ಎಲ್ಲರೂ ಒಂದೇ ಎಂಬ ಭಾವನೆಯೇ ನಿಜವಾದ ಬಕುತಿ

1-67dd9da3848ad
Published on
ದೇವರದಿದೆಲ್ಲ ದೇವರಿಗೆಲ್ಲವೆಂದೊರಲು-|

ತಾವುದನುಮವನ ನಿರ್ಣಯಕೆ ಬಿಡದೆಯೆ ತಾಂ||

ದಾವನ್ತಬಡುತ ತನ್ನಿಚ್ಛೆಯನೆ ಘೊಷಿಸುವ |

ಭಾವವೆಂತಹ ಭಕುತಿ?-ಮಂಕುತಿಮ್ಮ||581||

ಇದೆಲ್ಲವೂ ದೇವರದ್ದು. ದೇವರಿಗೆ ಎಲ್ಲವೂ ಎಂದು ಅರಚುತ್ತಾ, ಯಾವುದನ್ನೂ ಅವನ ನಿರ್ಣಯಕ್ಕೆ ಬಿಡದೆಯೇ ತಾನು ಧಾವಂತ ಪಡುತ್ತಾ ತನ್ನ ಇಚ್ಛೆಯನ್ನೇ ಘೊಷಿಸುವ ಭಾವವು ಎಂತಹ ಬಕುತಿ ಎಂದು ಪ್ರಶ್ನಿಸುತ್ತದೆ ಈ ಕಗ್ಗ.

ದೇವರ ದಯೆ ಎನ್ನುತ್ತಾ ತಮಗೊದಗಿದ ಬದುಕಿನ ಭಾಗ್ಯದ ಬಗೆಗೆ ಹೇಳುವ ಅಭ್ಯಾಸವು ಹಲವರಿಗಿದೆ. ಯಾವುದೋ ಅವಘಡದಿಂದ ಪಾರಾದಾಗಲೂ ದೇವರ ದಯೆ ಎಂದೆನ್ನುವುದಿದೆ. ತಾನು ಪಡೆದುದೆಲ್ಲವೂ ದೇವರ ದಯೆ ಮತ್ತು ತನಗೊದಗಿದ ದುರಿತಗಳು ನಿವಾರಣೆಯಾದುದು ಕೂಡ ದೇವರದಯೆಯಿಂದ ಎಂದು ಭಾವಿಸುವುದು ಬದುಕಿನ ಧೈರ್ಯ.

ಆದರೆ ನಿತ್ಯ ಜೀವನದಲ್ಲಿ ದ್ವಂದ್ವಗಳು ಎದುರಾದಾಗ, ಸಮಸ್ಯೆಗಳು ಕಾಡಿದಾಗ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಂದರ್ಭದಲ್ಲಿ ದೇವರನ್ನು ಮರೆತು ಭಾವಾವೇಶಕ್ಕೆ ಒಳಗಾಗುವುದು, ಆತಂಕ ಪಡುವುದು ಸಾಮಾನ್ಯ. ಪರಿಣಾಮವಾಗಿ ಆತುರದ ನಿರ್ಣಯಗಳನ್ನು ತೆಗೆದುಕೊಂಡು ಹೈರಾಣಾಗುವುದು, ಸೋಲುವುದು, ಆ ಸೋಲಿಗೆ ದೇವರನ್ನು ಹೊಣೆಗಾರನನ್ನಾಗಿಸಿ ದುಃಖಿಸುವುದು ಸಾಮಾನ್ಯರ ಬದುಕಿನ ರೀತಿ-ನೀತಿ.

ಜೀವರುಗಳಲ್ಲಿ ಪ್ರಕೃತಿಯ ಭಾಗವಾಗಿರುವ ದೇಹ ಮತ್ತು ಜೀವವೆಂಬ ಅಂತ ಶ್ಚ್ಯೆತನ್ಯವಿದೆ. ಈ ಚೈತನ್ಯವೇ ಪ್ರಕೃತಿಗೆ ಅತೀತವಾದ ಆತ್ಮ. ಈ ಅಂತರಾತ್ಮದ ಬಗೆಗಿನ ಜ್ಞಾನವೆ ಮನುಷ್ಯನನ್ನು ಸೃಷ್ಟಿಯಲ್ಲೇ ವಿಶಿಷ್ಟನನ್ನಾಗಿಸಿದೆ. ಆದರೆ ಎಲ್ಲರಲ್ಲೂ ಈ ಪ್ರಜ್ಞೆಯು ಜಾಗೃತವಾಗಿರುವುದಿಲ್ಲ. ಹಲವರನ್ನು ಮಾಯಾ-ಮೋಹದ ಪೊರೆಯು ಕವಿದಿರುತ್ತದೆ. ಕಾಮಕ್ರೋಧಾದಿ ಆರುಬಗೆಯ ಹಗೆಗಳಿಂದ ಬಾಧಿತರಾಗಿರುತ್ತಾರೆ. ಜೊತೆಗೆ ಪೂರ್ವಜನುಮದ ಕರ್ಮವಾಸನೆಗಳು ಕಾಡುತ್ತಿರುತ್ತವೆ. ಇವೆಲ್ಲವನ್ನೂ ಮೀರಿ ನಿಲ್ಲುವ ವಿವೇಚನಾ ಶಕ್ತಿಯೂ ಮನುಷ್ಯನಲ್ಲಿಯೇ ಇದೆ ಎನ್ನುವುದು ಸತ್ಯ.

