

ಬಹು ವೈವಿಧ್ಯಮಯ ಕಲೆಯ ವೈಭವ ಹೊಂದಿರುವ ಕರ್ನಾಟಕವು ಈ ಪರಂಪರೆಯನ್ನು ಪೋಷಿಸಿಕೊಂಡು ಬಂದಿದೆ. ಕವಿವಾಣಿಯಂತೆ ‘ರಸಿಕರ ಕಂಗಳ ಸೆಳೆಯುವ ನೋಟ’ಗಳೊಂದಿಗೆ ಕರ್ನಾಟಕದ ಕಲಾ ಸಿರಿವೈಭವ ಅನನ್ಯ, ಅನುಪಮ.
ಮೈಸೂರು ಸಾಂಪ್ರದಾಯಿಕ ಚಿತ್ರಕಲೆ ಮೈಸೂರು ವರ್ಣಚಿತ್ರಗಳು ನೋಡಲು ಎಷ್ಟು ಆಕರ್ಷಣೀಯವಾಗಿ ಕಾಣುತ್ತವೆಯೋ ಅದರ ಹಿಂದೆ ಕಲಾವಿದರ ಶ್ರಮವೂ ಅಷ್ಟೇ ಇರುತ್ತದೆ. ಈ ಕಲಾಪ್ರಕಾರವು 15ನೇ ಶತಮಾನದಲ್ಲಿ ವಿಜಯನಗರ ಅರಸರ ಆಳ್ವಿಕೆಯಲ್ಲಿ ಜನಪ್ರಿಯವಾಯಿತು. ವರ್ಣಚಿತ್ರಗಳು, ಶೈಲಿಯಲ್ಲಿ ಎಷ್ಟೇ ಸಾಂಪ್ರದಾಯಿಕವಾಗಿದ್ದರೂ, ಅದು ಆಳವಾದ ಆಧ್ಯಾತ್ಮಿಕತೆಯನ್ನು ಹೊಂದಿರುತ್ತವೆ. ಹಿಂದು ಪುರಾಣ ಅಥವಾ ದೇವರು ಮತ್ತು ದೇವತೆಗಳನ್ನು ಆಧರಿಸಿದ ಮೈಸೂರು ವರ್ಣಚಿತ್ರಗಳು, ಮ್ಯೂಟ್ ವರ್ಣಗಳು, ಸೂಕ್ಷ್ಮವಾದ ಅನುಗ್ರಹ ಮತ್ತು ಹೊಳೆಯುವ ಚಿನ್ನದ ಕೆಲಸದ ಅದ್ಭುತ ಮಿಶ್ರಣ. ಮೈಸೂರು ರಾಜರ ಆಸ್ಥಾನದ ಗೋಡೆಗಳಲ್ಲಿ ಈ ಸಾಂಪ್ರದಾಯಿಕ ಕಲಾಪ್ರಕಾರಗಳನ್ನು ಚಿತ್ರಿಸಿರುವುದು ಈ ಕಲಾ ಶ್ರೀಮಂತಿಕೆಗೆ ಸಾಕ್ಷಿಯಾಗಿದೆ. ರಾಜಾಶ್ರಯದಲ್ಲಿ ಅರಳಿದ ಈ ವಿಶಿಷ್ಟ ಕಲಾಪ್ರಕಾರ ಇಂದಿಗೂ ತನ್ನ ಮೆರುಗನ್ನು ಹೆಚ್ಚಿಸಿಕೊಂಡು ಅಸ್ತಿತ್ವ ಉಳಿಸಿಕೊಂಡಿದೆ.
