ರಾಜ್ಯದಲ್ಲಿ ಪ್ರತಿಯೊಂದಕ್ಕೂ ರೇಟ್ ಫಿಕ್ಸ್ ಆಗಿದೆ| Rate is fixed

Siddaramaiah H D Kumaraswamy
Published on

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಪ್ರತಿಯೊಂದಕ್ಕೆ ರೇಟ್ ಕಾರ್ಡ್ ಫಿಕ್ಸ್ ಆಗಿದೆ(The rate is fixed for each state). ಕಂದಾಯ ಇಲಾಖೆಯಲ್ಲಿ ಎಲ್ಲ ಪೋಸ್ಟ್‌ಗಳಿಗೂ ರೇಟ್ ನಿಗದಿ ಮಾಡಲಾಗಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಆರೋಪ ಮಾಡಿದರು.

ಬೆಂಗಳೂರಿನಲ್ಲಿ ಮಾಧ್ಯಮಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವರು, 60ಪರ್ಸೆಂಟ್ ಕಮೀಷನ್ ಆರೋಪವನ್ನು ಪುನರುಚ್ಚರಿಸಿದರು.

60 ಪರ್ಸೆಂಟ್ ಕಮೀಷನ್ ಆರೋಪಕ್ಕೆ ಕುಮಾರಸ್ವಾಮಿ ದಾಖಲೆ ಕೊಡಲಿ ಎಂದು ಹೇಳುತ್ತಿದ್ದಾರೆ. ಕಾಂಗ್ರೆಸ್ ಮುಖಂಡರು, ಗುತ್ತಿಗೆದಾರರೇ ಪರ್ಸಂಟೇಜ್ ಆರೋಪ ಮಾಡುತ್ತಿದ್ದಾರೆ. ಅವರನ್ನು ಪರ್ಸಂಟೇಜ್ ಕೇಳದಿದ್ದರೆ ಅವರು ಯಾಕೆ ಆರೋಪ ಮಾಡುತ್ತಿದ್ದರು. ಸರ್ಕಾರ ಅವರನ್ನೇ ಕೇಳಿ ದಾಖಲೆ ಪಡೆದುಕೊಳ್ಳಬೇಕು ಎಂದರು.

ಸಿದ್ದರಾಮಯ್ಯ ಅವರು ಮಹಾನ್ ನಾಯಕರು. ಪೇ ಸಿಎಂ ಅಂತ ಪೋಸ್ಟರ್ ಅಂಟಿಸಲು ಹೋಗಿದ್ದರು. ಅವರು ಇಲ್ಲಿಯವರೆಗೆ ಜನರ ಮುಂದೆ ಯಾವ ದಾಖಲೆ ಇಟ್ಟಿದ್ದಾರೆ. ಕೆಂಪಣ್ಣ ಹೇಳಿದರು ಎಂದು ಸಿದ್ದರಾಮಯ್ಯ ಹೇಳುತ್ತಾರೆ. ಆದರೆ, ಕೆಂಪಣ್ಣ ಅವರಿಂದ ಸಿದ್ದರಾಮಯ್ಯ ಅವರು ದಾಖಲೆ ಪಡೆದುಕೊಳ್ಳಬೇಕಿತ್ತಲ್ಲವೇ? ಈಗ ಕಂಟ್ರಾಕ್ಟರ್‌ಗಳೇ 60 ಪರ್ಸೆಂಟ್ ವಸೂಲಿ ಬಗ್ಗೆ ಆರೋಪ ಮಾಡುತ್ತಿದ್ದಾರೆ. ಅದಕ್ಕಿಂತ ಸಾಕ್ಷಿ ಬೇಕಾ ಇವರಿಗೆ? ಈ ಆಟ ಸರ್ಕಾರ ಬಿಡಬೇಕು ಎಂದು ವಾಗ್ದಾಳಿ ನಡೆಸಿದರು.

ಕೃಷ್ಣಭೈರೇಗೌಡ ವಿರುದ್ದ ವಾಗ್ದಾಳಿ

ಮಗ ಸೋತಿರುವುದಕ್ಕೆ ಹತಾಶರಾಗಿ ಕುಮಾರಸ್ವಾಮಿ 60 ಪರ್ಸೆಂಟ್ ಆರೋಪ ಮಾಡುತ್ತಿದ್ದಾರೆ ಎಂದು ಸಚಿವ ಕೃಷ್ಣಭೈರೇಗೌಡ ಹೇಳಿದ್ದಾರೆ. ನಾನು ಮಗ ಸೋತಿರುವುದಕ್ಕೆ ಹತಾಶನಾಗಿದ್ದೇನೋ ಇಲ್ಲವೋ. ಎಂಬುದು ಇರಲಿ. ಅದನ್ನು ಬಿಟ್ಟು ಮೊದಲು 60 ಪರ್ಸೆಂಟ್ ಕಮೀಷನ್ ಬಗ್ಗೆ ಉತ್ತರ ಹೇಳಲಿ ಎಂದು ಸವಾಲು ಹಾಕಿದರು.

