ರಾಜ್ಯಕ್ಕೆ ಎನ್​ಐಎ ಕಚೇರಿ ನಿರೀಕ್ಷೆ ಹುಸಿ; ಬೆಂಗಳೂರಿಗೆ ಸಿಕ್ಕಿಲ್ಲ ಭಾಗ್ಯ

NIa Sep 28
Published on

ಬೆಂಗಳೂರು: ಉಗ್ರರ ತಾಣವಾಗುತ್ತಿರುವ ಕರ್ನಾಟಕದಲ್ಲಿ ಪ್ರತ್ಯೇಕ ರಾಷ್ಟ್ರೀಯ ತನಿಖಾ ದಳ (ಎನ್​ಐಎ) ಕಚೇರಿ ಸ್ಥಾಪಿಸಲು ಕೇಂದ್ರ ಸರ್ಕಾರ ಅನುಮತಿ ನೀಡಲಿದೆ ಎಂಬ ಬಹುದಿನದ ನಿರೀಕ್ಷೆ ಹುಸಿಯಾಗಿದೆ. ರಾಂಚಿ, ಚೆನ್ನೈ ಮತ್ತು ಇಂಫಾಲ್​ನಲ್ಲಿ ಮಾತ್ರ ಹೊಸದಾಗಿ ಶಾಶ್ವತ ಎನ್​ಐಎ ಕಚೇರಿ ತೆರೆಯಲು ಕೇಂದ್ರ ಗೃಹಸಚಿವಾಲಯ ಅನುಮತಿ ಕೊಟ್ಟು ಸೋಮವಾರ ಅಧಿಕೃತ ಆದೇಶ ಹೊರಡಿಸಿದೆ.

ರಾಜ್ಯದಲ್ಲಿ ಉಗ್ರ ಚಟುವಟಿಕೆ ಮಟ್ಟ ಹಾಕಲು ಮತ್ತು ಭಯೋತ್ಪಾದಕ ಪ್ರಕರಣಗಳ ತನಿಖೆ ಚುರುಕುಗೊಳಿಸುವ ಸಲುವಾಗಿ ಬೆಂಗಳೂರಿನಲ್ಲಿ ಎನ್​ಐಎ ಶಾಶ್ವತ ಕಚೇರಿ ತೆರೆಯಬೇಕೆಂದು ಹಲವು ವರ್ಷಗಳಿಂದ ಒತ್ತಾಯ ಕೇಳಿಬಂದಿತ್ತು. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಕೂಡ ಇತ್ತೀಚೆಗೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿ ಮಾಡಿ ಕ್ಯಾಂಪ್ ಆಫೀಸ್ ಬದಲಿಗೆ ಶಾಶ್ವತ ಕಚೇರಿ ತೆರೆಯುವಂತೆ ಮನವಿ ಸಲ್ಲಿಸಿದ್ದರು.ಅಮಿತ್ ಷಾ ಒಪ್ಪಿಗೆ ಸೂಚಿಸಿದ್ದಾರೆ ಎಂದು ಖುದ್ದು ತೇಜಸ್ವಿ ಸೂರ್ಯ ಅವರೇ ಹೇಳಿದ್ದರಿಂದ ಬೆಂಗಳೂರಲ್ಲಿ ಪೂರ್ಣಪ್ರಮಾಣದಲ್ಲಿ ಎನ್​ಐಎ ಕಚೇರಿ ಸ್ಥಾಪನೆಯಾಗಲಿದೆ ಎಂದ ಆಸೆ ಬಲಗೊಂಡಿತ್ತು. ಇದನ್ನೂ ಓದಿ: ‘ಡ್ರಗ್ಸ್​’ ನಟಿಯರ ನಿರೀಕ್ಷೆ ಹುಸಿ; ಅಳುತ್ತ, ಜೈಲು ಅಧಿಕಾರಿಗಳಿಗೆ ಕೈಮುಗಿಯುತ್ತಿರುವ ರಾಗಿಣಿ, ಸಂಜನಾ

