

ಕೋಲಾರ: ಚುನಾವಣೆಗಳಲ್ಲಿ ಸೋಲು-ಗೆಲುವು ಸಹಜ, ಆದರೆ ಕೋಲಾರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸೋಲಿಗೆ ಸ್ವ ಪಕ್ಷದವರೇ ಕಾರಣ ಎಂದು ಎಲ್ಲರಿಗೂ ಗೊತ್ತಿದೆ. ಈ ಬಗ್ಗೆ ಅವರೇ ಉತ್ತರ ಕೊಡಲಿ ಎಂದು ಮಾಜಿ ಸಚಿವ ಕೆ.ಶ್ರೀನಿವಾಸಗೌಡ ಹೇಳಿದರು.
ನಗರದ ಗೃಹ ಕಚೇರಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಟಿಕೆಟ್ಗಾಗಿ ಪೈಪೋಟಿ ನಡೆದಿತ್ತು. ಕೋಲಾರದಲ್ಲಿ ಬಣ ನಾಯಕರು ಸೂಚಿಸಿದ್ದ ಇಬ್ಬರೂ ಬೇಡ ಎಂದು ಹೈಕಮಾಂಡ್ ಗೌತಮ್ ಅವರನ್ನು ಅಭ್ಯರ್ಥಿಯನ್ನಾಗಿಸಿತು. ಅಂತೆಯೇ, ಎಲ್ಲರೂ ಗೆಲ್ಲಿಸಿಕೊಳ್ಳುವ ಭರವಸೆ ನೀಡಿದ್ದರು, ಆದರೂ ಏಕೆ ಗೆಲ್ಲಿಸಿಕೊಳ್ಳಲಿಲ್ಲ ಎಂದು ಪ್ರಶ್ನಿಸಿದರು.
ಶ್ರೀನಿವಾಸಪುರ ಕ್ಷೇತ್ರದಲ್ಲಿ ರಮೇಶ್ಕುಮಾರ್ ರಾಜಕೀಯವಾಗಿ ಬೆಳೆಯಲು ಒಕ್ಕಲಿಗರು ಪ್ರಮುಖ ಪಾತ್ರವಹಿಸಿದ್ದಾರೆ. ಸಾಂಪ್ರದಾಯಿಕವಾಗಿ ಒಂದು ಅವಧಿಗೆ ರಮೇಶ್ಕುಮಾರ್, ಮತ್ತೊಂದು ಅವಧಿಗೆ ವೆಂಕಟಶಿವಾರೆಡ್ಡಿ ಅವರನ್ನು ಗೆಲ್ಲಿಸಿಕೊಳ್ಳುತ್ತಿದ್ದರು. ಸೋಲಾದ ಮಾತ್ರಕ್ಕೆ ಸಮುದಾಯವನ್ನು ದೂಷಿಸುವುದು ಸರಿಯಲ್ಲ. ಕೆಲ ಚುನಾವಣೆಗಳಲ್ಲಿ ನಾನು ಸೋತಿದ್ದೇನೆ, ಯಾರನ್ನೂ ದೂಷಿಸಿಲ್ಲ ಎಂದು ಹೇಳಿದರು.
ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ನವರು ನನ್ನನ್ನು ಪ್ರಚಾರಕ್ಕೆ ಕರೆಯಲಿಲ್ಲ. ಹಾಗಾಗಿ ನಾನು ಅವರ ಜತೆ ಹೋಗಲಾಗದಿದ್ದರೂ ನನ್ನ ಸೂಚನೆ ಮೇರೆಗೆ ನಮ್ಮ ಬೆಂಬಲಿಗರು ಅಭ್ಯರ್ಥಿ ಪರ ಕೆಲಸ ಮಾಡಿದ್ದಾರೆ ಎಂದರು.
ಸಿದ್ದರಾಮಯ್ಯ ಅವರು ಕೋಲಾರಕ್ಕೆ ಬಾರದಿದ್ದಾಗ ನನಗೆ ಅವಕಾಶ ಮಾಡಿಕೊಡಬೇಕಿತ್ತು. ಆದರೆ ರಮೇಶ್ ಕುಮಾರ್ ಸೇರಿ ಜಿಲ್ಲೆಯ ಹಲವು ಮುಖಂಡರು ಒಳಗೊಳಗೆ ಮಾತುಕತೆ ನಡೆಸಿ ಕೊತ್ತೂರು ಮಂಜುನಾಥ್ನನ್ನು ಸ್ಪರ್ಧೆಗಿಳಿಸಿದರು. ಈ ಬಗ್ಗೆ ನನ್ನ ಗಮನಕ್ಕೆ ತರಲಿಲ್ಲ. ಅವರು ಮಾಡುವುದು ಸರಿಯೇ ಎಂದು ಪ್ರಶ್ನಿಸಿದರು.
ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ದಯಾನಂದ್, ಹೋಟೆಲ್ ರಾಮಣ್ಣ, ರಮೇಶ್ ಮತಿತರರಿದ್ದರು.