

ಮುಂಡಗೋಡ: ತಾಲೂಕಿನ ಪಾಳಾ ಸನಿಹದ ಹುಡೇಲಕೊಪ್ಪ ಬಳಿ ಗದ್ದೆಗೆ ಹಾಕಿದ್ದ ಬಲೆಯಲ್ಲಿ ಸಿಲುಕಿಕೊಂಡಿದ್ದ 13 ಅಡಿ ಉದ್ದದ ಹೆಬ್ಬಾವನ್ನು ಉಪ ವಲಯ ಅರಣ್ಯಾಧಿಕಾರಿ ಸುನೀಲ ಹೊನ್ನಾವರ ರಕ್ಷಣೆ ಮಾಡಿ ಸುರಕ್ಷಿತವಾಗಿ ಅರಣ್ಯಕ್ಕೆ ಬಿಟ್ಟಿದ್ದಾರೆ.
ಗದ್ದೆಯ ಸುತ್ತಲಿನ ಬೇಲಿಗೆ ರೈತನೊಬ್ಬ ಬಲೆ ಹಾಕಿದ್ದ ಅರಣ್ಯದಿಂದ ಗದ್ದೆಯತ್ತ ಬಂದಿದ್ದ 13 ಅಡಿ ಉದ್ದದ 60 ಕೆಜಿ ತೂಕದ ಹೆಬ್ಬಾವು ಬಲೆಯಲ್ಲಿ ಸಿಲುಕಿಕೊಂಡಿತ್ತು. ಇದನ್ನು ಗಮನಿಸಿದ ರೈತ ತಕ್ಷಣವೇ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಪಾಳಾ ಉಪ ವಲಯ ಅರಣ್ಯಾಧಿಕಾರಿ ಸುನೀಲ ಹೊನ್ನಾವರ ಹಾಗೂ ಸಿಬ್ಬಂದಿ ಸ್ಥಳಕ್ಕಾಗಮಿಸಿ ಹೆಬ್ಬಾವು ರಕ್ಷಿಸಿ ಸುರಕ್ಷಿತವಾಗಿ ಅರಣ್ಯಕ್ಕೆ ಬಿಟ್ಟರು.