ಸಿರಿವಂತರೇ ಪಾಲಕರನ್ನು ವೃದ್ಧಾಶ್ರಮಕ್ಕೆ ದೂಡುತ್ತಿದ್ದಾರೆ

A
ಅಣ್ಣೂರು ಗ್ರಾಮದ ಗ್ರಾಮ ಪಂಚಾಯಿತಿ ಆವರಣದಲ್ಲಿ ವಿಶ್ವ ಹಿರಿಯರ ನಿಂದನೆ ಜಾಗೃತಿ ದಿನ ಕಾರ್ಯಕ್ರಮದಲ್ಲಿ ಕೆಂಗೇರಿ ವಿಶ್ವ ಒಕ್ಕಲಿಗರ ಮಠದ ಪೀಠಾಧ್ಯಕ್ಷ ಡಾ.ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಅವರನ್ನು ಗ್ರಾಮಸ್ಥರು ಅಭಿನಂಧಿಸಿದರು.
Published on

ಕೆ.ಎಂ.ದೊಡ್ಡಿ: ಸಿರಿವಂತರೇ ತಂದೆ-ತಾಯಿಗಳನ್ನು ವೃದ್ಧಾಶ್ರಮಕ್ಕೆ ಸೇರಿಸುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಕೆಂಗೇರಿ ವಿಶ್ವ ಒಕ್ಕಲಿಗರ ಮಠದ ಪೀಠಾಧ್ಯಕ್ಷ ಡಾ.ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.

ಸಮೀಪದ ಅಣ್ಣೂರು ಗ್ರಾಮದ ಗ್ರಾಮ ಪಂಚಾಯಿತಿ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ವಿಶ್ವ ಹಿರಿಯರ ನಿಂದನೆ ಜಾಗೃತಿ ದಿನ ಕಾರ್ಯಕ್ರಮದಲ್ಲಿ ಗ್ರಾಮಸ್ಥರಿಂದ ಅಭಿನಂಧನೆ ಸ್ವೀಕರಿಸಿ ಮಾತನಾಡಿದ ಅವರು, ಗ್ರಾಮೀಣ ಭಾಗದ ಬಡ ಜನತೆ ತಮ್ಮ ತಂದೆ-ತಾಯಿಗಳನ್ನು ಮನೆಯಲ್ಲಿ ಪೋಷಣೆ, ಪಾಲನೆ ಮಾಡುತಿದ್ದಾರೆ. ಆದರೆ ನಗರ ಪ್ರದೇಶದ ಶ್ರೀಮಂತರು ವೃದ್ಧಾಶ್ರಮಗಳಿಗೆ ದೂಡುತ್ತಿದ್ದಾರೆ ಎಂದರು.

ಗಂಡು ಮಕ್ಕಳು ಪ್ರಸ್ತುತ ದಿನದಲ್ಲಿ ವಯೋವೃದ್ಧರನ್ನು ಹೊರಹಾಕುತ್ತಿರುವ ವಿದ್ಯಮಾನವನ್ನು ನಾವು ನೋಡುತ್ತಿದ್ದೇವೆ. ಆದರೆ ಹೆಣ್ಣುಮಕ್ಕಳು ತಮ್ಮ ಪಾಲಕರನ್ನು ಪ್ರೀತಿ-ವಿಶ್ವಾಸದಿಂದ ಕಾಣುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಹಿರಿಯರನ್ನು ಗೌರವದಿಂದ ಕಾಣಬೇಕು. ಅವರನ್ನು ಹೊಡೆಯುವುದು, ನಿಂದಿಸುವುದು ಮಹಾ ಅಪರಾಧ. ಅಂತಹ ಕೆಲಸಗಳನ್ನು ಯಾರೂ ಮಾಡಬೇಡಿ. ಹೆಣ್ಣು ಎಂಬ ಕೀಳರಿಮೆಯನ್ನು ತೊಡೆದು ಹಾಕಬೇಕು. ಹೆಣ್ಣು ಎಷ್ಟು ಸಾಮರ್ಥ್ಯ ಹೊಂದಿದ್ದಾಳೆ ಎಂಬುದಕ್ಕೆ ನಿದರ್ಶನ ಅಣ್ಣೂರು ಗ್ರಾಪಂ ಅಭಿವೃದ್ಧಿ ಅಧಿಕಾರಿ ಅಶ್ವಿನಿ ಅವರ ಕಾರ್ಯದಕ್ಷತೆ ಇತತರಿಗೆ ಮಾದರಿ ಎಂದರು.

ಅಣ್ಣೂರು ಗ್ರಾಮ ಪಂಚಾಯಿತಿ ದೇಶದಲ್ಲೇ ಮಾದರಿ ಆಗಿದೆ. ಪಂಚಾಯಿತಿಗೆ ಹಲವು ಪ್ರಶಸ್ತಿಗಳು ಲಭಿಸಿವೆ. ಗ್ರಾಪಂ ಆಡಳಿತ ಮಂಡಳಿ ಮತ್ತು ಗ್ರಾಮಸ್ಥರು ಗ್ರಾಮದ ಅಭಿವೃದ್ಧಿಗೆ ಶ್ರಮಿಸಿ ಮತ್ತಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಿ ಎಂದು ಕಿವಿಮಾತು ಹೇಳಿದರು.

ರಾಮಮಂದಿರದಲ್ಲಿ ಪೂಜೆ ಸಲ್ಲಿಸಿ ವಾದ್ಯ ಗೋಷ್ಠಿಯೊಂದಿಗೆ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಅವರನ್ನು ಕರೆತರಲಾಯಿತು. ಸೊಸೈಟಿ ಅಧ್ಯಕ್ಷ ಡಿ.ಪ್ರಸನ್ನ, ಮಾಜಿ ಅಧ್ಯಕ್ಷ ಆರ್.ಸಿದ್ದಪ್ಪ, ಸಿಇಒ ರಮೇಶ್, ಪಿಡಿಒ ಅಶ್ವಿನಿ, ಗ್ರಾಪಂ ಸದಸ್ಯರಾದ ಎಂ.ಚಂದ್ರಶೇಖರ್, ಮಂಜು, ನಾಗಮಣಿ ಮಹೇಂದ್ರ, ಎ.ಬಿ.ಹಳ್ಳಿ ಸ್ವಾಮಿ, ಹೇಮಾ, ಶಿಲ್ಪಾ ಅಭಿಲಾಷ, ಸೊಸೈಟಿ ನಾಗೇಶ, ಪೂರ್ಣಿಮಾ, ಒಕ್ಕಲಿಗ ಸಂಘದ ತಾಲೂಕು ಅಧ್ಯಕ್ಷ ಚಂದೂಪುರ ಶಿವಲಿಂಗೇಗೌಡ, ಯೋಗ ಗುರು ಮಲ್ಲಿಕಾರ್ಜುನಸ್ವಾಮಿ ಸೇರಿದಂತೆ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net