ವಿದ್ರೋಹಿಗಳ ಹಿಂದಿನ ಕಾಣದ ಕೈಗಳ ಶೋಧ!

viddrohi feb 2020
Published on

ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿ ಹೋರಾಟದಲ್ಲಿ ಪ್ರತಿಧ್ವನಿಸುತ್ತಿರುವ ದೇಶವಿರೋಧಿ ಘೋಷಣೆ ಹಿಂದಿರುವ ಕಾಣದ ಕೈಗಳ ಸಂಚು ಭೇದಿಸಲು ಮುಂದಾಗಿರುವ ರಾಜ್ಯ ಗೃಹ ಇಲಾಖೆ ಈ ಸಂಬಂಧ ವಿವಿಧ ಆಯಾಮಗಳಲ್ಲಿ ಪ್ರಯತ್ನ ತೀವ್ರಗೊಳಿಸಿದೆ.

ಗುರುವಾರ ಬೆಂಗಳೂರಿನಲ್ಲಿ ನಡೆದ ಪೌರತ್ವ ಕಾಯ್ದೆ ವಿರೋಧಿ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಚಿಕ್ಕಮಗಳೂರಿನ ಕೊಪ್ಪ ಮೂಲದ ಅಮೂಲ್ಯ ಪಾಕ್ ಪರ ಘೋಷಣೆ ಕೂಗಿದ್ದಳು. ಆಕೆಯನ್ನು ಬಂಧಿಸಿ ವಿಚಾರಣೆಗೊಳಪಡಿಸಿರುವ ಬೆನ್ನಲ್ಲೇ ಶುಕ್ರವಾರ ‘ಫ್ರೀ ಕಾಶ್ಮೀರ’ ಭಿತ್ತಿಪತ್ರ ಹಿಡಿದು ಟೌನ್​ಹಾಲ್ ಎದುರು ಕಾಣಿಸಿಕೊಂಡ ಯುವತಿ ಆರ್ದ್ರಾಳನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಎರಡೂ ಪ್ರಕರಣಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ.

ತಜ್ಞರ ಸಮಿತಿ ಯಾವುದು?: ಸದ್ಯ ಪೊಲೀಸರ ವಶದಲ್ಲಿರುವ ಅಮೂಲ್ಯ ಇತ್ತೀಚೆಗೆ ರಾಜ್ಯದಲ್ಲಿ ನಡೆಯುತ್ತಿರುವ ಸಿಎಎ ವಿರೋಧಿ ಹೋರಾಟಗಳಲ್ಲೆಲ್ಲ ಪಾಲ್ಗೊಳ್ಳುತ್ತಿದ್ದಾಳೆ. ‘ಸಭೆಯಲ್ಲಿ ನಾನು ಏನು ಮಾತನಾಡಬೇಕೆಂಬುದನ್ನು ತಜ್ಞರ ಸಮಿತಿ ನಿರ್ಧರಿಸುತ್ತದೆ’ ಎಂದು ಆಕೆ ಇತ್ತೀಚೆಗೆ ಹೇಳಿದ್ದ ವಿಡಿಯೋ ವೈರಲ್ ಆಗಿದೆ. ಇದು ಕೂಡ ಈ ವಿದ್ರೋಹಿಗಳ ಹಿಂದೆ ದೊಡ್ಡ ಸಂಚು ನಡೆಯುತ್ತಿರುವುದತ್ತ ಬೊಟ್ಟುಮಾಡಿದೆ. ಡಿ.10 ರಿಂದೀಚೆಗೆ ರಾಜ್ಯದಲ್ಲಿ ಸಿಎಎ ವಿಚಾರವಾಗಿ 760 ಪ್ರತಿಭಟನೆ ನಡೆದಿದ್ದು, ಇವುಗಳ ಹಿಂದಿನ ಪ್ರೇರಕ ಶಕ್ತಿ ಯಾವುದು? ಅವರ ಮೂಲ ಉದ್ದೇಶವೇನು ಎಂಬ ಪ್ರಶ್ನೆ ಎದ್ದಿದೆ.

