

ಬೆಂಗಳೂರು: ಪೆನ್‌ಡ್ರೈವ್‌ನಲ್ಲಿ ಇರುವ ಸಂತ್ರಸ್ತೆ ಹಾಗೂ ಅಪಹರಣವಾಗಿದ್ದ ಮಹಿಳೆಯನ್ನು ಎಸ್‌ಐಟಿ ಅಧಿಕಾರಿಗಳು ಭಾನುವಾರ ವಿಚಾರಣೆ ನಡೆಸಿದ್ದಾರೆ.
ಸಂತ್ರಸ್ತೆ ತನ್ನ ಮೇಲೆ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ನಡೆಸಿರುವ ಬಗ್ಗೆ ಎಸ್‌ಐಟಿ ಅಧಿಕಾರಿಗಳ ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾರೆ.
ತನ್ನ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯದ ಬಗ್ಗೆ ನ್ಯಾಯಾಧೀಶರ ಎದುರು ಹೇಳಿಕೆ ನೀಡಲು ಸಂತ್ರಸ್ತೆ ಒಪ್ಪಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಆಕೆಯನ್ನು ಸೋಮವಾರ ನ್ಯಾಯಾಧೀಶರ ಎದುರು ಹಾಜರುಪಡಿಸಿ ಸಿಆರ್‌ಪಿಸಿ ಸೆಕ್ಷನ್ ೧೬೪ ಅಡಿ ಹೇಳಿಕೆ ದಾಖಲಿಸಲು ಎಸ್‌ಐಟಿ ಸಿದ್ಧತೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.
ಅಪಹರಣದಿಂದ ಶಾಕ್‌ಗೆ ಒಳಗಾಗಿದ್ದ ಸಂತ್ರಸ್ತೆಯನ್ನು ಎಸ್‌ಐಟಿ ಅಧಿಕಾರಿಗಳು ಸಾಂತ್ವಾನ ಕೇಂದ್ರದಲ್ಲಿ ಇರಿಸಿ ಆರೈಕೆ ಮಾಡಿದ್ದಾರೆ. ಆಪ್ತಸಮಾಲೋಚಕರನ್ನು ಕರೆಸಿ ಕೌನ್ಸೆಲಿಂಗ್ ಮಾಡಿಸಿದ್ದಾರೆ. ಎಸ್‌ಐಟಿ ಅಧಿಕಾರಿಗಳ ವಿಚಾರಣೆಯ ಆರಂಭದಲ್ಲಿ ಕಣ್ಣೀರಿಟ್ಟ ಸಂತ್ರಸ್ತೆಯು ಬಳಿಕ ಸಮಾಧಾನ ಮಾಡಿಕೊಂಡು ಪ್ರಜ್ವಲ್ ರೇವಣ್ಣ ತನ್ನ ಮೇಲೆ ನಡೆಸಿರುವ ಲೈಂಗಿಕ ದೌರ್ಜನ್ಯದ ಬಗ್ಗೆ ವಿವರಿಸಿದ್ದಾರೆ.
ತನ್ನನ್ನು ಹೇಗೆ ಅಪಹರಣ ಮಾಡಲಾಯಿತು. ಎಲ್ಲೆಲ್ಲಿ ಸುತ್ತಾಡಿಸಲಾಯಿತು ಎಂಬುದರ ಬಗ್ಗೆಯೂ ಸಂತ್ರಸ್ತೆ ಮಾಹಿತಿ ನೀಡಿದ್ದಾರೆ. ಎಚ್.ಡಿ.ರೇವಣ್ಣ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿಲ್ಲ. ಆದರೆ ಪ್ರಜ್ವಲ್ ರೇವಣ್ಣ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಸಂತ್ರಸ್ತೆಯು ಎಸ್‌ಐಟಿ ಅಧಿಕಾರಿಗಳ ಎದುರು ಹೇಳಿಕೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮತ್ತೊಂದು ರೇಪ್ ಕೇಸ್ ದಾಖಲು?
