ಅನಧಿಕೃತ ಶಾಲೆಗಳ ಪಟ್ಟಿಯನ್ನು ಏಪ್ರಿಲ್ 24ರಂದು ಪ್ರಕಟಿಸುವಂತೆ ಸೂಚಿಸಿದ ಶಾಲಾ ಶಿಕ್ಷಣ ಇಲಾಖೆ

unauathorised school
Published on

ಬೆಂಗಳೂರು: ಅನಧಿಕೃತ ಶಾಲೆಗಳ ಮೇಲೆ ಕ್ರಮ ಕೈಗೊಳ್ಳಲು ಮೀನಮೇಷ ಎಣಿಸುತ್ತಿದ್ದ ರಾಜ್ಯ ಸರ್ಕಾರ ಕೊನೆಗೂ ದೃಢ ಹೆಜ್ಜೆ ಇಟ್ಟಿದ್ದು ಏ.24 ರಂದು ತಮ್ಮ ವ್ಯಾಪ್ತಿಯಲ್ಲಿನ ಅಧಿಕೃತ ಶಾಲೆಗಳ ಪಟ್ಟಿಯನ್ನು ಪ್ರಕಟಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಿದೆ.

ಶಾಲಾ ಶಿಕ್ಷಣ ಇಲಾಖೆಯ ಆಯುಕ್ತೆ ಬಿ. ಬಿ. ಕಾವೇರಿ ಅವರು ರಾಜ್ಯದ ಎಲ್ಲ ಜಿಲ್ಲೆಗಳ ಉಪನಿರ್ದೇಶಕರು ಮತ್ತು ತಾಲೂಕು, ವಲಯ ಶಿಕ್ಷಣಾಧಿಕಾರಿಗಳಿಗೆ ಸುತ್ತೋಲೆ ಕಳುಹಿಸಿದ್ದು, ತಮ್ಮ ವ್ಯಾಪ್ತಿಯ ಶಾಲಾ ಮಾಹಿತಿಯನ್ನು ಪರಿಶೀಲಿಸಿ ಎಸ್‌ಎಟಿಎಸ್‌ನಲ್ಲಿ ಇಂದೀಕರಿಸಿ ಏ. 12 ರಂದು ಅಧಿಕೃತ ಶಾಲೆಗಳ ಕರಡು ಪಟ್ಟಿಯನ್ನು ಪ್ರಕಟಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಏ. 12 ರಿಂದ ಏ. 19ರವರೆಗೆ ಕರಡು ಪಟ್ಟಿಗೆ ಸ್ವೀಕೃತ ಆಕ್ಷೇಪಣೆಗಳ ಪರಿಶೀಲನೆ ಮತ್ತು ಇತ್ಯರ್ಥ ಪಡಿಸುವುವ ಪ್ರಕ್ರಿಯೆ ನಡೆಸಬೇಕು. ಏ. 24 ರಂದು ಅಧಿಕೃತ ಶಾಲೆಗಳ ಅಂತಿಮ ಪಟ್ಟಿ ಪ್ರಕಟಿಸಬೇಕು. ಏ. 25 ರಂದು ಶಾಲಾ ಆಡಳಿತ ಮಂಡಳಿಗಳು/ ಶಾಲಾ ಮುಖ್ಯಸ್ಥರು ತಮ್ಮ ಶಾಲೆಯ ಸೂಚನ ಫಲಕದಲ್ಲಿ ನೋಂದಣಿ, ಮಾನ್ಯತೆ ನವೀಕರಣ ಪತ್ರ ಪ್ರಕಟಿಸಬೇಕು ಎಂದು ನಿರ್ದೇಶನ ನೀಡಲಾಗಿದೆ.

ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮ್ಮ ಹಂತದಲ್ಲಿ ಎಸ್‌ಎಟಿಎಸ್ ನಲ್ಲಿ ಇಂದೀಕರಿಸಿದ ದಾಖಲೆಯ ಪರಿಶೀಲನೆಯ ಸಮಯದಲ್ಲಿ ಶಾಲೆಯ ಡೈಸ್ ಕೋಡ್, ಶಾಲಾ ವಿಳಾಸ, ನೋಂದಾಣಿ ಪಡೆದ ಮಾಧ್ಯಮ, ಅನುಮತಿ ಪಡೆದ ತರಗತಿ, ಪಠ್ಯಕ್ರಮ ತಪ್ಪಾಗಿ ನಮೂದಿಸಿದ ಸಂದರ್ಭದಲ್ಲಿ ಇಲಾಖಾ ಅನುಮತಿ ಪ್ರತಿಯನ್ನು ಪರಿಶೀಲಿಸಿ ತಿದ್ದುಪಡಿ ಮಾಡಬೇಕು. ಒಂದು ವೇಳೆ ತಪ್ಪು ಮಾಹಿತಿಯನ್ನು ಎಸ್‌ಎಟಿಎಸ್ ನಲ್ಲಿ ಇಂದೀಕರಿಸಿದರೆ ಅಥವಾ ಅಧಿಕೃತ ಶಾಲೆಯನ್ನು ಗುರುತಿಸುವ ಮಾರ್ಗಸೂಚಿಯನ್ನು ಉಲ್ಲಂಘಿಸಿದರೆ ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನೇ ನೇರ ಹೊಣೆಗಾರರನ್ನಾಗಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net