ಹಾಗೆಯೇ ಹೋರಾಟದ ನಿರಂತರತೆ ಕಾಯ್ದುಕೊಳ್ಳಲು ಬಳಕೆಯಾಗುತ್ತಿರುವ ಹಣ, ಅದರ ಮೂಲ ಹಾಗೂ ವಿಷಯ ಸಂಪನ್ಮೂಲ ವ್ಯಕ್ತಿಗಳು ಯಾರು ಎಂಬ ಪ್ರಶ್ನೆಗಳ ಬೆನ್ನತ್ತುವ ಜತೆಗೆ ಈ ಶಕ್ತಿಗಳ ಉದ್ದೇಶಿತ ಸಂಚು ವಿಫಲಗೊಳಿಸಲು ಗೃಹ ಇಲಾಖೆ ಉನ್ನತ ಮಟ್ಟದ ಸಭೆ ನಡೆಸಿದೆ.

ಸಾಮಾನ್ಯವಾಗಿ ಸಾಮಾಜಿಕ ಹೋರಾಟದ ಉದ್ದೇಶ ಸ್ಪಷ್ಟವಾಗಿರುತ್ತದೆ. ಆದರೆ ಪೌರತ್ವ ಕಾಯ್ದೆ ವಿರೋಧಿ ಹೋರಾಟದ ಹಿಂದೆ ಬೇರೆ ಉದ್ದೇಶ ಇದೆ ಎಂಬ ಮಾತು ಕೇಳಿಬಂದಿದೆ.

ಗೃಹ ಸಚಿವರ ಪ್ರತಿಕ್ರಿಯೆ ಕೂಡ ಇದನ್ನು ಪುಷ್ಟೀಕರಿಸಿದೆ. ‘ಎಡಪಂಥೀಯ ಚಿಂತಕರು ಸೇರಿ ಬೇರೆ ಚಿಂತಕರ ಕೈವಾಡದ ಬಗ್ಗೆ ಸಂಪೂರ್ಣ ತನಿಖೆ ಆಗಲಿದೆ’ ಎಂದು ಅವರು ಹೇಳಿದ್ದಾರೆ. ಹೀಗಾಗಿ ನೆರೆ ರಾಜ್ಯದ ಹೋರಾಟಗಳು, ವಿವಿಧ ಸಂಘಟನೆಗಳ ಪಾತ್ರ, ರಾಜಕೀಯ ನಾಯಕರ ಪರೋಕ್ಷ ಸಹಕಾರ ಸೇರಿ ವಿವಿಧ ಮಾಹಿತಿ ಸಂಗ್ರಹಿಸುವ ಕೆಲಸ ಭರದಿಂದ ಸಾಗಿದೆ.

ಗುಪ್ತ ಮಾಹಿತಿಯೇನು?

ಮುಸ್ಲಿಂ ಮಹಿಳೆಯರು, ಕಾಲೇಜು ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಕಳೆದ 2 ತಿಂಗಳಲ್ಲಿ ನೂರಾರು ಚಟುವಟಿಕೆ ನಡೆದಿವೆ. ಒಂದು ಚಿಂತನೆಯ ಬೇರೆ ಬೇರೆ ಸಂಘಟನೆಗಳವರು ಒಟ್ಟಾಗಿ ಕಾರ್ಯೋನ್ಮುಖರಾಗಿರುವುದನ್ನು ಸರ್ಕಾರ ಗ್ರಹಿಸಿದೆ. ಹೋರಾಟ ಟೌನ್ ಹಾಲ್ ಅಥವಾ ಜಿಲ್ಲೆಗಳ ಜಿಲ್ಲಾಧಿಕಾರಿ ಕಚೇರಿ ಎದುರಿಗಷ್ಟೇ ಸೀಮಿತವಾಗಿಲ್ಲ. ಸರ್ಕಾರಕ್ಕೆ ಸಿಕ್ಕ ಲೆಕ್ಕದ ಪ್ರಕಾರ ಇಂಥ ಕಡೆ 750ಕ್ಕಿಂತ ಹೆಚ್ಚು ಪ್ರತಿಭಟನೆ ನಡೆದಿವೆ. ಗಲ್ಲಿಗಳು, ಮೊಹಲ್ಲಾಗಳು, ಮನೆಗಳಲ್ಲೂ ಸಣ್ಣ ಸಣ್ಣ ಗುಂಪು ಸಭೆ ನಡೆದಿದೆ. ಎಲ್ಲೂ ರಾಜಕೀಯ ಪಕ್ಷದ ಲೇಪನವಾಗದಂತೆ ಎಚ್ಚರಿಕೆ ವಹಿಸಲಾಗಿದೆ. ಹೋರಾಟ ಪ್ರೇರಿತ ಸಂಘಟನೆ ಕಳಿಸಿದ ವಿಷಯ ಸಂಪನ್ಮೂಲ ಇಟ್ಟುಕೊಂಡು ವಿದ್ಯಾರ್ಥಿಗಳು ಸಭೆ ನಡೆಸಿದ್ದಾರೆ. ಪೌರತ್ವ ಕಾಯ್ದೆ ಬದಲು ಬಿಜೆಪಿ, ಸಂಘಪರಿವಾರ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಮಾತುಗಳನ್ನಾಡಿದ್ದಾರೆ. ಏನು ಮಾತನಾಡಬೇಕೆಂಬ ವಿಚಾರವನ್ನು ವಾಟ್ಸಾಪ್, ವಿಡಿಯೋ ರೂಪದಲ್ಲಿ ರವಾನಿಸಲಾಗುತ್ತಿತ್ತು ಎಬಿವಿಪಿ, ಎನ್​ಎಸ್​ಯುುಐ ಹೊರತಾಗಿನ ಒಂದೆರಡು ವಿದ್ಯಾರ್ಥಿ ಸಂಘಟನೆಗಳು ಈ ಚಟುವಟಿಕೆಯಲ್ಲಿ ತೊಡಗಿಕೊಂಡಿರುವ ಶಂಕೆ ಇದೆ.

