ನುಡಿ ನಮನ: ನಾಡು ನುಡಿಗೆ ಮಿಡಿದ ಕನ್ನಡದ ನಾಡಿ

ವಿಜಯವಾಣಿ (4)
Published on

ಕನ್ನಡ ಬರಹಗಾರರಲ್ಲಿ ನಾ. ಡಿಸೋಜ (ನಾರ್ಬರ್ಟ್ ಡಿಸೋಜ) ಅವರದು ಮೊದಲ ಸಾಲಿನಲ್ಲಿ ಅಲಂಕೃತವಾಗುವ ಹೆಸರು. ಯಾವುದೇ ಸಿದ್ಧಾಂತ, ಪಂಥಕ್ಕೆ ಅಂಟಿಕೊಳ್ಳದೆ ಕತೆ, ಕಾದಂಬರಿ, ಮಕ್ಕಳ ನಾಟಕ, ಮಕ್ಕಳ ಕಾದಂಬರಿ, ಕಿರು ಧಾರಾವಾಹಿ, ಲೇಖನಗಳ ರಚನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಮನಸ್ಸಿನ ತವಕ, ತಲ್ಲಣಗಳನ್ನು ಅಭಿವ್ಯಕ್ತಿಸಲು ಮುಖ್ಯವಾಗಿ ಅವರು ಆರಿಸಿಕೊಂಡ ಮಾಧ್ಯಮ ಕತೆ ಮತ್ತು ಕಾದಂಬರಿ. ಕನ್ನಡದ ಪ್ರಮುಖ ಪತ್ರಿಕೆಗಳಲ್ಲಿ ಇತ್ತೀಚಿನವರೆಗೂ ಕತೆಗಳನ್ನು ಬರೆಯುತ್ತಿದ್ದುದು ಅವರ ಕ್ರಿಯಾಶೀಲತೆಗೆ ಹಿಡಿದ ಕನ್ನಡಿ. ಅವರ ಕತೆ, ಕಾದಂಬರಿ, ಮಕ್ಕಳ ಕತೆಗಳಿಲ್ಲದ ಕನ್ನಡ ವಿಶೇಷಾಂಕಗಳೇ ಇಲ್ಲವೆನ್ನಬಹುದು.

ಶಿವಮೊಗ್ಗ ಜಿಲ್ಲೆಯ ಸಾಗರದ ಫಿಲಿಪ್ ಡಿಸೋಜ ಮತ್ತು ರೊಪೀನಬಾಯಿ ಅವರ ಪುತ್ರ ನಾರ್ಬರ್ಟ್ ಡಿಸೋಜ. 1937ರ ಜೂ. 6ರಂದು ನಾರ್ಬರ್ಟ್ ಜನಿಸಿದರು. ಮೊದಲಿನಿಂದಲೂ ಮನೆಯಲ್ಲಿ ಸಾಹಿತ್ಯದ ವಾತಾವರಣ. ತಾಯಿ ಜನಪದ ಕತೆಗಳನ್ನು ಹೇಳುತ್ತಿದ್ದರು. ತಂದೆಗೂ ಸಾಹಿತ್ಯ, ಸಂಗೀತ, ನಾಟಕಗಳಲ್ಲಿ ಆಸಕ್ತಿ ಇದ್ದುದರಿಂದ ಇವರಿಗೆ ಪೂರಕ ವಾತಾವರಣ ದೊರಕಿತು. ಡಿಸೋಜ ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಇಂಟರ್​ವಿುೕಡಿಯೇಟ್ ಓದಿದರು. ಶಿವರಾಮ ಕಾರಂತರಿಂದ ಪ್ರಭಾವಿತರಾದರು. ಕಾರಂತರ ಜೀವನ ದೃಷ್ಟಿ, ಆದರ್ಶ, ಬದುಕನ್ನು ಗಾಢವಾಗಿ ಪ್ರೀತಿಸುವ ರೀತಿ, ಬದುಕಿನ ಬಗ್ಗೆ ಇರುವ ಸ್ಪಷ್ಟ ನಿಲುವು ಡಿಸೋಜ ಮೇಲೆ ಪ್ರಭಾವ ಬೀರಿತ್ತು. ಡಿಸೋಜ 1959ರಿಂದ 1995ರವರೆಗೆ ಲೋಕೋಪಯೋಗಿ ಇಲಾಖೆಯಲ್ಲಿ ಟೈಪಿಸ್ಟ್, ಪ್ರಥಮ ದರ್ಜೆ ಗುಮಾಸ್ತರಾಗಿ ಶರಾವತಿ ಯೋಜನೆ (ಕಾರ್ಗಲ್), ಮಾಸ್ತಿಕಟ್ಟೆ, ತೀರ್ಥಹಳ್ಳಿ, ಸಾಗರದಲ್ಲಿ ಸೇವೆ ಸಲ್ಲಿಸಿದ್ದರು.

