

ಗದಗ: ಬಾಳು ಅರಳಿ ಹೂವಾಗಬೇಕಾದರೆ ಪವಿತ್ರ ಶಾಸ್ತ್ರಗಳ, ಗುರುಗಳ ಆಶೀರ್ವಚನ ಶ್ರವಣ ಮಾಡಿದಾಗ ಮಾತ್ರ ಬಾಳು ಹಸನಾಗಲು ಸಾಧ್ಯ ಎಂದು ವೀರೇಶ್ವರ ಪುಣ್ಯಾಶ್ರಮದ ಡಾ. ಕಲ್ಲಯ್ಯಜ್ಜನವರು ಹೇಳಿದರು.
ನಗರದ ಪಂಚಾಚಾರ್ಯ ಮಾಂಗಲ್ಯ ಮಂದಿರದಲ್ಲಿ ಜಗದ್ಗುರು ಪಂಚಾಚಾರ್ಯ ಅಮೃತವಾಹಿನಿ ಟ್ರಸ್ಟಿನಿಂದ ಬುಧವಾರ ಏರ್ಪಡಿಸಿದ್ದ ಅಮೃತವಾಹಿನಿ ಕಾರ್ಯಕ್ರಮದಲ್ಲಿ ಗುರುವಂದನೆ ಸ್ವೀಕರಿಸಿ ಮಾತನಾಡಿದರು. ಸಾಗರದ ಹಾಗೆ ಇರುವ ಈ ಸಂಸಾರದಲ್ಲಿ ಹಾಲಾಹಲವೂ ಇದೆ. ಅಮೃತವೂ ಇದೆ. ಅದರ ಅರಿವು ಬರುವುದು ಮಂಥನ ಮಾಡಿದಾಗ ಮಾತ್ರ. ನಮ್ಮ ಅಜ್ಞಾನ ಸುಜ್ಞಾನವಾಗಬೇಕು. ಸುಜ್ಞಾನ ಸಂಸ್ಕಾರವಾಗಬೇಕು. ಅಂದಾಗ ಜೀವನವು ಹಸನಗಾಗಲು ಸಾಧ್ಯ. ಅಂತಹ ಸುಜ್ಞಾನದ ಮಾತುಗಳನ್ನು ಶ್ರವಣ ಮಾಡಿಸುವ ಕೆಲಸವನ್ನು ಅಮೃತವಾಹಿನಿ ಕಾರ್ಯಕ್ರಮ ಮಾಡುತ್ತಿದೆ ಎಂದರು.
ಸಾನ್ನಿಧ್ಯ ವಹಿಸಿದ್ದ ಅಡ್ನೂರಿನ ಅಭಿನವ ಪಂಚಾಕ್ಷರ ಶಿವಾಚಾರ್ಯರು ಮಾತನಾಡಿ, ಲಿಂ. ಪಂಚಾಕ್ಷರ ಗವಾಯಿಗಳು ಹಾಗೂ ಲಿಂ. ಪುಟ್ಟರಾಜ ಕವಿ ಗವಾಯಿಗಳು ಅಂಧ, ಅನಾಥ, ಮಕ್ಕಳಿಗೆ ಆಶ್ರಯದಾತರಾದವರು. ಅವರ ಹೃದಯ ವೈಶಾಲ್ಯತೆ ಕಾರ್ಯತತ್ಪರತೆ ಅಪಾರವಾದದ್ದು. ಅದೇ ಸಂಸ್ಕೃತಿ, ಪರಂಪರೆ, ಸಂಪ್ರದಾಯ ನಿಯಮಗಳನ್ನು ಮುನ್ನಡೆಸಿಕೊಂಡು ಬರುತ್ತಿರುವ ಕಲ್ಲಯ್ಯಜ್ಜನವರಿಗೆ ಗೌರವ ಡಾಕ್ಟರೇಟ್ ಪ್ರಶಸ್ತಿ ಬಂದಿರುವುದು ಮತ್ತು ವೀರೇಶ್ವರ ಪುಣ್ಯಾಶ್ರಮಕ್ಕೆ ಕರ್ನಾಟಕ ಸರ್ಕಾರದ ವಿಶೇಷ ಪ್ರಶಸ್ತಿ ಸಿಕ್ಕಿರುವ ಹಿನ್ನೆಲೆಯಲ್ಲಿ ಗುರುವಂದನೆ ಸಲ್ಲಿಸುತ್ತಿರುವುದು ಶ್ರೀಗಳ ಸಾಧನೆಗೆ ಸಂದ ಗೌರವವಾಗಿದೆ ಎಂದರು.
ಗುರುವಿನಲ್ಲಿ ಶಿವನನ್ನು ಕಾಣಬೇಕು. ಗುರುವಿನ ಮೂಲಕ ನಮ್ಮ ಜೀವನವನ್ನು ಸಾರ್ಥಕ ಪಡಿಸಿಕೊಳ್ಳಬೇಕು ಎಂಬ ಭಾವದಿಂದ ಎಲ್ಲರೂ ಕೂಡಿ, ಗುರುವಂದನೆಯನ್ನು ಸಲ್ಲಿಸಿರುವುದು ಅರ್ಥಪೂರ್ಣವಾಗಿದೆ ಎಂದು ಹೇಳಿದರು. ಭೂಮಿಕಾ ವೀರಣ್ಣ ಅಡಕಿ ಅವರಿಂದ ಸಂಗೀತ ಕಾರ್ಯಕ್ರಮ ಜರುಗಿತು. ಸದಾಶಿವ ಬೀದರ ತಬಲಾ ಮತ್ತು ಮುಲ್ಲಾ ಹಾಮೋನಿಯಂ ಸಾಥ್ ನೀಡಿದರು. ಭಕ್ತಿ ಸೇವೆ ನೀಡಿದ ವಿ.ಕೆ. ಮುದಗಲ್ಲಮಠ ದಂಪತಿ ಹಾಗೂ ಸಂಗೀತ ಬಳಗವನ್ನು ಸನ್ಮಾನಿಸಲಾಯಿತು. ಶಿವಾನಂದಯ್ಯ ಹಿರೇಮಠ, ವಿನಾಯಕ ಅಬ್ಬಿಗೇರಿ, ಬಸವರಾಜ ಕೂಗು, ರಾಜಣ್ಣ ಮಲ್ಲಾಡದ, ವಿ.ಕೆ. ಮುದಗಲ್ಲಮಠ ದಂಪತಿ ಉಪಸ್ಥಿತರಿದ್ದರು. ರಾಜಶೇಖರ ತೆಗ್ಗಿನಮಠ ವೇದಘೊಷ ಮಾಡಿದರು. ಭೂಮಿಕಾ ಅಡಕಿ ಪ್ರಾರ್ಥಿಸಿದರು. ಮಲ್ಲಿಕಾರ್ಜುನ ಶಿಗ್ಲಿ, ಚಂದ್ರು ಬಾಳಿಹಳ್ಳಿಮಠ ಹಾಗೂ ಉಮಾಪತಿ ಭೂಸನೂರಮಠ ಮತ್ತು ಶೈಲಜಾ ಕಬ್ಬೂರ ನಿರ್ವಹಿಸಿದರು.