ಸಂತ್ರಸ್ತೆಯ ಹೇಳಿಕೆಯಿಂದ ಸಂಸದ ಪ್ರಜ್ವಲ್ ರೇವಣ್ಣ ಮತ್ತಷ್ಟು ಸಂಕಷ್ಟ ಎದುರಾಗಲಿದೆ. ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆಯ ಪುತ್ರ ಈಗಾಗಲೇ ದೂರು ನೀಡಿದ್ದಾನೆ. ಈ ದೂರಿನನ್ವಯ ಈಗಾಗಲೇ ಎಚ್.ಡಿ.ರೇವಣ್ಣ ಬಂಧನವಾಗಿದೆ. ಇದೀಗ ಈ ಸಂತ್ರಸ್ತೆಯ ಹೇಳಿಕೆ ಆಧರಿಸಿ ಪ್ರಜ್ವಲ್ ರೇವಣ್ಣ ವಿರುದ್ಧ ಮತ್ತೊಂದು ಅತ್ಯಾಚಾರ ಪ್ರಕರಣ ದಾಖಲಾಗುವ ಸಾಧ್ಯತೆಯಿದೆ. ಎಸ್‌ಐಟಿ ಅಧಿಕಾರಿಗೂ ಮಹಿಳೆಯ ಹೇಳಿಕೆ ಆಧರಿಸಿ ಮತ್ತೊಂದು ಪ್ರತ್ಯೇಕ ಎ್ಐಆರ್ ದಾಖಲಿಸಲು ಸಿದ್ದತೆ ನಡೆಸಿದ್ದಾರೆ.
ಸಹಾಯವಾಣಿ ಆರಂಭ:
ಸಂಸದ ಪ್ರಜ್ವಲ್ ರೇವಣ್ಣ ಅವರಿಂದ ನಡೆದಿದೆ ಎನ್ನಲಾದ ಲೈಂಗಿಕ ದೌರ್ಜನ್ಯದ ಸಂತ್ರಸ್ತೆಯರ ನೆರವಿಗಾಗಿ ಎಸ್‌ಐಟಿ ಅಧಿಕಾರಿಗಳು ಸಹಾಯವಾಣಿ ಆರಂಭಿಸಿದ್ದಾರೆ. ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಎಸ್‌ಐಟಿ ಮುಖ್ಯಸ್ಥ ಬಿ.ಕೆ.ಸಿಂಗ್, ಹಾಸನ ಜಿಲ್ಲೆಯಲ್ಲಿ ಮಹಿಳೆಯರ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯ ಕುರಿತು ತನಿಖೆಗಾಗಿ ಎಸ್‌ಐಟಿ ತಂಡವನ್ನು ರಚಿಸಲಾಗಿದೆ. ಸಂತ್ರಸ್ತೆಯರ ನೆರವಿಗಾಗಿ ೬೩೬೦೯೩೮೯೪೭ ಸಹಾಯವಾಣಿ ಆರಂಭಿಸಲಾಗಿದೆ ಎಂದು ತಿಳಿಸಿದ್ದಾರೆ.
ಸಂತ್ರಸ್ತೆಯರು ಹಾಗೂ ಅವರಿಗೆ ಸಂಬಂಧಪಟ್ಟ ವ್ಯಕ್ತಿಗಳು ಸಹಾಯವಾಣಿಗೆ ಕರೆ ಮಾಡಿ ದೂರು ನೀಡಬಹುದು. ಸಂತ್ರಸ್ತೆಯರಿಗೆ ಅಗತ್ಯವಿರುವ ಕಾನೂನು ನೆರವು, ರಕ್ಷಣೆ ಹಾಗೂ ಇತರೆ ಸಹಾಯ ಮಾಡಲು ನಾವು ಸಿದ್ಧರಿದ್ದೇವೆ. ಕೃತ್ಯದ ಬಗ್ಗೆ ದೂರು ನೀಡುವವರ ಹೆಸರು ಗೌಪ್ಯವಾಗಿಡಲಾಗುವುದು ಎಂದು ತಿಳಿಸಿದ್ದಾರೆ.