ಹವಾಮಾನದ ಪಾತ್ರ ಅತ್ಯಲ್ಪ: ಹಾರ್ವರ್ಡ್ ವಿವಿಯಿಂದ ಸೋಂಕು ಪಸರಿಸುವಿಕೆ ಅಧ್ಯಯನ

corona-19
Published on

ವಾಷಿಂಗ್ಟನ್: ಕರೊನಾ ವೈರಸ್ ಹರಡುವಿಕೆ ನಿಯಂತ್ರಣ ಮತ್ತು ವಾತಾವರಣದ ಉಷ್ಣತೆ ನಡುವಿನ ಸಂಬಂಧದ ಬಗ್ಗೆ ಹಾರ್ವರ್ಡ್ ವಿಶ್ವ ವಿದ್ಯಾಲಯ ಹೊಸ ಅಧ್ಯಯನವೊಂದನ್ನು ನಡೆಸಿದೆ.

25 ಡಿಗ್ರಿ ಸೆಲ್ಷಿಯಸ್​ಗಿಂತ ಹೆಚ್ಚಿನ ಉಷ್ಣತೆ ಮತ್ತು ವೈರಸ್​ನ ಮರುಉತ್ಪಾದನೆಯ ನಡುವೆ ಯಾವುದೇ ಸಂಬಂಧವಿಲ್ಲ. ಪ್ರತಿಯೊಂದು ಡಿಗ್ರಿ ಸೆಲ್ಷಿಯಸ್ ಹೆಚ್ಚಳದೊಂದಿಗೆ ವೈರಸ್ ಉತ್ಪತ್ತಿ ಪ್ರಮಾಣ ಶೇಕಡಾ 3.1ರಷ್ಟು ಮಾತ್ರವೇ ಕಡಿಮೆಯಾಗುತ್ತದೆ. ಆದ್ದರಿಂದ ವೈರಾಣು ಹರಡುವಲ್ಲಿ ಹವಾಮಾನ ಹೆಚ್ಚಿನ ಪಾತ್ರ ವಹಿಸದು ಎಂದು ಅಧ್ಯಯನ ತಿಳಿಸಿದೆ.

ವಾತಾವರಣದ ಆರ್ದ್ರತೆಯ ಹೆಚ್ಚಿನ ಮಟ್ಟವು 25 ಡಿಗ್ರಿ ಸೆಲ್ಷಿಯಸ್​ಗಿಂತ ಹೆಚ್ಚಿನ ಉಷ್ಣತೆಯ ಋಣಾತ್ಮಕ ಪರಿಣಾಮವನ್ನು ಬಲಪಡಿಸುತ್ತದೆ ಎಂದು ಅಧ್ಯಯನ ತೋರಿಸಿದೆ. ಆದರೆ ಹವಾಮಾನವೊಂದೇ ವೈರಾಣು ಹರಡುವುದನ್ನು ಸಂಪೂರ್ಣವಾಗಿ ತಡೆಯಲು ಸಮರ್ಥವಾಗದು. ಸಾಂಕ್ರಾಮಿಕತೆಯನ್ನು ಸ್ವಲ್ಪ ಮಟ್ಟಿಗೆ ನಿಯಂತ್ರಿಸಲು ನೆರವಾಗಬಹುದು ಎಂಬುದು ಅಧ್ಯಯನದ ತಿರುಳಾಗಿದೆ.

ಈ ಅಧ್ಯಯನದ ಫಲಿತಾಂಶವನ್ನು ಇನ್ನೂ ತಜ್ಞರು ಸಂಪೂರ್ಣವಾಗಿ ಪರಿಶೀಲಿಸಿಲ್ಲ. ವೈರಾಣು ವ್ಯಾಪಿಸುವ ಅಪಾಯ ಕಡಿಮೆಯಾಗಬೇಕಾದರೆ ಮರುಉತ್ಪಾದನೆಯ ಸಂಖ್ಯೆ ಶೇಕಡಾ 70ಕ್ಕಿಂತ ಕಡಿಮೆಯಾಗಿರಬೇಕು. ಜಾಗತಿಕವಾಗಿ ಆ ಪ್ರಮಾಣ ಶೇಕಡಾ 50ಕ್ಕಿಂತ ಕಡಿಮೆಗೆ ಇಳಿಯುವುದು ತುಂಬಾ ವಿರಳ. ಈ ಅಂಶವನ್ನು ಪರಿಗಣಿಸಿದರೆ ದೆಹಲಿಯಲ್ಲಿ ಆಗಸ್ಟ್ ವರೆಗೆ ಮರುಉತ್ಪತ್ತಿ ಸಂಖ್ಯೆಯ ಇಳಿಕೆ ಶೇಕಡಾ 47ರಿಂದ ಶೇಕಡಾ 16ರ ನಡುವೆ, ಮುಂಬೈಯಲ್ಲಿ ಶೇ. 43ರಿಂದ ಶೇ. 23ವರೆಗೆ, ಅಹಮದಾಬಾದ್​ನಲ್ಲಿ ಶೇ. 43ರಿಂದ ಶೇ. ಶೇ. 26 ಮತ್ತು ಇಂದೋರ್​ನಲ್ಲಿ ಶೇ. 36ರಿಂದ ಶೇ. 8ರ ನಡುವೆ ವ್ಯತ್ಯಾಸವಾಗಬೇಕು.

2ನೇ ಬಾರಿ ಸೋಂಕಿಗೆ ಒಳಗಾದವರಿಂದ ಕರೊನಾ ಹರಡುವುದಿಲ್ಲ: ಗುಣಮುಖರಾದ ವ್ಯಕ್ತಿಗೆ ಮತ್ತೊಮ್ಮೆ ಕರೊನಾ ಸೋಂಕು ತಗುಲಿದರೆ ಆ ವ್ಯಕ್ತಿಯಿಂದ ಸೋಂಕು ಹರಡುವುದಿಲ್ಲ ಎಂದು ದಕ್ಷಿಣ ಕೊರಿಯಾದ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರ ತಿಳಿಸಿದೆ. ಕೇಂದ್ರವು ಎರಡನೇ ಬಾರಿ ಸೋಂಕಿಗೆ ಒಳಗಾಗಿರುವ 285 ರೋಗಿಗಳ ಅಧ್ಯಯನ ನಡೆಸಿದ್ದು, ಅವರಿಂದ ಬೇರೆ ಯಾರಿಗೂ ಸೋಂಕು ಹರಡದಿರುವುದನ್ನು ಗುರುತಿಸಿದೆ. ಆ ಸೋಂಕಿತರಿಂದ ಸಂಗ್ರಹಿಸಲಾಗಿರುವ ಸೋಂಕಿನಲ್ಲಿ ಬೆಳವಣಿಗೆ ಹೊಂದುವಂತ ಜೀವಲಕ್ಷಣ ಉಳಿದಿಲ್ಲ ಎನ್ನುವುದು ಅಧ್ಯಯನದಲ್ಲಿ ತಿಳಿದುಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net