ಸಂಪಾದಕೀಯ| ಪರಿಹಾರ ಕಾರ್ಯ ಚುರುಕಾಗಬೇಕು

Floos
Published on

ಕರೊನಾ ಆಘಾತದ ನಡುವೆಯೇ ಈ ಬಾರಿ ಪ್ರವಾಹ ಇಡೀ ರಾಜ್ಯವನ್ನು ತಲ್ಲಣಗೊಳಿಸಿದೆ. ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದ ರೈತರು ಕಂಗಾಲಾಗಿದ್ದಾರೆ. ಬೆಳೆ ಕಣ್ಣೆದುರಿಗೇ ನೀರು ಪಾಲಾಗಿದೆ. ಸಾರ್ವಜನಿಕ ಆಸ್ತಿಪಾಸ್ತಿಯ ಹಾನಿಪ್ರಮಾಣವೂ ತೀವ್ರ. ನೈಸರ್ಗಿಕ ವಿಕೋಪಗಳ ವಿರುದ್ಧ ಹೋರಾಡುವಾಗ ಸರ್ಕಾರದ ಬದ್ಧತೆ, ಅಧಿಕಾರಶಾಹಿಯ ಚುರುಕುತನ ಎಷ್ಟು ಅಗತ್ಯವೋ ಮಾನವೀಯ ಮೌಲ್ಯದ ಕಳಕಳಯಿಂದ ಸಂತ್ರಸ್ತರಿಗೆ ಸಕಾಲದಲ್ಲಿ ಪರಿಹಾರ ಕಲ್ಪಿಸುವುದೂ ಅಷ್ಟೇ ಮುಖ್ಯ. ಇಲ್ಲದಿದ್ದಲ್ಲಿ ಹಲವು ಸಂಕಷ್ಟಗಳಿಗೆ ಸಿಲುಕಿರುವ ಶ್ರೀಸಾಮಾನ್ಯರು ಮತ್ತಷ್ಟು ಧೃತಿಗೆಟ್ಟು, ವ್ಯವಸ್ಥೆಯನ್ನು ದೂಷಿಸುವಂತಾಗುತ್ತದೆ ಅಥವಾ ನಂಬಿಕೆಯನ್ನೇ ಕಳೆದುಕೊಳ್ಳುವಂಥ ಸನ್ನಿವೇಶ ಸೃಷ್ಟಿಯಾಗುತ್ತದೆ.

ಆಗಸ್ಟ್​ನಿಂದ ಅಕ್ಟೋಬರ್ ಅಂತ್ಯದ ತನಕ ಮೂರು ಹಂತದಲ್ಲಿ ರಾಜ್ಯಕ್ಕೆ ಪ್ರವಾಹ ಅಪ್ಪಳಿಸಿದ ಪರಿಣಾಮ 24 ಜಿಲ್ಲೆಗಳು ಭಾರಿ ಹಾನಿಯನ್ನು ಅನುಭವಿಸಿವೆ, ಅತಿವೃಷ್ಟಿಯಿಂದ ಒಟ್ಟು -ಠಿ; 24,941 ಕೋಟಿಗಳಷ್ಟು ಹಾನಿಯಾಗಿದ್ದು, ಪರಿಹಾರ ಕಾರ್ಯವನ್ನು ಚುರುಕುಗೊಳಿಸಬೇಕಾದ ಅನಿವಾರ್ಯತೆ ಇದೆ. ಆದರೆ, ಕೇಂದ್ರ ಸರ್ಕಾರದಿಂದ ಸೂಕ್ತ ಪ್ರಮಾಣದ ನೆರವು ಬರದೆ ಪರಿಹಾರ ಕಾರ್ಯಗಳಿಗೆ ವೇಗ ತುಂಬುವುದು ಕಷ್ಟವೇ ಸರಿ. ಹಾಗಾಗಿ, ಎನ್​ಡಿಆರ್​ಎಫ್​ನಡಿ ತುರ್ತಾಗಿ -ಠಿ; 2384.89 ಕೋಟಿ ಬಿಡುಗಡೆ ಮಾಡುವಂತೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಮನವಿ ಮಾಡಿದೆ. ಎರಡನೇ ಹಂತದ ಹಾನಿಯಾದ ಸಂದರ್ಭದಲ್ಲಿ ಕೇಂದ್ರ ಅಧ್ಯಯನ ತಂಡ ಕರ್ನಾಟಕಕ್ಕೆ ಭೇಟಿ ನೀಡಿ, ವರದಿ ಸಲ್ಲಿಸಿದೆ. ಅಲ್ಲದೆ, ಕೇಂದ್ರ ಗೃಹ ಸಚಿವಾಲಯವೂ ಎರಡು ಸುತ್ತಿನ ಸಭೆ ನಡೆಸಿದ್ದು, ಇನ್ನೊಂದು ಸುತ್ತಿನ ಅಂತಿಮ ಸಭೆ ನಡೆಯಬೇಕಾಗಿದೆ. ಆ ನಂತರ ರಾಜ್ಯಕ್ಕೆ ಪರಿಹಾರ ನಿಗದಿ ಆಗಲಿದೆ ಎಂಬುದು ಮೂಲಗಳ ಮಾಹಿತಿ.

