ಶ್ರೀ ಚನ್ನಕೇಶವಸ್ವಾಮಿ ಪಾದ ಸ್ಪರ್ಶಿಸಿದ ಸೂರ್ಯನ ಕಿರಣಗಳು

22blrp1
ಬೇಲೂರಿನ ಶ್ರೀ ಚನ್ನಕೇಶವಸ್ವಾಮಿ ದೇಗುಲದಲ್ಲಿ ಸೂರ್ಯರಶ್ಮಿ ಕಿರಣಗಳು ದೇವರ ಉತ್ಸವ ಮೂರ್ತಿಯ ಪಾದದ ಮೇಲೆ ಮಂಗಳವಾರ ಪ್ರಕಾಶಮಾನವಾಗಿರುವುದು. ಹಾಗೂ ದೇಗುಲದ ರಾಜಗೋಪುರದೊಳಗಿನಿಂದ ಸೂರ್ಯ ಕಾಣಿಸುತ್ತಿರುವುದು.
Published on

ಬೇಲೂರು: ವರ್ಷಕ್ಕೊಮ್ಮೆ ಶ್ರೀ ಚನ್ನಕೇಶವಸ್ವಾಮಿ ದೇಗುಲದಲ್ಲಿ ಸೂರ್ಯರಶ್ಮಿಯ ಕಿರಣಗಳು ದೇವರ ಮೂರ್ತಿಯ ಮೇಲೆ ಮಂಗಳವಾರ ಬೆಳಗ್ಗೆ ಪ್ರಕಾಶಮಾನವಾಗಿದ್ದು ನೆರೆದಿದ್ದ ಭಕ್ತರು ಹಾಗೂ ಸಾರ್ವಜನಿಕರನ್ನು ಪುಳಕಿತಗೊಳಿಸಿತಲ್ಲದೆ, ಸೂರ್ಯ ರಶ್ಮಿಯನ್ನು ಕಣ್ತುಂಬಿಕೊಂಡ ಭಕ್ತರು ಪುನೀತರಾದರು.

ಮಂಗಳವಾರ ಬೆಳಗ್ಗೆ 6 ಗಂಟೆಗೆ ಶ್ರೀ ಚನ್ನಕೇಶವಸ್ವಾಮಿ ದೇಗುಲದ ಗರ್ಭಗುಡಿಯ ಬಾಗಿಲನ್ನು ಅರ್ಚಕರು ತೆರೆದಿದ್ದರಿಂದ ಸೂರ್ಯರಶ್ಮಿಯ ಕಿರಣಗಳ ದೇವರ ಪಾದ ಸ್ಪರ್ಶಿಸುವ ಅಪೂರ್ವ ಕ್ಷಣಕ್ಕಾಗಿ ನೂರಾರು ಜನರು ಕಾದು ಕುಳಿತಿದ್ದರು. ಬೆಳಗಿನ ಸೂರ್ಯೋದಯದ ನಂತರ 6.05ರ ಸಮಯದಲ್ಲಿ ದೇಗುಲದ ಮುಂಬಾಗದಲ್ಲಿರುವ ರಾಜಗೋಪುರದಿಂದ ದೇಗುಲದ ಗವಾಕ್ಷಿ ಮೂಲಕ ಸೂರ್ಯ ರಶ್ಮಿಯ ಕಿರಣಗಳು ಶ್ರೀ ಚನ್ನಕೇಶವಸ್ವಾಮಿ ಉತ್ಸವ ಮೂರ್ತಿ ಮೇಲೆ ಬಿತ್ತು. ನಂತರ 6.12ಕ್ಕೆ ಸೂರ್ಯನ ದರ್ಶನವಾಯಿತು. 6.20ಕ್ಕೆ ಕೆಂಪು ಬಣ್ಣದ ಸೂರ್ಯ ರಶ್ಮಿಗಳು ದೇವರ ಮೂರ್ತಿಯ ಮೇಲೆ ಪಸರಿಸಿತು. 6.21ರ ನಂತರ ಹಂತ ಹಂತವಾಗಿ ಸೂರ್ಯನ ಕಿರಣಗಳು ಕ್ಷೀಣಿಸಿದವು. ಈ ಸೂರ್ಯರಶ್ಮಿ ಸ್ಪರ್ಶದ ಕುತೂಹಲಕರ ವಿದ್ಯಾಮಾನವು ದೇಗುಲದಲ್ಲಿ ನೆರೆದಿದ್ದ ಭಕ್ತರನ್ನು ಪುಳಕಿತಗೊಳಿಸಿತು.

