

ಚಿಕ್ಕಮಗಳೂರು: ಜೀವನದ ಪರೀಕ್ಷೆಯಲ್ಲಿ ಬರುವ ಕಷ್ಟಗಳಿಗೆ ಸ್ವತಃ ಪರಿಹಾರ ಕಂಡುಕೊಳ್ಳಬೇಕು. ನಮ್ಮ ನಿಷ್ಠೆ, ಪ್ರಾಮಾಣಿಕತೆಗೆ ಪ್ರತಿಫಲ ಭಗವಂತ ನೀಡುತ್ತಾನೆ ಎಂದು ವಂದೇ ಮಾತರಂ ಟ್ರಸ್ಟ್ ಅಧ್ಯಕ್ಷ ಪ್ರೀತೇಶ್ ಹೇಳಿದರು.
ಜಿಲ್ಲಾ ಕಾರಾಗೃಹದಲ್ಲಿ ವಂದೇ ಮಾತರಂ ಟ್ರಸ್ಟ್, ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆಯಿಂದ ಬುಧವಾರ ಆಯೋಜಿಸಿದ್ದ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶ್ರೀಕೃಷ್ಣ ಒಬ್ಬ ಶ್ರೇಷ್ಠ ಗುರು. ತನ್ನ ಇಡೀ ಜೀವನದಲ್ಲಿ ಲೋಕಕ್ಕೆ ಉತ್ತಮ ಸಂದೇಶ ಸಾರಿದ ಮಾರ್ಗದರ್ಶಕ. ಆತನು ಬೋಧಿಸಿದ ಭಗವದ್ಗೀತೆಯಲ್ಲಿ ಜೀವನ ಸಂದೇಶ ನೀಡುವ ಹಲವಾರು ವಿಚಾರಗಳಿವೆ. ಅಂತಹ ಶ್ರೀಕೃಷ್ಣ ಸೆರೆಮನೆಯಲ್ಲಿ ಜನಿಸಿದ ಹಿನ್ನೆಲೆಯಲ್ಲಿ ಇಂದಿನ ಕಾರ್ಯಕ್ರಮವನ್ನು ಕಾರಾಗೃಹದಲ್ಲಿ ಆಚರಿಸಿ ಬಂಧಿಗಳ ಮನಪರಿವರ್ತನೆ ಮೂಡಿಸುವಲ್ಲಿ ಟ್ರಸ್ಟ್ ಕಾರ್ಯನಿರ್ವಹಿಸುತ್ತಿದೆ ಎಂದರು.
ಜಗತ್ತಿನಲ್ಲಿ ಸಮಸ್ಯೆಗಳಿಗೆ ಒಳಗಾಗುವವರು ಎರಡು ತರಹದ ಜನರಿದ್ದಾರೆ. ಬಹುತೇಕ ಜನರು ಸಮಸ್ಯೆಗಳಲ್ಲಿ ಸಿಲುಕಿದ್ದಾರೆ. ಆದರೆ ಸಮಸ್ಯೆ ಬಂದಾಗ ಅವುಗಳಿಂದ ಯಾವ ರೀತಿ ಹೊರಬರಬೇಕು ಎನ್ನುವ ಅದ್ಭುತ ಸಂದೇಶವನ್ನು ಶ್ರಿಕೃಷ್ಣ ಸಾರಿದ್ದಾನೆ ಎಂದರು.
ಜಿಲ್ಲಾ ಕಾರಾಗೃಹ ಅಧೀಕ್ಷಕ ಎಸ್.ಎಸ್.ಮೇಟಿ ಮಾತನಾಡಿ, ಉದ್ದೇಶಪೂರ್ವಕ ಅಥವಾ ಆಕಸ್ಮಿಕವಾಗಿ ನಡೆಯುವ ತಪ್ಪುಗಳಿಂದಾಗಿ ಸೆರೆವಾಸ ಅನುಭವಿಸಬೇಕಾಗುತ್ತದೆ. ಆದರೆ ಮನಪರಿವರ್ತನೆಗೆ ಸೂಕ್ತವಾದ ಸ್ಥಳ ಕಾರಾಗೃಹ. ಶ್ರೀಕೃಷ್ಣನು ಸೆರೆವಾಸದಲ್ಲೇ ಜನಿಸಿ ಇಡೀ ವಿಶ್ವಕ್ಕೆ ಪ್ರಸಿದ್ಧಿಯಾದವರು. ಹಾಗಾಗಿ ಬಂಧಿಗಳು ಕೀಳರಿಮೆ ಹೊಂದದೆ ಭಗವಂತ ನಾಮಸ್ಮರಣೆಯಿಂದ ಮುನ್ನಡೆಯಬೇಕು ಎಂದು ಹೇಳಿದರು.
ಜಿಲ್ಲಾ ಕಾರಾಗೃಹದ ಜೈಲರ್ ಎಂ.ಕೆ.ನೆಲಧರಿ, ವಂದೇ ಮಾತರಂ ಟ್ರಸ್ಟ್ ಪಿಆರ್‌ಒ ನವೀನ್, ಮಹಿಳಾ ಕಾರ್ಯದರ್ಶಿ ಚೈತ್ರಾ, ಕಾರಾಗೃಹ ಸಿಬ್ಬಂದಿ ಇತರರಿದ್ದರು.