

ಮಾಸ್ಕೋ: ಗ್ಯಾಂಗ್ ಒಂದು ಹತ್ತು ವರ್ಷಗಳ ಹಿಂದೆ ನಡೆಸಿದ್ದ ಗುಂಡಿನ ದಾಳಿಯಲ್ಲಿ ಬುಲೆಟ್ ಒಂದು ತಲೆಹೊಕ್ಕಿ ಮೆದುಳು ಸೇರಿದ್ದರು ರಷ್ಯಾದ ಮಾಜಿ ಪೊಲೀಸ್ ಅಧಿಕಾರಿಯೊಬ್ಬರು ಇನ್ನು ಜೀವಂತವಾಗಿದ್ದು, ಸುಂದರ ವೈವಾಹಿಕ ಜೀವನ ಸಾಗಿಸುತ್ತಿದ್ದಾರೆ.
ಇಂತಹ ಪ್ರಕರಣಗಳಲ್ಲಿ 10 ಲಕ್ಷಕ್ಕೊಬ್ಬರು ಮಾತ್ರ ಬದುಕುಳಿಯಲು ಸಾಧ್ಯವೆನ್ನುತ್ತಾರೆ ವೈದ್ಯರು. ಇದನ್ನು ಅದೃಷ್ಟ ಎನ್ನಬೇಕೋ ಅಥವಾ ದುರಾದೃಷ್ಟ ಎನ್ನಬೇಕೋ? ವ್ಲಾಡಿಮಿರ್ ಕ್ರುತೊವ್ (36) ಮಾತ್ರ ಎಲ್ಲರ ಅಚ್ಚರಿಗೆ ಕಾರಣಕರ್ತರಾಗಿದ್ದಾರೆ.
ವ್ಲಾಡಿಮಿರ್ ಅವರ ಎಕ್ಸ್ರೇ ವರದಿಯಲ್ಲಿ ಗುಂಡು ತಲೆಯ ಮೇಲ್ಭಾಗದಲ್ಲಿ ಸಿಲುಕಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಆಪರೇಷನ್ ಸಮಯದಲ್ಲಿ ಅದನ್ನು ತೆಗೆದಿದ್ದರೆ ಪ್ರಾಣಕ್ಕೆ ಹಾನಿ ಸಂಭವಿಸುವ ಸಾಧ್ಯತೆ ಇದೆ ಎಂಬ ಕಾರಣಕ್ಕೆ ವೈದ್ಯರು ಅದನ್ನು ಹಾಗೆಯೇ ಬಿಟ್ಟಿದ್ದಾರೆ. ಪರಿಸ್ಥಿತಿ ಹೀಗಿರುವಾಗ ವ್ಲಾಡಿಮಿರ್ 10 ವರ್ಷಗಳಿಂದ ಬದುಕುಳಿದು ಎಲ್ಲರಂತೆ ಸಹಜವಾಗಿಯೇ ಜೀವನ ನಡೆಸುತ್ತಿರುವುದು ಎಲ್ಲರ ಹುಬ್ಬೇರಿಸದೇ ಇರದು.
ಅಂದಹಾಗೆ ವ್ಲಾಡಿಮಿರ್ ತಲೆಯಲ್ಲಿರುವುದು 7.62 ಕ್ಯಾಲಿಬರ್ ನಗನ್ ರಿವಾಲ್ವರ್ನಿಂದ ಸಿಡಿದ ಗುಂಡಾಗಿದೆ. ತಲೆಬುರುಡೆಯ ಬುಡಕ್ಕೆ ಪ್ರವೇಶಿಸಿದ ಗುಂಡು ನನ್ನ ಇಡೀ ಮೆದುಳಿನ ಮೂಲಕ ಹಾದುಹೋಯಿತು ಎಂದು ವ್ಲಾಡಿಮಿರ್ ನೋವಿನ ಕ್ಷಣದ ಅನುಭವವನ್ನು ಬಿಚ್ಚಿಟ್ಟಿದ್ದಾರೆ.
ಘಟನೆ ಹಿನ್ನೆಲೆ ಏನು?