ನಗುಮೊಗದ ನಾ.ಡಿಸೋಜ

ಡಿಸೋಜ ಸಾಮಾಜಿಕ ಕಾಳಜಿ, ಮೃದು ಮಾತಿನ, ನಗುಮೊಗದ, ಸಜ್ಜನಿಕೆಯುಳ್ಳ ವ್ಯಕ್ತಿ. ಅವರ ಬರವಣಿಗೆ ಅವರಷ್ಟೇ ಸರಳ. ಅವರ ಕೃತಿಗಳು ಓದುಗರಿಗೆ ಮತ್ತು ಹೊಸ ಬರಹಗಾರರಿಗೆ ಆಪ್ತ. ಇಲಾಖೆಯಲ್ಲಿ ಕೆಲಸ ಮಾಡುವಾಗ ಅಲ್ಲಿನ ಅವ್ಯವಹಾರಗಳನ್ನು ಸೂಕ್ಷ್ಮವಾಗಿ ಗಮನಿಸಿದವರು. ಶರಾವತಿ ಯೋಜನೆಯಲ್ಲಿ ಮನೆ-ಮಠ ಕಳೆದುಕೊಂಡು ಪರಿಹಾರಕ್ಕಾಗಿ ಇಲಾಖೆಗೆ ಅಡ್ಡಾಡುತ್ತಿದ್ದ ಜನರ ನೋವು ಆಲಿಸಿದವರು. ಅದಕ್ಕಾಗಿ ಮರುಗಿದವರು. ಮುಳುಗಡೆ, ದ್ವೀಪ, ತಿರುಗೋಡಿನ ರೈತ ಮಕ್ಕಳು, ಒಡ್ಡು ಮತ್ತು ಒಂದು ಜಲಪಾತದ ಸುತ್ತ ಕಾದಂಬರಿಗಳನ್ನು ರಚಿಸಿದ್ದಾರೆ. ಗ್ರಾಮೀಣ ಜನರು ಅದರಲ್ಲೂ ಹಿಂದುಳಿದವರು, ಸರ್ಕಾರದ ನಾನಾ ಯೋಜನೆಗಳಿಂದ ಮನೆ-ಮಠ ಕಳೆದುಕೊಂಡು ಕಷ್ಟಪಡುವುದನ್ನು ಈ ಕಾದಂಬರಿಗಳಲ್ಲಿ ಮನಮುಟ್ಟುವಂತೆ ಚಿತ್ರಿಸಿದ್ದಾರೆ. ನೆಲೆ, ಪಾದರಿಯಾದ ಹುಡುಗ, ತಿಂಗಳ ಪೂಜೆಗೆ ಬಂದ ಮಗ, ದೇವರ ಶಿಲುಬೆ ಮನೆಗೆ ಬಂದದ್ದು, ಗೋಪುರದ ಗಂಟೆ ಮತ್ತು ನಾಲಿಗೆ, ಬಣ್ಣ, ಪಿಟೀಲು, ಕೊನೆ, ಸಮಾಧಿ ಮುಂತಾದ ಕ್ರೈಸ್ತ ಸಮಾಜದ ಹಿನ್ನೆಲೆಯ ಕಾದಂಬರಿ ಬರೆದು ಸಮುದಾಯದ ಅಂಧ ಶ್ರದ್ಧೆಯನ್ನು ಹಾಗೂ ಅವು ಪಡೆದುಕೊಳ್ಳಬೇಕಾದ ಚಲನಶೀಲತೆಯನ್ನು ಗುರುತಿಸಿದ್ದಾರೆ.

ಪ್ರಶಸ್ತಿ ಪುರಸ್ಕಾರಗಳು...

1988ರಲ್ಲಿ ಬೆಳಕಿನೊಡನೆ ಬಂತು ನೆನಪು ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುರಸ್ಕಾರ, ದಿ. ಗುಲ್ವಾಡಿ ವೆಂಕಟರಾವ್ ಪ್ರಶಸ್ತಿ, 1990ರಲ್ಲಿ ಕಾಡಿನ ಬೆಂಕಿ ಚಲನಚಿತ್ರಕ್ಕಾಗಿ ರಜತಕಮಲ ರಾಜ್ಯ ಪ್ರಶಸ್ತಿ, 1993ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, 1998ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಮಂಗಳೂರಿನ ಸಂದೇಶ ಸಾಹಿತ್ಯ ಪ್ರಶಸ್ತಿ, ನವದೆಹಲಿಯ ಕಥಾ ಪ್ರಶಸ್ತಿ, ನಿರಂಜನ ಸಾಹಿತ್ಯ ಪ್ರಶಸ್ತಿ, 2006ರಲ್ಲಿ ದ್ವೀಪ ಚಲನಚಿತ್ರವಾಗಿ ಸ್ವರ್ಣ ಕಮಲ ಹಾಗೂ ರಾಜ್ಯ ಪ್ರಶಸ್ತಿ, 2007ರಲ್ಲಿ ಕುವೆಂಪು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್, 2011ರಲ್ಲಿ ಚಿತ್ರದುರ್ಗದ ಡಾ. ಶಿಮುಶ ಪ್ರಶಸ್ತಿ ಬಂದಿದ್ದವು. 2024ರಲ್ಲಿ ಅವರಿಗೆ ಪಂಪ ಪ್ರಶಸ್ತಿ ಲಭಿಸಿತ್ತು. ಮಡಿಕೇರಿಯಲ್ಲಿ 2014ರಲ್ಲಿ ನಡೆದ ಅಖಿಲ ಭಾರತ 80ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನವನ್ನು ಅವರು ಅಲಂಕರಿಸಿದ್ದರು. ವರ್ಷಪೂರ್ತಿ ಅವರು ಸಾಹಿತ್ಯಿಕ ಚಟುವಟಿಕೆಯಲ್ಲಿ ಭಾಗವಹಿಸುವ ಮೂಲಕ ನಾಡಿನ ಉದ್ದಗಲಕ್ಕೂ ಸಂಚರಿಸಿದ್ದರು.

ಕಾದಂಬರಿಯಾಯ್ತು ಕೊಳಗದ ಅಳತೆ!

ಹಿಂದೆ ಮಲೆನಾಡಿನಲ್ಲಿ ಭೂ ಮಾಲೀಕರು ಗೇಣಿದಾರರಿಂದ ಭತ್ತವನ್ನು ಕೊಳಗದ ಮೂಲಕ ಗೇಣಿ ರೂಪದಲ್ಲಿ ವಸೂಲಿ ಮಾಡುವ ಪದ್ಧತಿ ಜಾರಿಯಲ್ಲಿತ್ತು. ಕೊಳಗದ ಅಳತೆಯೇ ಸರಿಯಿಲ್ಲ ಎಂಬ ವಿಷಯದಿಂದ ಆರಂಭವಾದ ವಿವಾದ ಮುಂದೆ ಕಾಗೋಡು ಸತ್ಯಾಗ್ರಹಕ್ಕೆ ದಾರಿ ಮಾಡಿಕೊಟ್ಟಿತು. ಇದೇ ವಿಷಯವು ನಾ. ಡಿಸೋಜ ಅವರ ಲೇಖನಿಯಲ್ಲಿ ‘ಕೊಳಗ’ ಎಂಬ ಹೆಸರಿನ ಕಾದಂಬರಿಯ ರೂಪದಲ್ಲಿ ಸಮಕಾಲೀನ ತಲ್ಲಣಗಳಿಗೆ ಆಗ ಸ್ಪಂದಿಸಿತ್ತು.