ಮನುಜ ಸ್ವಭಾವದಲ್ಲಿ ಸತ್ತ್ವ, ರಜೋ ಮತ್ತು ತಮೋಗುಣಗಳು ಅಸಮವಾಗಿ ಬೆರೆತಿರುತ್ತವೆ. ರಜೋ ಮತ್ತು ತಮೋಗುಣಗಳನ್ನು ಮೀರಿ ಸತ್ತ್ವಯುತನಾಗುವುದಕ್ಕೆ ಪ್ರಯತ್ನಶೀಲನಾಗಬೇಕು. ಇದರಿಂದಾಗಿ ಪ್ರತಿಕೂಲ ಸಂದರ್ಭಗಳು ಎದುರಾದಾಗ ಮನಸ್ಸು ಭಾವಾವೇಶಕ್ಕೆ ಒಳಗಾಗುವುದಿಲ್ಲ. ಆಂತರ್ಯಕ್ಕೆ ಸಮಸ್ಯಾ ಪರಿಹಾರದ ಮಾರ್ಗವು ಗೋಚರವಾಗುತ್ತದೆ, ಸ್ಪಷ್ಟ ನಿರ್ಣಯವು ಸಾಧ್ಯವಾಗು ತ್ತದೆ. ಆಂತರ್ಯವು ಅಂತರಾತ್ಮದ ನೆಲೆಮನೆಯಲ್ಲವೇನು?

ಆದರೆ ಸಮಾಜದಲ್ಲಿ ಹಲವು ವಿಪರ್ಯಾಸಗಳನ್ನು ಕಾಣುತ್ತೇವೆ. ಧಾರ್ವಿುಕ ನಂಬಿಕೆ, ಭಕ್ತಿ, ಆಚರಣೆಗಳಲ್ಲಿ ಇನ್ನಿಲ್ಲದಷ್ಟು ತೊಡಗಿಸಿಕೊಂಡ ವ್ಯಕ್ತಿಯು ವ್ಯಾವಹಾರಿಕ ಬದುಕಿನಲ್ಲಿ ಅಧರ್ವಿುಯಾಗಿರುತ್ತಾನೆ. ಪರಮ ಸ್ವಾರ್ಥಿಯು, ನಯವಂಚಕನೂ ಆಗಿರುತ್ತಾನೆ. ತನ್ನ ಜೀವನದ ಸೌಭಾಗ್ಯಗಳೆಲ್ಲವೂ ದೇವರದ್ದು ಎನ್ನುವುದು ಕೂಡಿ ಪ್ರಚಾರಕ್ಕಾಗಿ ಎನ್ನುವಷ್ಟು ಅಸಹಜತೆಯನ್ನು ಮೆರೆಯುತ್ತಾನೆ. ಅವನಿಗೆ ಭಕ್ತಿಯು ಪ್ರದರ್ಶನದ, ಪ್ರತಿಷ್ಠೆಯ ಸರಕಾಗಿರುತ್ತದೆ. ದೇವರ ಮಹಿಮೆಯ ಕಥೆಯನ್ನು, ನೀತಿಯ ಮಾತುಗಳನ್ನು, ಶ್ಲೋಕದ ಅರ್ಥವನ್ನು ತಿಳಿದ ಮೇಲೂ ಅದನ್ನು ಅನುಸರಿಸದೆ ಹೋದರೆ ಅವನ ಭಕ್ತಿಗೇನರ್ಥ?

