

ಒಮ್ಮೆ ಉಪಮುಖ್ಯಮಂತ್ರಿ, ನಾಲ್ಕು ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಿ.ಎಸ್.ಯಡಿಯೂರಪ್ಪ ಒಂದು ಬಾರಿಯೂ ಐದು ವರ್ಷಗಳ ಅವಧಿ ಪೂರೈಸಲಿಲ್ಲ. ಆದರೆ ನಾಲ್ಕು ಬಾರಿಯದೂ ಸೇರಿಸಿದರೆ ಐದು ವರ್ಷಗಳಿಗಿಂತ ಸ್ವಲ್ಪ ಹೆಚ್ಚೇ ಆಗುತ್ತದೆ. ಈ ಅವಧಿಯಲ್ಲಿ ಉತ್ತರ ಕರ್ನಾಟಕದ ಬಗೆಗೆ ವಿಶೇಷ ಪ್ರೀತಿ ತೋರಿದ್ದು ಕಾಣಿಸುತ್ತದೆ.
ಉತ್ತರ ಕರ್ನಾಟಕ ಮತ್ತು ದಕ್ಷಿಣದ ನಡುವೆ ತಾರತಮ್ಯದ ಕೂಗು ಸಾಮಾನ್ಯ. ಅಂತಹದ್ದರಲ್ಲಿ, ಉತ್ತರ ಕರ್ನಾಟಕದ ಕುರಿತು ವಿಶೇಷ ಮಮಕಾರ ಮೆರೆದಿದ್ದು ಅವರು ಕೈಗೊಂಡ ಅನೇಕ ತೀರ್ವನಗಳಿಂದ ಕಂಡುಬರುತ್ತದೆ.
ಹೈದ್ರಾಬಾದ್ ಕರ್ನಾಟಕಕ್ಕೆ ಕಲ್ಯಾಣ ಕರ್ನಾಟಕ ಎಂದು ನಾಮಕರಣ ಮಾಡುವ ಮೂಲಕ ಸಂಚಲನ ಮೂಡಿಸಿದರು. ಜತೆಗೆ ವಿಶೇಷ ಅನುದಾನ ತೆಗೆದಿಡುವ ಮೂಲಕ ಆದ್ಯತೆ ನೀಡಿದರು. ಮುಖ್ಯಮಂತ್ರಿಯಾಗಿ ಅವರು ಕೈಗೊಂಡ ಹೆಚ್ಚು ಪ್ರವಾಸ ಉತ್ತರದ ಕಡೆಗೇ ಇದ್ದವು. ರೈತನ ಮನೆಬಾಗಿಲಲ್ಲಿ ಅಹವಾಲು ಆಲಿಸುವ ವಿಶೇಷ ಕಾರ್ಯಕ್ರಮದಲ್ಲಿ ಅವರು ಹೆಚ್ಚು ಆಯ್ದುಕೊಂಡಿದ್ದು ಉತ್ತರ ಕರ್ನಾಟಕದ ಭಾಗದ ರೈತರ ಮನೆಗಳೇ ಆಗಿದ್ದವು. ಕಂಡುಕೇಳರಿಯದ ಅತಿವೃಷ್ಟಿ ಎದುರಾದಾಗ ಎದೆಗುಂದದೆ ಉತ್ತರ ಕರ್ನಾಟಕದಲ್ಲಿ ಹೆಚ್ಚು ದಿನ ಕಳೆದು ಅವರ ಸಮಸ್ಯೆಗೆ ದನಿಯಾದರು. ಈ ಎಲ್ಲ ಸಂಗತಿಯೂ ಆ ಭಾಗದ ಜನರ ಮನಸ್ಸಿನಲ್ಲಿ ನೆಲೆ ನಿಂತಿದೆ.
