

ಸೋಮವಾರಪೇಟೆ: ಸೇವಾ ಸಂಘಗಳ ಚಟುವಟಿಕೆಗಳಲ್ಲಿ ಹಿರಿಯರ ಮಾರ್ಗದರ್ಶನ ಅಗತ್ಯ ಎಂದು ಇನ್ನರ್ ವ್ಹೀಲ್ ಕ್ಲಬ್‌ನ ಜಿಲ್ಲಾಧ್ಯಕ್ಷೆ ವೈಶಾಲಿ ಕುಡ್ವಾ ಅಭಿಪ್ರಾಯಪಟ್ಟರು.
ಇನ್ನರ್ ವ್ಹೀಲ್ ಕ್ಲಬ್ ಆಫ್ ಸೋಮವಾರಪೇಟೆ ಗೋಲ್ಡ್‌ಗೆ ಭೇಟಿ ಹಿನ್ನೆಲೆಯಲ್ಲಿ ಒಕ್ಕಲಿಗರ ಸಂಘದ ಶ್ರೀಗಂಧ ಹಾಲ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಾವು ಸಂಪಾದಿಸಿದ ಹಣದಲ್ಲಿ ಒಂದಷ್ಟು ಭಾಗವನ್ನು ಸಮಾಜ ಸೇವೆಗೆ ಬಳಸಬೇಕು. ಇದರಿಂದ ಸಿಗುವ ಸಂತೃಪ್ತಿ ಬೇರೆ ಯಾವುದೇ ವೃತ್ತಿಯಲ್ಲಿ ಸಿಗುವುದಿಲ್ಲ ಎಂದು ಅಭಿಪ್ರಾಯಪಟ್ಟರು.
ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯಗಳಿಗೆ, ಪುರಷರ ಮನೋವೈಕಲ್ಯಗಳು ಕಾರಣವಾಗಿರುತ್ತವೆ. ತಾಯಂದಿರು ಗಂಡು ಮಕ್ಕಳಿಗೆ ಸಭ್ಯತೆ ಹಾಗೂ ಮೌಲ್ಯಧಾರಿತ ಬದುಕು ಕಟ್ಟಿಕೊಳ್ಳುವ ಪಾಠವನ್ನು ಹೇಳಿಕೊಡಬೇಕು ಎಂದು ಮನವಿ ಮಾಡಿದ ಅವರು, ಹೆಣ್ಣು ಮಕ್ಕಳು ತಮ್ಮ ರಕ್ಷಣೆಗೆ ಬೇಕಾದ ವಿದ್ಯೆ ಕಲಿತುಕೊಳ್ಳಬೇಕು. ಪಾಲಕರು ಸಹ ಇದಕ್ಕೆ ಪ್ರೋತ್ಸಾಹ ನೀಡಬೇಕು. ಅತ್ಯಾಚಾರದಂತಹ ಘಟನೆಗಳು ನಡೆದಾಗ ಪ್ರತಿಭಟನೆ ಮಾಡಿ ಪ್ರಯೋಜನವಿಲ್ಲ. ಹೀನ ಮನಸ್ಥಿತಿಯ ಸಂತಾನವನ್ನು ನಾಶ ಮಾಡುವಂತಹ ಬಲಿಷ್ಠ ಕಾನೂನು ಅವಶ್ಯಕವಾಗಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆ ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಪ್ರವೇಶ ದ್ವಾರದಲ್ಲಿ ಅಳವಡಿಸಲಾಗಿದ್ದ ಡಿಜಿಟಲ್ ಗಡಿಯಾರ ಹಾಗೂ ಫೋಕಸ್ ಲೈಟ್‌ಗೆ ಚಾಲನೆ ನೀಡಲಾಯಿತು. ಕ್ಲಬ್ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಾಯಿತು.
ವೇದಿಕೆಯಲ್ಲಿ ಕ್ಲಬ್ ಅಧ್ಯಕ್ಷೆ ಸಂಗೀತ ದಿನೇಶ್, ಉಪಾಧ್ಯಕ್ಷೆ ತನ್ಮಯಿ ಪ್ರವೀಣ್, ಕಾರ್ಯದರ್ಶಿ ಸುಮಲತಾ ಪುರುಷೋತ್ತಮ, ಖಜಾಂಚಿ ಸೌಮ್ಯಾ ಸತೀಶ್, ಐಎಸ್‌ಒ ಅಮೃತ ಕಿರಣ್ ಇತರರು ಇದ್ದರು.