

ಅಲ್ವಾಟಿ: ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ಐಎಸ್ಎಸ್) ದಾಖಲೆಯ ಸುದೀರ್ಘ 11 ತಿಂಗಳ ವಾಸದ ನಂತರ ಅಮೆರಿಕದ ಮಹಿಳಾ ಗಗನಯಾನಿ ಕ್ರಿಸ್ಟಿನಾ ಕೋಚ್ ಗುರುವಾರ ಸುರಕ್ಷಿತವಾಗಿ ಭೂಮಿಗೆ ಮರಳಿದರು.
ಮಹಿಳಾ ಗಗನಯಾನಿಯೊಬ್ಬರು ಐಎಸ್ಎಸ್ನಲ್ಲಿ ಇಷ್ಟೊಂದು ದೀರ್ಘ ಕಾಲ ಇದ್ದು ಪ್ರಯೋಗಗಳಲ್ಲಿ ತೊಡಗಿಸಿಕೊಂಡಿದ್ದು ಇದು ದಾಖಲೆಯಾಗಿದೆ. ಕಳೆದ ವರ್ಷ ಮಾರ್ಚ್ 14ರಂದು ಗಗನಕ್ಕೆ ನೆಗೆದಿದ್ದ ಕ್ರಿಸ್ಟಿನಾ 328 ದಿನ ಐಎಸ್ಎಸ್ನಲ್ಲಿದ್ದರು. ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾದ ಕ್ರಿಸ್ಟಿನಾ, ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆಯ ಲುಕಾ ಪರ್ವಿುತಾನೊ ಮತ್ತು ರಷ್ಯಾದ ಅಲೆಕ್ಸಾಂಡರ್ ಸ್ವೊರತ್ಸೊವ್ ಜಿಎಂಟಿ 09.12ಕ್ಕೆ ಭೂಸ್ಪರ್ಶ ಮಾಡಿದರು.
ಇದುವರೆಗೆ ನಾಲ್ಕು ಪುರುಷ ಗಗನಯಾನಿಗಳು ವರ್ಷಕ್ಕಿಂತ ಹೆಚ್ಚು ಅವಧಿಯನ್ನು ಬಾಹ್ಯಾಕಾಶದಲ್ಲಿ ಕಳೆದಿದ್ದಾರೆ. ರಷ್ಯಾದ ವಲೇರಿ ಪೊಲ್ಯಾಕೋವ್ ಏಕಾಂಗಿಯಾಗಿ 437 ದಿನ ಐಎಸ್ಎಸ್ನಲ್ಲಿದ್ದದ್ದು ದಾಖಲೆಯಾಗಿದೆ.