ಕಂದಾಯ ಇಲಾಖೆ ಸತ್ಯ ಮಾರ್ಗದಲ್ಲಿ ನಡೆಯುತ್ತಿದೆಯಾ? ಬೆಂಗಳೂರು ಎಡಿಸಿ ಪೋಸ್ಟ್‌ಗೆ ಎಷ್ಟು ದುಡ್ಡು ತೆಗೆದುಕೊಳ್ಳುತ್ತಿದ್ದೀರಿ? ಎಷ್ಟು ರೇಟ್ ಫಿಕ್ಸ್ ಮಾಡಿಕೊಂಡಿದ್ದೀರಾ? ಆ ಹಣ ಯಾರು ಯಾರಿಗೆ ಹೋಗುತ್ತದೆ? ಏನೇನು ದಂಧೆ ನಡೆಸುತ್ತಿದ್ದೀರಿ ಎನ್ನುವುದು ನಮಗೆ ಗೊತ್ತಿಲ್ಲವಾ? ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರಕಾರ ಸಹಿ ಮಾರಾಟಕ್ಕೆ ಇಟ್ಟಿದೆ

ನಾನು ಕೂಡ ಎರಡು ಸಿಎಂ ಆಗಿ ಅಧಿಕಾರ ನಡೆಸಿದ್ದೇನೆ. ನಾನು ಹರಿಶ್ಚಂದ್ರ ಎಂದು ಎಲ್ಲೂ ಹೇಳಿಲ್ಲ. ವಿಧಾನಸಭೆಯಲ್ಲಿಯೇ ಈ ಮಾತು ಹೇಳಿದ್ದೇನೆ. ಚುನಾವಣೆ ನಡೆಸಬೇಕಾದರೆ ಇನ್ನೊಬ್ಬರ ಹತ್ತಿರ ಕೈ ಚಾಚಲೇಬೇಕು. ಆದರೆ ನಾನು ಅಧಿಕಾರ ನಡೆಸುವಾಗ ನನ್ನ ಸಹಿಯನ್ನು ಮಾರಾಟಕ್ಕೆ ಇಟ್ಟಿರಲಿಲ್ಲ. ಈ ಸರ್ಕಾರ ಪ್ರತಿಯೊಂದಕ್ಕೂ ಸಹಿಯನ್ನು ಮಾರಾಟಕ್ಕೆ ಇಟ್ಟಿದೆ. ಪ್ರತಿಯೊಂದಕ್ಕೂ ಲೂಟಿ ಹೊಡೆದುಕೊಂಡು ಕೂತಿದ್ದಾರೆ ಕಿಡಿಕಾರಿದರು.

ನಾನು ಸತ್ಯ ಹರಿಶ್ಚಂದ್ರ ಎಂದು ಎಲ್ಲೂ ಹೇಳಿಲ್ಲ. ಇವತ್ತಿನ ರಾಜಕಾರಣಕ್ಕೆ ದುಡ್ಡು ಬೇಕು. ಪ್ರೀತಿ ವಿಶ್ವಾಸದಿಂದ ನಾವು ಕೆಲಸ ಮಾಡಿದಾಗ ಚುನಾವಣೆ ಸಮಯದಲ್ಲಿ ಯಾರೋ ನಾಲ್ವರು ಸಹಾಯ ಮಾಡುತ್ತಾರೆ. ಆದರೆ ಅಧಿಕಾರ ಇಟ್ಟುಕೊಂಡು ಪ್ರತಿದಿನ ನನ್ನ ಸಹಿಯನ್ನು ಮಾರಾಟಕ್ಕೆ ಇಟ್ಟಿರಲಿಲ್ಲ. ಈ ಸರಕಾರ ಪ್ರತಿಯೊಂದಕ್ಕೂ ತನ್ನ ಸಹಿಯನ್ನು ಮಾರಾಟಕ್ಕೆ ಇಟ್ಟಿದೆ ಎಂದು ದೂರಿದರು.

ಶತ್ರು ನಾಶಕ್ಕೆ ದೇವರ ಮೊರೆ ಗೊತ್ತಿಲ್ಲ

ಡಿ.ಕೆ.ಶಿವಕುಮಾರ್ ತಮಿಳುನಾಡಿನಲ್ಲಿ ಶತ್ರು ಸಂಹಾರ ಪೂಜೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಕುಮಾರಸ್ವಾಮಿ, ಅಧಿಕಾರ ಬೇಕು ಎಂದು ದೇವರ ಮೊರೆ ಹೋಗಿದ್ದು ಸಾಮಾನ್ಯ. ಆದರೆ, ಎಲ್ಲೋ ಶತ್ರುನಾಶಕ್ಕೆ ಹೋಗುವುದು ನನಗೆ ಗೊತ್ತಿಲ್ಲ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net