ಧನ್ವಂತರಿ: ಪ್ರತಿರಕ್ಷಾ ಗುಣದ ಔಷಧ ದಾಲ್ಚಿನ್ನಿ

Sudina-1
Published on

ದಾಲ್ಚಿನ್ನಿಯ (ಚಕ್ಕೆ) ಗುಣಗಳ ಬಗ್ಗೆ ತಿಳಿದರೆ - ಪಲಾವ್ ಮಾಡಲು ಅದನ್ನು ಹಾಕುವಾಗ ಕೇವಲ ಪರಿಮಳ ಮತ್ತು ರುಚಿಗೆ ಹಾಕುತ್ತಿದ್ದೇನೆ ಎಂಬ ಭಾವನೆ ಬರುವುದಿಲ್ಲ. ಆರೋಗ್ಯದ ಮೇಲೆ ಅದರ ಧನಾತ್ಮಕ ಬದಲಾವಣೆಗಳ ಬಗ್ಗೆಯೂ ನೆನಪಾಗುತ್ತದೆ. ಅಷ್ಟು ಆರೋಗ್ಯಕರವಾದದ್ದು ಚಕ್ಕೆ. ಆಯುರ್ವೇದದಲ್ಲಿ ಹೇಳಿದ ತ್ರಿಜಾತಕ ಚೂರ್ಣದಲ್ಲಿ ಇದೂ ಒಂದು.

ಇದು ಬೊಜ್ಜು, ಮಧುಮೇಹ, ಪಿಸಿಓಡಿ, ಮೂತ್ರಾಂಗ ವ್ಯೂಹದ ಸಮಸ್ಯೆಗಳಲ್ಲಿ ಇದು ಅತ್ಯಂತ ಪ್ರಯೋಜನಕಾರಿ ಎಂದು ಇತ್ತೀಚಿನ ಸಂಶೋಧನೆಗಳೂ ಹೇಳುತ್ತಿವೆ. ದೇಹವು ಇನ್ಸುಲಿನ್ ಬಳಸಿಕೊಳ್ಳುವಂತೆ ಮಾಡಿ (ಇನ್ಸುಲಿನ್ ಸೆನ್ಸೆಟಿವಿಟಿ ಹೆಚ್ಚಿಸಿ) ಮಧುಮೇಹ, ಪಿಸಿಓಡಿಯಂಥ ಸಮಸ್ಯೆಗಳನ್ನು ಇದು ಹತೋಟಿಯಲ್ಲಿಡುತ್ತದೆ. ಇನ್ಸುಲಿನ್ ಬಿಡುಗಡೆ ಸರಿಯಾಗಿ ಆಗುವಂತೆ ಮಾಡುವ ಗುಣವೂ ಇದಕ್ಕಿದೆ. ದೇಹವು ಗ್ಲೂಕೋಸನ್ನು ಹೀರಿಕೊಳ್ಳುವ ವೇಗವನ್ನೂ ಇದು ನಿಯಂತ್ರಿಸುತ್ತದೆ. ಈ ಕಾರಣದಿಂದ ಬೊಜ್ಜು ಬರದಂತೆ ತಡೆಯುತ್ತದೆ ಮತ್ತು ಇಡೀ ದಿನ ದೇಹದಲ್ಲಿನ ಸಕ್ಕರೆಯ ಮಟ್ಟ ಸಮತೋಲನದಲ್ಲಿರುವಂತೆ ಮಾಡುತ್ತದೆ. ಹೀಗಾಗಿ ಮಧುಮೇಹದ ಅಡ್ಡ ಪರಿಣಾಮವಾಗಿ ಕಿಡ್ನಿ, ಕಣ್ಣು, ಹೃದಯಕ್ಕೆ ಸಮಸ್ಯೆಯಾಗುವುದನ್ನು ಇದು ತಡೆಯುತ್ತದೆ. ಆಯುಷ್ ಸಚಿವಾಲಯವು ರೋಗನಿರೋಧಕ ಶಕ್ತಿ ಹೆಚ್ಚಿಸಲು ದೇಶದಾದ್ಯಂತ ಎಲ್ಲರಿಗೂ ತೆಗೆದುಕೊಳ್ಳಲು ಹೇಳಿರುವ ಕ್ವಾಥದಲ್ಲಿ ದಾಲ್ಚಿನ್ನಿಯೂ ಪ್ರಮುಖ ಘಟಕ. ಅವರು ಸಾವಿರಾರು ಆಯುರ್ವೆದ ಔಷಧದ್ರವ್ಯಗಳಲ್ಲಿ ದಾಲ್ಚಿನ್ನಿಯನ್ನೇ ಆಯ್ದುಕೊಂಡಿದ್ದಾರೆಂದರೆ ಅದು ಎಷ್ಟು ಅದ್ಭುತವಾದುದು ಎಂದರ್ಥ ಮಾಡಿಕೊಳ್ಳಬೇಕು.

