

ದಶರೂಪಕಗಳ ದಶಾವತಾರ
(ಯಕ್ಷಗಾನದ ಶಾಸ್ತ್ರೀಯತೆಯ ವಿವೇಚನೆ)
ಲೇ: ಅಶೋಕ ಹಾಸ್ಯಗಾರ ನಾಭಿಪುರಂ
ಪುಟಗಳು :276 ಬೆಲೆ: 320 ರೂ.
ಪ್ರ: ಯಾಜಿ ಪ್ರಕಾಶನ, ‘ಭೂಮಿ’, ಎಂಪಿ ಪ್ರಕಾಶನಗರ ಹೊಸಪೇಟೆ
ಮೊ: 7019637741
| ರಾಜಶೇಖರ ಜೋಗಿನ್ಮನೆ
ಸುಮಾರು 10ನೇ ಶತಮಾನದಲ್ಲಿ ರಚಿತವಾದ ಗ್ರಂಥ ‘ದಶರೂಪಕಂ’. ಮಾಳ್ವದ ಪರಮಾರ ಸಾಮ್ರಾಜ್ಯದ ವಾಕ್ಪತಿ ಹೆಸರಿನ ರಾಜನ ಆಸ್ಥಾನ ಕವಿ ಧನಂಜಯ ರಚಿಸಿದ ಗ್ರಂಥವಿದು. ಅದು ರಂಗಭೂಮಿ ಮತ್ತು ನಾಟಕ ಪ್ರಸ್ತುತಿಗಳ ರಚನೆ ಮತ್ತು ನಿಯಮಗಳನ್ನು ಹೇಳುವ ಲಕ್ಷಣ ಗ್ರಂಥ. ಕಾವ್ಯಮೀಮಾಂಸೆಯ ಅಪರೂಪದ ಪ್ರಬಂಧ ಎಂಬ ಶ್ಲಾಘನೆಗೂ ಪಾತ್ರವಾಗಿದೆ.
ದಶರೂಪಕಂ ಹೇಳುವ ಹಲವಾರು ತಂತ್ರಗಳು ಮತ್ತು ವಿಧಾನಗಳು ಇಂದಿನ ರಂಗಭೂಮಿಯಲ್ಲೂ ಬಳಕೆಯಲ್ಲಿವೆ. ಹಾಗಾದರೆ ತನ್ನ ರಂಗಪ್ರದರ್ಶನಗಳಿಗೆ ದಶಾವತಾರ ಆಟ ಎಂದೂ ಕರೆಸಿಕೊಳ್ಳುವ ಯಕ್ಷಗಾನಕ್ಕೆ ದಶರೂಪಕದೊಂದಿಗೆ ಸಂಬಂಧವಿಲ್ಲವೇ ಎಂಬ ಎಳೆಯೊಂದನ್ನಿಟ್ಟುಕೊಂಡು ದಶಕದ ಕಾಲ ಅಧ್ಯಯನ, ಸಂಶೋಧನೆ ನಡೆಸಿದ ಫಲವೇ ಅಶೋಕ ಹಾಸ್ಯಗಾರರ ದಶರೂಪಕಗಳ ದಶಾವತಾರ ಗ್ರಂಥ.
