ರಾಮರಾಜ್ಯದಲ್ಲಿ ರಾಜ್ಯಭಾರ ಹೀಗಿತ್ತು

ವಿಜಯವಾಣಿ (1)
Published on

| ಡಾ.ಕೆ.ಪಿ. ಪುತ್ತೂರಾಯ

ಅದು ಪ್ರಭು ಶ್ರೀರಾಮಚಂದ್ರ ರಾಜ್ಯಭಾರ ನಡೆಸುತ್ತಿದ್ದ ರಾಮರಾಜ್ಯದ ಕಾಲ; ಒಂದು ಆದರ್ಶ ರಾಜ, ರಾಜ್ಯಭಾರ ಹೇಗಿರಬೇಕೆಂಬುದನ್ನು ಎತ್ತಿ ತೋರಿಸುತ್ತಿದ್ದ ಕಾಲ. ಇದಕ್ಕೆ ಅನುಕೂಲವಾಗಿ ಭಗವಂತನ ಅನುಗ್ರಹವೋ ಎಂಬಂತೆ ಪ್ರಾಕೃತಿಕವಾಗಿಯೂ ಕಾಲಕಾಲಕ್ಕೆ ಮಳೆ ಬೆಳೆಯಾಗಿ ಧನ ಧಾನ್ಯಗಳು ತುಂಬಿ ತುಳುಕುತ್ತಿದ್ದವು. ಅತಿವೃಷ್ಟಿ ಅನಾವೃಷ್ಟಿ ಬರಗಾಲ ಭೂಕಂಪಗಳೇನೆಂಬುದನ್ನು ಜನ ನೋಡಿಯೇ ಇರಲಿಲ್ಲ. ಸುಖ ಸಂಪತ್ತು ಹೇರಳವಾಗಿತ್ತು. ಕ್ಷೆೊಭೆ ಕ್ಷಾಮಗಳಿಲ್ಲದೆ ಜನ ಕ್ಷೇಮದಿಂದ ಕಾಲ ಕಳೆಯುತ್ತಿದ್ದರು. ಒಟ್ಟಿನಲ್ಲಿ ಸಂತೃಪ್ತಿ, ಸುಭಿಕ್ಷದಿಂದ ಜನ ನಿರಾಳವಾಗಿದ್ದರು. ನೆಮ್ಮದಿಯ ಜೀವನವನ್ನು ಕಳೆಯುತ್ತಿದ್ದರು. ಸಾಂಸಾರಿಕವಾಗಿಯೂ ಎಲ್ಲರೂ ಸುಖಿಗಳಾಗಿದ್ದರು.

ಕೌಟುಂಬಿಕ ಕಲಹಗಳಾಗಲಿ ವಿವಾಹ ವಿಚ್ಛೇದನಗಳಾಗಲಿ ಇರುತ್ತಿರಲಿಲ್ಲ. ಸಾಮಾಜಿಕವಾಗಿಯೂ ಎಲ್ಲರೂ ಪ್ರೀತಿ ಪ್ರೇಮ ಅನ್ಯೋನ್ಯತೆ, ಸೌಹಾರ್ದ, ಸಾಮಾಜಿಕ ಸಾಮರಸ್ಯದಿಂದ ಜೀವನ ನಡೆಸುತ್ತಿದ್ದರು. ಎಲ್ಲೂ ಬಡವರಾಗಲಿ, ಭಿಕ್ಷುಕರಾಗಲಿ, ಭ್ರಷ್ಟರಾಗಲಿ, ಭಯೋತ್ಪಾದಕರಾಗಲಿ ಕಾಣಸಿಗುತ್ತಿರಲಿಲ್ಲ. ಕೊಲೆ ಕಳ್ಳತನ ಸುಲಿಗೆ ದರೋಡೆಗಳ ಪ್ರಮೇಯಗಳು ಅಪರೂಪವಾಗಿದ್ದ ಕಾರಣ, ಪೊಲೀಸರಿಗೆ, ಕೋರ್ಟು ಕಚೇರಿಗಳಿಗೆ ಕೆಲಸವೇ ಇರುತ್ತಿರಲಿಲ್ಲ. ಜೈಲುಗಳು ಕೈದಿಗಳಿಲ್ಲದೆ ಖಾಲಿ ಇರುತ್ತಿದ್ದವು. ಅಪರೂಪಕ್ಕೆ ಏನಾದರೂ ಕಳ್ಳತನದ ಪ್ರಕರಣ ಸಾಬೀತಾದರೆ ಕಠಿಣ ಶಿಕ್ಷೆಯನ್ನು ವಿಧಿಸಲಾಗುತ್ತಿತ್ತು. ಅಕಾಲ ಮೃತ್ಯುವೆಂಬುದೇ ಇಲ್ಲದೆ ಜನರು ದೀರ್ಘಾಯುಗಳಾಗಿದ್ದರು.

