ಪಂಚ ಮಹಾಭೂತಗಳ ಸಂಯೋಜನೆಯೊಂದಿಗೆ ಹಿತ ಬಯಸುವ ವಿಜ್ಞಾನ!

ವಿಜಯವಾಣಿ (2)
Published on
ವಾಸ್ತುಶಾಸ್ತ್ರ ಎಂಬುದು ಕೆಲವರಿಗೆ ನಂಬಿಕೆ ವಿಷಯ ಮತ್ತೆ ಕೆಲವರಿಗೆ ಕುತೂಹಲದ ವಿಚಾರ. ಇನ್ನು ಕೆಲವರಿಗೆ ನಿಲುಕದ ವಿಚಾರ. ಅದೂ ಒಂದು ವಿಜ್ಞಾನ ಎಂದು ಪ್ರತಿಪಾದಿಸುವವನು ನಾನು. ಈ ಕ್ಷೇತ್ರದ ಆಳ- ಅಗಲವನ್ನು ಪ್ರತಿಪಾದಿಸುವುದಾದರೆ ಪಂಚ ಮಹಾಭೂತಗಳಾದ ಪೃಥ್ವಿ (ಭೂಮಿ), ಅಪಸ್ (ನೀರು), ಅಗ್ನಿ (ಬೆಂಕಿ), ವಾಯು, ಆಕಾಶ (ಧ್ವನಿ) ಹದವಾದ ಸಂಯೋಜನೆಯೇ ಶಕ್ತಿಯ ಮೂಲ. ಪ್ರಕೃತಿಯಲ್ಲಿರುವ ಈ ಎನರ್ಜಿ (ಶಕ್ತಿ)ಯನ್ನು ಕಟ್ಟಡ ಒಳಗೆ ಯಾವ ರೀತಿ ಅಳವಡಿಸಿಕೊಳ್ಳಬೇಕು, ಯಾವ ಗುಣಮಟ್ಟದಲ್ಲಿ ತೆಗೆದುಕೊಳ್ಳಬೇಕು, ಯಾವ ಪ್ರಮಾಣದಲ್ಲಿ ತೆಗೆದುಕೊಳ್ಳಬೇಕೆಂಬುದೇ ವಾಸ್ತುಶಾಸ್ತ್ರ.

ಪಂಚಮಹಾಭೂತಗಳ ಅಂಶ ಮನುಷ್ಯನ ಒಳಗೂ ಇರುತ್ತದೆ, ಹೊರಗೂ ಇದೆ. ಈ ಎನರ್ಜಿಯನ್ನು ಬೇರೆ ಬೇರೆ ರೀತಿ ಸಂಯೋಜನೆಯಲ್ಲಿ, ಯಾವ ಪ್ರಮಾಣದಲ್ಲಿ ತೆಗೆದುಕೊಳ್ಳಬೇಕೆಂಬುದನ್ನು ವಾಸ್ತುಶಾಸ್ತ್ರ ಹೇಳುತ್ತದೆ. ಈ ವಾಸ್ತುಶಾಸ್ತ್ರದ ಸರಿಯಾದ ಕ್ರಮದಲ್ಲಿ ಬಳಕೆಯಿಂದ ಕಟ್ಟಡದೊಳಗಿರುವ ಮನುಷ್ಯನಿಗೆ ‘ಚೈತನ್ಯ’ ಸಿಗಲಿದೆ.

ಮನೆಗೆ ಅಥವಾ ಕಟ್ಟಡಕ್ಕೆ ವಾಸ್ತುಶಾಸ್ತ್ರ ಬೇಕಾ, ಆರ್ಕಿಟೆಕ್ಟ್ ಬೇಕಾ? ಎಂದರೆ, ಅಗತ್ಯವಾಗಿ ಬೇಕು ಎಂದೇ ಹೇಳುತ್ತೇನೆ. ಮನುಷ್ಯರಾದ ನಾವು ಜೀವನದ ಬಹುಪಾಲು ಸಮಯವನ್ನು ನಮ್ಮ ಮನೆ ಅಥವಾ ಕಟ್ಟಡದಲ್ಲಿ ಕಳೆಯುತ್ತೇವೆ, ನಮ್ಮ ಹಿತಕ್ಕಾಗಿ ಸಮಯ ಕಳೆಯುತ್ತೇವೆ. ಹೀಗಾಗಿ ಉತ್ತಮ ಜೀವನಕ್ಕಾಗಿ ವಾಸ್ತು ಮುಖ್ಯವಾಗುತ್ತದೆ.