ಪರಿಸರ ನಾಶಕ್ಕೆ ಸಾಕ್ಷಿ

ಲೋಕೋಪಯೋಗಿ ಇಲಾಖೆಯ ನೌಕರರಾಗಿ ಜೋಗ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಕೆಲಸ ಮಾಡಿದ್ದ ನಾ. ಡಿಸೋಜ ಅವರು ಅಭಿವೃದ್ಧಿ ಯೋಜನೆಗಳ ಹೆಸರಿನಲ್ಲಿ ಪರಿಸರದ ಮೇಲೆ ಆಗುತ್ತಿರುವ ಆಕ್ರಮಣಗಳನ್ನು ತೀರಾ ಹತ್ತಿರದಿಂದ ನೋಡಿದವರು. ಮಲೆನಾಡಿನ ಜನರು ಮುಳುಗಡೆಯಿಂದ ಅನುಭವಿಸಿದ ಸಂಕಷ್ಟಗಳನ್ನು ನೋಡಿ ಬಲ್ಲವರು. ಹೀಗಾಗಿ ಇವೆಲ್ಲವೂ ಅವರ ಬರಹಗಳನ್ನು ದಟ್ಟವಾಗಿ ಪ್ರಭಾವಿಸಿದ್ದವು.

ಮೃದು ಹೃದಯದ ಹೋರಾಟಗಾರ

ಕೇವಲ ಕಥೆ, ಕಾದಂಬರಿ ಬರೆದು ಮನೆಯಲ್ಲಿ ಕೂರುವ ಆರಾಂ ಕುರ್ಚಿ ಲೇಖಕರ ಸಾಲಿಗೆ ಸೇರಿದವರಲ್ಲ ಡಿಸೋಜ. ಸಾಗರಕ್ಕೆ ಬ್ರಿಟಿಷರ ಕಾಲದಲ್ಲಿ ಬರುತ್ತಿದ್ದ ರೈಲು ಸಂಚಾರ ನಿಲುಗಡೆಯಾದಾಗ ಪ್ರಬಲವಾದ ಹೋರಾಟ ಸಂಘಟಿಸಿ ಮತ್ತೆ ಈ ಭಾಗಕ್ಕೆ ರೈಲು ಸಂಚಾರ ಆರಂಭವಾಗುವಂತೆ ಮಾಡಿರುವಲ್ಲಿ ಅವರ ಪಾತ್ರ ಪ್ರಮುಖವಾಗಿತ್ತು. ಮಕ್ಕಳ ಸಾಹಿತ್ಯದ ಬಗ್ಗೆ ಡಿಸೋಜ ಅವರಿಗೆ ವಿಶೇಷ ಒಲವು. ಮನೆಯಲ್ಲಿ ಕಥೆ ಹೇಳುವ ಅಜ್ಜಿಯಂದಿರು ಈ ತಲೆಮಾರಿನವರಿಗೆ ಇಲ್ಲವಾಗುತ್ತಿರುವ ಬಗ್ಗೆ ಅವರು ಸದಾ ಬೇಸರ ವ್ಯಕ್ತಪಡಿಸುತ್ತಿದ್ದರು. ಮಕ್ಕಳಿಗೆ ಕಥೆ ಹೇಳುವ ಉತ್ಸಾಹ ತೋರುವಾಗ ಡಿಸೋಜ ತಮ್ಮ ವಯಸ್ಸು ಮರೆತು ತಾವೂ ಮಕ್ಕಳಾಗುತ್ತಿದ್ದರು.

