

ವಿದೇಶಗಳಿಂದ ಅಕ್ರಮವಾಗಿ ವಲಸೆ ಬಂದು ನೆಲೆಸಿದವರು ರಾಜ್ಯದ ಕಾನೂನು ಸುವ್ಯವಸ್ಥೆಗೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದಾರೆ. ಈ ಸಮಸ್ಯೆ ಬಗ್ಗೆ ಮಂಗಳವಾರ ವಿಧಾನಸಭೆ ಕಲಾಪದಲ್ಲಿ ಗಂಭೀರ ಚರ್ಚೆ ನಡೆದಿರುವುದು ಗಮನಾರ್ಹ.
ಆದರೆ, ಅಕ್ರಮವಾಗಿ ನೆಲೆಸಿರುವ ವಿದೇಶಿಯರನ್ನು ಪತ್ತೆ ಮಾಡುವ ಮತ್ತು ಅವರ ವಿರುದ್ಧ ಕ್ರಮ ಜರುಗಿಸುವ ಕಾರ್ಯ ನೆಪಮಾತ್ರಕ್ಕೆ ಎಂಬಂತೆ ನಡೆಸಲಾಗುತ್ತಿರುವುದು ನಿಜಕ್ಕೂ ಗಂಭೀರ ಲೋಪ. ಅಧಿಕಾರಿಗಳು ತಪು್ಪ ಮಾಹಿತಿ ನೀಡುವ ಮೂಲಕ ಸರ್ಕಾರದ ದಾರಿ ತಪ್ಪಿಸುತ್ತಿದ್ದಾರೆ. ‘ರಾಜ್ಯಾದ್ಯಂತ ಅಕ್ರಮವಾಗಿ ನೆಲೆಸಿರುವ 556 ವಿದೇಶಿ ಪ್ರಜೆಗಳನ್ನು ಗುರುತಿಸಲಾಗಿದೆ’ ಎಂದು ಸರ್ಕಾರ ಸದನದಲ್ಲಿ ಉತ್ತರ ಕೊಟ್ಟಿದೆ.
ಆದರೆ, ವಾಸ್ತವ ಬೇರೆಯೇ ಇದ್ದು, ದೊಡ್ಡ ಸಂಖ್ಯೆಯಲ್ಲಿ ವಿದೇಶಿ ಅಕ್ರಮ ವಲಸಿಗರು ರಾಜ್ಯದಲ್ಲಿ ನೆಲೆಸಿದ್ದಾರೆ. ಈ ಬಗ್ಗೆ ವ್ಯವಸ್ಥಿತ ಮತ್ತು ಕಟ್ಟುನಿಟ್ಟಾದ ಸಮೀಕ್ಷೆ ನಡೆಯಬೇಕು ಮತ್ತು ಆ ವರದಿಯ ಆಧಾರದ ಮೇಲೆ ಅಕ್ರಮವಾಗಿ ನೆಲೆಸಿರುವ ವಿದೇಶಿಗರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.
ಕಳೆದ ಕೆಲ ವರ್ಷಗಳ ಹಲವು ಅಪರಾಧ ಪ್ರಕರಣಗಳ ವಿವರ ಮತ್ತು ಅವುಗಳ ಕುರಿತಾದ ತನಿಖಾ ವರದಿಯನ್ನು ಗಮನಿಸಿದರೆ ಈ ದುರುಳುರು ಅಪರಾಧ ಪ್ರಕರಣಗಳಲ್ಲಿ ಶಾಮೀಲಾಗಿ, ನಡೆಸಿರುವ ಕುಕೃತ್ಯಗಳು ಬೆಚ್ಚಿಬೀಳಿಸುವಂತಿವೆ. ಗಾಂಜಾ, ಚರಸ್ ಸೇರಿದಂತೆ ಹಲವು ಮಾದಕದ್ರವ್ಯಗಳ ಕಳ್ಳಸಾಗಾಣಿಕೆ ಮತ್ತು ಮಾರಾಟದಲ್ಲಿ ಆಫ್ರಿಕನ್ ಪ್ರಜೆಗಳು ತೊಡಗಿಸಿಕೊಂಡಿದ್ದು, ಇವರು ಹುಟ್ಟುಹಾಕಿರುವ ಕರಾಳ ಜಾಲಗಳಿಂದಲೇ ಮಾದಕದ್ರವ್ಯ ಶಾಲಾ-ಕಾಲೇಜ್ ವಿದ್ಯಾರ್ಥಿಗಳ ಕೈಗೆ ಸುಲಭವಾಗಿ ಸಿಗುವಂತಾಗಿದೆ.
