ದೇಶ ಕಟ್ಟುವಲ್ಲಿ ಯುವಜನರ ಪಾತ್ರ ಪ್ರಮುಖ

SAHAYDRI
ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಸಹ್ಯಾದ್ರಿ ಕಲಾ ಪರಿಷತ್‌ನ ಸಮಾರೋಪ ಸಮಾರಂಭವನ್ನು ಡಾ.ಕೆ.ಪ್ರಸನ್ನಕುಮಾರ್ ಉದ್ಘಾಟಿಸಿದರು. ವಿಜಯಾ ಶ್ರೀಧರ್, ಕೆ.ಎನ್.ಮಂಜುನಾಥ್, ಡಾ. ಸೈಯದ್ ಸನಾವುಲ್ಲಾ, ಎಚ್.ರಂಗನಾಥ್, ಎಚ್.ಪಿ.ಮಂಜುನಾಥ್, ಡಾ. ಕೆ.ಚಂದ್ರಪ್ಪ ಇತರರಿದ್ದರು.
Published on

ಶಿವಮೊಗ್ಗ: ಭಾರತ ಇಂದು ಸಂದಿಗ್ಧ ಸ್ಥಿತಿಯಲ್ಲಿದೆ. ಇಂತಹ ಸಂದರ್ಭದಲ್ಲಿ ನಮ್ಮ ಯುವಕರು ದೇಶಕ್ಕಾಗಿ ಸೇವೆ ಮಾಡಲು ಸಿದ್ಧರಾಗಿರಬೇಕು ಎಂದು ತುಮಕೂರು ವಿವಿ ಪರೀಕ್ಷಾಂಗ ವಿಭಾಗದ ಕುಲಸಚಿವ ಡಾ. ಕೆ.ಪ್ರಸನ್ನಕುಮಾರ್ ಹೇಳಿದರು.

ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಗುರುವಾರ ಸಹ್ಯಾದ್ರಿ ಕಲಾ ಪರಿಷತ್‌ನ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಇಂದು ಯುದ್ಧದ ಕಾರ್ಮೋಡ ಕವಿದಿದೆ. ಕದನ ವಿರಾಮ ಘೋಷಣೆಯಾಗಿರುವುದು ನಿಜ. ಆದರೆ ಇದು ಶಾಶ್ವತವಲ್ಲ. ಭಾರತ ನಿರ್ಲಿಪ್ತ ನೀತಿ ಅನುಸರಿಸುತ್ತಿದೆ. ಆದರೆ ತಟಸ್ಥವಾಗಿಲ್ಲ ಎಂದರು.

ದೇಶ ಕಟ್ಟುವಲ್ಲಿ ಯುವಜನರ ಪಾತ್ರ ಬಹಳ ಮುಖ್ಯವಾಗಿದೆ. ಯುದ್ಧ ಎನ್ನುವುದು ಕೊನೆಯ ಅಸ್ತ್ರ. ನಮಗೆ ಗಾಂಧೀಜಿ ಅನುಸರಿಸಿದಷ್ಟು ಶಾಂತಿ ಬೇಕಿಲ್ಲ. ಯುದ್ಧ ಕೆಟ್ಟದ್ದು ಎಂಬುದು ಎಲ್ಲರಿಗೂ ಗೊತ್ತಿದೆ. ಆದರೆ ಅನಿವಾರ್ಯ ಸ್ಥಿತಿಯಲ್ಲಿ ಯುದ್ಧ ಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಸಾಹಿತಿ ವಿಜಯಾ ಶ್ರೀಧರ್ ಮಾತನಾಡಿ, ಲಲಿತ ಕಲೆಗಳಲ್ಲಿ ನಮ್ಮ ವಿದ್ಯಾರ್ಥಿಗಳು ಆಸಕ್ತಿ ವಹಿಸಬೇಕು. ಸಾಹಿತ್ಯ ಮತ್ತು ಸಂಗೀತಕ್ಕೆ ಶಾಂತಿ ನೀಡುವ ಗುಣವಿದೆ. ಮನೋವಿಪ್ಲವ, ತಲ್ಲಣಗಳಿಗೆ ಮದ್ದಾಗುತ್ತದೆ. ಅದರಲ್ಲೂ ನೃತ್ಯದಂತಹ ಕಾರ್ಯಕ್ರಮಗಳಿಂದ ಆತ್ಮದ ಉದ್ಧಾರವಾಗುತ್ತವೆ. ಭರತನಾಟ್ಯವನ್ನು ಮಕ್ಕಳು ಕಲಿಯಬೇಕೆಂದರು.

ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಆರುಂಡಿ ಶ್ರೀನಿವಾಸಮೂರ್ತಿ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಪ್ರಾಚಾರ್ಯ ಡಾ. ಸೈಯದ್ ಸನಾವುಲ್ಲಾ ಅಧ್ಯಕ್ಷತೆ ವಹಿಸಿದ್ದರು. ಕುವೆಂಪು ವಿವಿ ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಜಿ.ಎಸ್. ನಾಗರಾಜ್, ಹಣಕಾಸು ಅಧಿಕಾರಿ ಜಿ.ಬಂಗಾರಪ್ಪ, ಸಹಾಯಕ ಕುಲಸಚಿವ ಎಚ್.ರಂಗನಾಥ್, ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಕೆ. ಚಂದ್ರಪ್ಪ, ಐಕ್ಯುಎಸಿ ಮುಖ್ಯಸ್ಥ ಎಚ್.ಪಿ.ಮಂಜುನಾಥ್, ಸಹ್ಯಾದ್ರಿ ಕಲಾ ಪರಿಷತ್ ಉಪಾಧ್ಯಕ್ಷ ರಾಧಾಕೃಷ್ಣ ಮುಂತಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net