ಈ ಸೂರ್ಯರಶ್ಮಿಯೂ ಪ್ರತಿವರ್ಷ ದೇವರ ಗರ್ಭಗುಡಿ ಪ್ರವೇಶಿಸುತ್ತದೆ ಎಂಬುದನ್ನು ಪ್ರಥಮವಾಗಿ ಪರಿಚಯಿಸಿದ ಸಂಶೋಧಕ ಡಾ.ಶ್ರೀವತ್ಸ ವಟಿ ಅವರು ದೇವರ ಪಾದ ಸ್ಪರ್ಶಿಸುವ ಸೂರ್ಯರಶ್ಮಿಯ ಕುರಿತು ಮಾಹಿತಿ ನೀಡಿದರು. ವರ್ಷಕ್ಕೊಂದು ಬಾರಿ ನೇರವಾಗಿ ದೇವರ ಪಾದದ ಮೇಲೆ ಬೀಳುವುದು ದೇವಾಲಯ ನಿರ್ಮಾಣವಾದಾಗಿನಿಂದಲೂ ನಡೆಯುತ್ತಿದೆ. ಸರಳ ರೇಖೆಯಲ್ಲಿ ದೇವಾಲಯದ ಬ್ರಹ್ಮಸೂತ್ರವು ರೇಖೆಯ ನೇರಕ್ಕೆ ಇರುವುದರಿಂದ ನಿರ್ದಿಷ್ಟ ಕೋನದಿಂದ ಕಿರಣ ಬೀಳುತ್ತದೆ. ವಿಶೇಷವೆಂದರೆ ಸೂರ್ಯನು ತನ್ನ ಚಲನೆಯ ಕಾರಣ ವರ್ಷದಲ್ಲಿ 6 ತಿಂಗಳು ಉತ್ತರಕ್ಕೂ 6 ತಿಂಗಳು ದಕ್ಷಿಣಕ್ಕೂ ಚಲಿಸುತ್ತಾನೆ. ಇದರಿಂದ ಪ್ರತಿನಿತ್ಯ ಸೂರ್ಯೋದಯದಲ್ಲಿ ಅತ್ಯಲ್ಪ ಬದಲಾವಣೆಯಾಗುತ್ತದೆ.

ಬೇಲೂರು ಶ್ರೀ ಚನ್ನಕೇಶವ ದೇವಾಲಯ ಭೂಮಧ್ಯೆ ರೇಖೆಗೆ 8 ಡಿಗ್ರಿಯಷ್ಟು ಉತ್ತರಕ್ಕೆ ಇರುವುದರಿಂದ ಬ್ರಹ್ಮಸೂತ್ರ ರೇಖೆಗಳು ನೇರವಾಗಿ ದೇಗುಲ ಪ್ರವೇಶಿಸುತ್ತದೆ. 2002ರಲ್ಲಿ ಚೆನ್ನಕೇಶವಸ್ವಾಮಿ ದೇಗುಲದೊಳಗೆ ಸೂರ್ಯನ ಕಿರಣ ಪ್ರವೇಶದ ಬಗ್ಗೆ ಕುತೂಹಲ ಮೂಡಿಸಿತು. ಅಂದು ಖಗೋಳ ಚಲನಸೂತ್ರ, ಗಣಿತ ಸೂತ್ರಗಳು ಹಾಗೂ ದೈನಂದಿನ ನಭೋ ವಿದ್ಯಾಮಾನಗಳ ಅಧ್ಯಯನ ನಡೆಸಿ ದೇವಾಲಯದ ಬ್ರಹ್ಮಸೂತ್ರ ರೇಖೆಯ ನೇರಕ್ಕೆ ಸೂರ್ಯೊದಯ ಆಗುವ ದಿನಾಂಕವನ್ನು ನಿರ್ಣಯಿಸಿದ್ದು, ಅದರಂತೆ ಮಂಗಳವಾರ ಬೆಳಗ್ಗೆ ಶ್ರೀ ಚನ್ನಕೇಶವಸ್ವಾಮಿ ಗರ್ಭಗುಡಿಯೊಳಗೆ ಸೂರ್ಯರಶ್ಮಿ ಪ್ರವೇಶವಾಗಿದೆ. ಕಳೆದ 21 ವರ್ಷದಿಂದ ಪ್ರತಿವರ್ಷ ಸೂರ್ಯರಶ್ಮಿ ದೇವರ ಗರ್ಭಗುಡಿಯ ಮೇಲೆ ಬೀಳುವುದು ಕಂಡುಬರುತ್ತಿದೆ. ಆದರೆ ಮೋಡದ ಕಾರಣದಿಂದ ಮಾತ್ರ ಕೆಲ ವರ್ಷ ಸೂರ್ಯರಶ್ಮಿ ಕಾಣಿಸಿಲ್ಲ ಎಂದು ತಿಳಿಸಿದರು.

ಆಗಮಿಕ ಅರ್ಚಕರಾದ ಶ್ರೀನಿವಾಸ ಭಟ್ಟರ್, ನರಸಿಂಹಸ್ವಾಮಿ ಭಟ್ಟರ್ ಸೇರಿದಂತೆ ಸೂರ್ಯರಶ್ಮಿ ವೀಕ್ಷಿಸಲು ನೂರಾರು ಜನರು ದೇಗುಲದಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net