ಅಲ್ಲದೆ, ಕಳ್ಳತನ, ಹಲ್ಲೆ, ಬೆದರಿಕೆ ಸೇರಿದಂತೆ ಸಮಾಜಘಾತುಕ ಕೃತ್ಯಗಳಲ್ಲಿ ತೊಡಗಿದ್ದಾರೆ. ಆಫ್ರಿಕನ್ ಪುಂಡ ವಿದ್ಯಾರ್ಥಿಗಳಂತೂ ಪೊಲೀಸರ ಮೇಲೆಯೇ ಹಲ್ಲೆ ನಡೆಸಿರುವ ನಿದರ್ಶನಗಳು ಇವೆ. ಹೀಗಿರುವಾಗ ಈ ಪುಂಡರಿಂದ ಜನಸಾಮಾನ್ಯರ ರಕ್ಷಣೆ ಹೇಗೆ?
ಮತ್ತೊಂದು ಆಘಾತಕಾರಿ ಸಂಗತಿ ಎಂದರೆ ಇಲ್ಲಿನ ಭ್ರಷ್ಟ ವ್ಯವಸ್ಥೆಯು ವಿದೇಶದಿಂದ ಅಕ್ರಮವಾಗಿ ಬಂದು ನೆಲೆಸಿರುವವರಿಗೆ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಪಡಿತರ ಚೀಟಿ ಸೇರಿದಂತೆ ಹಲವು ದಾಖಲೆಗಳನ್ನು ಒದಗಿಸಿದೆ. ಸರಿಯಾದ ದಾಖಲೆ ಹೊಂದಿರುವ ಸ್ಥಳೀಯ ನಾಗರಿಕರಿಗೆ ಆಧಾರ್, ಪ್ಯಾನ್ ಮಾಡಿಸಲು ಹತ್ತಾರು ಬಾರಿ ಅಲೆದಾಡಿಸುವ, ಏನೇನೋ ಸಬೂಬು ಹೇಳುವ ಸರ್ಕಾರಿ ಸಿಬ್ಬಂದಿ, ಅಕ್ರಮ ವಲಸಿಗರಿಗೆ ಅನುಕೂಲ ಮಾಡಿಕೊಟ್ಟಿರುವುದು ವಿಪರ್ಯಾಸ.
ಈ ವಿಷಯದಲ್ಲೂ ತಪ್ಪಿತಸ್ಥರ ವಿರುದ್ಧ ಸರ್ಕಾರ ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕು. ಈ ಹಿನ್ನೆಲೆಯಲ್ಲಿ ಅಕ್ರಮ ವಲಸಿಗರ ಆಧಾರ್ ಕಾರ್ಡ್ ಮತ್ತು ಮತದಾರರ ಗುರುತಿನ ಚೀಟಿ ಸೇರಿದಂತೆ ಇತರ ದಾಖಲಾತಿಗಳನ್ನು ರದ್ದುಮಾಡಬೇಕು ಎಂಬ ಪ್ರತಿಪಕ್ಷಗಳ ಬೇಡಿಕೆ ಸೂಕ್ತವಾಗಿದ್ದು, ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಲಿ.
ಕರ್ನಾಟಕ ಶಾಂತಿಪ್ರಿಯ ಹಾಗೂ ಕಾನೂನು ಸುವ್ಯವಸ್ಥೆಗೆ ಹೆಸರಾದ ರಾಜ್ಯ. ಆದರೆ, ಯಾವುದೋ ದೇಶದಿಂದ ಕಾನೂನುಬಾಹಿರವಾಗಿ ಬಂದು ದಾಂಧಲೆ ನಡೆಸಿ, ಪರಿಸ್ಥಿತಿ ಹದಗೆಡಿಸುವುದನ್ನು ಯಾವುದೇ ಕಾರಣಕ್ಕೂ ಸಹಿಸಲಾಗದು. ಪರಿಸ್ಥಿತಿಯ ಗಂಭೀರತೆ ಅರ್ಥ ಮಾಡಿಕೊಂಡು ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿ.