

ಬೆಂಗಳೂರು: ಲಾಕ್ಡೌನ್ನಿಂದ ತೀವ್ರ ನಷ್ಟಕ್ಕೆ ಒಳಗಾಗಿರುವ ರೈತ ಸಮುದಾಯದ ನೆರವಿಗೆ ಶೀಘ್ರವೇ ಕ್ರಮ ಕೈಗೊಳ್ಳಿ ಎಂದು ರಾಜ್ಯ ಹೈಕೋರ್ಟ್ ಸರ್ಕಾರಕ್ಕೆ ಸೂಚನೆ ನೀಡಿದೆ.
ಶುಕ್ರವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ವಿವಿಧ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಅಭಯ್ ಓಕಾ ಮತ್ತು ನ್ಯಾಯಮೂರ್ತಿ ಬಿ.ವಿ.ನಾಗರತ್ನಾ ಅವರನ್ನೊಳಗೊಂಡ ವಿಭಾಗೀಯ ಪೀಠ, ಕೃಷಿ ಕಾರ್ಯಗಳು ಸುಗಮವಾಗಿ ನಡೆಯುವಂತೆ ನೋಡಿಕೊಳ್ಳಬೇಕು. ಹಾಗೇ ರೈತರು ಬೆಳೆದ ಆಹಾರ ಬೆಳೆಗಳು, ತೋಟಗಾರಿಕಾ ಬೆಳೆಗಳ ಸಾಗಣೆ ವ್ಯವಸ್ಥೆ ಸರಿಯಾಗಿ ನಡೆಯಲು ಕ್ರಮ ಕೈಗೊಳ್ಳಬೇಕು. ಇದರಿಂದ ರೈತರಿಗಷ್ಟೇ ಅಲ್ಲದೆ, ಫಲಾನುಭವಿ ನಾಗರಿಕರಿಗೂ ಸಹಾಯವಾಗುತ್ತದೆ ಎಂದು ಹೇಳಿದೆ.
ಕರೊನಾ ವೈರಸ್ ತಡೆಗೆ ವಿಧಿಸಲಾದ ಲಾಕ್ಡೌನ್ನಿಂದ ಗ್ರಾಮೀಣ ಪ್ರದೇಶದ ಕೃಷಿಕರಿಗೆ, ರೈತರಿಗೆ ತೀವ್ರ ಸಮಸ್ಯೆಯಾಗಿದೆ. ಬೆಳೆ ಮಾರಟಮಾಡಲಾಗದೆ ಅದನ್ನೆಲ್ಲ ರಸ್ತೆ, ಮೋರಿಗಳಿಗೆ ಎಸೆಯುತ್ತಿದ್ದಾರೆ. ರೈತರಿಗೆ ಪರಿಹಾರ ನೀಡಬೇಕು, ಅವರ ಸಮಸ್ಯೆ ನೀಗಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಮಾನವ ಹಕ್ಕು ಸಂಸ್ಥೆ ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿತ್ತು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ರೈತರ ನೆರವಿಗೆ ಧಾವಿಸಿ ಎಂದು ಸರ್ಕಾರಕ್ಕೆ ಸೂಚನೆ ನೀಡಿದೆ.
ಇನ್ನು ದೆಹಲಿಯ ನಿಜಾಮುದ್ದೀನ್ ಮಸೀದಿಯಲ್ಲಿ ತಬ್ಲಿಘಿ ಜಮಾತ್ ಸಭೆಯಲ್ಲಿ ಪಾಲ್ಗೊಂಡವರಿಂದ ಕರೊನಾ ವೈರಸ್ ಹರಡುವ ಪ್ರಮಾಣ ಹೆಚ್ಚಾದ ಬಗ್ಗೆ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಮಸೀದಿಯ ಸಭೆಯಲ್ಲಿ ಪಾಲ್ಗೊಂಡು ನಂತರ ರಾಜ್ಯಕ್ಕೆ ಪ್ರವೇಶ ಮಾಡಿದವರನ್ನು ತಕ್ಷಣವೇ ಗುರುತಿಸಿ, ಅವರನ್ನೆಲ್ಲ ಕ್ವಾರಂಟೈನ್ಗೆ ಒಳಪಡಿಸಿ ಎಂದು ಸರ್ಕಾರಕ್ಕೆ ಹೇಳಿದೆ. (ಏಜೆನ್ಸೀಸ್)