ಅಧಿಕಾರದ ಅವಧಿಯುದ್ದಕ್ಕೂ ಅತಿವೃಷ್ಟಿ, ಪ್ರವಾಹ, ಕರೊನಾದಂತಹ ಸಾಂಕ್ರಾಮಿಕ ಪಿಡುಗು ತಂದೊಡ್ಡಿದ ಸವಾಲುಗಳಿಗೆ ಎದೆಗುಂದದೆ ದಿಟ್ಟ ನಿರ್ಧಾರ ಕೈಗೊಂಡು, ಅಧಿಕಾರಿಗಳಿಗೆ ಹುರುಪು ತುಂಬಿ ಕೆಲಸ ತೆಗೆದುಕೊಂಡ ಛಾತಿ ಯಡಿಯೂರಪ್ಪ ಅವರದು. ಬಿಜೆಪಿಯನ್ನು ಮೊದಲ ಬಾರಿಗೆ 2008ರಲ್ಲಿ ಅಧಿಕಾರಕ್ಕೆ ತಂದ ಬಿ.ಎಸ್.ಯಡಿಯೂರಪ್ಪ, ಹೆಗಲ ಮೇಲೆ ಹಸಿರು ಶಾಲು ಹೊದ್ದು ವಿಧಾನಸೌಧ ಮಹಾದ್ವಾರದ ಮೆಟ್ಟಿಲು ಮೇಲೆ ಮುಖ್ಯಮಂತ್ರಿಯಾಗಿ ರೈತರ ಮೇಲೆ ಪ್ರಮಾಣ ಮಾಡಿ ಅಧಿಕಾರ ಸ್ವೀಕರಿಸಿದರು.
ಸಮಚಿತ್ತ, ಸಮಯಪ್ರಜ್ಞೆ: ಪಕ್ಷ ರಾಜಕಾರಣವನ್ನು ಚುನಾವಣೆಗೆ ಸೀಮಿತಗೊಳಿಸಿದವರು. ನಂಬಿದ ಸಿದ್ಧಾಂತಗಳ ಪಾಲನೆ ಜತೆಗೆ ಜನಹಿತದಲ್ಲೂ ವ್ಯತ್ಯಯವಾಗದಂತೆ ಸೂಕ್ಷ್ಮ ಸಂವೇದಿಯಾದವರು. ದ್ವೇಷ ರಾಜಕಾರಣ ಹತ್ತಿರಕ್ಕೂ ಬಿಟ್ಟುಕೊಳ್ಳದ ಯಡಿಯೂರಪ್ಪ, ಬಹಿರಂಗ ವಾಗಿ ಎಷ್ಟೇ ಟೀಕೆ-ಟಿಪ್ಪಣಿ ಮಾಡಿ ದವರು ಯೋಜನೆ, ನೆರವಿನ ಪ್ರಸ್ತಾವನೆ ಮುಂದಿಟ್ಟರೆ, ಕಾಳಜಿಯಿಂದ ಮಾತನಾಡಿ ಒಪ್ಪಿಗೆ ನೀಡುವ ಜತೆಗೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸುವ ಧೀಮಂತಿಕೆ ರೂಢಿಸಿಕೊಂಡಿದ್ದರು. ಸಮಯಪ್ರಜ್ಞೆ, ಪಾಲನೆಯಲ್ಲಿ ಯಡಿಯೂರಪ್ಪ ಅಷ್ಟೇ ಕರಾರುವಕ್ಕು. ನಿಗದಿತ ಸಮಯಕ್ಕೆ ಐದು ನಿಮಿಷ ಮುಂಚೆ ಹಾಜರಿದ್ದು, ಅನೇಕ ಬಾರಿ ಸಂಪುಟದ ಸಹೋದ್ಯೋಗಿಗಳು ಏದುಸಿರು ಬಿಡುತ್ತಾ ಓಡೋಡಿ ಬಂದ ನಿದರ್ಶನಗಳು ವಿಪುಲವಾಗಿವೆ. ಅಧಿಕಾರಿಗಳನ್ನು ಗದರಿಸುವುದು, ಅನುನಯದಿಂದ ಹೇಳುವುದು, ಅಧಿಕಾರಿಗಳು ಹೇಳಿದಕ್ಕೂ ಕಿವಿಗೊಡುವುದನ್ನು ಮರೆಯುತ್ತಿದ್ದಿಲ್ಲ. ಆಯಾ ಸಚಿವ ಸಂಪುಟದ ಸದಸ್ಯರಿಗೆ ಒಪ್ಪಿಸಿದ ಖಾತೆಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಿಲ್ಲ, ಸರ್ಕಾರ, ಜನರ ಆಶಯಕ್ಕೆ ಚ್ಯುತಿಯಾಗದಂತೆ ಜವಾಬ್ದಾರಿ ನಿರ್ವಹಣೆ ಬಯಸುತ್ತಿದ್ದರಷ್ಟೇ ಎಂದು ಅವರೊಂದಿಗೆ ಸಚಿವರಾಗಿ ಕೆಲಸ ಮಾಡಿದವರು ಪ್ರಶಂಸಿಸುತ್ತಾರೆ.