ದಾಲ್ಚಿನ್ನಿಗೆ ರೋಗನಿರೋಧಕ ಶಕ್ತಿ ಹೆಚ್ಚಿಸುವ ಮತ್ತು ಹಲವು ರೀತಿಯ ವೈರಸ್​ಗಳನ್ನು ನಿರೋಧಿಸುವ ಗುಣವಿದೆ. ಇದು ಜೀರ್ಣಕ್ರಿಯೆ ಸರಿಯಾಗಿ ಆಗುವಂತೆ ನೋಡಿಕೊಳ್ಳುತ್ತದೆ. ಗ್ಯಾಸ್ ತುಂಬುವುದು, ಹೊಟ್ಟೆನೋವು, ಸರಿಯಾಗಿ ಹಸಿವಾಗದ ಸಮಸ್ಯೆಗಳಲ್ಲಿ ಇದರ ಬಳಕೆ ತುಂಬ ಪ್ರಯೋಜನಕಾರಿ. ಭೇದಿ, ಆಮಶಂಕೆಯಂತಹ ಸಮಸ್ಯೆಗಳಲ್ಲಿಯೂ ಇದನ್ನು ಬಳಸಬಹುದು. ಶ್ವಾಸಾಂಗವ್ಯೂಹಕ್ಕೆ ಸಂಬಂಧಿಸಿದ ಬಹುತೇಕ ಎಲ್ಲ ಸಮಸ್ಯೆಗಳಲ್ಲೂ ಇದರಿಂದ ಅನುಕೂಲವಾಗುತ್ತದೆ. ಕೆಮ್ಮು, ಕಫ, ದಮ್ಮು ಮತ್ತು ಶ್ವಾಸಕೋಶಕ್ಕೆ ಸಂಬಂಧಿಸಿದ ಇತರ ಹಲವು ಸಮಸ್ಯೆಗಳಲ್ಲಿ ಇದು ಸಹಕಾರಿ. ಸ್ವರವನ್ನು ಸುಧಾರಿಸುತ್ತದೆ. ಗಂಟಲುನೋವನ್ನು ಕಡಿಮೆ ಮಾಡುತ್ತದೆ. ಪದೇಪದೆ ಕಾಡುವ ಅಲರ್ಜಿಯನ್ನು ಬೇಗ ಹತೋಟಿಗೆ ತರುತ್ತದೆ. ಆಯುರ್ವೆದದ ಪ್ರಸಿದ್ಧ ‘ಸಿತೋಪಲಾದಿ’ ಚೂರ್ಣದಲ್ಲಿ ಇದೂ ಒಂದು ಘಟಕ. ಕ್ಯಾನ್ಸರ್ ಸಮಸ್ಯೆಯಲ್ಲಿ ಇದರ ಬಳಕೆ ದೊಡ್ಡ ಪ್ರಮಾಣದಲ್ಲಿ ಆಗುತ್ತಿದೆ. ಭಾವಪ್ರಕಾಶ ನಿಘಂಟುವಿನಲ್ಲಿ - ಇದು ವೀರ್ಯದ ಗುಣವನ್ನು ಹೆಚ್ಚಿಸುತ್ತದೆ, ಲೈಂಗಿಕ ಶಕ್ತಿಯನ್ನು ವರ್ಧಿಸುತ್ತದೆ, ಬಲವನ್ನು ಮತ್ತು ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ ಎಂದಿದ್ದಾರೆ. ದಿನಕ್ಕೆ ಒಂದರಿಂದ ಮೂರು ಗ್ರಾಂ ದಾಲ್ಚಿನ್ನಿಯನ್ನು ಅಡುಗೆಯಲ್ಲಿ ಬಳಸಬಹುದು. ಬೆಳಗ್ಗೆ ಖಾಲಿಹೊಟ್ಟೆಯಲ್ಲಿ ಅರ್ಧ ಚಮಚ ಪುಡಿಗೆ ಒಂದು ಚಮಚ ಜೇನುತುಪ್ಪ ಹಾಕಿ ಸೇವಿಸುವುದರಿಂದ ಅಲರ್ಜಿ, ಕೆಮ್ಮು, ಬೊಜ್ಜು, ಮೂತ್ರಪಿಂಡದ ಸಮಸ್ಯೆಗಳು, ಹೊಟ್ಟೆ ಉಬ್ಬರದಂತಹ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳಿರುವವರಿಗೆ ತುಂಬ ಅನುಕೂಲವಾಗುತ್ತದೆ. ಮಧುಮೇಹಿಗಳು ಬಿಸಿನೀರಿನಲ್ಲಿ ಸೇವಿಸಬಹುದು. ಕಫ, ಕೆಮ್ಮು, ಗಂಟಲು ಕೆರೆತ, ಗಂಟಲು ಮತ್ತು ಬಾಯಿ ಒಣಗುವ ಸಮಸ್ಯೆ ಇದ್ದಾಗ ಅರ್ಧ ಚಮಚ ಚಕ್ಕೆ ಪುಡಿ, ಒಂದು ಚಮಚ ಏಲಕ್ಕಿ, ಎರಡು ಚಮಚ ಹಿಪ್ಪಲಿ ಪುಡಿಯನ್ನು ಸೇರಿಸಿ ಕಾಲು ಚಮಚದಷ್ಟು ಈ ಮಿಶ್ರಣವನ್ನು ದಿನಕ್ಕೆ ಮೂರು ಬಾರಿ ಆಹಾರದ ಮೊದಲು ಜೇನುತುಪ್ಪದಲ್ಲಿ ತೆಗೆದುಕೊಳ್ಳಬೇಕು. ಇವೆಲ್ಲವೂ ಆಯುರ್ವೆದ ಅಥವಾ ಗ್ರಂಧಿಗೆ ಅಂಗಡಿಗಳಲ್ಲಿ ಸಿಗುತ್ತವೆ. ಆದರೆ ಚಕ್ಕೆಯನ್ನು ಅಂಗಡಿಗಳಲ್ಲಿ ತೆಗೆದುಕೊಳ್ಳುವಾಗ ಕಾಳಜಿ ಅಗತ್ಯ. ಕೆಲವು ಕಡೆ ಯಾವುದೋ ಮರದ ತೊಗಟೆಗೆ ಕೃತ್ರಿಮ ಪರಿಮಳವನ್ನು ಸೇರಿಸಿ ಮಾರಾಟ ಮಾಡಲಾಗುತ್ತದೆ. ಮಲೆನಾಡಿನಲ್ಲಿ ಈ ಮರ ಸುಲಭವಾಗಿ ಕಾಣಸಿಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net