ಸಣ್ಣ ಕಥೆಯ ಮೂಲಕ ಸರ್ಕಾರಕ್ಕೆ ಎಚ್ಚರಿಕೆ

ಕಳೆದ ಶತಮಾನದ ಎಂಬತ್ತರ ದಶಕದ ಕೊನೆಯಲ್ಲಿ ಇಕ್ಕೇರಿಯ ಸುತ್ತಮುತ್ತ ಗಣಿಗಾರಿಕೆ ಆರಂಭವಾಗುತ್ತದೆ ಎಂಬ ಸುದ್ದಿ ವ್ಯಾಪಕವಾಗಿ ಹರಡಿತ್ತು. ಇಕ್ಕೇರಿಯ ದೇವಸ್ಥಾನದ ಮೇಲೆ ಹೆಲಿಕಾಪ್ಟರ್​ಗಳು ಹಾರಾಟ ನಡೆಸತೊಡಗಿದವು. ಆಗ ಅವು ಗಣಿಗಾರಿಕೆ ಸಮೀಕ್ಷೆಗೆ ಬಂದಿದ್ದವು ಎಂಬ ಪುಕಾರು ಎದ್ದಿತು. ಜನರಲ್ಲಿ ಆತಂಕ ಮನೆ ಮಾಡಿತು. ಆಗ ಇದೇ ವಿಷಯ ಆಧರಿಸಿದ ಸಣ್ಣ ಕಥೆಯ ಮೂಲಕ ಸರ್ಕಾರವನ್ನು ಎಚ್ಚರಿಸುವ ಕೆಲಸವು ಡಿಸೋಜ ಮಾಡಿದ್ದರು. ಧಾರ್ವಿುಕ ಆವರಣವು ಹೇಗೆ ವ್ಯವಸ್ಥಿತವಾಗಿ ಮನುಷ್ಯನ ಸ್ವಾತಂತ್ರ್ಯವನ್ನು ಸಂಕುಚಿತಗೊಳಿಸುತ್ತದೆ ಎಂಬುದನ್ನು ತಣ್ಣನೆಯ ಧ್ವನಿಯಲ್ಲಿ ಅವರು ದಾಖಲಿಸಿದ್ದರು.

ಮಕ್ಕಳ ಸಾಹಿತ್ಯದ ಆಸಕ್ತಿ ಹುಟ್ಟಿದ್ಹೇಗೆ?

ನಾ.ಡಿಸೋಜ ಅವರ ತಂದೆ ಶಾಲಾ ಶಿಕ್ಷಕರಾಗಿದ್ದರು. ಮಕ್ಕಳಿಗೆ ಪಾಠ ಮಾಡಲು ಅವರು ಸಣ್ಣ ಸಣ್ಣ ಪದ್ಯಗಳನ್ನು ನೋಟ್​ಬುಕ್​ನಲ್ಲಿ ಬರೆದು ಇಟ್ಟುಕೊಳ್ಳುತ್ತಿದ್ದರು. ಚಿಕ್ಕವರಿದ್ದ ನಾ.ಡಿಸೋಜ ಅವುಗಳನ್ನು ಓದುತ್ತಿದ್ದರು. ಐದು, ಆರನೇ ವಯಸ್ಸಿನಲ್ಲೇ ಅಂತಹ ಪದ್ಯಗಳನ್ನು ಓದುತ್ತಿದ್ದುದು ಅವರಲ್ಲಿ ಮಕ್ಕಳ ಸಾಹಿತ್ಯದ ಬಗ್ಗೆ ಅಪಾರ ಆಸಕ್ತಿಯನ್ನು ಉಂಟು ಮಾಡಿತು. ಕ್ರಮೇಣ ಅವರು ಮಕ್ಕಳಿಗಾಗಿ ಸ್ವತಃ ಸಾಹಿತ್ಯ ರಚಿಸಲು ಆರಂಭಿಸಿದರು.

ವಿಜಯವಾಣಿಯಲ್ಲಿ ಮಿಲಿಟರಿ ಮಾಮ

ಮಕ್ಕಳ ಸುಮಾರು ಹತ್ತು ಮಿನಿ ಕಾದಂಬರಿ, ನಾಟಕ, ಜೀವನ ಚರಿತ್ರೆ, ಸ್ಥಳ ಪರಿಚಯದ ಕೃತಿಗಳನ್ನು ಬರೆದಿದ್ದಾರೆ. ಬಾಲಗಂಧರ್ವ, ಕದಂಬ, ಮಯೂರಶರ್ಮ, ಸದಾಶಿವ ಬ್ರಹ್ಮೇಂದ್ರ, ಬಿಹಾರಿದಾಸ್ ಮುಂತಾದ ಐತಿಹಾಸಿಕ ವ್ಯಕ್ತಿಗಳ ಜೀವನ ಚರಿತ್ರೆಯನ್ನು ಮಕ್ಕಳ ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ. ಅವರು ಬರೆದ ಮಿಲಿಟರಿ ಮಾಮ ಮಕ್ಕಳ ಧಾರಾವಾಹಿಯನ್ನು ‘ವಿಜಯವಾಣಿ’ಯ ಪುಟಾಣಿ ಪುರವಣಿಯ ಮಕ್ಕಳು ಇನ್ನೂ ಮರೆತಿಲ್ಲ.