ಪ್ರದರ್ಶನ ಕಲೆಗಳಲ್ಲಿಯೇ ಅತ್ಯಂತ ಸಮೃದ್ಧವಾದ ಕಲೆ ಯಕ್ಷಗಾನ. ಅದು ಜಾನಪದವೋ ಶಾಸ್ತ್ರೀಯವೋ ಎಂಬ ಚರ್ಚೆ ಬಹುಕಾಲದಿಂದ ನಡೆದಿದೆ. ಯಕ್ಷಗಾನ ಶಾಸ್ತ್ರೀಯ ಕಲೆ ಎಂಬುದೇ ಹೆಚ್ಚು ಸರಿ ಎಂದು ಅನಿಸುವುದಾದರೂ ಅದರ ಸಮರ್ಥನೆಗೆ ಬೇಕಾದ ಸಮಗ್ರ ಅಧ್ಯಯನ ಹಾಗೂ ಯಕ್ಷಗಾನದ ವಿವಿಧ ಮಜಲುಗಳ ಕ್ರೋಡೀಕರಣ ಆಗಿಲ್ಲ. ಇದನ್ನು ಸ್ವತಃ ಯಕ್ಷಗಾನ ಮನೆತನದವರೇ ಆದ ಲೇಖಕರು ಗುರುತಿಸಿದ್ದಾರೆ. ಎಂದೇ ಆ ನಿಟ್ಟಿನಲ್ಲಿ ಅಧ್ಯಯನ ನಡೆಸಿದ್ದಾರೆ.
ನಾಟ್ಯ ಶಾಸ್ತ್ರದ ದಶರೂಪಕ ಹಾಗೂ ಯಕ್ಷಗಾನದ ದಶಾವತಾರ ಎಂಬ ಎರಡು ವಿಷಯಗಳನ್ನು ಕೇಂದ್ರೀಕರಿಸಿ ನಾಟ್ಯ ಶಾಸ್ತ್ರೀಯ ಅಂಶಗಳನ್ನು ಮತ್ತು ದಶಾವತಾರ ಪ್ರಯೋಗದಲ್ಲಿನ ಕಲ್ಪನೆಯನ್ನು ವಿವೇಚನಾತ್ಮಕವಾಗಿ ನೋಡುವ ಪ್ರಯತ್ನವನ್ನು ಈ ಕೃತಿಯಲ್ಲಿ ಗಮನಿಸಬಹುದಾಗಿದೆ.
ಯಕ್ಷಗಾನದ ದಶಾವತಾರಗಳು ಎಂದರೆ ಅದು ವಿಷ್ಣುವಿನ ಹತ್ತು ಅವತಾರಗಳಲ್ಲ. ಹಾಗಾದರೆ ಅವು ಯಾವವು ಎಂಬ ಕುತೂಹಲ ಹಾಗೂ ಜಿಜ್ಞಾಸೆಯ ಫಲಿತ ಇದು ಎನ್ನುತ್ತಾರೆ ಹಿರಿಯ ಪತ್ರಕರ್ತರೂ, ಸಂಶೋದಕರೂ ಆಗಿರುವ ಕೃತಿಯ ಲೇಖಕರು. ಭರತನ ನಾಟ್ಯಶಾಸ್ತ್ರದಲ್ಲಿರುವುದೆಲ್ಲವೂ ಯಕ್ಷಗಾನದಲ್ಲಿದೆ. ಭರತನ ನಾಟ್ಯಶಾಸ್ತ್ರದ 20ನೇ ಅಧ್ಯಾಯದಲ್ಲಿ ದಶರೂಪಕಗಳ ವಿಧಾನಗಳ ಬಗ್ಗೆ ಹೇಳಲಾಗಿದೆ. ಅವೆಲ್ಲವೂ ಯಕ್ಷಗಾನದಲ್ಲಿ ದಶಾವತಾರದ ರೂಪದಲ್ಲಿದೆ.