ಕಳೆದ ವರ್ಷ ರಾಜ್ಯ ನೆರೆಯಿಂದ ಅನುಭವಿಸಿದ ಹಾನಿ -ಠಿ;35 ಸಾವಿರ ಕೋಟಿ. ಕೇಂದ್ರದಿಂದ ರಾಜ್ಯ 10 ಸಾವಿರ ಕೋಟಿ ರೂ.ಗಳ ನೆರವು ಕೇಳಿತ್ತು. ಆದರೆ ಬಂದಿದ್ದು -ಠಿ;1,869 ಕೋಟಿ ಮಾತ್ರ, ಅದೂ ಜನಾಕ್ರೋಶ ಭುಗಿಲೆದ್ದ ಮೇಲೆ. ಈ ಬಾರಿಯೂ ಮತ್ತೆ ಇದೇ ಪರಿಸ್ಥಿತಿ ಮರುಕಳಿಸಬಾರದು. ಕೇಂದ್ರ ಅಧ್ಯಯನ ತಂಡ ನೀಡಿರುವ ವರದಿ ಮತ್ತು ರಾಜ್ಯ ನೀಡಿರುವ ಮಾಹಿತಿಯ ಆಧಾರದ ಮೇಲೆ ಪರಿಹಾರ ಕಾರ್ಯಕ್ಕೆ ಅನುವಾಗವಂತೆ ಸೂಕ್ತ ಪ್ರಮಾಣದ ನೆರವನ್ನು ಕೇಂದ್ರ ಬಿಡುಗಡೆ ಮಾಡಬೇಕು. ಇಲ್ಲಿನ ಪರಿಸ್ಥಿತಿಯ ಗಂಭೀರತೆಯನ್ನು, 24 ಜಿಲ್ಲೆಗಳ ಕರಾಳ ಪರಿಸ್ಥಿತಿಯನ್ನು ಮತ್ತು ರೈತರು ಎದುರಿಸುತ್ತಿರುವ ಬವಣೆಯನ್ನು ಅರ್ಥಮಾಡಿಕೊಂಡು, ಸ್ಪಂದಿಸಬೇಕು. ಕಳೆದ ವರ್ಷ ಹೆಚ್ಚಿನ ನೆರವು ಸಿಗದ ಕಾರಣ ನೆರೆ ಪರಿಹಾರಕ್ಕೆ ಇಲಾಖೆಗಳ ಅನುದಾನವನ್ನೇ ವರ್ಗಾವಣೆ ಮಾಡಲಾಗಿತ್ತು. ಇದರಿಂದಾಗಿ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿದ್ದವು. ಈ ವರ್ಷ ಆರ್ಥಿಕ ಹಿಂಜರಿತ, ಕರೊನಾ ಕಾರಣದಿಂದ ತೆರಿಗೆ ಸಂಗ್ರಹಣೆ ಕಡಿಮೆಯಾಗಿದ್ದು, ಕೇಂದ್ರದ ಸಕಾಲಿಕ ನೆರವಿನ ಅವಶ್ಯಕತೆ ಇದೆ. ಹಾಗಾಗಿ, ರಾಜ್ಯದ ಎಲ್ಲ ಸಂಸದರೂ, ಕೇಂದ್ರ ಸಚಿವರೂ ಕೇಂದ್ರದ ಮೇಲೆ ಒತ್ತಡ ಹೇರಲಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net