

ವರುಷಕೊಂದು ಹೊಸತು ಜನ್ಮ, ಹರುಷಕೊಂದು ಹೊಸತು ನೆಲೆಯು... ಇದು ವರಕವಿ ದ.ರಾ. ಬೇಂದ್ರೆಯವರ ಯುಗಾದಿ ಕವನದಲ್ಲಿರುವ ಆಶಯ. ಅದನ್ನೇ ಈ ಕರೊನಾ ಕಾಲದಲ್ಲಿ ಹೊಸ ಕ್ಯಾಲೆಂಡರ್ ವರ್ಷಕ್ಕೂ ಅನ್ವಯಿಸಬಹುದು. ಕಷ್ಟ-ನಷ್ಟದಿಂದ ಕಂಗೆಟ್ಟಿರುವ ಜನ ಹೊಸ ವರ್ಷದ ಹೊಸ್ತಿಲಲ್ಲಿ ದುಡಿಮೆಯ ಹೊಸ ಮಾರ್ಗಗಳನ್ನು ಹುಡುಕುತ್ತಿದ್ದಾರೆ. ಅಂಥವರಿಗೆ ನೆರವಾಗಲೆಂದೇ ವಿಜಯವಾಣಿ ವಿವಿಧ ರಂಗಗಳ ಪರಿಣತರನ್ನು ಮಾತನಾಡಿಸಿದೆ. 2021 ನಿಮ್ಮ ಪಾಲಿಗೆ ‘ಯಶಸ್ವಿ ವರ್ಷ’ವಾಗಲು 21 ಸಾಧಕರು ನೀಡಿರುವ 21 ಐಡಿಯಾಗಳು ಇಲ್ಲಿವೆ.
ಸೋಲಾರ್ ಅಂದ್ರೆ ಪ್ಯಾನೆಲ್ ಅಷ್ಟೇ ಅಲ್ಲ
2030 ಸುಸ್ಥಿರ ಅಭಿವೃದ್ಧಿಯ ಗುರಿಗಳಲ್ಲಿ, ಎನರ್ಜಿ ಫಾರ್ ಆಲ್ ಕೂಡ ಒಂದು. ಈ ಗುರಿ ಮುಟ್ಟಲು ಭಾರತಕ್ಕೆ ಎಲ್ಲ ಅವಕಾಶಗಳಿವೆ, ವಾತಾವರಣವೂ ಇದೆ. ಈ ಸಂದರ್ಭವನ್ನು ಬಳಸಿಕೊಂಡರೆ ಬೇರೆ ದೇಶಗಳಿಗೆ ಮಾದರಿಯೂ ಆಗಬಹುದು. ಯುವಕರು ಈ ನಿಟ್ಟಿನಲ್ಲಿ ಪ್ರಯತ್ನಿಸಬೇಕು. ಸೋಲಾರ್ ಎಂದರೆ ಸೋಲಾರ್ ಪ್ಯಾನಲ್ ಅಷ್ಟೇ ಅಲ್ಲ. ಅದರ ಆಚೆಗೂ ದೊಡ್ಡ ಅವಕಾಶಗಳು ಸೋಲಾರ್ನಲ್ಲಿವೆ. ಕೃಷಿಗೆ ಸಂಬಂಧಿಸಿದ ತಂತ್ರಜ್ಞಾನದಲ್ಲಿ ಸೋಲಾರ್ ಬಳಕೆಯ ಬಗ್ಗೆ ಹೆಚ್ಚೆಚ್ಚು ಸಂಶೋಧನೆಯಾಗಬೇಕಾಗಿದೆ. ಇನ್ನೂ ಹೇಳಬೇಕೆಂದರೆ ಬಡತನ ರೇಖೆಗಿಂತ ಕೆಳಗಿರುವವರು ತೊಡಗಿಕೊಂಡ ಉದ್ಯಮಗಳಲ್ಲಿ ಸೋಲಾರ್ ತಂತ್ರಜ್ಞಾನ ಬಳಕೆಯಾಗಬೇಕು. ಸೋಲಾರ್ ರೈಸ್ ಕುಕ್ಕರ್, ರೋಟಿ ಮೇಕಿಂಗ್ ಮಷಿನ್ ಬಂದರೆ ಸಾಲದು, ಚಪ್ಪಲಿ ಹೊಲಿಯುವ ಯಂತ್ರವೂ ಸಿದ್ಧವಾಗಬೇಕು! ಇಂತಹ ವಿಷಯಗಳಲ್ಲಿ ನಮ್ಮಯುವಕರು ಸಂಶೋಧನೆ ಮಾಡಿ, ಯಂತ್ರೋಪಕರಣಗಳ ಉತ್ಪಾದನೆಯಲ್ಲಿ ತೊಡಗಿಕೊಂಡರೆ ಬಡವರ ಕೈ ಹಿಡಿದೆತ್ತಲು ಸಾಧ್ಯವಾಗುವುದಲ್ಲದೆ, ತಾವೂ ಆರ್ಥಿಕವಾಗಿ ಸದೃಢರಾಗಬಹುದು. ಜರ್ಮನಿಯ ಮರ್ಸಿಡಿಸ್ ಬೆಂಜ್ ವಿಶ್ವದಾದ್ಯಂತ ಖ್ಯಾತಿ ಗಳಿಸಿದೆ. ಅದರ ಮುಖ್ಯ ತಂತ್ರಜ್ಞಾನ ರೂಪುಗೊಂಡಿದ್ದು ಅಲ್ಲಿನ ಐಟಿಐ ಮಾದರಿಯ ಶಾಲೆಗಳಿಂದ. ನಮ್ಮಲ್ಲೂ ಐಟಿಐ, ರುಡ್ಸೆಟ್ಗಳಲ್ಲಿ ಸೋಲಾರ್ ಸಂಬಂಧಿತ ತರಬೇತಿ ಚಟುವಟಿಕೆ ಹೆಚ್ಚಾಗುವಂತೆ ಸರ್ಕಾರ ನೋಡಿಕೊಳ್ಳಬೇಕು. ಮತ್ತು ಸಂಶೋಧನೆಗೆ ಅವಕಾಶ ಮಾಡಿಕೊಡಬೇಕು, ಅನುದಾನ ಮೀಸಲಿಡಬೇಕು. ಯುವಜನರು ಮತ್ತು ಈ ಕ್ಷೇತ್ರದಲ್ಲಿರುವವರು ಸೋಲಾರ್ ಶಕ್ತಿಯನ್ನು ಎಲ್ಲೆಲ್ಲಿ ಬಳಸಲು ಸಾಧ್ಯ ಎಂಬ ಬಗ್ಗೆ ಹೊಸ ಹೊಸ ಆವಿಷ್ಕಾರ ಮಾಡಲು ತೊಡಗಿದರೆ, ಉದ್ಯೋಗಾವಕಾಶಗಳೂ ಸೃಷ್ಟಿಯಾಗುತ್ತವೆ, ಸ್ವಉದ್ಯೋಗಕ್ಕೂ ದಾರಿಯಾಗುತ್ತದೆ.
| ಹರೀಶ್ ಹಂದೆ ಸೆಲ್ಕೊ ಸಂಸ್ಥೆ ಸ್ಥಾಪಕ, ಮಾಗ್ಸೆಸೆ ಪ್ರಶಸ್ತಿ ಪುರಸ್ಕೃತ