ಸಾಧನೆಗಳಿಗೆ ದಿಕ್ಸೂಚಿ: ಮುಖ್ಯಮಂತ್ರಿಯಾಗಿ 2008ರಿಂದ 11 ಹಾಗೂ 2019 ರಿಂದ 21 ಇವೆರಡೂ ಯಡಿಯೂರಪ್ಪ ಪಾಲಿಗೆ ದೀರ್ಘಾವಧಿಗಳಾಗಿವೆ. ಎರಡೂ ಅವಧಿಯಲ್ಲಿ ಮುಂದೆ ಬರುವವರಿಗೆ ಸಾಧನೆಗಳ ದಿಕ್ಸೂಚಿ ಹಾಕಿಕೊಟ್ಟು, ಆಡಳಿತ-ಅಭಿವೃದ್ಧಿಗೆ ನಿದರ್ಶನೀಯ ಕಾರ್ಯಕ್ರಮ ಗಳನ್ನು ಒದಗಿಸಿದರು.
ಶಿಕ್ಷಣ ಕ್ಷೇತ್ರದಲ್ಲಿ ಪ್ರೌಢಶಾಲಾ ಮಕ್ಕಳಿಗೆ ಬೈಸಿಕಲ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ರಂಗದಲ್ಲಿ ಬಡ ಹೆಣ್ಣು ಮಕ್ಕಳಿಗೆ ಭಾಗ್ಯ ಲಕ್ಷ್ಮಿ ಬಾಂಡ್ ಹೊರತಾದ ಯೋಜನೆಗಳಿವೆ. ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದ ‘ಆರೋಗ್ಯ ಕವಚ’ ಯೋಜನೆಯಡಿ 108 ಆಂಬುಲೆನ್ಸ್ ಗಳನ್ನು ರಾಜ್ಯಕ್ಕೆ ಮೊದಲ ಬಾರಿಗೆ ಪರಿಚಯಿಸಿದರು. ತುರ್ತು ಅಗತ್ಯವುಳ್ಳವರಿಗೆ ಕ್ಷಿಪ್ರ ನೆರವಿಗೆ ಧಾವಿಸುವ ಪರಿಯು ಶ್ಲಾಘನೆಗೆ ಪಾತ್ರವಾಯಿತು. ಅತಿವೃಷ್ಟಿ ಮತ್ತು ಪ್ರವಾಹದಲ್ಲಿ ಮನೆ ಹಾಗೂ ಬೆಳೆ ಕಳೆದುಕೊಂಡವರಿಗೆ ಎನ್ಡಿಆರ್ಎಫ್ ನಿಯಮಾವಳಿ ಮೀರಿ ಮೂರು ಪಟ್ಟು ಹೆಚ್ಚಿನ ಪರಿಹಾರ ವಿತರಣೆ ನಿರ್ಧಾರ ಕೈಗೊಂಡು ಎಲ್ಲರೂ ಹುಬ್ಬೇರಿಸುವಂತೆ ಮಾಡಿದರು.
