

ಭಯೋತ್ಪಾದನೆ ರಫ್ತು ಮಾಡುವ ಪಾಕಿಸ್ತಾನಕ್ಕೆ ಇತ್ತೀಚಿನ ದಿನಗಳಲ್ಲಿ ಭಾರತ ದಿಟ್ಟ ಉತ್ತರ ನೀಡಿರುವುದಲ್ಲದೆ, ಪ್ರಮುಖ ಭಯೋತ್ಪಾದಕ ಸಂಘಟನೆಗಳಿಗೆ ಮರ್ವಘಾತ ನೀಡಿದೆ. ಉಗ್ರರ ಹಣಕಾಸಿನ ಮೂಲಗಳಿಗೂ ಕೊಡಲಿಪೆಟ್ಟು ಬಿದ್ದಿದೆ. ಪಾಕ್ ಈಗ ಹತಾಶವಾಗಿದೆ. ಆಕ್ರಮಣಕಾರಿ ಚೀನಾಕ್ಕೂ ಭಾರತ ತಿರುಗೇಟು ನೀಡಿದೆ. ಹಲವು ರಾಷ್ಟ್ರಗಳು ಕೂಡ ಡ್ರಾ್ಯಗನ್ ರಾಷ್ಟ್ರದ ವಿರುದ್ಧ ತಿರುಗಿ ಬಿದ್ದಿವೆ. ವಿಸ್ತರಣೆಯ ದಾಹಕ್ಕೆ ಪೆಟ್ಟು ಬಿದ್ದಿರುವುದರಿಂದ ಚೀನಾ ಕೂಡ ಚಡಪಡಿಸುತ್ತಿದೆ. ಪಾಕಿಸ್ತಾನದ ಹೆಗಲಿನ ಮೇಲೆ ಅದು ಬಂದೂಕಿಟ್ಟು, ಸದಾ ಭಾರತವಿರೋಧಿ ಚಟುವಟಿಕೆಗಳಿಗೆ ಚಿತಾವಣೆ ನೀಡುತ್ತದೆ ಎಂಬುದು ಗೊತ್ತಿರುವಂಥದ್ದೇ. ಆದರೆ, ತೀರಾ ಆಘಾತಕಾರಿ ಸಂಗತಿ ಎಂದರೆ ಚೀನಾ ಮತ್ತು ಪಾಕಿಸ್ತಾನ ಎರಡೂ ಸೇರಿ ಭಾರತ ಮತ್ತು ಪಾಶ್ಚಿಮಾತ್ಯ ರಾಷ್ಟ್ರಗಳ ವಿರುದ್ಧ ಜೈವಿಕ ಯುದ್ಧಕ್ಕೆ ತಯಾರಿ ನಡೆಸಿವೆ. ಬೇಹುಗಾರಿಕಾ ಮೂಲಗಳಿಂದ ಈ ವಿಷಯ ದೃಢಪಟ್ಟಿರುವುದಲ್ಲದೆ, ಚೀನಾ- ಪಾಕ್ನ ಅಪಾಯಕಾರಿ, ವಿನಾಶಕಾರಿ ಹೆಜ್ಜೆಯ ಬಗ್ಗೆ ರಕ್ಷಣಾ ತಜ್ಞರೊಬ್ಬರು ವಿಸ್ಕೃತ ಲೇಖನ ಬರೆದಿದ್ದಾರೆ.
