

| ಕೀರ್ತಿನಾರಾಯಣ ಸಿ. ಬೆಂಗಳೂರು
ರಾಜ್ಯ ರಾಜಕೀಯದ ಜತೆಗೆ ಪೊಲೀಸ್ ವಲಯದಲ್ಲೂ ತಲ್ಲಣ ಮೂಡಿಸಿದ್ದ ಅಂತಾರಾಷ್ಟ್ರೀಯ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಕೈವಾಡದ ಬಿಟ್ ಕಾಯಿನ್ ಹಗರಣ ಬಿರುಬೇಸಿಗೆಯಲ್ಲೂ ತಣ್ಣಗಾಗಿದೆ. ಸಿಐಡಿ ವಿಶೇಷ ತನಿಖಾ ತಂಡದ (ಎಸ್ಐಟಿ) ತನಿಖಾಧಿಕಾರಿಗಳೆಲ್ಲ ಚುನಾವಣಾ ಕರ್ತ ವ್ಯಕ್ಕೆ ನಿಯೋಜನೆ ಗೊಂಡಿದ್ದರಿಂದ ತನಿಖೆ ನಿಧಾನಗೊಂಡಿದೆ.
ಸಾಕ್ಷ್ಯ ನಾಶ ಪಡಿಸಿದ ಪ್ರಮುಖ ಆರೋಪಿ ಡಿವೈಎಸ್ಪಿ ಶ್ರೀಧರ್ ಪೂಜಾರ ತಲೆಮರೆಸಿಕೊಂಡಿದ್ದಾರೆ. ಫೆ.27ರಂದು ಬಂಧಿಸಲು ಹೋಗಿದ್ದ ಎಸ್ಐಟಿಯ ಇಬ್ಬರು ಅಧಿಕಾರಿಗಳಿಗೆ ಕಾರು ಗುದ್ದಿಸಿ ಅವರ ಕೊಲೆಗೆ ಯತ್ನಿಸಿ ಶ್ರೀಧರ್ ಪೂಜಾರ ಪರಾರಿಯಾಗಿದ್ದಾರೆ. ಈ ಬಗ್ಗೆ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಈ ಪ್ರಕರಣದಲ್ಲಿ ಶ್ರೀಧರ್ ಪೂಜಾರ ಎಸಿಎಂಎಂ ಕೋರ್ಟ್ನಿಂದ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದಾರೆ.
ವಿಳಂಬಕ್ಕೆ ಕಾರಣವೇನು?: ಶ್ರೀಕೃಷ್ಣ, ಬಿಟ್ ಕಾಯಿನ್ ವಿನಿಮಯ ಕಂಪನಿಗಳ ವೆಬ್ಸೈಟ್ ಹ್ಯಾಕ್ ಮಾಡಿರುವುದು ಗೊತ್ತಾಗಿದೆ. ಆದರೆ, ಹ್ಯಾಕ್ ಮಾಡಿ ಕದ್ದ ಬಿಟ್ ಕಾಯಿನ್ಗಳನ್ನು ಹೇಗೆ? ಯಾವ್ಯಾವ ವ್ಯಾಲೆಟ್ಗಳಿಗೆ ವರ್ಗಾವಣೆಯಾಗಿದೆ ಎಂಬುದರ ಮಾಹಿತಿ ಸಿಕ್ಕಿಲ್ಲ. ಹ್ಯಾಕ್ ಮಾಡಿದ ಬಿಟ್ ಕಾಯಿನ್ಗಳನ್ನು ನಗದು ರೂಪದಲ್ಲಿ ಸ್ಥಳೀಯ ಬ್ಯಾಂಕ್ಗಳಿಂದ ಡ್ರಾ ಮಾಡಿರುವುದು ಎಸ್ಐಟಿ ತನಿಖೆಯಲ್ಲಿ ಗೊತ್ತಾಗಿದೆ. ಆದರೆ,ಆನ್ಲೈನ್ ವೇದಿಕೆಯಲ್ಲಿ ನಡೆದಿರುವ ಬಿಟ್ ವ್ಯವಹಾರದ ಸ್ಪಷ್ಟ ಮಾಹಿತಿ ಎಸ್ಐಟಿಗೆ ಸಿಗದಿರುವುದು ತನಿಖೆ ವಿಳಂಬಕ್ಕೆ ಕಾರಣ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸಾವಿರಾರು ಕೋಟಿ ವ್ಯವಹಾರ: 2020 ನ.18ರಂದು ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣದಲ್ಲಿ ಹ್ಯಾಕರ್ ಶ್ರೀಕಿ ಬಂಧಿಸಲಾಗಿತ್ತು. ವ್ಯಾಲೆಟ್ನಲ್ಲಿದ್ದ ಬಿಟ್ ಕಾಯಿನ್ಗಳನ್ನು ಬಲವಂತವಾಗಿ ಬೇರೆಬೇರೆ ವ್ಯಾಲೆಟ್ಗಳಿಗೆ ವರ್ಗಾವಣೆ ಮಾಡಿಸಿ, ನಂತರ ಅಲ್ಲಿಂದ ಬಿಟ್ ಕಾಯಿನ್ ಟ್ರೇಡಿಂಗ್ ಎಕ್ಸ್ಚೇಂಜ್ಗೆ ಟ್ರಾನ್ಸ್ಫರ್ ಮಾಡಲಾಗಿದೆ. ಸಾವಿರಾರು ಕೋಟಿ ಮೌಲ್ಯದ ಬಿಟ್ ಕಾಯಿನ್ ವರ್ಗಾವಣೆಯಾಗಿದೆ ಎಂದು ಮೂಲಗಳು ತಿಳಿಸಿವೆ. ಬಿಟ್ ಕಾಯಿನ್ ವರ್ಗಾವಣೆಯ ಡಿಜಿಟಲ್ ಸಾಕ್ಷ್ಯವನ್ನು ಬಂಧಿತ ಪೊಲೀಸ್ ಅಧಿಕಾರಿಗಳು ನಾಶಪಡಿಸಿದ್ದಾರೆ.