ಎಲ್ಲರ ಆರೋಗ್ಯವು ಚೆನ್ನಾಗಿದ್ದುದರಿಂದ ರೋಗಿಗಳಿಲ್ಲದೆ ಆಸ್ಪತ್ರೆಗಳು ಬಿಕೋ ಎನ್ನುತ್ತಿದ್ದುವು. ವೈದ್ಯರುಗಳಿಗೆ ಕೈತುಂಬ ಕೆಲಸ ಇರುತ್ತಿರಲಿಲ್ಲ. ಜನರು ಎಷ್ಟು ಪ್ರಾಮಾಣಿಕರಾಗಿರುತ್ತಿದ್ದರು ಎಂದರೆ, ಮನೆಯ ಬಾಗಿಲುಗಳಿಗೆ ಬೀಗಗಳೇ ಇಲ್ಲವಾಗಿತ್ತು. ಅಧರ್ವಿುಗಳಲ್ಲದ ಜನರು ಅಕ್ರಮ ಅನ್ಯಾಯಗಳೇನೆಂಬುದನ್ನೇ ತಿಳಿಯದವರಾಗಿದ್ದರು. ರಾಜನೂ ಅಷ್ಟೇ. ಬರಿಯ ಬಹುಮತದಿಂದ ಅಲ್ಲ ಸರ್ವಾನುಮತದಿಂದಲೇ ಆಡಳಿತವನ್ನು ನಡೆಸುತ್ತಿದ್ದ. ಆತ ಎಂದೂ ಸ್ವಾರ್ಥದೃಷ್ಟಿಯ ನಿರ್ಧಾರ ತೆಗೆದುಕೊಳ್ಳುತ್ತಿರಲಿಲ್ಲ. ಜಾತಿ ಮತ ಭೇದವಿಲ್ಲದೆ ಎಲ್ಲಾ ಪ್ರಜೆಗಳನ್ನು ತನ್ನ ಮಕ್ಕಳೆಂದು ತಿಳಿದು ಜನರಿಂದ ತೆರಿಗೆ ರೂಪದಲ್ಲಿ ಸಂಗ್ರಹಿಸಿದ ಹಣವನ್ನು ಜನರ ಏಳಿಗೆಗಾಗಿಯೇ ರಾಜ್ಯದ ಹಿತಕ್ಕಾಗಿಯೇ ಬಳಸುತ್ತಿದ್ದ. ಕಾರಣ ಅವನ ದೃಷ್ಟಿ. ಅದು ಸಮದೃಷ್ಟಿ; ಪ್ರೇಮದೃಷ್ಟಿ. ಸಮಪಾಲು ಸಮ ನ್ಯಾಯ. ರಾಜನ ಅಂತಿಮ ಗುರಿ ರಾಮರಾಜ್ಯವಲ್ಲ, ಕಲ್ಯಾಣ ರಾಜ್ಯದ ನಿರ್ವಣವಾಗಿತ್ತು. ಇದಕ್ಕೆಲ್ಲಾ ಉದಾಹರಣೆಯೋ ಎಂಬಂತೆ ಆ ಕಾಲದಲ್ಲಿ ನಡೆದ ಒಂದು ಹೃದಯರ್ಸರ್ಶಿ.

ಘಟನೆ ಹೀಗಿದೆ:

ಒಮ್ಮೆ ಕಳ್ಳತನದ ಆರೋಪದ ಮೇಲೆ ಯುವಕ ತಪ್ಪಿತಸ್ಥನೊಬ್ಬ ನನ್ನು ಒಬ್ಬ ನ್ಯಾಯಾಧೀಶನ ಎದುರು ಹಾಜರುಪಡಿಸಲಾಯಿತು. ವಿಚಿತ್ರವೆಂದರೆ, ಕಳ್ಳತನದ ಆಪಾದನೆಗೆ ಒಳಗಾದ ಆ ಆರೋಪಿ ಇನ್ನಾ್ಯರೂ ಆಗಿರದೆ ನ್ಯಾಯಾಧೀಶನ ಸ್ವಂತ ಏಕೈಕ ಮಗನೇ ಆಗಿದ್ದ. ಆದರೂ ಪುತ್ರ ವ್ಯಾಮೋಹಕ್ಕೆ ಒಳಗಾಗದ ನ್ಯಾಯಾಧೀಶ ನ್ಯಾಯಯುತವಾದ ವಿಚಾರಣೆಯನ್ನು ನಡೆಸಿ ಆರೋಪಿಯ ಕಳ್ಳತನ ಸಾಬೀತಾದಾಗ ಆತನಿಗೆ ಆ ಕಾಲದಲ್ಲಿ ರೂಢಿಯಲ್ಲಿದ್ದ ಶಿಕ್ಷಾ ಪದ್ಧತಿಯಂತೆ 18 ಕಠಿಣ ಛಡಿ ಏಟುಗಳ ಶಿಕ್ಷೆಯನ್ನು ಪ್ರಕಟಿಸುತ್ತಾನೆ. ಅಂತೆಯೇ ಛಡಿ ಏಟುಗಳನ್ನು ನೀಡಲು ಸಿಬ್ಬಂದಿವರ್ಗದವರು ಶುರುಮಾಡುತ್ತಾರೆ. ಆದರೆ ಬಲವಾದ 15 ಛಡಿ ಏಟುಗಳನ್ನು ಪಡೆಯುವಷ್ಟರಲ್ಲಿ ತೀವ್ರವಾದ ನೋವನ್ನು ಸಹಿಸಿಕೊಳ್ಳಲಾಗದೆ ಕೈದಿ ಮೂರ್ಛೆ ಬಿದ್ದು ಅಲ್ಲೇ ಸಾವನ್ನಪ್ಪುತ್ತಾನೆ.