ಕರ್ನಾಟಕದ ಪಾರಂಪರಿಕ ಕಲೆಗಳಲ್ಲಿ ಬಿದ್ರಿ ಕಲೆಯೂ ಒಂದಾಗಿದೆ. ಸುಮಾರು ಕ್ರಿ.ಶ. 14ನೇ ಶತಮಾನದಲ್ಲಿ ಪ್ರವರ್ಧಮಾನಕ್ಕೆ ಬಂದ ಈ ಕಲೆ, ಬೀದರ್ ನಗರದ ಅನ್ವರ್ಥವನ್ನೇ ಬಳಸಿಕೊಂಡು ಬಿದರಿ-ಬಿದ್ರಿ ಕಲೆ ಎಂದು ಹೆಸರು ಪಡೆದುಕೊಂಡಿದೆ. ಹಿತ್ತಾಳೆ, ತಾಮ್ರ ಲೋಹದ ವಸ್ತುಗಳ, ಪಾತ್ರೆಗಳ ಮೇಲೆ ಬೆಳ್ಳಿಯ ತೊಡುಗೆ ಅಳವಡಿಸುವುದು ಈ ಕಲೆಯ ವಿಶೇಷ. ಬಹಮನಿ ಸುಲ್ತಾನರ ಆಳ್ವಿಕೆ ಕಾಲದಲ್ಲಿ ಇರಾನ್ ದೇಶದ ಕಲಾಕಾರರು (ಲೋಹದ ನಿಷ್ಣಾತರು) ಬೀದರ್ ಪಟ್ಟಣಕ್ಕೆ ಬಂದು ರಾಜಾಶ್ರಯ ಪಡೆದು ಈ ಕಲೆಯನ್ನು ಮುಂದುವರಿಸಿದರು. ಬಳಿಕ ಹೈದರಾಬಾದಿನ ನಿಜಾಮರ ಕಾಲದಲ್ಲಿ ಈ ಕಲೆಗೆ ಪ್ರೋತ್ಸಾಹ ಮುಂದುವರಿಯಿತು. ಬೀದರ್ ಪಟ್ಟಣದಲ್ಲಿ ಈ ಕಲೆಯ ನಿಷ್ಣಾತರು ವಂಶ ಪರಂಪರೆಯಾಗಿ ಈ ವೃತ್ತಿ (ಬಿದ್ರಿಕಲೆ)ಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ.
ಬೀಟೆ ಮರ (ರೋಸ್ವುಡ್) ಅತ್ಯುತ್ತಮ ಜಾತಿಯ ಮರಗಳಲ್ಲಿ ಒಂದಾಗಿದ್ದು, ಶ್ರೀಗಂಧ (ಸ್ಯಾಂಡಲ್ವುಡ್) ಮರದ ನಂತರ ಬೆಲೆಬಾಳುವ ಮರವಾಗಿದೆ. ದೀರ್ಘಕಾಲ ಬಾಳಿಕೆ ಬರುವ ‘ಬೀಟೆ ಮರ’ವನ್ನು ಕೆತ್ತನೆ ಕೆಲಸಗಳಿಗೆ, ಫಲಕಗಳ ತಯಾರಿಕೆಗೆ ಬಳಸಲಾಗುತ್ತದೆ. ಇದರ ತೆಳು ಪದರವು ಇತ್ತೀಚೆಗೆ ಒಳಾಂಗಣ ಅಲಂಕಾರದಲ್ಲಿ ಹೆಚ್ಚು ಬೇಡಿಕೆ ಪಡೆದುಕೊಂಡಿದೆ. ಬೀಟೆ ಒಂದು ಪರ್ಣಪಾತಿ ಮರ. ಕರ್ನಾಟಕದಲ್ಲಿ ಸುಮಾರು 100 ರಿಂದ 200 ಸೆ.ಮೀ. ಮಳೆಯಾಗುವ ಪ್ರದೇಶದಲ್ಲಿ ಕಂಡುಬರುತ್ತದೆ. ತೇವಾಂಶ ಹೆಚ್ಚಿರುವ ಪ್ರದೇಶಗಳಲ್ಲಿ ನಿತ್ಯಹರಿದ್ವರ್ಣ ವೃಕ್ಷವಾಗಿರುತ್ತದೆ. ಈ ಮರ ಹಳದಿ ಮಿಶ್ರಿತ ಬಿಳಿಯ ಬಣ್ಣದ ಹೂವು ಬಿಡುತ್ತದೆ. ಇದರ ದಾರುವು ಗಡುಸಾಗಿದ್ದು, ಬಲಯುತವಾಗಿದೆ. ಇದರ ತಿರುಳು ಕರಿ ನೇರಳೆ ಬಣ್ಣದಿಂದ ಕೂಡಿದ್ದು, ಕರಿಗೆರೆಗಳೊಂದಿಗೆ ಆಕರ್ಷಕವಾಗಿ ಹೊಳಪಿನಿಂದ ಕೂಡಿರುತ್ತದೆ. ಮರದಿಂದ ಮಾಡುವ ಹುದುಗು ಚಿತ್ರ (ಇನ್ವೇ) ಅತ್ಯಾಕರ್ಷಕ, ಮೈಸೂರಿನಲ್ಲಿ ಹೆಚ್ಚು ಕಲಾವಿದರಿದ್ದಾರೆ.
