ಸನಾತನ ಹಿಂದು ಧರ್ಮದ ಬಗ್ಗೆ ಪ್ರಶ್ನೆ ಅಸಾಧ್ಯ

06bhr 9
ಬಾಳೆಹೊನ್ನೂರಲ್ಲಿ ಆಯೋಜಿಸಿದ್ದ ಶ್ರೀಕೃಷ್ಣ ವೇಷ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಪುಟಾಣಿಗಳು.
Published on

ಬಾಳೆಹೊನ್ನೂರು: ಭಾರತದ ಅಸ್ಮಿತೆಯೇ ಸನಾತನ ಹಿಂದು ಧರ್ಮವಾಗಿದ್ದು, ಇಂತಹ ಸನಾತನ ಧರ್ಮದ ಬಗ್ಗೆ ಪ್ರಶ್ನೆ ಮಾಡುವುದು ಅಸಾಧ್ಯದ ಮಾತು ಎಂದು ತಾಲೂಕು ಕಸಾಪ ಮಾಜಿ ಅಧ್ಯಕ್ಷ ಕೆ.ಟಿ.ವೆಂಕಟೇಶ್ ಹೇಳಿದರು.
ಪಟ್ಟಣದ ಮಾರಿಗುಡಿ ರಸ್ತೆಯ ವಾಣಿ ಕಲೆ ಮತ್ತು ಸಾಹಿತ್ಯ ಅಧ್ಯಯನ ಕೇಂದ್ರದಲ್ಲಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಬುಧವಾರ ಆಯೋಜಿಸಿದ್ದ ಶ್ರೀಕೃಷ್ಣ ಜನ್ಮಾಷ್ಟಮಿ ಮತ್ತು ಶ್ರೀಕೃಷ್ಣ ವೇಷ ಸ್ಪರ್ಧಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಭವ್ಯ ಭಾರತ ದೇಶವು ಸಂಸ್ಕೃತಿ ಸಂಕೇತವಾಗಿದ್ದು, ಸಂಸ್ಕೃತಿ, ಸಂಸ್ಕಾರವೇ ದೇಶದ ಜೀವಾಳವಾಗಿದೆ. ವಿವಿಧತೆಯಲ್ಲಿ ಏಕತೆ ಕಾಣುವುದೇ ದೇಶದ ಸಂಸ್ಕೃತಿ. ಜಗತ್ತಿನಲ್ಲಿ ಸೃಷ್ಟಿಕರ್ತ ಭಗವಂತ ಇದ್ದಾನೆ ಎಂಬುದು ನಮ್ಮ ನಂಬಿಕೆಯಾಗಿದೆ ಎಂದರು.
ದೇಶದ ಪ್ರತಿಯೊಬ್ಬ ಪ್ರಜೆಯನ್ನು ವಿವಿಧತೆ, ಏಕತೆ, ಒಗಟ್ಟಿನಲ್ಲಿ ಕೊಂಡೊಯ್ಯುವ ಶಕ್ತಿ ನಮ್ಮ ಧರ್ಮಕ್ಕಿದೆ. ಸಂಸ್ಕೃತಿ, ಸಂಸ್ಕಾರ ಉಳಿಸಿ ಬೆಳೆಸುವ ಕೆಲಸವಾಗಬೇಕಿದೆ. ಮಹಾಭಾರತದಲ್ಲಿ ಶ್ರೀಕೃಷ್ಣನ ಪಾತ್ರ ಮಹತ್ತರವಾಗಿದೆ. ಶ್ರೀಕೃಷ್ಣನಂತೆ ಸತ್ಯ, ಧರ್ಮ, ನಿಷ್ಠೆಯನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಭವ್ಯ ಭಾರತದ ನಿರ್ಮಾಣ ಸಾಧ್ಯ ಎಂದರು.
ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಯಜ್ಞಪುರುಷ ಭಟ್ ಮಾತನಾಡಿ, ಆಧುನಿಕತೆಯ ಭರಾಟೆ, ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಕ್ಕಳಿಗೆ ಪಾಲಕರು, ಸಂಘ ಸಂಸ್ಥೆಗಳು ಪ್ರೋತ್ಸಾಹ ನೀಡಬೇಕಿದೆ. ಶ್ರೀಕೃಷ್ಣನ ಭಗವದ್ಗೀತೆ ಸಂದೇಶ ಸಾರ್ವಕಾಲಿಕವಾಗಿದ್ದು , ಗೀತೆಯ ಸಾರವನ್ನು ಬದುಕಿನಲ್ಲಿ ಅಳವಡಿಸಿಕೊಂಡರೆ ಜನ್ಮ ಸಾರ್ಥಕತೆ ಪಡೆಯುತ್ತದೆ ಎಂದರು.
ಪಿಎಸಿಎಸ್ ಅಧ್ಯಕ್ಷ ಟಿ.ಎಂ.ಉಮೇಶ್ ಕಲ್ಮಕ್ಕಿ, ರೋಟರಿ ಅಧ್ಯಕ್ಷ ಎ.ಆರ್.ಸುರೇಂದ್ರ, ತಾಲೂಕು ಕಸಾಪ ಪ್ರಧಾನ ಕಾರ್ಯದರ್ಶಿ ಸತೀಶ್ ಅರಳೀಕೊಪ್ಪ, ಖಾಂಡ್ಯ ಹೋಬಳಿ ಕಸಾಪ ಅಧ್ಯಕ್ಷ ರಾಜಪ್ಪಗೌಡ, ನಾಗರಿಕರ ವೇದಿಕೆ ಸಂಚಾಲಕ ಹಿರಿಯಣ್ಣ, ಹಾಸ್ಯ ಕಲಾವಿದ ಶ್ರೀಕೃಷ್ಣಭಟ್, ನಿವತ್ತ ಉಪನ್ಯಾಸಕ ಎಂ.ಕೆ.ಪುಟ್ಟರಾಜು, ಭರತನಾಟ್ಯ ಕಲಾವಿದೆ ನಯನಾ ಮತ್ತಿತರರು ಇದ್ದರು. ಶ್ರೀಕೃಷ್ಣ ವೇಷ ಸ್ಪರ್ಧೆಯಲ್ಲಿ ವಿಜೇತರಾದ ಪುಟಾಣಿಗಳಿಗೆ ಸ್ಮರಣಿಕೆ, ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net