ಇಷ್ಟಾದರೂ ವಿಚಲಿತನಾಗದ ಆ ನ್ಯಾಯಾಧೀಶ ಇನ್ನೂ ಮೂರು ಛಡಿ ಏಟುಗಳು ಬಾಕಿ ಇವೆ. ನಿಜವಾಗಿಯೂ ನೋಡಿದರೆ ಇಂತಹ ಅಪ್ರಾಮಾಣಿಕ ದುಷ್ಟ ಮಗನನ್ನು ಹಡೆದ ನಾನು ಕೂಡ ಇವನು ಕಳ್ಳನಾಗಲು ಪರೋಕ್ಷವಾಗಿ ಕಾರಣಕರ್ತನಾಗಿದ್ದೇನೆ. ಬಾಲ್ಯದಿಂದಲೇ ನಾನು ಇವನಿಗೆ ಶಿಕ್ಷಣದ ಜೊತೆ ಉತ್ತಮ ಸಂಸ್ಕಾರವನ್ನು ನೀಡುತ್ತಿದ್ದರೆ ಆತ ಒಬ್ಬ ಕಳ್ಳನಾಗುತ್ತಿರಲಿಲ್ಲ. ಆದುದರಿಂದ ನಾನು ಕೂಡ ಶಿಕ್ಷಾರ್ಹ. ಉಳಿದಿರುವ ಆ ಮೂರು ಏಟುಗಳನ್ನು ನಾನೇ ಪಡೆಯಬೇಕು. ಆದರೆ ಓರ್ವ ನ್ಯಾಯಾಧೀಶನಾಗಿ ಈ ಪೀಠದಲ್ಲಿ ಕುಳಿತಿರುವ‘ ಕಾರಣ ನನ್ನನ್ನು ಶಿಕ್ಷಿಸುವ ಹಕ್ಕು ಯಾರಿಗೂ ಇಲ್ಲ. ಆದಾಗ್ಯೂ ಪ್ರಕಟಿಸಿದ ಶಿಕ್ಷೆಯ ಪ್ರಮಾಣ ಪೂರ್ಣವಾಗಲೇಬೇಕು. ಈಗ ಉಳಿದಿರುವ ಮೂರು ಛಡಿ ಏಟುಗಳನ್ನು ಸತ್ತು ಹೋಗಿರುವ ಹೆಣಕ್ಕೆ ನೀಡಿಬಿಡಿ ಎಂದು ಹೇಳುತ್ತಾ ಕಣ್ಣೀರಿನಿಂದ ಎದ್ದ ನ್ಯಾಯಾಧೀಶ ತಕ್ಷಣ ನ್ಯಾಯಾಧೀಶನ ಸ್ಥಾನಕ್ಕೆ ರಾಜೀನಾಮೆ ನೀಡಿ, ಮನೆಗೆ ಹೋಗಿ ಕಳೆದುಕೊಂಡ ಮಗನ ಬಗ್ಗೆ ಮರುಗುತ್ತಾನೆ.

ಇದು ರಾಮರಾಜ್ಯದಲ್ಲಿ ನಡೆದ ನ್ಯಾಯ ಪರಿಪಾಲನೆಗೆ ಒಂದು ಸಾಕ್ಷಿಯಾಗಿತ್ತು. ನ್ಯಾಯದ ಎದುರು ಸಂಬಂಧಗಳಾಗಲೀ ವ್ಯಾಮೋಹಗಳಾಗಲಿ, ಬರಬಾರದೆಂಬುದನ್ನು ಆ ನ್ಯಾಯಾಧೀಶ ಎತ್ತಿ ತೋರಿಸಿದ್ದ. ಇಂತಹ ಘಟನೆಗಳು ರಾಮರಾಜ್ಯದಲ್ಲಿ ಮಾತ್ರ ಕಾಣಿಸಬಹುದೇ ವಿನಹ ಈಗಿನ ಕಾಲದಲ್ಲಂತೂ ಸಾಧ್ಯವೇ ಇಲ್ಲ. ಕಾರಣ ಇದು ಕಲಿಕಾಲ! ಜನ ಮಾಡಬಾರದ್ದನ್ನು ಮಾಡುತ್ತಾರೆ! ಆದುದರಿಂದ ಆಗಬಾರದ್ದು ಆಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net