

ಬೆಂಗಳೂರು: ಪೊಲೀಸರು ಕಳ್ಳರನ್ನು ಹಿಂಬಾಯಿಸಿಕೊಂಡು ಹೋಗಿರುವುದನ್ನು ನಾವು ನೋಡಿದ್ದೇವೆ ಆದರೆ ಸಾರ್ವಜನಿಕರೇ ಕಳ್ಳ ಕಳ್ಳ ಎಂದು ಅಟ್ಟಾಡಿಸಿಕೊಂಡು ಹೋಗಿರುವ ಪ್ರಸಂಗ ನಗರದಲ್ಲಿ ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮೇ ೧೭ ರಂದು ರಾಜಗೋಪಾಲನಗರ ಪೊಲೀಸ್ ಠಾಣಾ ವ್ಯಾಪ್ತಿಯ ಪೀಣ್ಯ ೨ ನೇ ಹಂತದಲ್ಲಿ ಈ ಘಟನೆ ನಡೆದಿದೆ. ಹೊಯ್ಸಳ ವಾಹನದಲ್ಲಿದ್ದ ಪೊಲೀಸರು ರಾತ್ರಿ ವೇಳೆ ಜನರಿಂದ ಮಾಮೂಲಿ ಹಣ ವಸೂಲಿ ಮಾಡುತ್ತಿದ್ದರು ಎನ್ನಲಾಗಿದೆ. ಇವರು ಅಸಲಿ ಅಲ್ಲ ನಕಲಿ ಪೊಲೀಸರು ಎಂದು ಆರೋಪಿಸಿ ಸಾರ್ವಜನಿಕರು ಅಟ್ಟಿಸಿಕೊಂಡು ಹೋಗಿದ್ದಾರೆ. ಸಾರ್ವಜನಿಕರು ಮೊಬೈಲ್ನಲ್ಲಿ ವಿಡಿಯೋ ಮಾಡುತ್ತಾ ಅಟ್ಟಿಸಿಕೊಂಡು ಬರುತ್ತಿದ್ದಂತೆ ಪೊಲೀಸರು ಹೊಯ್ಸಳ ವಾಹನದೊಂದಿಗೆ ಪರಾರಿಯಾಗಿದ್ದಾರೆ. ಸಾರ್ವಜನಿಕರೇ ಪೊಲೀಸರನ್ನು ಅಟ್ಟಿಸಿಕೊಂಡು ಹೋಗಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋ ವೈರಲ್ ಆಗಿ ಸಾರ್ವಜನಿಕ ವಲಯದಲ್ಲಿ ಈ ಬಗ್ಗೆ ತೀವ್ರ ಚರ್ಚೆ ಆಗುತ್ತಿದಂತೆ ಎಚ್ಚೆತ್ತುಕೊಂಡಿರುವ ಹಿರಿಯ ಪೊಲೀಸ್ ಅಧಿಕಾರಿಗಳು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆಗೆ ಆದೇಶಿಸಿದ್ದಾರೆ. ತಪ್ಪು ಮಾಡದಿದ್ದರೆ ಪೊಲೀಸರು ಧೈರ್ಯವಾಗಿ ನಿಂತು ಸಾರ್ವಜನಿಕರನ್ನು ಪ್ರಶ್ನಿಸುತ್ತಿದ್ದರು. ತಪ್ಪು ಮಾಡಿರುವುದರಿಂದಲೇ ಪೊಲೀಸರು ಸ್ಥಳದಿಂದ ಪರಾರಿಯಾಗಿದ್ದಾರೆ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.
ಸಾರ್ವಜನಿಕರು ಹೊಯ್ಸಳ ವಾಹನವನ್ನು ಹಿಂಬಾಯಿಸಿಕೊಂಡು ಹೋಗಿರುವ ಘಟನೆ ಗಮನಕ್ಕೆ ಬಂದಿದೆ. ಈ ಬಗ್ಗೆ ತನಿಖೆ ನಡೆಸುವಂತೆ ಕಮಾಂಡ್ ಸೆಂಟರ್‌ನ ಡಿಸಿಪಿಗೆ ಸೂಚಿಸಿದ್ದೇನೆ. ವರದಿ ಬಂದ ನಂತರ ಸೂಕ್ತ ಕ್ರಮ ಜರುಗಿಸುತ್ತೇನೆ.
ಬಿ.ದಯಾನಂದ್ ನಗರ ಪೊಲೀಸ್ ಆಯುಕ್ತ