ಮನೆ ಯಜಮಾನಿಯೇ ನಿಜವಾದ ಸಿಎಂ: ಸಚಿವ ಮಧು ಬಂಗಾರಪ್ಪ

Grilahakshmi Yojana
ಅಂಬೇಡ್ಕರ್ ಭವನದಲ್ಲಿ ಗೃಹಲಕ್ಷ್ಮೀ ಫಲಾನುಭವಿಗಳಿಗೆ ಸಚಿವ ಮಧು ಬಂಗಾರಪ್ಪ ಸಾಂಕೇತಿಕವಾಗಿ 2000 ರೂ. ವಿತರಣೆ ಮಾಡಿದರು. ಆರ್.ಪ್ರಸನ್ನಕುಮಾರ್, ಎಚ್.ಸಿ.ಯೋಗೇಶ್,ಎಚ್.ಎಸ್.ಸುಂದರೇಶ್, ಡಾ. ಆರ್.ಸೆಲ್ವಮಣಿ, ಜಿ.ಕೆ.ಮಿಥುನ್‌ಕುಮಾರ್, ಸತ್ಯನಾರಾಯಣ್, ಸಂತೋಷ್‌ಕುಮಾರ್, ಡಾ. ಎನ್.ಜೆ.ನಾಗರಾಜ್ ಇದ್ದರು.
Published on

ಶಿವಮೊಗ್ಗ: ಹೆಣ್ಣು ಮಕ್ಕಳು ಕುಟುಂಬದ ನಿಜವಾದ ಸಿಎಂ(ಮುಖ್ಯಮಂತ್ರಿ)ಗಳು ಇದ್ದಂತೆ. ಅವರ ಮೇಲೆ ಇಡೀ ಕುಟುಂಬದ ನಿರ್ವಹಣೆ ಜವಾಬ್ದಾರಿ ಇದ್ದು ಬೆಲೆ ಏರಿಕೆಯ ಸಂದರ್ಭದಲ್ಲಿ ಹಾಗೂ ಮಹಿಳೆಯರ ಆರ್ಥಿಕ ಸಬಲೀಕರಣದ ವಿಷಯದಲ್ಲಿ ಗೃಹಲಕ್ಷ್ಮೀ ಯೋಜನೆ ಅವರಿಗೆ ನೆರವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧು ಬಂಗಾರಪ್ಪ ಹೇಳಿದರು.

ನಗರದ ಡಾ. ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಆಶ್ರಯದಲ್ಲಿ ಗೃಹಲಕ್ಷ್ಮೀ ಯೋಜನೆ ಅನುಷ್ಟಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಗೃಹಲಕ್ಷ್ಮೀ ಯೋಜನೆ ಐತಿಹಾಸಿಕ ಮತ್ತು ದೇಶದಲ್ಲಿಯೇ ಅಚ್ಚರಿ ಮೂಡಿಸುವಂತಹ ಕಾರ್ಯಕ್ರಮ ಎಂದರು.
ಸರ್ಕಾರ ನೀಡಿದ ವಾಗ್ದಾನದಂತೆ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಮಹಿಳೆಯರಿಗೆ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡಿರುವ ಶಕ್ತಿ ಯೋಜನೆ ಮಹಿಳೆಯರನ್ನು ಸಬಲಗೊಳಿಸಿದೆ. ಯಾವುದೇ ವ್ಯಕ್ತಿ ಹಸಿವಿನಿಂದ ಮಲಗಿದರೆ ಸರ್ಕಾರದಕ್ಕೆ ಗೌರವ ಸಿಗುವುದಿಲ್ಲ. ಆದ್ದರಿಂದ ಅನ್ನಭಾಗ್ಯ ಯೋಜನೆಯಡಿ ಪ್ರತಿ ಕುಟುಂಬಕ್ಕೆ 10 ಕೆಜಿ ಅಕ್ಕಿಯನ್ನು ನೀಡುವ ಭರವಸೆಯನ್ನು ಸರ್ಕಾರ ನೀಡಿತ್ತು. ಸದ್ಯಕ್ಕೆ ಅಕ್ಕಿ ಲಭ್ಯತೆ ಸಾಕಷ್ಟು ಇಲ್ಲದ ಕಾರಣ 5 ಕೆಜಿ ಅಕ್ಕಿ ಬದಲು ಕುಟುಂಬದ ತಲಾ ಸದಸ್ಯರಿಗೆ 170 ರೂ. ನೀಡಲಾಗುತ್ತಿದೆ. ಅಲ್ಲದೆ, ಗೃಹಜ್ಯೋತಿ ಯೋಜನೆಯಡಿ ಪ್ರತಿ ಗೃಹ ಬಳಕೆದಾರರಿಗೆ ಗರಿಷ್ಟ 200 ಯುನಿಟ್‌ವರೆಗೆ ಉಚಿತ ವಿದ್ಯುತ್ ನೀಡುತ್ತಿರುವುದು ಜನರಿಗೆ ಅತ್ಯಂತ ಸಹಕಾರಿಯಾಗಿದೆ ಎಂದು ಹೇಳಿದರು.
ಫಲಾನುಭವಿಗಳಿಗೆ ಸಾಂಕೇತಿಕವಾಗಿ ಗೃಹಲಕ್ಷ್ಮೀ ಯೋಜನೆಯ 2000 ರೂ. ವಿತರಣೆ ಮಾಡಲಾಯಿತು. ಮೈಸೂರಿನಲ್ಲಿ ಆಯೋಜಿಸಿದ್ದ ಗೃಹಲಕ್ಷ್ಮೀ ಯೋಜನೆ ಚಾಲನೆ ಕಾರ್ಯಕ್ರಮದ ನೇರ ಪ್ರಸಾರವನ್ನು ಎಲ್ಇಡಿ ಪರದೆಗಳಲ್ಲಿ ಪ್ರದರ್ಶಿಸಲಾಯಿತು.
ಮಾಜಿ ಎಂಎಲ್‌ಸಿ ಆರ್.ಪ್ರಸನ್ನಕುಮಾರ್, ಪಾಲಿಕೆ ಸದಸ್ಯ ಎಚ್.ಸಿ.ಯೋಗೇಶ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್.ಸುಂದರೇಶ್, ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ, ಎಸ್ಪಿ ಜಿ.ಕೆ.ಮಿಥುನ್‌ಕುಮಾರ್, ಎಸಿ ಸತ್ಯನಾರಾಯಣ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪ್ರಭಾರ ಉಪನಿರ್ದೇಶಕ ಸಂತೋಷ್‌ಕುಮಾರ್, ಶಿವಮೊಗ್ಗ ತಹಸೀಲ್ದಾರ್ ಡಾ. ಎನ್.ಜೆ.ನಾಗರಾಜ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net