ದೇವರಿಗೆ ದಿಕ್ಕು, ತಬ್ಬಲಿ, ಕೃಷ್ಣನ ಕೊಡುಗೆ, ಭೂತ, ಮುಂದೇನು? ಹಕ್ಕಿಗಳಿಗೆ ಬಂತು ಬಣ್ಣ, ಗೆಳೆಯರ ಬಳಗಕ್ಕೆ ಜೈ ಮುಂತಾದ ಮಕ್ಕಳ ನಾಟಕಗಳನ್ನು ಬರೆದಿದ್ದಾರೆ. ಗೇರುಸೊಪ್ಪೆ (ಮಿನಿ ಕಾದಂಬರಿ), ಪಾರಿವಾಳ ದ್ವೀಪ, ಹಕ್ಕಿಗೊಂದು ಗೂಡು ಕೊಡಿ, ಮತ್ತೆ ಹೇಳಿದ ಅಜ್ಜಿ ಕತೆಗಳು, ಪಂಚತಂತ್ರದ ಕತೆಗಳು, ಹಿತೋಪದೇಶದ ಕತೆಗಳು, ಗುರುದೇವರ ಕತೆಗಳು ಮುಖ್ಯವಾದವು. ನಿಸರ್ಗ ಪ್ರೇಮಿಯಾಗಿದ್ದರಿಂದ ಇವರ ಕಾದಂಬರಿ ಹಾಗೂ ನಾಟಕಗಳಲ್ಲಿ ಕಾಡು, ಬೆಟ್ಟ-ಗುಡ್ಡ, ಪ್ರಾಣಿ-ಪಕ್ಷಿಗಳು ವಿಜೃಂಭಿಸುತ್ತವೆ.

ಮಾನವ ಕಾದಂಬರಿಯು ಪೌರಾಣಿಕ, ಐತಿಹಾಸಿಕ ಹಾಗೂ ಸಮಕಾಲೀನ ಮೌಲ್ಯಗಳನ್ನು ಪ್ರತ್ಯೇಕವಾಗಿ ನಿರೂಪಿಸುತ್ತದೆ. ಬೆತ್ತಲೆ ಸೇವೆ ಸಾಮಾಜಿಕ ಕಳಕಳಿ ಹೊಂದಿರುವ ವೈಚಾರಿಕ ನಾಟಕ. ಬಂಜೆ ಬೆಂಕಿ, ಮಂಜಿನ ಕಾನು, ಈ ನೆಲ ಈ ಜಲ, ನೆಲ, ಇಕ್ಕೇರಿಯಲ್ಲಿ ಕ್ರಾಂತಿ, ಜೀವಕಳೆ, ಕಾಡಿನ ಬೆಂಕಿ, ಕೊಳಗ, ಗಾಂಧಿ ಬಂದರು, ಮುಖವಾಡ ಇವು ಡಿಸೋಜ ಅವರ ಇತರ ಕಾದಂಬರಿಗಳು.

