

ಮಾಸ್ಕೋ: ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಜಗತ್ತಿನ ಅತಿ ಶ್ರೀಮಂತ ರಾಜಕಾರಣಿ ಆಗಿದ್ದಾರೆ. ತಮ್ಮ ವಾರ್ಷಿಕ ವೇತನ 1,40,000 ಡಾಲರ್ ಎಂದು ಪುತಿನ್ ಅಧಿಕೃತವಾಗಿ ಹೇಳಿಕೊಂಡರೂ ಅವರ ಒಟ್ಟು ಆಸ್ತಿ ಮೌಲ್ಯ ಹಾಗೂ ಜೀವನ ಶೈಲಿಯನ್ನು ನೋಡಿದರೆ ಅದು ಬೇರೆಯೇ ಕಥೆಯನ್ನು ಹೇಳುತ್ತದೆ. ಅವರು 200 ಶತಕೋಟಿ ಡಾಲರ್ ಆಸ್ತಿ ಒಡೆಯನಾಗಿದ್ದಾರೆ.
700 ದಶಲಕ್ಷ ಡಾಲರ್ ಮೊತ್ತದ ಒಂದು ಜೆಟ್ ವಿಮಾನವನ್ನೂ ಹೊಂದಿದ್ದಾರೆ. 800 ಚದರ ಅಡಿ ಅಪಾರ್ಟ್ ಮೆಂಟ್, ಒಂದು ಟ್ರೇಲರ್ ಮತ್ತು ಮೂರು ಕಾರುಗಳಷ್ಟೇ ತಮ್ಮ ಬಳಿ ಇದೆಯೆಂದು ಪುತಿನ್ ಹೇಳುತ್ತಾರೆ. ಆದರೆ ವಾಸ್ತವವೇ ಬೇರೆಯಾಗಿದೆ. ಅವರು 200 ಶತಕೋಟಿ ಡಾಲರ್ ಸಂಪತ್ತಿನ ಒಡೆಯ ಎಂಬ ಅಂಶ 1990ರ ದಶಕದಲ್ಲೇ ಒಬ್ಬ ಪ್ರಮುಖ ಹೂಡಿಕೆದಾರರಿಂದ ಬಹಿರಂಗವಾಗಿದ್ದು ಆ ಸುದ್ದಿ ಹಾಗೆಯೇ ಮುಂದುವರಿದಿರುವುದಲ್ಲದೆ ಅದಕ್ಕೆ ಇನ್ನಷ್ಟು ರೆಕ್ಕೆಪುಕ್ಕ ಸೇರಿಕೊಂಡು ಹರಿದಾಡುತ್ತಿದೆ.
ಐಷಾರಾಮಿ ಮಹಲು
ಕಪ್ಪು ಸಮುದ್ರದ ಬೃಹತ್ ಐಷಾರಾಮಿ ಮಹಲು ಪುತಿನ್ರ ಭಾರಿ ಆಸ್ತಿಯ ಅತ್ಯಂತ ಪ್ರಮುಖ ಐಕಾನಿಕ್ ಸಂಕೇತವೆಂದು ಹೇಳಲಾಗುತ್ತದೆ. ಈ ಬಂಗ್ಲೆಯನ್ನು ‘ಪುತಿನ್ರ ಕಂಟ್ರಿ ಕಾಟೇಜ್’ ಎಂದೂ ಕರೆಯಲಾಗುತ್ತದೆ. ಅಮೃತಶಿಲೆಯ ಈಜು ಕೊಳ, ಗ್ರೀಕ್ ದೇವತೆಗಳ ಮೂರ್ತಿಗಳು, ಒಂದು ಆಂಫಿಥಿಯೇಟರ್, ಅತ್ಯಾಧುನಿಕ ಐಸ್ ಹಾಕಿ ಅಂಕಣ ಅಲ್ಲದೆ ಒಂದು ನೈಟ್ ಕ್ಲಬ್ ಕೂಡ ಈ ಮಹಲಿನಲ್ಲಿದೆ. ಇವುಗಳನ್ನು ನಿರ್ವಹಿಸುವ 40 ಸಿಬ್ಬಂದಿ ವೇತನಕ್ಕೇ ವಾರ್ಷಿಕ ಎರಡು ದಶಲಕ್ಷ ಡಾಲರ್ ವೆಚ್ಚವಾಗುತ್ತದೆ.