ಒಬ್ಬ ಡಾಕ್ಟರ್ ಬಳಿ ಹೋದರೆ ನಿರ್ದಿಷ್ಟ ರೋಗಕ್ಕೆ ಔಷಧ ಕೊಡುತ್ತಾರೆ. ಆ ನಿರ್ದಿಷ್ಟ ಉದ್ದೇಶಕ್ಕೆ ಸಂಬಂಧಿಸಿದ್ದು. ಅಲ್ಲಿಗೆ ವೈದ್ಯರ ಕೆಲಸ ಮುಗಿಯಿತು. ಆದರೆ, ಆರ್ಕಿಟೆಕ್ಟ್ ಮಾಡಿದ ಕಟ್ಟಡದಲ್ಲಿ ಜೀವನಪೂರ್ತಿ ಕುಟುಂಬ ಸಮೇತರಾಗಿ ಬಾಳಿ ಬದುಕಬೇಕು. ಇದೇ ಕಾರಣಕ್ಕೆ ಸರಿಯಾದ ವಾಸ್ತುಶಾಸ್ತ್ರ (ಪಂಚಮಹಾ ಭೂತಗಳ ಸದ್ಬಳಕೆ) ಕೂಡ ಮುಖ್ಯವಾಗುತ್ತದೆ.

ಹಾಗೆಯೇ ಪ್ರತಿ ವ್ಯಕ್ತಿಯಲ್ಲಿ ಮೂರು ಗುಣ ಇರುತ್ತವೆ. ರಜಸ್, ತಮಸ್, ಸತ್ವ ಗುಣಗಳು. ಈಗಿನ ಸಂದರ್ಭದಲ್ಲಿ ಈ ವಿಷಯ ಹೇಳಿದರೆ ಒಬ್ಬ ಪಂಡಿತ ಎನ್ನಬಹುದು. ಆದರೆ, ಇವು ವೈಜ್ಞಾನಿಕ ವಿಚಾರ. ರಜಸ್ ಎಂದರೆ ಕೈನೆಟಿಕ್ ಎನರ್ಜಿ, ತಮಸ್ ಎಂದರೆ ಪೊಟೆನ್ಷಿಯಲ್ ಎನರ್ಜಿ, ಸತ್ವ ಎಂದರೆ ಕಾನ್ಶಿಯಸ್​ನೆಸ್. ಇವು ಬೇರೆ ಬೇರೆ ಜನರಿಗೆ ಬೇರೆ ರೀತಿ ಬರುತ್ತದೆ. ಉದಾಹರಣೆಗೆ, ವಿಜ್ಞಾನಿಯೊಬ್ಬರಿಗೆ ವಿಜ್ಞಾನದ ವಿಚಾರ ಕೇಳಿದರೆ ಚಕಾಚಕ್ ಉತ್ತರಿಸುತ್ತಾರೆ, ಅದೇ ಪಿ.ಟಿ.ಉಷಾ ಅವರಿಗೆ ಕ್ರೀಡೆ ಬಗ್ಗೆ ಕೇಳಿದರೆ ವಿಜ್ಞಾನಿಗಿಂತ ವೇಗವಾಗಿ ಹೇಳಬಹುದು. ಒಬ್ಬ ರೈತನಿಗೆ ಕೃಷಿ ಬಗ್ಗೆ ಕೇಳಿದರೆ ಗಹನವಾಗಿ ತಾನು ತಿಳಿದ ವಿಚಾರ ಹೇಳಬಹುದು. ಅದನ್ನು ಒಬ್ಬ ಐಎಎಸ್ ಅಧಿಕಾರಿ ಹೇಳಲು ಸಾಧ್ಯವಾಗಲ್ಲ, ಐಐಎಸ್ಸಿಯಲ್ಲಿ ಕುಳಿತ ಪ್ರೊಫೆಸರ್ ಕೂಡ ಹೇಳುವುದು ಕಷ್ಟ. (ಆ ವಿಷಯದಲ್ಲಿ ಕಲಿತ ಸಂದರ್ಭ ಹೊರತುಪಡಿಸಿ). ಆ ವಿಷಯದಲ್ಲಿ ತಿಳುವಳಿಕೆ ಇದ್ದರೆ ಮಾತ್ರ ಮಾತನಾಡಬಹುದು. ಈ ಒಂದೊಂದು ಕ್ಷೇತ್ರದಲ್ಲಿ ಅಭಿವೃದ್ಧಿ ಆಗಬೇಕೆಂದರೆ ಮನೆ ಅಥವಾ ಕಟ್ಟಡ ತುಂಬ ಮುಖ್ಯ. ಅಲ್ಲಿ ಇರುವ ಪ್ರತಿ ವಿಭಾಗದಲ್ಲಿ, (ಕೊಠಡಿ ಅಥವಾ ಕೋಣೆ) ಇರುವ ಎನರ್ಜಿ ಬೇರೆ ಬೇರೆ ಮಟ್ಟದಲ್ಲಿ ಇರುತ್ತದೆ. ಹೀಗಾಗಿ ಆ ಮನೆ ಅಥವಾ ಕಟ್ಟಡ ಯಾವ ಸ್ವರೂಪದಲ್ಲಿ ಅಲ್ಲಿ ವಾಸಿಸುವವರಿಗೆ ಅನುಕೂಲ ಮಾಡಿಕೊಡುತ್ತದೆ ಎನ್ನುವುದು ಮುಖ್ಯ.

(ಲೇಖಕರು ಸುಪ್ರಸಿದ್ಧ ವಾಸ್ತು ಶಾಸ್ತ್ರಜ್ಞರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net