ಸುಂಟಿಕೊಪ್ಪ ನಿವಾಸಿಗಳಿಗೆ ಮಳೆಗಾಲದಲ್ಲಿ ತಪ್ಪದ ಸಂಕಷ್ಟ

01
ತಗ್ಗು ಪ್ರದೇಶಗಳಲ್ಲಿ ಮನೆ ನಿರ್ಮಿಸಿರುವವರಿಗೆ ಮಳೆಗಾಲದಲ್ಲಿ ಮನೆಗಳಿಗೆ ನೀರು ನುಗುತ್ತಿರುವುದು.
Published on

ಸುಂಟಿಕೊಪ್ಪ: ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ಕಾಫಿ ತೋಟಗಳು ಕಣ್ಮರೆಯಾಗಿ ಬಡಾವಣೆಗಳು ನಿರ್ಮಾಣವಾಗುತ್ತಿದ್ದು, ವ್ಯವಸ್ಥಿತವಾಗಿ ರೂಪಿಸದ ಕಾರಣ ಮಳೆಗಾಲದಲ್ಲಿ ಮನೆಗಳಿಗೆ ನೀರು ನುಗ್ಗುವ ಆತಂಕ ಎದುರಾಗಿದೆ.


ಬಡಾವಣೆಯಲ್ಲಿ ನೀರು ಹರಿದು ಹೋಗುವ ವ್ಯವಸ್ಥೆ ಇಲ್ಲದ ಹಿನ್ನೆಲೆಯಲ್ಲಿ ತಗ್ಗು ಪ್ರದೇಶಗಳಲ್ಲಿ ಮನೆ ನಿರ್ಮಿಸಿರುವವರಿಗೆ ಮುಂದಿನ ದಿನಗಳಲ್ಲಿ ಮಳೆಗಾಲದಲ್ಲಿ ನೀರಿನ ಪ್ರಮಾಣ ಹೆಚ್ಚಾಗುವುದರೊಂದಿಗೆ ಕೊಳಚೆ ನೀರು ನುಗ್ಗುವ ಸಂಕಷ್ಟ ಎದುರಾಗಲಿದೆ.


ಪಟ್ಟಣ ಬೆಳೆಯುತ್ತಿದ್ದು, ಅನುಮತಿ ನೀಡುವಾಗ ಸ್ಥಳ ಪರಿಶೀಲನೆ ಮಾಡಿ ತಗ್ಗು ಪ್ರದೇಶ, ಜೌಗು ಪ್ರದೇಶ, ರಾಜಕಾಲುವೆ ಚರಂಡಿ ಮತ್ತು ಇತರ ವ್ಯವಸ್ಥೆಗಳನ್ನು ಗಮನದಲ್ಲಿಟ್ಟುಕೊಂಡು ನಿರಾಕ್ಷೇಪಣಾ ಪತ್ರವನ್ನು ನೀಡಬೇಕಾಗುತ್ತದೆ. ಆದರೆ ಜನಪ್ರತಿನಿಧಿಗಳು, ಅಧಿಕಾರಿಗಳು, ಯಾವುದೋ ಆಮಿಷ ಅಥವಾ ಒತ್ತಡಗಳಿಗೆ ಬಲಿಯಾಗಿ ಸಾರ್ವಜನಿಕ ಹಿತಾಸಕ್ತಿಯನ್ನು ಕಡೆಗಣಿಸಿ ಅವೈಜ್ಞಾನಿಕ ಕಟ್ಟಡ ಮತ್ತು ಬಡಾವಣೆಗಳ ನಿರ್ಮಾಣಕ್ಕೆ ಕಾರಣೀಭೂತರಾಗುತ್ತಿದ್ದಾರೆ.


ಅನಾಹುತದ ಬಳಿಕ ಎಚ್ಚೆತುಕೊಂಡರೇ ಪ್ರಯೋಜನವಿಲ್ಲ: ಈಗಾಗಲೇ ಜಿಲ್ಲೆಯ ಅನೇಕ ಕಡೆಗಳಲ್ಲಿ ಪರಿಸರ ಸಂರಕ್ಷಣೆ ಮತ್ತು ಕಾನೂನಿನ ಚೌಕಟ್ಟನ್ನು ಮೀರಿ ಬೆಟ್ಟಗುಡ್ಡ ಏರು ತಗ್ಗು ಪ್ರದೇಶದಲ್ಲಿ ಕಟ್ಟಡ ಮತ್ತು ಬಡಾವಣೆಗಳ ನಿರ್ಮಾಣ ಮಾಡುತ್ತಿದ್ದು, ಅನಾಹುತದ ಬಳಿಕ ಎಚ್ಚೆತುಕೊಂಡರೇ ಪ್ರಯೋಜನವಿಲ್ಲ. ಆದರೆ ಇಲ್ಲಿಯೂ 2018ರ ಮಹಾಪ್ರವಾಹ ಮತ್ತು ಭೂಕುಸಿತಕ್ಕೆ ಕಾರಣಗಳು ತಿಳಿದಿದ್ದರೂ ಹೆಚ್ಚಿನ ಸಂದರ್ಭದಲ್ಲಿ ಕುರುಡು ಕಾಂಚಾಣ ಕುಣಿಯುವ ಹಿನ್ನೆಲೆಯಲ್ಲಿ ವೈಜ್ಞಾನಿಕ ಮತ್ತು ಕಾನೂನುಬದ್ಧ ಅನುಮತಿಗೆ ಬದಲಾಗಿ ಹೇಗೆ ಬೇಕಾದರೂ ಯಾರೂ ಬೇಕಾದರೂ ಏನು ಬೇಕಾದರೂ ಮಾಡಬಹುದು ಎನ್ನುವ ಪರಿಸ್ಥಿತಿ ನಿರ್ಮಾಣವಾಗಿರುವುದು ಕಣ್ಣು ಎದುರು ಇರುವ ಸತ್ಯವಾಗಿದೆ.


