ಚೇತರಿಕೆಯ ಹಾದಿ; ಸಮಸ್ಯೆಗಳೂ ಪರಿಹಾರ ಕಾಣಲಿ...

Editorial
Published on

ಕೋವಿಡ್ ಸಂಕಟದ ದಟ್ಟ ಕಾಮೋಡಗಳು ವ್ಯಾಪಿಸಿರುವಾಗಲೇ, ದೇಶದ ಆರ್ಥಿಕತೆ ಚೇತರಿಕೆ ಕಂಡುಕೊಂಡಿರುವುದು ಸಮಾಧಾನಕರ ಸಂಗತಿ. ಲಾಕ್​ಡೌನ್ ಪರಿಣಾಮ ಆರ್ಥಿಕ ಚಟುವಟಿಕೆಗಳೆಲ್ಲ ಸ್ತಬ್ಧವಾಗಿದ್ದರಿಂದ ದೇಶ ಅಪಾರ ಹಾನಿಯನ್ನೇನೋ ಅನುಭವಿಸಿತು; ಆ ಸಂಕಟದಿಂದ ಅಷ್ಟೇ ಬೇಗ ಸಾವರಿಸಿಕೊಂಡು ಸುಧಾರಣೆ ಹಾದಿಯತ್ತ ಸಾಗುತ್ತಿರುವುದು ಉತ್ತಮ ಬೆಳವಣಿಗೆ. ಆರ್ಥಿಕತೆ ಚೇತರಿಕೆ ಕಾಣುತ್ತಿರುವ ಪ್ರಬಲ ಸಂಕೇತವಾಗಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ಮಾರ್ಚ್​ನಲ್ಲಿ ದಾಖಲೆ ಪ್ರಮಾಣದಲ್ಲಿ ಸಂಗ್ರಹವಾಗಿದೆ. ಮಾರ್ಚ್​ನಲ್ಲಿ -ಠಿ;1,23,902 ಕೋಟಿ (ದಿನಕ್ಕೆ ಸರಾಸರಿ -ಠಿ;3996 ಕೋಟಿ) ಸಂಗ್ರಹವಾಗಿದ್ದು, ಇದು 2020ರ ಮಾರ್ಚ್​ಗೆ ಹೋಲಿಸಿದರೆ ಶೇಕಡ 27ರಷ್ಟು ಹೆಚ್ಚು (ಆಗ ಸಂಗ್ರಹವಾಗಿದ್ದು -ಠಿ; 97,590 ಕೋಟಿ). ಕಳೆದ ಆರು ತಿಂಗಳುಗಳಿಂದ ನಿರಂತರವಾಗಿ ಜಿಎಸ್​ಟಿ ಸಂಗ್ರಹ 1 ಲಕ್ಷ ಕೋಟಿ ದಾಟುತ್ತಿರುವುದು ಗಮನಾರ್ಹ. ಈ ಬಾರಿ ರಫ್ತು ಉತ್ಪನ್ನಗಳಿಂದ ಬಂದ ಜಿಎಸ್​ಟಿಯೇ ಶೇಕಡ 70ರಷ್ಟು ಬೆಳವಣಿಗೆ ದಾಖಲಿಸಿದೆ. ನಕಲಿ ಕಂಪನಿಗಳು ಮತ್ತು ಬಿಲ್​ಗಳ ವಿರುದ್ಧ ಕೇಂದ್ರ ಸರ್ಕಾರ ಕೈಗೊಂಡ ಕಠಿಣ ಕ್ರಮವೂ ತೆರಿಗೆ ಸಂಗ್ರಹ ಹೆಚ್ಚಳಕ್ಕೆ ಒಂದು ಕಾರಣ.

