ಕದ್ದ ಹಣದಲ್ಲಿ ಕಾರು,ಚಿನ್ನ ಖರೀದಿಸಿದ್ದ ಸೆಕ್ಯೂರಿಟಿ ಗಾರ್ಡ್ ಸೆರೆ

arrested
Published on

ಬೆಂಗಳೂರು: ಕೆಲಸ ಮಾಡುತ್ತಿದ್ದ ಕಚೇರಿಯಲ್ಲೇ ಲಕ್ಷಾಂತರ ರೂ. ಕಳವು ಮಾಡಿ ಆ ಹಣದಲ್ಲಿ ಕಾರು ಮತ್ತು ಚಿನ್ನಾಭರಣ ಖರೀದಿಸಿದ್ದ ಸೆಕ್ಯೂರಿಟಿ ಗಾರ್ಡ್‌ನನ್ನು ಸಿದ್ದಾಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಜಯನಗರ ೨ನೇ ಬ್ಲಾಕ್ ನಿವಾಸಿ ನಾರಾಯಣಸ್ವಾಮಿ (೩೫) ಬಂಧಿತ.
ಆರೋಪಿಯಿಂದ ೩.೫೦ ಲಕ್ಷ ರೂ. ನಗದು, ಚಿನ್ನಾಭರಣ, ಕಾರು, ಮೊಬೈಲ್ ಜಪ್ತಿ ಮಾಡಲಾಗಿದೆ. ಆರೋಪಿ, ದೂರುದಾರ ಸ್ವಾಮಿ ಎಂಬುವವರ ಆಡಿಟ್ ಕಚೇರಿಯಲ್ಲಿ ಸೆಕ್ಯೂರಿಟಿ ಗಾರ್ಡ್ ಕೆಲಸ ಮಾಡುತ್ತಿದ್ದ. ಇಲ್ಲಿಯೇ ೧೦.೯೫ ಲಕ್ಷ ರೂ. ದೋಚಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚಿಕ್ಕಬಳ್ಳಾಪುರ ಮೂಲದ ನಾರಾಯಣಸ್ವಾಮಿ ಐದಾರು ವರ್ಷಗಳಿಂದ ಸ್ವಾಮಿ ಅವರ ಆಡಿಟ್ ಕಚೇರಿಯಲ್ಲಿ ಸೆಕ್ಯೂರಿಟಿಗಾರ್ಡ್ ಕೆಲಸ ಮಾಡುತ್ತಿದ್ದು, ಕುಟುಂಬ ಸಮೇತ ವಾಸವಾಗಿರಲು ದೂರುದಾರರೇ ತಮ್ಮ ಕಚೇರಿಯ ಮೇಲ್ಭಾಗದಲ್ಲಿ ಜಾಗ ಕೊಟ್ಟಿದ್ದರು. ಇನ್ನು ಆರೋಪಿ ಪತ್ನಿ ದೂರುದಾರರ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದರು.
ಮಾಲೀಕ ಸ್ವಾಮಿ ಅವರ ಚಲನವಲನಗಳ ಮೇಲೆ ನಿಗಾವಹಿಸಿದ್ದ ಆರೋಪಿ, ಕೆಲ ದಿನಗಳ ಹಿಂದೆ ಸ್ವಾಮಿ ತಮ್ಮ ಕಚೇರಿಯ ಕ್ಯಾಬಿನ್‌ನಲ್ಲಿ ಇರಿಸಿದ್ದ ೧೦.೯೫ ಲಕ್ಷ ರೂ. ಬಗ್ಗೆ ತಿಳಿದುಕೊಂಡಿದ್ದ. ಸೆ.೨೦ರಂದು ನಸುಕಿನಲ್ಲಿ ಆಫೀಸ್‌ನ ಕ್ಯಾಬಿನ್‌ನ ಡ್ರಾದಲ್ಲಿ ಇಟ್ಟಿದ್ದ ೧೦.೯೫ ಲಕ್ಷ ರೂ. ಕಳವು ಮಾಡಿ, ಪತ್ನಿಗೂ ತಿಳಿಸದೆ ಪರಾರಿಯಾಗಿದ್ದ. ಬಳಿಕ ಈ ಹಣದಲ್ಲಿ ಒಂದು ಹುಂಡೈ ಕಾರು, ೨ ಚಿನ್ನದ ಉಂಗುರ, ೧ ಬ್ರಾಸ್ ಲೆಟ್, ೧ ಚಿನ್ನದ ಸರ, ೧ ಫಾಸ್ಟ್ ಟ್ರಾೃಕ್ ವಾಚ್, ಮೊಬೈಲ್ ಖರೀದಿಸಿ, ಬಾಕಿ ೩.೫೦ ಲಕ್ಷ ರೂ. ಅನ್ನು ಕಾರಿನಲ್ಲಿ ಇಟ್ಟುಕೊಂಡು ಓಡಾಡಿಕೊಂಡು ಮೋಜು ಮಾಡುತ್ತಿದ್ದ.
ಇತ್ತ ಪತಿ ಕಾಣದಕ್ಕೆ ಆತಂಕಗೊಂಡ ಪತ್ನಿ ಸೆ.೨೨ರಂದು ಬೆಳಗ್ಗೆಯೇ ಪತಿ ಹುಡುಕಿಕೊಡುವಂತೆ ಠಾಣೆಗೆ ಬಂದು ದೂರು ನೀಡಿದ್ದಳು. ಆ ನಂತರ ಮಾಲೀಕ ಸ್ವಾಮಿ ಆರೋಪಿಯ ಬಗ್ಗೆ ಅನುಮಾನ ವ್ಯಕ್ತಪಡಿಸಿ ಕಳವು ದೂರು ನೀಡಿದ್ದರು. ಈ ನಿಟ್ಟಿನಲ್ಲಿ ತಾಂತ್ರಿಕ ತನಿಖೆ ಹಾಗೂ ಬಾತ್ಮೀದಾರರ ಮಾಹಿತಿ ಆಧರಿಸಿ ಬಾಣಸವಾಡಿಯ ಕಸ್ತೂರಿನಗರದ ಹೊರವರ್ತುಲ ರಸ್ತೆಯಲ್ಲಿ ಟೀ ಅಂಗಡಿ ಬಳಿ ಕಾರು ಸಮೇತ ಆರೋಪಿಯನ್ನು ವಶಕ್ಕೆ ಪಡೆಯಲಾಯಿತು. ಬಳಿಕ ಕಾರಿನ ಡಿಕ್ಕಿಯಲ್ಲಿಟ್ಟಿದ್ದ ೩.೫೦ ಲಕ್ಷ ರೂ. ನಗದು ಹಾಗೂ ಇತರೆ ಚಿನ್ನಾಭರಣಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net