ಯಕ್ಷಗಾನದ ಚೌಕಿಮನೆಯು ನಾಟ್ಯಶಾಸ್ತ್ರದ ನಾಟ್ಯಗೃಹದ ಕಲ್ಪನೆ. ಯಕ್ಷಗಾನದ ರಂಗಸ್ಥಳವು ನಾಟ್ಯಶಾಸ್ತ್ರದಲ್ಲಿ ಹೇಳಿದ ನಾಟ್ಯಮಂಟಪವನ್ನೇ ಆಧರಿಸಿ ರಚನೆಯಾಗಿದೆ. ಚೌಕಿಮನೆಯಲ್ಲಿ ಮುಖವರ್ಣಿಕೆಯೊಂದಿಗೆ ಪಾತ್ರಧಾರಿ ಸಿದ್ಧವಾಗುವುದು ನಾಟ್ಯಶಾಸ್ತ್ರದ ಆಹಾರ್ಯಾಭಿನಯ. ಹೀಗೆ ಅನೇಕ ಸಮರ್ಥನೆಗಳನ್ನು ಒದಗಿಸುವ ಲೇಖಕರು, ಯಕ್ಷಗಾನವು ಪ್ರಧಾನವಾಗಿ ನಾಟ್ಯ ಶಾಸ್ತ್ರೀಯ ಅಂದರೆ ಸಂಪೂರ್ಣ ಮಾರ್ಗೀಯ ಬಂಧಗಳ ಪ್ರದರ್ಶನ ಕಲೆಯಾಗಿದೆ, ಯಕ್ಷಗಾನಕ್ಕೆ ನಾಟ್ಯ ಶಾಸ್ತ್ರವೇ ಸಂವಿಧಾನವಾಗಿದೆ ಎಂಬ ಹೊಳಹನ್ನು ಈ ಗ್ರಂಥದಲ್ಲಿ ನೀಡಿದ್ದಾರೆ.
ಯಕ್ಷಗಾನ ಶಾಸ್ತ್ರೀಯ ಕಲೆ ಎಂಬುದನ್ನು ಸಿದ್ಧಪಡಿಸಲು ಬೇಕಾಗಿ ಇನ್ನಷ್ಟು ಆಳವಾಗಿ ಅಧ್ಯಯನ ನಡೆಸುವ ಆಸಕ್ತರಿಗೆ ಈ ಗ್ರಂಥ ಪ್ರವೇಶಿಕೆಯಂತಿದೆ ಎಂದರೆ ತಪ್ಪಲ್ಲ.
ಪುಸ್ತಕವು ಒಂಭತ್ತು ಪ್ರಮುಖ ಅಧ್ಯಾಯಗಳನ್ನು ಹೊಂದಿದ್ದು, ಗ್ರಂಥದ ಕುರಿತಾಗಿ ತಾಳಮದ್ದಲೆಯ ಪ್ರಸಿದ್ಧ ಅರ್ಥದಾರಿ, ವಿದ್ಯಾವಾಚಸ್ಪತಿ ವಿದ್ವಾನ್ ಉಮಾಕಾಂತ ಭಟ್ ಹಾಗೂ ಯಕ್ಷಗಾನ ಅಕಾಡೆಮಿಯ ಮಾಜಿ ಅಧ್ಯಕ್ಷ, ವಿದ್ವಾಂಸ ಜಿ. ಎಲ್. ಹೆಗಡೆ ಅವರ ವಿದ್ವತ್ಪೂರ್ಣ ಬರೆಹಗಳು ಕೃತಿಯ ಗಂಭೀರತೆಯನ್ನು ಹೇಳಿವೆ.
ನಾಟ್ಯವಸ್ತುವಿಗೆ ಸಂಬಂಧಿಸಿದ ಚರ್ಚೆ, ವಿಶ್ಲೇಷಣೆಗಳು ಕೃತಿಯುದ್ದಕ್ಕೂ ಸಿಗುತ್ತವೆ. ಒಟ್ಟಾರೆ ಇಡೀ ಯಕ್ಷಗಾನವನ್ನು ನಾಟ್ಯ ಶಾಸ್ತ್ರದ ಬೆಳಕಿನಲ್ಲಿ ಪುನರ್ ವ್ಯಾಖ್ಯಾನ ಮಾಡಲು ಪ್ರೇರಣೆ ಹಾಗೂ ಪ್ರಾಥಮಿಕ ಭೂಮಿಕೆಯನ್ನು ‘ದಶರೂಪಕಗಳ ದಶಾವತಾರ’ ಕೃತಿ ಒದಗಿಸಿದೆ. ಲೇಖಕರು ಅಭಿನಂದನಾರ್ಹರು.