ಹಣ ಎಲ್ಲಿಂದ?

ಸಿಎಎ ಹೋರಾಟದ ಹಿಂದೆ ವಿದೇಶಿ ಸಂಚಿದೆ ಎಂದು ಗೃಹ ಸಚಿವರು ವಿಧಾನಸಭೆಯಲ್ಲಿ ಅನುಮಾನ ವ್ಯಕ್ತಪಡಿಸಿದ್ದರು. ಇದರ ಹೊರತಾಗಿ ದೇಶದೊಳಗೆ ದೊಡ್ಡ ದೊಡ್ಡ ರ‍್ಯಾಲಿ ಆಯೋಜನೆಗೆ ಆಗುವ ಲಕ್ಷಾಂತರ ರೂ. ವೆಚ್ಚವನ್ನು ಯಾರು ಮಾಡುತ್ತಿದ್ದಾರೆಂಬ ಹುಡುಕಾಟ ಶುರುವಾಗಿದೆ. ಬೆಂಗಳೂರಲ್ಲೇ 10-15 ಸಾವಿರಕ್ಕಿಂತ ಹೆಚ್ಚು ಜನರನ್ನು ಸೇರಿಸಿದ 6 ಹೋರಾಟಗಳು ನಡೆದಿವೆ. ರಾಜ್ಯದ ವಿವಿಧೆಡೆ ಒಂದು ಲಕ್ಷ ಜನ ಸೇರಿಸಿದ 4-5 ಪ್ರತಿಭಟನೆ ನಡೆದಿದೆ. ಸಹಜವಾಗಿ ಇಷ್ಟು ದೊಡ್ಡ ಕಾರ್ಯಕ್ರಮಕ್ಕೆ ಸಾಕಷ್ಟು ಖರ್ಚಾಗುತ್ತದೆ. ಭಾಷಣಕಾರರ ಪ್ರಯಾಣ, ಆತಿಥ್ಯಕ್ಕೂ ವೆಚ್ಚವಾಗುತ್ತದೆ. ಇದೆಲ್ಲವನ್ನೂ ಕೊಡುತ್ತಿರುವವರು ಯಾರು ಎಂಬ ಪ್ರಶ್ನೆಯೂ ಇದೆ. ಅಲ್ಲದೆ ಜನರನ್ನು ಸಂಘಟಿಸಲು, ಸಣ್ಣ ಸಣ್ಣ ಸಭೆಗಳನ್ನು ನಡೆಸಲು ದುಡಿಯುತ್ತಿರುವವರಿಗೆ ಆಗುವ ಖರ್ಚು ವೆಚ್ಚ ನೋಡಿಕೊಳ್ಳುವವರ ಬಗ್ಗೆ ಮಾಹಿತಿ ಕಲೆ ಹಾಕುವ ಕೆಲಸ ಆರಂಭವಾಗಿದೆ. ಒಂದು ಮಾಹಿತಿ ಪ್ರಕಾರ ಕಾಂಗ್ರೆಸ್​ನ ಮಾಜಿ ಸಂಸದರೊಬ್ಬರು ಪರೋಕ್ಷ ಸಹಕಾರ ನೀಡಿದ್ದರೆ, ಕಾಂಗ್ರೆಸ್ ಸಾಮಾಜಿಕ ಚಟುವಟಿಕೆ ನಡೆಸುವ ಘಟಕವೊಂದರ ಮುಖ್ಯಸ್ಥೆ ಸಹ ಹೋರಾಟದ ಚಿಂತಕರ ಚಾವಡಿಯಲ್ಲಿದ್ದುಕೊಂಡೇ ಸಭೆಗಳಲ್ಲಿ ಪ್ರಮುಖ ಭಾಷಣಕಾರರಾಗಿಯೂ ಪಾಲ್ಗೊಳ್ಳುತ್ತಿದ್ದಾರೆ.