ಈ ನಡುವೆ ಕೈಗಾರಿಕಾ ರಂಗ ಸೇರಿ ಹಲವು ವಲಯಗಳು ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಅವುಗಳ ಪರಿಹಾರದ ನಿಟ್ಟಿನಲ್ಲೂ ಕೇಂದ್ರ ಸರ್ಕಾರ ಸೂಕ್ತ ಕ್ರಮಕ್ಕೆ ಮುಂದಾಗಬೇಕಾದ ಅಗತ್ಯವಿದೆ. ಕಲ್ಲಿದ್ದಲು, ಕಚ್ಚಾತೈಲ, ನೈಸರ್ಗಿಕ ಅನಿಲ ಸೇರಿದಂತೆ ಎಂಟು ಮೂಲಸೌಕರ್ಯ ವಲಯಗಳ ಬೆಳವಣಿಗೆ ಕುಸಿತ ದಾಖಲಿಸಿರುವುದು ಕಳವಳಕಾರಿ ಬೆಳವಣಿಗೆ. 2020ರ ಫೆಬ್ರವರಿಯಲ್ಲಿ ಶೇಕಡ 6.4ರಷ್ಟಿದ್ದ ಈ ವಲಯಗಳ ಬೆಳವಣಿಗೆ, 2021ರ ಫೆಬ್ರವರಿಯಲ್ಲಿ ಶೇ.4.6ಕ್ಕೆ ಇಳಿದಿದೆ. ‘ಲಾಕ್​ಡೌನ್ ಪರಿಣಾಮ ಕುಸಿದಿದ್ದ ಭಾರತದ ಆರ್ಥಿಕತೆ ಆಶ್ಚರ್ಯಕರವಾಗಿ ಪುಟಿದೆದ್ದಿದೆ. ಆದರೆ, ಸಂಕಷ್ಟದಿಂದ ಇನ್ನೂ ಪಾರಾಗಿಲ್ಲ’ ಎಂಬ ವಿಶ್ವಬ್ಯಾಂಕಿನ ಇತ್ತೀಚಿನ ವರದಿಯನ್ನೂ ಕಡೆಗಣಿಸುವಂತಿಲ್ಲ. ಕರೊನಾ ಸೋಂಕಿನ ಪರಿಣಾಮ ಉತ್ಪಾದನೆ ವಲಯ ಸಂಕಷ್ಟಕ್ಕೆ ಒಳಗಾಗಿದೆ, ಮುಖ್ಯವಾಗಿ, ಕೈಗಾರಿಕೆಗಳಿಗೆ ಕಚ್ಚಾವಸ್ತು ಲಭ್ಯತೆ ಸವಾಲಾಗಿ ಪರಿಣಮಿಸಿದೆ. ಉತ್ಪಾದನೆ ಆರಂಭಿಸಿದ್ದರೂ, ಕಚ್ಚಾವಸ್ತುಗಳು ಸಿಗದ ಪರಿಣಾಮ ಉದ್ಯಮಗಳು ದಿಕ್ಕುಕಾಣದಂತಾಗಿವೆ. ಇದು ಹೀಗೆ ಮುಂದುವರಿದರೆ ಬೆಲೆಏರಿಕೆಯ ಬಿಸಿ ಹೆಚ್ಚುವುದರಲ್ಲಿ ಅನುಮಾನವಿಲ್ಲ. ಪೂರೈಕೆ ಸರಪಣಿ ಅಬಾಧಿತವಾಗಿದ್ದರೆ ಮಾತ್ರ ಉದ್ಯಮವಲಯ ಸುಸ್ಥಿರ ಬೆಳವಣಿಗೆ ಕಾಣಲು, ಬೇಡಿಕೆಗಳನ್ನು ಪೂರೈಸಲು ಸಾಧ್ಯ. ಉತ್ಪನ್ನಗಳ ತಯಾರಿಕೆಗೆ ಕಚ್ಚಾವಸ್ತುಗಳೇ ಸಿಗದಿದ್ದರೆ ಕಾರ್ಖಾನೆಗಳು ಪರಿಹಾರಕ್ಕಾಗಿ ಯಾರನ್ನು ಅವಲಂಬಿಸಬೇಕು?

ಬಂಡವಾಳ ಹೂಡಿಕೆ ಆಕರ್ಷಿಸಲು, ಚೀನಾದಲ್ಲಿ ನೆಲೆಸಿರುವ ಉದ್ಯಮಗಳನ್ನು ಭಾರತಕ್ಕೆ ಕರೆತರಲು ಸರ್ಕಾರ ಯತ್ನಿಸುತ್ತಿದೆಯಾದರೂ, ಈಗಾಗಲೇ ನೆಲೆ ಕಂಡಿರುವ ಉದ್ಯಮಗಳು ಅವುಗಳ ಚಟುವಟಿಕೆಗಳನ್ನು ಸಂಕಷ್ಟ, ಅಡ್ಡಿಗಳು ಇಲ್ಲದೆ ಮುಂದುವರಿಸುವಂಥ ವಾತಾವರಣ ನಿರ್ಮಾಣ ಮಾಡಿಕೊಡಬೇಕು. ಒಂದು ವಲಯದಲ್ಲಿ ಬೆಲೆಯೇರಿಕೆ ಸಂಭವಿಸಿದರೂ, ಅದರಿಂದ ಇತರ ಕ್ಷೇತ್ರಗಳ ಮೇಲೂ ವ್ಯತಿರಿಕ್ತ ಪರಿಣಾಮವಾಗುತ್ತದೆ. ಹಾಗಾಗಿ, ಇಲ್ಲಿನ ಸಮಸ್ಯೆಗಳನ್ನು ಕೂಡ ಆದ್ಯತೆಯ ಮೇಲೆ ಬಗೆಹರಿಸುವ ಇಚ್ಛಾಶಕ್ತಿಯನ್ನು ಸರ್ಕಾರ ಪ್ರದರ್ಶಿಸಲಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net