ಜಿಲ್ಲಾದ್ಯಂತ ಇದೀಗ ಪೂರ್ವ ಮುಂಗಾರು ಆರಂಭವಾಗಿರುವುದರಿಂದ ನಿತ್ಯ ಮಳೆ ಸುರಿಯುತ್ತಿದೆ. ಕಳೆದ 3 ದಿನಗಳಿಂದ ಭಾರಿ ಮಳೆಗೆ ತತ್ತರಿಸಿ ಹೋಗಿರುವ ಜನರು, ಅದರಲ್ಲಿಯೂ ತಗ್ಗು ಪ್ರದೇಶಗಳಲ್ಲಿ ವಾಸಿಸುತ್ತಿರುವವರು ಸಂಕಷ್ಟಕ್ಕೆ ಗುರಿಯಾಗಿದ್ದಾರೆ.


ಸುಂಟಿಕೊಪ್ಪದಲ್ಲಿ ಹೊಸದಾದ ಲೇಔಟ್ ಆಗುತ್ತಿದ್ದು, ಮಳೆ ಸುರಿದರೆ ಅಲ್ಲಿಂದ ಪಕ್ಕದ ಬಿಎಸ್‌ಎನ್‌ಎಲ್ ಕಚೇರಿ ಮುಂಭಾಗದಿಂದ ಹರಿದು ಸುಂಟಿಕೊಪ್ಪ ಎರಡನೇ ವಿಭಾಗದ ಹತ್ತಾರು ಮನೆಗಳಿಗೆ ನೀರು ನುಗ್ಗಿ, ಅದೇ ವೇಗದಲ್ಲಿ ಮಸೀದಿ ಒಳಗೆ ನೀರು ತುಂಬಿಕೊಳ್ಳುತ್ತಿದೆ.


ಈ ಭಾಗದ ಬಡ ಕಾರ್ಮಿಕ ವರ್ಗ ಮನೆ ಕಟ್ಟಿಕೊಂಡಿದ್ದು, ಮಳೆಗಾಲ ಪ್ರಾರಂಭವಾದಂತೆ ಹೊಸದಾಗಿ ಪ್ರಾರಂಭವಾಗಿರುವ ಲೇಔಟ್‌ನಿಂದ ನಿರಂತರವಾಗಿ ಕಲುಷಿತ ನೀರು ಹರಿದು ಬರುತ್ತಿದ್ದು ಮನೆ ಒಳಗಿನ ಸಾಮಗ್ರಿಗಳಿಗೆ ಹಾನಿಯಾಗುತ್ತಿದೆ ಎಂದು ಈ ಭಾಗದ ನಿವಾಸಿಗಳು ಆರೋಪಿಸಿದ್ದಾರೆ. ಜತೆಗೆ ಮಳೆಯ ಅಬ್ಬರದಿಂದಾಗಿ ಪ್ರವಾಹದ ರೀತಿಯ ನೀರು ಬರುವುದರಿಂದ ಭಯದಿಂದಲೇ ಬದುಕು ಸಾಗಿಸುವ ಸ್ಥಿತಿ ಎದುರಾಗಿದೆ ಎಂದು ಹೇಳಿದ್ದಾರೆ. ಈ ಬಗ್ಗೆ ಲೇಔಟ್‌ನ ಮಾಲೀಕರು, ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಕೂಡಲೇ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ಮುಖಂಡ ಪಿ.ಎಫ್. ಲತೀಫ್ ಈ ನಿವಾಸಿಗಳ ಪರವಾಗಿ ಮನವಿ ಮಾಡಿಕೊಂಡಿದ್ದಾರೆ.


ಅವೈಜ್ಞಾನಿಕವಾಗಿ ಚರಂಡಿಗಳನ್ನು ನಿರ್ಮಿಸಿದ್ದು ಇದರಿಂದ ತಗ್ಗು ಪ್ರದೇಶ, ಜನವಸತಿ ಪ್ರದೇಶಕ್ಕೆ ರಭಸವಾಗಿ ಮಳೆ ನೀರು ಬರುವ ಹಿನ್ನೆಲೆಯಲ್ಲಿ ಮನೆಗಳಿಗೆ ಆಗುವ ಹಾನಿಯ ಪ್ರಮಾಣ ಹೆಚ್ಚು ಎನ್ನುವುದು ಇಲ್ಲಿನ ನಿವಾಸಿಗಳ ಅಭಿಪ್ರಾಯವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net