ಕಂಚಿನ ಕಲೆ ಕರ್ನಾಟಕದ ಹಳೆಯ ಕಲೆಗಳಲ್ಲಿ ಒಂದಾಗಿದೆ. ಇದು ದೇವಾಲಯ ಸೇರಿ ರಾಜ್ಯದ ಮನೆಗಳಲ್ಲಿ ಬಹಳ ಹಿಂದಿನಿಂದಲೂ ಬಳಕೆಯಲ್ಲಿ ಇರುವ ಕರಕುಶಲ ಸಂಪ್ರದಾಯವಾಗಿದೆ. ವೈಜ್ಞಾನಿಕವಾಗಿ ಕಂಚಿನ ವಸ್ತುಗಳನ್ನು ದೀರ್ಘಕಾಲ ಶೇಖರಿಸಿಡಬಹುದು ಹಾಗೂ ನಿರ್ವಹಣೆಗೂ ಉತ್ತಮ. ಹಿಂದೆಲ್ಲ ಮನೆಗಳಲ್ಲಿ ದೀಪದ ಕಂಬಗಳು ಸೇರಿ ಪೂಜಾವಸ್ತುಗಳು ಹಾಗೂ ಊಟದ ತಟ್ಟೆ, ಚಂಬು, ಲೋಟ ಎಲ್ಲವು ಕಂಚಿನದ್ದೇ ಹೆಚ್ಚು ಬಳಕೆಯಲ್ಲಿದ್ದವು. ಮಂಡ್ಯ ಜಿಲ್ಲೆಯ ನಾಗಮಂಗಲ ಕಂಚಿನ ಎರಕದ ಪ್ರ್ರದ್ಧ ಕೇಂದ್ರವಾಗಿದೆ. ಜೈನರ ಪುರಾತನ ಕೇಂದ್ರವಾಗಿರುವ ಕಾರ್ಕಳವು ಕಂಚಿನ ಶಿಲ್ಪಗಳಿಗೆ ಜನಪ್ರಿಯವಾಗಿದೆ. ಶ್ರವಣಬೆಳಗೊಳದ ಗೊಮ್ಮಟೇಶ್ವರನ ಮೂರ್ತಿ ಬಳಿಯ ಇರುವ ಕಂಚಿನ ಉತ್ಸವ ಮೂರ್ತಿಗೆ ನಿತ್ಯ ಅಭಿಷೇಕ ನಡೆಯುತ್ತದೆ.
ಕರ್ನಾಟಕದಲ್ಲಿ ದೇವಾಲಯ ಸಂಸ್ಕೃತಿ ಜನಜೀವನದಲ್ಲಿ ಹಾಸುಹೊಕ್ಕಾಗಿದೆ. ಬಹುಪ್ರಸಿದ್ಧವಾದ ಬೃಹತ್ ದೇವಾಲಯಗಳಿಂದ ಹಿಡಿದು ಇಂದಿನ ಆಧುನಿಕ ದೇವಾಲಯಗಳವರೆಗೆ ಉತ್ಸವ ಮೂರ್ತಿಗಳು ಬಹುತೇಕ ಕಂಚಿ ನಿಂದಲೇ ನಿರ್ಮಾಣ ವಾಗಿರುತ್ತವೆ. ಅಪರೂಪ ವೆಂಬಂತೆ ಶಿವಮೊಗ್ಗ ಜಿಲ್ಲೆಯ ಪ್ರಸಿದ್ಧ ಆನಂದಪುರದ ಮುರುಘಾ ಮಠದಲ್ಲಿ ಕೆಳದಿ ಅರಸರು ನಿರ್ವಿುಸಿ ಕೊಟ್ಟಿರುವ ಕಂಚಿನ ರಥವಿದೆ. ಪ್ರತಿವರ್ಷ ಕಾರ್ತಿಕ ದೀಪೋತ್ಸವದಲ್ಲಿ ಕಂಚಿನ ರಥೋತ್ಸವ ನಡೆಯುತ್ತದೆ. ಕೈವಾರದ ಶಿಲ್ಪಕಲೆ ಸಾಕಷ್ಟು ಪ್ರಸಿದ್ಧಿ ಪಡೆದಿದೆ.