ಪಠ್ಯಗಳಾದ ಪುಸ್ತಕಗಳು

ಅವರ ಕೃತಿಗಳಾದ ಕಾಡಿನ ಬೆಂಕಿ, ದ್ವೀಪ, ಬಳುವಳಿ, ಬೆಟ್ಟದಪುರದ ದಿಟ್ಟ ಮಕ್ಕಳು, ಆಂತರ್ಯ ಚಲನಚಿತ್ರಗಳಾಗಿವೆ. ಇವರ ಕಾದಂಬರಿ ಹಾಗೂ ಕತೆಗಳಾದ ಮುಳುಗಡೆ, ಕೊಳಗ, ಒಳಿತನ್ನು ಮಾಡಲು ಬಂದವರು, ಬಣ್ಣ, ಪಾದರಿಯಾಗುವ ಹುಡುಗ, ಇಬ್ಬರು ಮಾಜಿಗಳು ಪಠ್ಯಪುಸ್ತಕಗಳಾಗಿವೆ. ಇವರ ಕತೆಗಳು ಕೊಂಕಣಿ, ಮಲಯಾಳಿ, ತೆಲುಗು, ಸಂಸ್ಕೃತ, ಹಿಂದಿ ಮತ್ತು ಇಂಗ್ಲಿಷ್​ಗೂ ಅನುವಾದಗೊಂಡಿವೆ. ಒಡನಾಟ ಸಂಸ್ಥೆ ಕಲೆ ಮತ್ತು ಸಾಹಿತ್ಯವನ್ನು ಅಭಿವ್ಯಕ್ತಿಸುವ ಒಂದು ಸಂಸ್ಥೆ. ಕಾರಂತರಿಂದ ಹಿಡಿದು ಅನೇಕ ಪ್ರಮುಖ ಸಾಹಿತಿಗಳು, ಕಲಾವಿದರು ಇವರ ಒಡನಾಟಕ್ಕೆ ಬಂದುಹೋಗಿದ್ದಾರೆ. ಡಿಸೋಜ ಒಡನಾಡಿಗಳೊಂದಿಗೆ ಬೆರೆತಿದ್ದರು. ಅವರ ಬರಹದಂತೆ ಬದುಕು ಕೂಡ ಸರಳ. ಯಾವುದೇ ಕಾರ್ಯಕ್ರಮವಿರಲಿ, ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವವಾದರೂ ಅಧ್ಯಯನ ಮಾಡಿಕೊಂಡೇ ಹೋಗುತ್ತಿದ್ದರು.

ನದಿ ತಿರುವಿಗೆ ವಿರೋಧ

ಹಿಂದೊಮ್ಮೆ ಶರಾವತಿ ನದಿಯ ನೀರನ್ನು ಬೆಂಗಳೂರಿಗೆ ಕೊಂಡೊಯ್ಯಬೇಕೆಂಬ ಪ್ರಸ್ತಾಪ ಬಂದಾಗ ನಾ.ಡಿಸೋಜ ತೀವ್ರವಾಗಿ ವಿರೋಧಿಸಿದ್ದರು. ಆ ಪ್ರಸ್ತಾವನೆಯ ವಿರುದ್ಧ ನಡೆದ ಆಂದೋಲನದಲ್ಲೂ ಅವರು ಸಕ್ರಿಯವಾಗಿ ಭಾಗವಹಿಸಿದ್ದರು. ಹೀಗೆ ಅವರು ಜನಸಮುದಾಯದ ಆಶೋತ್ತರಗಳ ಜತೆ ನಿರಂತರವಾಗಿ ಗುರುತಿಸಿಕೊಂಡಿರುವ ಅಪರೂಪದ ಲೇಖಕರಾಗಿದ್ದರು.

ಕೈಕೊಟ್ಟ ಆರೋಗ್ಯ

ಕಳೆದ ಕೆಲವು ದಿನಗಳಿಂದ ಅವರು ವಯೋಸಹಜ ಸಮಸ್ಯೆಯಿಂದ ಬಳಲುತ್ತಿದ್ದರು. ಈ ಹಿಂದೆ ಎರಡು ಮೂರು ಬಾರಿ ತೀವ್ರವಾಗಿ ಅಸ್ವಸ್ಥಗೊಂಡಿದ್ದರೂ ಕ್ರಮೇಣ ಚೇತರಿಸಿಕೊಂಡಿದ್ದರು. ಕಾಡುತ್ತಿದ್ದ ಅನಾರೋಗ್ಯದ ನಡುವೆಯೂ ಅವರು ಸಾಹಿತ್ಯಿಕ ಚಟುವಟಿಕೆಯಿಂದ ವಿಮುಖರಾಗಿರಲಿಲ್ಲ. ಯಾರೇ ಕಾರ್ಯಕ್ರಮಗಳಿಗೆ ಕರೆದರೂ ಸಬೂಬು ಹೇಳದೆ ಹಾಜರಾಗುತ್ತಿದ್ದರು. ತಮ್ಮ ಮೃದು ಮಾತು, ಸ್ಪಷ್ಟ ನಿಲುವು, ನಿಖರ ನಡೆ, ಸದಾ ನಿಷ್ಕಲ್ಮಶ ಮುಗುಳ್ನಗೆಯಿಂದ ಗಮನ ಸೆಳೆಯುತ್ತಿದ್ದರು. ಇಂತಹ ನಾ.ಡಿ ಇನ್ನು ಮುಂದೆ ನೆನಪು ಮಾತ್ರ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net