

ಬೆಂಗಳೂರು: ಕರೋನಾ ಭೀತಿ ಹಿನ್ನೆಲೆಯಲ್ಲಿ ಸಂಚಾರ ಪೊಲೀಸರು ವಾಹನ ತಪಾಸಣೆ ನಡೆಸುವುದಿಲ್ಲ ಎಂದು ಭಾವಿಸಿ ಸಂಚಾರ ನಿಯಮ ಉಲ್ಲಂಸಿದರೆ ಭಾರಿ ದಂಡ ತೆರಬೇಕಾಗಬಹುದು..ಹಾಗಾಗಿ ನಿಮ್ಮ ಎಚ್ಚರಿಕೆಯಲ್ಲಿ ನೀವಿರಿ..!
ಮೈಸೂರು ರಸ್ತೆಯ ಬಾಪೂಜಿ ನಗರ ಜಂಕ್ಷನ್ ಬಳಿ ಬ್ಯಾಟರಾಯನಪುರ ಸಂಚಾರ ಪೊಲೀಸರ ಕೈಗೆ ಸಿಕ್ಕಿಬಿದ್ದ ದ್ವಿಚಕ್ರವಾಹನ ಸವಾರನೊಬ್ಬ ಬರೊಬ್ಬರಿ 18,500 ರೂ. ದಂಡ ಪಾವತಿಸಿದ್ದು ಎಲ್ಲರೂ ಹುಬ್ಬೇರಿಸುವಂತಾಗಿದೆ.
ಶನಿವಾರ ಮಧ್ಯಾಹ್ನ ಮೈಸೂರು ರಸ್ತೆಯ ಬಾಪೂಜಿನಗರ ಜಂಕ್ಷನ್ ಬಳಿ ಬ್ಯಾಟರಾಯನಪುರ ಸಂಚಾರ ಠಾಣೆಯ ಎಎಸ್‌ಐ ಗಣೇಶ್ ನೇತೃತ್ವದಲ್ಲಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದರು. ಅನುಮಾನದ ಮೇರೆಗೆ ದ್ವಿಚಕ್ರವಾಹನ ಸವಾರನೊಬ್ಬನನ್ನು ಹಿಡಿದು ಆತನ ವಾಹನದ ವಿರುದ್ಧ ಈ ಹಿಂದೆ ಸಂಚಾರ ನಿಯಮ ಉಲ್ಲಂಘನೆ ಪ್ರಕರಣ ದಾಖಲಾಗಿವೆಯೇ ಎಂದು ಪರಿಶೀಲಿಸಿದಾಗ ಪೊಲೀಸರಿಗೆ ಅಚ್ಚರಿ ಕಾದಿತ್ತು.
ಆ ನಂಬರ್‌ನ ದ್ವಿಚಕ್ರವಾಹನದ ವಿರುದ್ಧ ಹೆಲ್ಮೆಟ್ ಧರಿಸದೇ ಚಲಾಯಿಸಿರುವುದು, ಸಿಗ್ನಲ್ ಜಂಪ್, ಮೊಬೈಲ್‌ನಲ್ಲಿ ಮಾತನಾಡಿಕೊಂಡು ವಾಹನ ಚಾಲನೆ, ವಿರುದ್ಧ ದಿಕ್ಕಿನಲ್ಲಿ ವಾಹನ ಚಾಲನೆ ಸೇರಿ ಬರೊಬ್ಬರಿ 34 ಸಂಚಾರ ನಿಯಮ ಉಲ್ಲಂಘನೆ ಪ್ರಕರಣ ದಾಖಲಾಗಿರುವುದು ಬೆಳಕಿಗೆ ಬಂದಿದೆ.
ಸಂಚಾರ ನಿಯಮ ಉಲ್ಲಂಸಿದ ಎಲ್ಲ ಪ್ರಕರಣ ಸೇರಿ ಒಟ್ಟು 18,500 ರೂ. ದಂಡ ವಿಧಿಸಲಾಗಿತ್ತು. ದ್ವಿಚಕ್ರವಾಹನ ಮಾಲೀಕ ದಂಡ ಪಾವತಿಸಿ ವಾಹನ ತೆಗೆದುಕೊಂಡು ಹೋಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ದಂಡ ಪಾವತಿಸಿದ ಸವಾರ ದ್ವಿಚಕ್ರವಾಹನ ಖರೀದಿಸಿ ಕೇವಲ ಒಂದು ವರ್ಷವಾಗಿದೆ. ಪದೇ ಪದೇ ಸಂಚಾರ ನಿಯಮ ಉಲ್ಲಂಸುತ್ತಿದ್ದರೂ ಸಂಚಾರ ಪೊಲೀಸರ ಕೈಗೆ ಸಿಕ್ಕಿಬಿದ್ದಿರಲಿಲ್ಲ.