

Competitive Exam fee: ಸ್ಪರ್ಧಾತ್ಮಕ ಪರೀಕ್ಷೆಯ ಶುಲ್ಕ ಪಾವತಿಸಲು ಹಣ ನೀಡಿಲ್ಲ ಎಂಬ ಕಾರಣಕ್ಕೆ ಮಗನೇ ತಂದೆಯನ್ನು ಕೊಲೆ ಮಾಡಿರುವ ಘಟನೆ ಮಹಾರಾಷ್ಟ್ರದ ಲಾತೂರ್ ಜಿಲ್ಲೆಯಲ್ಲಿ ನಡೆದಿದೆ.
ಪೊಲೀಸರ ಪ್ರಕಾರ, ಆರೋಪಿ ಅಜಯ್ ಪಂಚಲ್ (24) ಎಂದು ಗುರುತಿಸಲಾಗಿದೆ. ಈತ ಪೊಲೀಸ್ ನೇಮಕಾತಿ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದು, ಶುಲ್ಕ ಪಾವತಿಸಲು ತನ್ನ ತಂದೆಯ ಬಳಿ ಪದೆ ಪದೇ ಹಣ ಕೇಳುತ್ತಿದ್ದನು. ಆದರೆ, ತಂದೆಯ ಬಳಿ ಹಣವಿಲ್ಲದ ಕಾರಣ ಅವರು ನೀಡಿರಲಿಲ್ಲ ಎಂದು ತಿಳಿಸಿದ್ದಾರೆ.
ಸೋಮವಾರ ರಾತ್ರಿ ಭಾರೀ ಮಳೆಯಿಂದಾಗಿ ಕಟ್ಟಿಗೆಗಳು ನೆನೆದಿದ್ದು, ಅಗತ್ಯಕ್ಕೆಂದು ಗ್ಯಾಸ್ ಸಿಲಿಂಡರ್ನ್ನು ಖರೀದಿಸಿದ್ದಾರೆ. ಈ ವಿಷಯ ತಿಳಿದ ಮಗ ಸಿಲಿಂಡರ್ ತರಲು ಹಣವಿದೆ, ಆದರೆ, ನನ್ನ ಶುಲ್ಕ ಕಟ್ಟಲು ಹಣವಿಲ್ಲ ಎಂದು ಪಾಲಕರೊಂದಿಗೆ ವಾದಕ್ಕೆ ಇಳಿದಿದ್ದಾನೆ. ಈ ವೇಳೆ ಅವನ ತಾಯಿ ಆತನನ್ನು ಸಮಾಧಾನ ಪಡಿಸಿದ್ದು, ನಾಳೆ ಬೆಳಿಗ್ಗೆ ಹಣವನ್ನು ಹೊಂದಿಸುವುದಾಗಿ ಭರವಸೆ ನೀಡಿದ್ದಳು.
ಇನ್ನು ಮಂಗಳವಾರ ಬೆಳಿಗ್ಗೆ ಹಣವನ್ನು ಪಡೆಯಲು ಸಾಧ್ಯವಾಗದೆ ಆತ ನಿರಾಸೆಗೊಂಡಿದ್ದು, ತನ್ನ ತಂದೆಯೊಂದಿಗೆ ಜಗಳವಾಡಿದ್ದಾನೆ. ನಂತರ ಕೋಪಗೊಂಡು ಮರದ ಕೋಲಿನಿಂದ ತಂದೆಯ ತಲೆಗೆ ಹೊಡೆದಿದ್ದಾನೆ. ಬಲವಾದ ಹೊಡೆತದಿಂದ ವೃದ್ಧ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ವಿಚಾರವಾಗಿ ಆತನ ತಾಯಿ ಠಾಣೆಯ ಮೆಟ್ಟಿಲೇರಿದ್ದು, ಮಗನ ವಿರುದ್ಧ ದೂರು ದಾಖಲಿಸಿದ್ದಾಳೆ. ಇನ್ನು ತನಿಖೆ ಕೈಗೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. (ಏಜೆನ್ಸೀಸ್)