ಆದರೆ, ಸೋಮವಾರ ಕೇಂದ್ರ ಗೃಹ ಸಚಿವಾಲಯ ಪ್ರಕಟಿಸಿರುವ ಪತ್ರಿಕಾ ಹೇಳಿಕೆಯಲ್ಲಿ ಇಂಫಾಲ್, ಚೆನ್ನೈ ಮತ್ತು ರಾಂಚಿಯಲ್ಲಿ ಹೊಸ ಎನ್​ಐಎ ಕಚೇರಿ ತೆರೆಯುವುದಾಗಿ ತಿಳಿಸಿದೆ. ಆದ್ದರಿಂದ ರಾಜ್ಯದಲ್ಲಿ ಸದ್ಯಕ್ಕೆ ಶಾಶ್ವತ ಎನ್​ಐಎ ಕಚೇರಿ ತೆರೆಯಲ್ಲ. ಮತ್ತಷ್ಟು ದಿನ ಕಾಯಬೇಕಾಗಿದೆ. ಸದ್ಯ ಬೆಂಗಳೂರಿನಲ್ಲಿ ಡಿವೈಎಸ್​ಪಿ ದರ್ಜೆ ಅಧಿಕಾರಿ ಜತೆಗೆ ಮೂರ್ನಾಲ್ಕು ಸಿಬ್ಬಂದಿ ರಾಜ್ಯದಲ್ಲಿನ ಭಯೋತ್ಪಾದಕ ಚಟುವಟಿಕೆಗಳ ಪ್ರಕರಣಗಳ ತನಿಖೆ ನಡೆಸುವಂತಾಗಿದೆ. ಅಲ್ಲದೆ, ಕಚೇರಿ ಸೇರಿ ಸೂಕ್ತ ಸೌಲಭ್ಯವನ್ನೂ ಒದಗಿಸಿಲ್ಲ.

ಕಚೇರಿ ಸ್ಥಾಪನೆಗೆ ಒತ್ತಾಯ

ದೇಶದಲ್ಲಿ ಉಗ್ರ ಚಟುವಟಿಕೆ ಮಟ್ಟ ಹಾಕಲು ಎನ್​ಐಎ ಕಾರ್ಯವ್ಯಾಪ್ತಿ ಮತ್ತಷ್ಟು ವಿಸ್ತರಿಸಿದೆ. ಈಗಾಗಲೆ ದೇಶದಲ್ಲಿ 9 ಕಚೇರಿಗಳಿದ್ದು, ಇದರ ಜತೆಗೆ 3 ಹೊಸ ಪ್ರಾದೇಶಿಕ ಕಚೇರಿ ತೆರೆಯುತ್ತಿರುವುದರಿಂದ ಎನ್​ಐಎ ಮತ್ತಷ್ಟು ಬಲಿಷ್ಠವಾಗಿದೆ ಎಂದು ಎನ್​ಐಎ ತಿಳಿಸಿದೆ. ಕರ್ನಾಟಕದಲ್ಲಿ ಉಗ್ರ ಚಟುವಟಿಕೆ ಇತ್ತೀಚೆಗೆ ಹೆಚ್ಚು ಬೆಳಕಿಗೆ ಬರುತ್ತಿರುವುದರಿಂದ ಉಗ್ರರ ವಿರುದ್ಧದ ಹೋರಾಟಕ್ಕೆ ಎನ್​ಐಎ ಮತ್ತಷ್ಟು ಬಲಗೊಳ್ಳಬೇಕು. ಅದಕ್ಕಾಗಿ ಬೆಂಗಳೂರಲ್ಲಿ ಪೂರ್ಣಪ್ರಮಾಣದ ಹಾಗೂ ಅಗತ್ಯ ಸೌಕರ್ಯ ಹೊಂದಿರುವ ಕಚೇರಿ ಸ್ಥಾಪಿಸಬೇಕು ಎಂದು ಅಧಿಕಾರಿಗಳು ಒತ್ತಾಯಿಸಿದ್ದಾರೆ.

ಯುವಕನ ವಿಚಾರಣೆ

ಶಿರಸಿ: ದೇಶದ ವಿವಿಧ ಭಾಗಗಳಲ್ಲಿ ಬಂಧನಕ್ಕೊಳಗಾಗಿದ್ದ ಉಗ್ರರ ಜತೆ ನಂಟು ಹೊಂದಿರುವ ಸಂಶಯದ ಮೇಲೆ ರಾಷ್ಟ್ರೀಯ ತನಿಖಾ ದಳ (ಎನ್​ಐಎ) ಶಿರಸಿ ಸಮೀಪ ಅರೆಕೊಪ್ಪ ಗ್ರಾಮದ ಯುವಕನನ್ನು ವಿಚಾರಣೆ ನಡೆಸಿದೆ. ಇಬ್ಬರು ಅಧಿಕಾರಿಗಳನ್ನು ಒಳಗೊಂಡ ತಂಡ ಸ್ಥಳೀಯ ಪೊಲೀಸರ ನೆರವಿನೊಂದಿಗೆ ಗ್ರಾಮಕ್ಕೆ ತೆರಳಿ ವಿಚಾರಣೆ ನಡೆಸಿದೆ. ಆದರೆ ಸ್ಥಳೀಯವಾಗಿ ಯಾವುದೇ ಪ್ರಕರಣ ದಾಖಲಿಸಿಲ್ಲ ಎಂದು ಎಸ್​ಪಿ ಶಿವಪ್ರಕಾಶ ದೇವರಾಜ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net