ಜೈವಿಕಾಸ್ತ್ರಗಳನ್ನು ತಯಾರಿಸುವ ಬಗ್ಗೆ ಚೀನಾ ಮತ್ತು ಪಾಕಿಸ್ತಾನದ ನಡುವೆ ಮೂರು ವರ್ಷ ಅವಧಿಗೆ ರಹಸ್ಯ ಒಪ್ಪಂದ ಏರ್ಪಟ್ಟಿದೆ. ಅಂಥ್ರ್ಯಾಕ್ಸ್ನಂಥ ವೈರಾಣುಗಳನ್ನು ಶಸ್ತ್ರಗಳ ರೂಪದಲ್ಲಿ ಬಳಸಲು ಅವು ಮುಂದಾಗಿವೆ. ಈ ಕುರಿತಾದ ಮಾಹಿತಿಯನ್ನು ಚೀನಾ ಪಾಕ್ನ ವಿಜ್ಞಾನಿಗಳೊಂದಿಗೆ ಹಂಚಿಕೊಂಡಿದೆ. ಪಾಕ್ ನೆಲದಲ್ಲೇ ವೈರಾಣು ಅಸ್ತ್ರಗಳನ್ನು ತಯಾರಿಸುವ ಕೆಲಸ ನಡೆಯಲಿದೆ. ಆದರೆ, ವೈರಸ್ ಹೊರಗೆ ಬಂದರೆ ಅದನ್ನು ತಡೆಯುವುದು ಹೇಗೆ ಎಂಬುದೇ ಪಾಕಿಸ್ತಾನಕ್ಕೆ ಗೊತ್ತಿಲ್ಲದಿರುವುದರಿಂಧ ಇಂಥ ಜೈವಿಕಾಸ್ತ್ರಗಳು ಭಾರಿ ಹಾನಿ ಮಾಡಬಲ್ಲವು ಎಂದು ಎಚ್ಚರಿಸಿದ್ದಾರೆ ರಕ್ಷಣಾ ತಜ್ಞರು. ಈಗಾಗಲೇ ಇಡೀ ವಿಶ್ವ ಕರೊನಾ ಸೋಂಕಿನ ವಿರುದ್ಧ ಹೋರಾಡುತ್ತ, ಹಲವು ಬಗೆಯ ನಷ್ಟಗಳನ್ನು ಅನುಭವಿಸಿದೆ. ಜಾಗತಿಕವಾಗಿ ಸೋಂಕಿತರ ಸಂಖ್ಯೆ 1.50 ಕೋಟಿ ದಾಟಿದ್ದು, ಅಮೆರಿಕ, ಬ್ರೆಜಿಲ್, ಭಾರತ ಸೇರಿ ಹಲವು ರಾಷ್ಟ್ರಗಳಲ್ಲಿ ಸೋಂಕು ನಿಯಂತ್ರಣಕ್ಕೆ ಬಂದಿಲ್ಲ.
ಕರೊನಾ ವೈರಸ್ ಕಾಣಿಸಿಕೊಂಡಿದ್ದು ಚೀನಾದ ವುಹಾನ್ ನಗರದಿಂದ ಮತ್ತು ಅಲ್ಲಿನ ಲ್ಯಾಬೊಂದರಲ್ಲಿ ಇದನ್ನು ಸೃಷ್ಟಿಸಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಹಿರಂಗವಾಗಿಯೇ ಆರೋಪಿಸಿದ್ದು, ಹಲವು ತಜ್ಞರು ಟ್ರಂಪ್ ಮಾತುಗಳನ್ನು ತಳ್ಳಿ ಹಾಕುವಂತಿಲ್ಲ ಎಂದಿದ್ದಾರೆ. ಕರೊನಾ ಸೃಷ್ಟಿಸಿರುವ ಪ್ರಾಣಹಾನಿ, ಆರ್ಥಿಕ ಹಾನಿ ಲೆಕ್ಕಕ್ಕೆ ಸಿಗದಷ್ಟು ಬೆಳೆಯುತ್ತಿದೆ. ಆದರೆ ಈ ಬಗ್ಗೆ ಚೀನಾ ಯಾವುದೇ ಸ್ಪಷ್ಟನೆ ನೀಡಿಲ್ಲ ಮತ್ತು ಸೋಂಕು ಕಾಣಿಸಿಕೊಂಡ ತಕ್ಷಣ ಅದನ್ನು ನಿಯಂತ್ರಿಸಲು ಕೂಡಲೇ ಕ್ರಮ ಕೈಗೊಂಡಿಲ್ಲ ಎಂಬುದು ವಾಸ್ತವ. ಹೀಗಿರುವಾಗ ಮತ್ತೊಂದು ದುರುಳ ರಾಷ್ಟ್ರ ಪಾಕಿಸ್ತಾನದೊಂದಿಗೆ ಸೇರಿ ಹಲವು ದೇಶಗಳ ವಿರುದ್ಧ ಜೈವಿಕ ಯುದ್ಧಕ್ಕೆ ತಯಾರಿ ನಡೆಸುತ್ತಿರುವ ಚೀನಾದ ನಡೆಯನ್ನು ಆರಂಭಿಕ ಹಂತದಲ್ಲೇ ತಡೆಯಬೇಕಿದೆ, ಈ ನಿಟ್ಟಿನಲ್ಲಿ ಜಾಗತಿಕ ಸಮುದಾಯ ಒಂದಾಗಬೇಕಿದೆ. ಮತ್ತು ಇಂಥ ದುಷ್ಟ ಮಾನಸಿಕತೆಯ ರಾಷ್ಟ್ರಗಳಿಗೆ ವಿಶ್ವಸಂಸ್ಥೆ ಸೇರಿ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಛೀಮಾರಿ ಹಾಕಲು ಜಾಗತಿಕ ವಲಯ ಒಟ್ಟಾಗಬೇಕಿದೆ.