ನಕ್ಸಲ್ ನಂಟು...

ಪಾಕ್ ಪರ ಘೊಷಣೆ ಕೂಗಿದ ಅಮೂಲ್ಯಗೆ ನಕ್ಸಲ್ ನಂಟು ಇರುವುದು ಸಾಬೀತಾಗಿದ್ದು, ಆಕೆ ಹಾಗೂ ಆಕೆಗೆ ಪ್ರಚೋದನೆ ನೀಡಿದವರಿಗೆ ಶಿಕ್ಷೆ ಆಗಬೇಕೆಂದು ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದರು. ಶುಕ್ರವಾರ ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ‘ಆಕೆಯ ಕೈ ಕಾಲು ಮುರಿಯಿರಿ, ಆಕೆಗೆ ಜಾಮೀನು ಸಿಗಬಾರದು’ ಎಂದು ಆಕೆಯ ತಂದೆಯೇ ಹೇಳಿಕೆ ನೀಡಿದ್ದಾರೆ. ಬಹಳ ಮುಖ್ಯವಾಗಿ ಆಕೆಯ ಹಿಂದೆ ಇರುವ ಸಂಘಟನೆಯವರ ಮೇಲೆ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಇಂಥದು ಕೊನೆಯಾಗುವುದಿಲ್ಲ. ಶಾಂತಿ, ಸುವ್ಯವಸ್ಥೆ ಹಾಳು ಮಾಡುವ ವ್ಯವಸ್ಥಿತ ಷಡ್ಯಂತ್ರ ಇದರ ಹಿಂದೆ ಇದೆ ಎಂಬುದು ಸ್ಪಷ್ಟ’ ಎಂದರು.

ಸಿಎಎ ವಿರೋಧಿ ರ‍್ಯಾಲಿಗಳು ಭಾರತ ವಿರೋಧಿ ಪ್ರತಿಭಟನೆ ಯಾಗಿ ಪರಿವರ್ತನೆಗೊಳ್ಳುತ್ತಿವೆ. ಆ ಯುವತಿ ಒಂದು ಮುಖವಾಣಿಯಷ್ಟೆ. ಪರದೆ ಹಿಂದೆ ಇದರ ಅಸಲಿ ಮುಖ ಇದೆ. ದೇಶವಿರೋಧಿ ಕೃತ್ಯಗಳಲ್ಲಿ ತೊಡಗುವ ವ್ಯವಸ್ಥೆಯನ್ನು ಭೇದಿಸುವ ಸಮಯ ಬಂದಿದೆ. | ಸದಾನಂದ ಗೌಡ ಕೇಂದ್ರ ಸಚಿವ ದುಷ್ಕರ್ವಿುಗಳು ಈ ಪ್ರತಿಭಟನೆಯನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ. ಇನ್ನು ಸಾಕು ಎಂದು ಹೇಳುವ ಸಮಯ ಬಂದಿದೆ. | ಬಿ.ಎಲ್.ಸಂತೋಷ್ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಪ್ರಕರಣದ ಹಿಂದೆ ಯಾವೆಲ್ಲ ಸಂಘಟನೆ ಇದೆ ಎಂಬುದನ್ನು ಕೇಂದ್ರ ಗೃಹ ಇಲಾಖೆ ಗಮನಿಸುತ್ತಿದೆ. ಯಾರೆಲ್ಲಾ ಸಂಚು ರೂಪಿಸುತ್ತಿದ್ದಾರೆಂದು ತನಿಖೆ ನಡೆಸಲಾಗುತ್ತಿದೆ. | ಬಿ.ವೈ. ವಿಜಯೇಂದ್ರ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net