್ಷೆ.

ಕಾಲ್​ಸೆಂಟರ್: ಪ್ರಸ್ತುತ ಇರುವ ಕಾಲ್​ಸೆಂಟರ್​ಗಳಿಗೆ ಲಾಕ್​ಡೌನ್ ಬಳಿಕ ಸುಮಾರು 70300 ಕರೆ. ಉತ್ತರ ಕರ್ನಾಟಕದಲ್ಲಿ 4 ಕಾಲ್ ಸೆಂಟರ್ ತೆರೆಯಲು ಸಿದ್ಧತೆ.

ಆಪ್ತಮಿತ್ರ ಆಪ್: ಆಪ್ತಮಿತ್ರ ಆಪ್ ಬಿಡುಗಡೆ ಆದ ಒಂದೇ ದಿನದಲ್ಲಿ 50 ಸಾವಿರ ಜನರಿಂದ ಡೌನ್​ಲೋಡ್. ಅಷ್ಟೂ ಜನರಿಗೆ ಎಸ್​ಎಂಎಸ್ ಮೂಲಕ ಮಾಹಿತಿ ರವಾನೆ.

ಪ್ಲಾಸ್ಮಾ ಚಿಕಿತ್ಸೆ: ಪ್ಲಾಸ್ಮಾ ಚಿಕಿತ್ಸೆಗೆ ಒಪ್ಪಿಗೆ ಸಿಕ್ಕಿದ್ದರಿಂದ, ಅದಕ್ಕಾಗಿ ಸಿದ್ಧತೆ.

ರಕ್ತ ದಾಸ್ತಾನು: ರಕ್ತದ ಅಗತ್ಯ ಇದುವರೆವಿಗೂ ಕಂಡಿಲ್ಲ. ಆದರೂ ಕೊರತೆ ಆಗದಂತೆ ಸರ್ಕಾರದಿಂದ ಮುನ್ನೆಚ್ಚರಿಕೆ. ದಾನಿಗಳಿಗೆ ಸಾರಿಗೆ ವ್ಯವಸ್ಥೆ ಒದಗಿಸುತ್ತಿದ್ದು, ಪ್ರತಿ ರಕ್ತನಿಧಿಯಲ್ಲಿ ದಾನಿಗಳ ಡಾಟಾ ಬೇಸ್ ಸಿದ್ಧ ಮಾಡಿದೆ.

ಕರೊನಾ ವಿರುದ್ಧದ ಈ ಹೋರಾಟದಲ್ಲಿ ಎದುರಾಗುವ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಸರ್ಕಾರ ಅಗತ್ಯ ಸಿದ್ಧತೆ ಮಾಡಿಕೊಂಡಿದೆ. ಜನರ ಜೀವ-ಜೀವನೋಪಾಯಗಳನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರಗಳನ್ನು ಕೈಗೊಳ್ಳಲಾಗುತ್ತಿದೆ.

| ಡಾ. ಕೆ. ಸುಧಾಕರ್ ವೈದ್ಯಕೀಯ ಶಿಕ್ಷಣ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net