

ಬೀರೂರು: ಮಕ್ಕಳಿಗೆ ಜ್ಞಾನ ಸಾಮರ್ಥ್ಯ ಕಲಿಸುವ ಶಿಕ್ಷಕರು ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು,ಅವರನ್ನು ಒತ್ತಡ ಮುಕ್ತರನ್ನಾಗಿ ಮಾಡಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಲಭಿಸುವಂತೆ ಮಾಡಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.
ಪಟ್ಟಣದ ಗುರುಭವನದಲ್ಲಿ ಶನಿವಾರ ನಡೆದ ಶೈಕ್ಷಣಿಕ ಕಾರ್ಯಾಗಾರ ಮತ್ತು ಶಿಕ್ಷಕರ ಸಂವಹನ ಹಾಗೂ ನೂತನ ಶಾಸಕರಿಗೆ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ದೇಶ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಮುಖ್ಯ. ಸರ್ಕಾರ ಶಿಕ್ಷಣಕ್ಕಾಗಿ ಬಹಳಷ್ಟು ಅನುದಾನ ಮೀಸಲಿಟ್ಟರೂ ಶೈಕ್ಷಣಿಕ ಅಭಿವೃದ್ಧಿ ಸಾಧ್ಯವಾಗುತ್ತಿಲ್ಲ. ಆದರೂ ಕೇವಲ ಶೇ.17ರಷ್ಟಿದ್ದ ಸಾಕ್ಷರತೆ ಇಂದು ಶೇ.77 ರಷ್ಟಾಗಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಗಂಗಾಧರಪ್ಪ, ಸರ್ವರೂ ಜ್ಞಾನವನ್ನು ಪಡೆದಾಗ ಮಾತ್ರ ಸಮಾಜದ ಅಭವೃದ್ಧಿ ಸಾಧ್ಯ. ಮನುಷ್ಯನಲ್ಲಿ ಅಡಗಿರುವ ಪ್ರತಿಭೆ ಹೊರತೆಗೆಯುವುದೇ ಶಿಕ್ಷಣ. ಅದು ಮಕ್ಕಳ ಸರ್ವಾಂಗೀಣ ಬೆಳವಣಿಗೆಯನ್ನು ತೋರುತ್ತದೆ. ಒಬ್ಬ ಸಾಧಕನ ಹಿಂದೆ ಶಿಕ್ಷಕರ ಪಾತ್ರ ಅಡಗಿರುತ್ತದೆ. ಆದ್ದರಿಂದ ಎಲ್ಲ ಶಿಕ್ಷಕರು ಉತ್ತಮ ಪ್ರಜೆಗಳನ್ನು ನೀಡುವ ಶಿಕ್ಷಕರಾಗಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಭೈರೇಗೌಡ ಮಾತನಾಡಿ, ಇಂದು ಶಿಕ್ಷಕರು ತ್ತಡದಲ್ಲಿ ಕಾರ್ಯನಿರ್ವಹಿಸುವಂತಾಗಿದೆ. ಮಕ್ಕಳಿಗೆ ಪಾಠ ಮಾಡುವ ಜತೆಗೆ ಚುನಾವಣೆ, ಬಿಎಲ್‌ಒ ಹೀಗೆ ಬೇರೆ ಕರ್ತವ್ಯ ಸಲ್ಲಿಸುವಂತೆ ಇಲಾಖೆ ಒತ್ತಡ ಹಾಕುತ್ತಿದೆ. ಇದನ್ನು ಅಧಿವೇಶನದ ವೇಳೆ ಚರ್ಚಿಸಬೇಕು ಎಂದು ಮನವಿ ಮಾಡಿದರು.