ಇನ್ನು ಕೆಲವರು ದೈವಾನುಗ್ರಹಕ್ಕಾಗಿ ನಿರಂತರ ಪ್ರಾರ್ಥನೆಯನ್ನು ಮಾಡುತ್ತಾರೆಯೇ ವಿನಾ ಪ್ರಯತ್ನ ಶೀಲರಾಗಲಾರರು. ಪವಾಡ ಗಳನ್ನು ನಿರೀಕ್ಷಿಸುತ್ತಾ, ಬೇಡಿದ್ದು, ಬಯಸಿದ್ದು ಕೈಗೂಡದೆ ಹೋದರೆ ನಿರಾಶೆಯಿಂದ ನಿಟ್ಟುಸಿರಿಡುತ್ತಾ ಬಾಳುತ್ತಾರೆ. ಗೆದ್ದಾಗ ತನ್ನದು, ಸೋತಾಗ ದೇವರು ನಿಷ್ಕರುಣಿ ಎಂದು ದೂರುವ ಬಕುತರ ಭಕ್ತಿಗೆ ಏನರ್ಥ? ನಿಜವಾದ ಭಕ್ತಿಯಲ್ಲಿ ಸಾತ್ತಿ್ವಕ ಶಕ್ತಿಯು ಜಾಗ್ರತವಾಗಿರುತ್ತದೆ. ಧರ್ಮ ಮಾರ್ಗದಲ್ಲಿ ಸಾಧನೆ-ಸಂಪತ್ತನ್ನು ಪಡೆಯುವ, ನೀತಿಯನ್ನು ಮೀರದ ಕಾಮನೆಗಳನ್ನು ಅನುಭವಿಸುವ, ಧರ್ಮವನ್ನು ವ್ರತದಂತೆ ಆಚರಿಸುತ್ತಾ ಜೀವನ್ಮುಕ್ತನಾಗುವುದು ನಿಜ ಭಕ್ತನ ಬದುಕಿನ ಗುರಿ.

ದೇವರನ್ನು ನಂಬಿದ ಮೇಲೆ ನಾನು, ನನ್ನದು, ನಾನು ಮಾಡಿದೆ ಎಂಬ ಭಾವವು ಕಳಚಿಕೊಳ್ಳುತ್ತದೆ. ಬದುಕಿನ ಭಾಗ್ಯವೆಲ್ಲವೂ ದೇವರ ವರ, ಕಷ್ಟ-ನಷ್ಟಗಳು ಆತ್ಮಕ್ಕೆ ಶಿಕ್ಷಣ, ತನ್ನಿಂದ ಕೊಡಲು ಸಾಧ್ಯವಾದುದು ಈಶ್ವರಾರ್ಪಣವೆಂದು ಬಾಳುತ್ತಾರೆ. ತಾಯಿಯೇ ವಿಷಕೊಟ್ಟರೂ ಶ್ರೀಹರಿ ಕಾಪಾಡುತ್ತಾನೆ ಎಂದು ಆನಂದದಿಂದ ಕುಡಿದ ಪ್ರಹ್ಲಾದ, ತನ್ನ ಕಣ್ಣುಗಳನ್ನೇ ಕಿತ್ತು ಶಿವನಿಗೆ ಅರ್ಪಿಸಿದ ಬೇಡರ ಕಣ್ಣಪ್ಪ, ಪ್ರಕ್ಷುಬ್ದ ಕಡಲಿನ ನಡುವೆ ಪ್ರಾಣಾಪಾಯಕ್ಕೆ ಸಿಲುಕಿದಾಗ ಕಂಗೆಡದೆ ದೇವರು ದಾರಿ ತೋರಿಸುತ್ತಾನೆ ಎಂದು ಪ್ರಯತ್ನಶೀಲರಾಗುವ ಅಚಲ ನಂಬಿಕೆಯೇ ಭಕ್ತಿಯ ಬುನಾದಿ. ಅಂಥವರಿಗೆ ಜಗತ್ತು ದೇವರಿರುವ ಗುಡಿ. ಅಲ್ಲಿ ನಡೆಯುವ ಏಳು-ಬೀಳುಗಳು, ಘಟನಾವಳಿಗಳು ದೇವರ ವಿನೋದ ಲೀಲೆ.

ತಾನು ಆತನ ಕಣ್ಗಾವಲಲ್ಲಿರುವ, ಅವನಾಡಿಸಿದಂತೆ ನಡೆಯುವ ಪುಟ್ಟ ಜೀವವೆನ್ನುವ ಭಾವವಿರುತ್ತದೆ. ಹಾಗಾಗಿ ಪ್ರತಿಯೊಬ್ಬರೂ ಜೀವನದ ಶ್ರೇಷ್ಟತೆಯನ್ನು ಅರಿತು ಅದನ್ನು ಸಾರ್ಥಕ ಕಾರ್ಯಗಳ ಮೂಲಕ ಸುಂದರಗೊಳಿಸಬೇಕು. ಇದುವೆ ದೇವರಿಗೆ ಸಲ್ಲಿಸುವ ಕೃತಜ್ಞತೆ. ಜನ ಸೇವೆ, ಸಾಮಾಜಿಕ ಸ್ಪಂದನೆ, ಎಲ್ಲರೊಂದೆ ಎಂಬ ಭಾವನೆಯು ನಿಜವಾದ ಬಕುತಿ. ಇದರಿಂದ ಆತ್ಮೋದ್ಧಾರವು ಸಾಧ್ಯ (ಲೇಖಕರು ಉಪನ್ಯಾಸಕರು, ಕವಯಿತ್ರಿ, ಪ್ರತಿಕ್ರಿಯಿಸಿ: vvsudina@gmail.com, kaviadoor@gmail.com)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net