

ಬೆಂಗಳೂರು: ನಡುರಸ್ತೆಯಲ್ಲಿಯೇ ಯುವಕನನ್ನು ನಗ್ನಗೊಳಿಸಿ ಹಲ್ಲೆಗೈದು ವಿಡಿಯೋ ಮಾಡಿ ಅಟ್ಟಹಾಸ ಮೆರೆದಿದ್ದ ಪ್ರಕರಣ ಸಂಬಂಧ ಬಂಧಿಸಲು ತೆರಳಿದ್ದ ಪೊಲೀಸರ ಮೇಲೆಯೇ ಚಾಕುವಿನಿಂದ ಹಲ್ಲೆ ಮಾಡಿದ ರೌಡಿಶೀಟರ್ ಕಾಲಿಗೆ ಗುಂಡು ಹಾರಿಸಿ ಪಶ್ಚಿಮ ವಿಭಾಗದ ಪೊಲೀಸರು ಬಂಧಿಸಿದ್ದಾರೆ.
ರಾಜಗೋಪಾಲನಗರ ಠಾಣೆ ರೌಡಿಶೀಟರ್ ಪವನ್ ಅಲಿಯಾಸ್ ಕಡುಬು(೨೮) ಗುಂಡೇಟು ತಿಂದವನು. ಪವನ್ ಹಾಗೂ ಈತನ ಹಲ್ಲೆಯಿಂದ ಗಾಯಗೊಂಡಿರುವ ಕಾಮಾಕ್ಷಿಪಾಳ್ಯ ಠಾಣೆ ಹೆಡ್‌ಕಾನ್ಸ್‌ಟೆಬಲ್ ವೆಂಕಟೇಶ್ ಇಬ್ಬರನ್ನೂ ಚಿಕಿತ್ಸೆಗೆ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದು, ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದ್ವೇಷದಿಂದ ಹಲ್ಲೆ ಮಾಡಿದ್ದ:
ರೌಡಿ ಪವನ್ ಹಳೇಯ ದ್ವೇಷದ ಹಿನ್ನೆಲೆಯಲ್ಲಿ ರಘು ಎಂಬಾನನ ಹುಡುಕಿಕೊಂಡು ಸೆ.೧೫ರಂದು ರಾತ್ರಿ ೮ ಗಂಟೆಗೆ ಸುಂಕದಕಟ್ಟೆಯ ಶ್ರೀನಿವಾಸನಗರಕ್ಕೆ ಬಂದಿದ್ದಾನೆ. ಈ ವೇಳೆ ರಘು ಸ್ನೇಹಿತ ವಿಶ್ವಾಸಗೆ ರಘು ಎಲ್ಲಿ ಎಂದು ಕೇಳಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ. ಬಳಿಕ ಮಚ್ಚಿನಿಂದ ವಿಶ್ವಾಸ್ ಮೇಲೆ ಹಲ್ಲೆ ಮಾಡಿ, ರಘು ಸಿಕ್ಕರೆ ಹೇಳು. ಆತನನ್ನು ಕೊಲೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿ ತೆರಳಿದ್ದಾನೆ. ಈ ಸಂಬಂಧ ರಘು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಹಿಂದೆ ಕ್ರಿಕೆಟ್ ಆಡುವ ವಿಚಾರಕ್ಕೆ ರೌಡಿ ಪವನ್, ನಾಗರ್ಜುನ್ ಜತೆಗೆ ಗಲಾಟೆ ಮಾಡಿದ್ದ. ಪ್ರಕರಣವೊಂದರ ಸಂಬಂಧ ರೌಡಿ ಪವನ್‌ಗಾಗಿ ಪೊಲೀಸರು ಹುಡುಕಾಡುತ್ತಿದ್ದರು. ಈ ವೇಳೆ ನಾಗಾರ್ಜುನ್ ನೀಡಿದ ಮಾಹಿತಿ ಮೇರೆಗೆ ಪೊಲೀಸರು ರೌಡಿ ಪವನ್‌ನನ್ನು ಬಂಧಿಸಿ ಜೈಲಿಗಟ್ಟಿದ್ದರು. ಬಳಿಕ ಜಾಮೀನು ಪಡೆದು ಹೊರಗೆ ಬಂದಿದ್ದ ಪವನ್, ದ್ವೇಷದ ಹಿನ್ನೆಲೆಯಲ್ಲಿ ಜು.೪ರಂದು ನಾಗರ್ಜುನ್‌ನನ್ನು ಅಡ್ಡಗಟ್ಟಿ ನಗ್ನಗೊಳಿಸಿ ಹಲ್ಲೆ ನಡೆಸಿ ಮೊಬೈಲ್‌ನಲ್ಲಿ ವಿಡಿಯೋ ಮಾಡಿ ಬಳಿಕ ಬೆದರಿಕೆ ಹಾಕಿ ಬಿಟ್ಟು ಕಳುಹಿಸಿದ್ದ. ಈ ಸಂಬಂಧ ನಾಗಾರ್ಜುನ್ ಯಾವುದೇ ದೂರು ನೀಡಿರಲಿಲ್ಲ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ ನಾಗಾರ್ಜುನ್ ಕಾಮಾಕ್ಷಿಪಾಳ್ಯ ಠಾಣೆಗೆ ದೂರು ನೀಡಿದ್ದ.