. 2023ರ ಜು.3ಕ್ಕೆ ಎಸ್ಐಟಿ ತಂಡ ರಚನೆ
. 10 ತಿಂಗಳಾದರೂ ರ್ತಾಕ ಅಂತ್ಯ ಕಂಡಿಲ್ಲ
. ಎಸ್ಐಟಿ ಮೂರು ಅಧಿಕಾರಿಗಳನ್ನು ಬಂಧಿಸಿದೆ
. ಈ ಪೈಕಿ ಇಬ್ಬರು ಇನ್ಸ್ಪೆಕ್ಟರ್ಗಳಾಗಿದ್ದಾರೆ
. ಡಿ.ಎಂ.ಪ್ರಶಾಂತ್, ಲಕ್ಷ್ಮೀಕಾಂತಯ್ಯ ಅರೆಸ್ಟ್
. ಖಾಸಗಿ ಸೈಬರ್ ತಜ್ಞ ಸಂತೋಷ್ ಕೂಡ ಸೆರೆ
. ಶ್ರೀಕಿ ಸ್ನೇಹಿತ ರಾಬಿಲ್ ಖಂಡೆಲ್ವಾಲಾ ಬಂಧನ
. ಇದನ್ನು ಬಿಟ್ಟರೆ ಬೇರೆ ಯಾರೂ ಸೆರೆಸಿಕ್ಕಿಲ್ಲ
. ಚುನಾವಣಾ ಕರ್ತವ್ಯದಿಂದ ವಾಪಸಾದ ಬಳಿಕ ಎಸ್ಐಟಿ ಅಧಿಕಾರಿಗಳಿಂದ ತನಿಖೆಗೆ ವೇಗ
. ಎಫ್ಐಆರ್ ದಾಖಲಾದ 90 ದಿನದಲ್ಲಿ ಚಾರ್ಜ್ಶೀಟ್ ಸಲ್ಲಿಸ ಬೇಕಾದ್ದರಿಂದ ಶೀಘ್ರ ಸಲ್ಲಿಕೆ
. ಹಗರಣದ ಸಂಬಂಧ ಹಿರಿಯ ಅಧಿಕಾರಿಗಳಿಗೆ ನೋಟಿಸ್ ಕೊಟ್ಟು ಮತ್ತೆ ವಿಚಾರಣೆ ಸಾಧ್ಯತೆ
. ಅಧಿಕಾರಿಗಳ ಬಂಧನವಾದರೂ ಲಾಭ ಪಡೆದವರ ಗುರುತು ಪತ್ತೆ ಹಚ್ಚಿಲ್ಲ
. ಹಿರಿಯ ಐಪಿಎಸ್ ಅಧಿಕಾರಿ ವಿಚಾರಣೆ ನಡೆಸಿದ ಹೇಳಿಕೆ ದಾಖಲು
. ಕೆಲ ರಾಜಕಾರಣಿಗಳು, ಅವರ ಮಕ್ಕಳು ಹಗರಣದಲ್ಲಿ ಭಾಗಿ ಆಗಿರುವ ಶಂಕೆ
. ಆದರೂ ರಾಜಕಾರಣಿಗಳು, ಮಕ್ಕಳ ವಿಚಾರಣೆಯನ್ನು ನಡೆಸಿಲ್ಲ
. ಆರೋಪಿತ ಅಧಿಕಾರಿಗಳ ಆಸ್ತಿ ವಿವರವನ್ನು ಸಂಗ್ರಹಿಸಲಾಗಿದೆ
. ಹಗರಣಕ್ಕೂ ಮುಂಚೆ ಮತ್ತು ಹಗರಣದ ಬಳಿಕ ಆಸ್ತಿ ಮಾಹಿತಿ ಸಂಗ್ರಹ