ಚಡ್ಡಿ ವಿಚಾರಕ್ಕೆ ನಡೆದ ಜಗಳ ತಂದೆಯ ಕೊಲೆಯಲ್ಲಿ ಅಂತ್ಯ

Crime Logo
Published on

ಬೆಂಗಳೂರು: ಚಡ್ಡಿ ವಿಚಾರವಾಗಿ ನಡೆದ ಜಗಳದ ವೇಳೆ ತಂದೆ ಮೇಲೆಯೇ ಮಗ ಹಲ್ಲೆಗೈದು ಕೊಲೆ ಮಾಡಿದ್ದಾನೆ.
ಬನ್ನೇರುಘಟ್ಟದ ಜನತಾ ಕಾಲೋನಿ ನಿವಾಸಿ ವೇಲಾಯುದನ್(೭೬) ಕೊಲೆಯಾದ ದುರ್ದೈವಿ. ಬನ್ನೇರುಘಟ್ಟ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ ೧೧ ಗಂಟೆಗೆ ಈ ಘಟನೆ ನಡೆದಿದೆ. ತಂದೆಯನ್ನೇ ಕೊಲೆಗೈದ ಆರೋಪದಡಿ ಮಗ ವಿನೋದ್‌ಕುಮಾರ್(೪೨) ನನ್ನು ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
ಕೇರಳದ ಏರಿಮಲೆ ಮೂಲದ ವೇಲಾಯುದನ್ ಕುಟುಂಬ ಹಲವು ವರ್ಷಗಳಿಂದ ಜನತಾ ಕಾಲೋನಿಯಲ್ಲಿ ನೆಲೆಸಿದೆ. ವೇಲಾಯುದನ್ ಯಾವುದೇ ಕೆಲಸ ಮಾಡುತ್ತಿರಲಿಲ್ಲ. ಮಗ ವಿನೋದ್ ಕುಮಾರ್ ಮದ್ಯ ವ್ಯಸನಿಯಾಗಿದ್ದು, ಗ್ರಾನೈಟ್ ಮಾರ್ಕೆಟಿಂಗ್ ವ್ಯವಹಾರ ಮಾಡುತ್ತಿದ್ದ. ವೇಲಾಯುದನ್ ಮನೆಯಲ್ಲೇ ಹೆಚ್ಚು ಇರುತ್ತಿದ್ದರಿಂದ ಚಡ್ಡಿ ಹಾಕಿಕೊಂಡು ಓಡಾಡುತ್ತಿದ್ದರು. ಚಡ್ಡಿ ಮೇಲೆ ಪಂಚೆ ಧರಿಸುವಂತೆ ವಿನೋದ್ ಕುಮಾರ್ ಹಲವು ಬಾರಿ ಹೇಳಿದ್ದ ಎನ್ನಲಾಗಿದೆ.
ಶನಿವಾರ ರಾತ್ರಿ ವೇಲಾಯುದನ್ ಮನೆಯಲ್ಲಿ ಚಡ್ಡಿ ಧರಿಸಿದ್ದರು. ಪಾನಮತ್ತನಾಗಿ ಮನೆಗೆ ಬಂದ ವಿನೋದ್ ಕುಮಾರ್, ಚಡ್ಡಿ ವಿಚಾರ ಪ್ರಸ್ತಾಪಿಸಿ ತಂದೆ ವೇಲಾಯುದನ್ ಜತೆಗೆ ಜಗಳ ತೆಗೆದಿದ್ದಾನೆ. ಜಗಳ ವಿಕೋಪಕ್ಕೆ ತಿರುಗಿ ಏಕಾಏಕಿ ವೇಲಾಯುದನ್ ಮೇಲೆ ಕೈಗಳಿಂದ ಹಲ್ಲೆ ಮಾಡಿದ್ದಾನೆ. ಬಳಿಕ ತಲೆಯನ್ನು ಹಿಡಿದು ಜೋರಾಗಿ ಗೋಡೆಗೆ ಗುದ್ದಿಸಿದ್ದಾನೆ. ಈ ವೇಳೆ ಗಂಭೀರವಾಗಿ ಗಾಯಗೊಂಡ ವೇಲಾಯುದನ್ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಬಳಿ ಆರೋಪಿ ವಿನೋದ್ ಕುಮಾರ್ ಮನೆಯಿಂದ ಪರಾರಿಯಾಗಿದ್ದಾನೆ.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿ ಪೊಲೀಸರು ಪರಿಶೀಲನೆ ನಡೆಸಿ, ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಬಳಿಕ ಗಲಾಟೆ ಬಗ್ಗೆ ಮಾಹಿತಿ ಸಂಗ್ರಹಿಸಿ, ಆರೋಪಿಯ ವಿನೋದ್ ಕುಮಾರ್‌ನನ್ನು ಬಂಧಿಸಿದ್ದಾರೆ. ಈ ಸಂಬಂಧ ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net