ಪ್ರಜ್ವಲ್ ರೇವಣ್ಣ ಕರೆದೊಯ್ದು ಸ್ಥಳ ಮಹಜರು ನಡೆಸಿದ ಎಸ್‌ಐಟಿ

prajka
Published on

ಬೆಂಗಳೂರು: ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ಹೊಳೆನರಸೀಪುರದ ಚೆನ್ನಾಂಬಿಕಾ ನಿವೇಶನಕ್ಕೆ ಶನಿವಾರ ಕರೆದೊಯ್ದು ಸ್ಥಳ ಮಹಜರು ನಡೆಸಿದೆ.
ಪೆನ್‌ಡ್ರೈವ್ ಅಶ್ಲೀಲ ವಿಡಿಯೋ ಪ್ರಕರಣ ಬೆಳಕಿಗೆ ಬರುತ್ತಿದಂತೆ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ೪೩ ದಿನಗಳ ನಂತರ ಹಾಸನದ ಹೊಳೆನರಸೀಪುರಕ್ಕೆ ಎಸ್‌ಐಟಿ ಅಧಿಕಾರಿಗಳು ಕರೆತಂದು, ಸ್ಥಳ ಮಹಜರು ನಡೆಸಿದರು.
ಬಿಗಿ ಪೊಲೀಸ್ ಭದ್ರತೆಯಲ್ಲಿ ಚೆನ್ನಾಂಬಿಕ ನಿವಾಸಕ್ಕೆ ಪ್ರಜ್ವಲ್ ಅವರನ್ನು ಕರೆದೊಯ್ಯಲಾಗಿತ್ತು. ಈ ವೇಳೆ ವಿಧಿ ವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳೂ ಜತೆಯಲ್ಲಿದ್ದರು.
ಶನಿವಾರ ಮಧ್ಯಾಹ್ನ ೧ ಗಂಟೆ ವೇಳೆಗೆ ಬಂದ ಎಸ್‌ಐಟಿ ಅಧಿಕಾರಿಗಳ ಜೀಪಿನಲ್ಲಿ ಪ್ರಜ್ವಲ್ ಇರಲಿಲ್ಲ. ಬದಲಾಗಿ ಮೀಸಲು ಪೊಲೀಸ್ ಪಡೆಯ ವಾಹನದಲ್ಲಿ ಯಾರಿಗೂ ಕಾಣದಂತಿದ್ದ ಕಪ್ಪು ಬಟ್ಟೆ ಹಾಗೂ ಮಾಸ್ಕ್ ಧರಿಸಿ ಪ್ರಜ್ವಲ್ ಆಗಮಿಸಿದರು. ಈ ವಾಹನ ನೇರವಾಗಿ ಮನೆಯ ಕಾಂಪೌಡ್ ಒಳಗೆ ಪ್ರವೇಶಿಸಿತು. ಹಾಸನ ಜಿಲ್ಲಾ ಹೆಚ್ಚುವರಿ ಎಸ್.ಪಿ. ವೆಂಕಟೇಶ್ ನಾಯ್ಡು, ಒಬ್ಬ ಸರ್ಕಲ್ ಇನ್‌ಸ್ಪೆಕ್ಟರ್, ನಾಲ್ವರು ಸಬ್ ಇನ್‌ಸ್ಪೆಕ್ಟರ್, ೫ಕ್ಕೂ ಹೆಚ್ಚು ಸಹಾಯಕ ಸಬ್ ಇನ್‌ಸ್ಪೆಕ್ಟರ್, ೧೦ಕ್ಕೂ ಹೆಚ್ಚು ಪೊಲೀಸರು, ಮೀಸಲು ಪೊಲೀಸ್ ಪಡೆಯ ೧೦ಕ್ಕೂ ಹೆಚ್ಚು ಸಿಬ್ಬಂದಿಯನ್ನು ಬಂದೋಬಸ್ತ್ ವ್ಯವಸ್ಥೆಗೆ ನಿಯೋಜಿಸಲಾಗಿತ್ತು.

ಪ್ರಜ್ವಲ್ ಸ್ನೇಹಿತೆಗೆ ನೋಟಿಸ್:
ಅತ್ಯಾಚಾರ, ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿದೇಶದಲ್ಲಿ ತಲೆ ಮರೆಸಿಕೊಳ್ಳಲು ಸಹಾಯ ಮಾಡಿದ ಆರೋಪದಡಿ ಪ್ರಜ್ವಲ್ ಸ್ನೇಹಿತೆಗೆ (ಗರ್ಲ್ ಫ್ರೆಂಡ್) ಎಸ್‌ಐಟಿ ನೊಟೀಸ್ ಜಾರಿ ಮಾಡಲಾಗಿದೆ. ಪ್ರಜ್ವಲ್‌ಗೆ ಹಣದ ಸಹಾಯ ಮಾಡುವ ಜತೆಗೆ ಇಲ್ಲಿನ ವಿದ್ಯಾಮಾನಗಳನ್ನು ಆಕೆ ಅಪ್‌ಡೇಟ್ ಮಾಡುತ್ತಿದ್ದಳು ಎನ್ನಲಾಗಿದೆ. ಹೀಗಾಗಿ ವಿಚಾರಣೆಗೆ ಹಾಜರಾಗುವಂತೆ ಪ್ರಜ್ವಲ್ ಸ್ನೇಹಿತೆಗೆ ನೋಟಿಸ್ ಜಾರಿ ಮಾಡಲಾಗಿದೆ. ಹಲವು ಬಾರಿ ನೋಟಿಸ್ ನೀಡಿದ್ದರೂ ಪ್ರಜ್ವಲ್ ರೇವಣ್ಣ ವಿಚಾರಣೆಗೆ ಬಂದಿರಲಿಲ್ಲ. ೩೪ ದಿನಗಳ ಕಾಲ ವಿದೇಶದಲ್ಲಿ ತಲೆಮರೆಸಿಕೊಂಡಿದ್ದರು. ಆರ್ಥಿಕವಾಗಿ ಕಟ್ಟಿ ಹಾಕಲು ಅವರ ಬ್ಯಾಂಕ್ ಅಕೌಂಟ್‌ಗಳನ್ನು ಫ್ರೀಜ್ ಮಾಡಲು ಎಸ್‌ಐಟಿ ಮುಂದಾಗಿತ್ತು. ತನಿಖೆ ವೇಳೆ ಪ್ರಜ್ವಲ್‌ಗೆ ಹಣ ವರ್ಗಾವಣೆ ಮಾಡಿದ ಅಕೌಂಟ್‌ಗಳ ಮೇಲೆಯೂ ನಿಗಾ ಇಡಲಾಗಿತ್ತು. ಆದರೆ ಪ್ರಜ್ವಲ್‌ಗೆ ಸ್ನೇಹಿತೆ ಹಣ ಸಹಾಯ ಮಾಡಿರುವುದು, ಆಶ್ರಯ ಕಲ್ಪಿಸಿರುವ ಬಗ್ಗೆ ಎಸ್‌ಐಟಿಗೆ ತನಿಖೆಯ ವೇಳೆ ಮಹತ್ವದ ಸಾಕ್ಷ್ಯ ಲಭ್ಯವಾಗಿದ್ದರಿಂದ ನೋಟಿಸ್ ನೀಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net