ಹತ್ತು ವರ್ಷಗಳ ಹಿಂದೆ ಜೂಜಾಟದ ಕೇಂದ್ರದಲ್ಲಿ ದರೋಡೆವೊಂದು ನಡೆದಿತ್ತು. ಪ್ರಕರಣ ಬೆನ್ನತ್ತಿ ಖದೀಮರ ಗ್ಯಾಂಗ್ ಹಿಡಿಯಲು ಕಾರ್ಯಾಚರಣೆಗೆ ರಷ್ಯಾ ಪೊಲೀಸರು ಇಳಿದಾಗ ಸೇಂಟ್ ಪೀಟರ್ಬರ್ಗ್ನಲ್ಲಿ ಖದೀಮರ ಗ್ಯಾಂಗ್ ಮತ್ತು ಪೊಲೀಸರ ನಡುವೆ ಗುಂಡಿನ ಚಕಮಕಿ ನಡೆಯುತ್ತದೆ. ಈ ಘಟನೆಯಲ್ಲಿ 26 ವರ್ಷದ ವ್ಲಾಡಿಮಿರ್ ಸಹೋದ್ಯೋಗಿ ಡ್ಮಿಟ್ರಿ ವರೊನಿನ್ ಸಹ ಗುಂಡಿನ ದಾಳಿಗೆ ಬಲಿಯಾಗುತ್ತಾರೆ.
ಗುಂಡಿನ ದಾಳಿ ಮುಂದುವರಿಯುತ್ತಾ ಗುಂಡೊಂದು ವ್ಲಾಡಿಮಿರ್ ತಲೆಯೊಕ್ಕುತ್ತದೆ. ಅದಾದ 9 ದಿನಗಳ ನಂತರವಷ್ಟೇ ವ್ಲಾಡಿಮಿರ್ಗೆ ಎಚ್ಚವಾಗುತ್ತದೆ. ಏಕೆಂದರೆ ಅಲ್ಲಿಯವರೆಗೆ ಅವರು ಕೋಮಾಗೆ ಜಾರಿರುತ್ತಾರೆ. ಅಲೆಕ್ಸಾಂಡ್ರೊವ್ಸ್ಕಿ ಆಸ್ಪತ್ರೆಯಲ್ಲಿ ವ್ಲಾಡಿಮಿರ್ಗೆ ಆಪರೇಷನ್ ನಡೆಯುತ್ತದೆ. ಈ ವೇಳೆ ಗುಂಡು ತಲೆಬುರುಡೆಯನ್ನು ಹೊಕ್ಕಿ ಮೆದುಳಿನಲ್ಲಿ ಸೇರಿರುವುದು ವೈದ್ಯರ ಗಮನಕ್ಕೆ ಬರುತ್ತದೆ. ಆದರೆ, ಮೆದುಳಿನಿಂದ ಗುಂಡು ಹೊರತೆಗೆದರೆ ಪ್ರಾಣಕ್ಕೆ ಅಪಾಯ ಎದುರಾಗಬಹುದು ಎಂದರಿತು ಗುಂಡನ್ನು ವೈದ್ಯರು ಅಲ್ಲಿಯೇ ಬಿಡುತ್ತಾರೆ.
ಸದ್ಯ ಆರೋಗ್ಯವಾಗೇ ಇರುವ ವ್ಲಾಡಿಮಿರ್ ಮರಿನಾ (36) ಎಂಬಾಕೆಯನ್ನು ಮದುವೆಯಾಗಿ ಸುಂದರ ವೈವಾಹಿಕ ಜೀವನವನ್ನು ನಡೆಸುತ್ತಿದ್ದಾರೆ. ಅವರ ಸುಖ ದಾಂಪತ್ಯಕ್ಕೆ ಸಾಕ್ಷಿಯಾಗಿ 5 ತಿಂಗಳ ಹಿಂದಷ್ಟೇ ಹೆಣ್ಣು ಮಗಳು ಜನಿಸಿದ್ದಾಳೆ.
ಅಂದಹಾಗೆ ಖದೀಮರ ಗ್ಯಾಂಗ್ ಹಾಗೂ ಪೊಲೀಸರ ನಡುವೆ ಶೂಟೌಟ್ ನಡೆದಿದ್ದು, 2010 ಅಕ್ಟೋಬರ್ ತಿಂಗಳಲ್ಲಿ. ಹತ್ತು ವರ್ಷಗಳಾಗಿದ್ದು, ವ್ಲಾಡಿಮಿರ್ ಇನ್ನು ಜೀವಂತವಾಗಿದ್ದು, ಎಲ್ಲರ ಅಚ್ಚರಿಗೆ ಪ್ರಮುಖ ಕಾರಣರಾಗಿದ್ದಾರೆ. (ಏಜೆನ್ಸೀಸ್)