ಇತಿಹಾಸದ ಇಣುಕು ಕಾಂಗ್ರೆಸ್ಗೆ: ಪರ್ಯಾಯ ರಾಜಕಾರಣ ಎಂದರೆ, ಜನತಾ ಪರಿವಾರ. ಅದನ್ನು ಬಿಟ್ಟರೆ ಮತ್ತೊಂದು ಪಕ್ಷಕ್ಕೆ ರಾಜ್ಯದಲ್ಲಿ ನೆಲೆ ಕಲ್ಪಿಸಲು ಸಾಧ್ಯವೇ ಆಗಿರಲಿಲ್ಲ. ಸಂಘದ ಕಾರ್ಯಕರ್ತರಾಗಿ ಸೇವೆ ಸಲ್ಲಿಸುತ್ತಲೇ ಶಿಕಾರಿಪುರ ಪುರಸಭೆ ಚುನಾವಣೆಗೆ ಆಯ್ಕೆಯಾದ ಯಡಿಯೂರಪ್ಪ ಅವರು ರಾಜಕೀಯವಾಗಿ ಹಿಂತಿರುಗಿ ನೋಡಿದ್ದೇ ಇಲ್ಲ. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಬಳ್ಳಾರಿ, ಶಿವಮೊಗ್ಗ ಜೈಲಿನಲ್ಲಿ ಸೆರೆವಾಸ ಅನುಭವಿಸಿದರೂ, ಜಗ್ಗಲಿಲ್ಲ, ಕುಗ್ಗಲಿಲ್ಲ. 1983ರಲ್ಲಿ ಶಿಕಾರಿಪುರದಲ್ಲಿ ಸ್ಪರ್ಧೆ ಮಾಡಿ ಬಿಜೆಪಿಯಿಂದ ಆಯ್ಕೆಯಾಗುವ ಮೂಲಕ ಮೊಟ್ಟ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ ಅವರು ತಮ್ಮದೇ ಆದ ರಾಜಕೀಯ ಪ್ರಭಾವ ಬೆಳೆಸಿಕೊಳ್ಳುತ್ತಲೇ ಹೋದರು.
ಬಿ.ಬಿ.ಶಿವಪ್ಪ, ಅನಂತಕುಮಾರ್ ಅವರ ಜೊತೆಯಲ್ಲಿ ಇಡೀ ರಾಜ್ಯವನ್ನು ಸುತ್ತಾಡಿದ ಯಡಿಯೂರಪ್ಪ, ನೆಲೆ ಇಲ್ಲದ ಕಡೆಯಲ್ಲಿ ಪಕ್ಷಕ್ಕೆ ನೆಲೆ ಕಲ್ಪಿಸಿದರು. 1994ರಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾದ ಮೇಲೆ ಅವರ ರಾಜಕೀಯ ವರ್ಚಸ್ಸು ಇನ್ನಷ್ಟು ಹೆಚ್ಚಿತು. ವಿಧಾನಸಭೆಗೆ ಸತತವಾಗಿ 6 ಬಾರಿ ಆಯ್ಕೆಯಾದ ಯಡಿಯೂರಪ್ಪ 2006ರಲ್ಲಿ ಸಮ್ಮಿಶ್ರ ಸರ್ಕಾರ ರಚನೆಯಾದ ಸಂದರ್ಭದಲ್ಲಿ ಮೊದಲ ಬಾರಿಗೆ ಉಪ ಮುಖ್ಯಮಂತ್ರಿಯಾಗಿ ಅಧಿಕಾರದ ಗದ್ದುಗೆ ಅಲಂಕರಿಸಿದರು. ಆ ಮೂಲಕ ಪ್ರಥಮ ಬಾರಿಗೆ ದಕ್ಷಿಣ ಕರ್ನಾಟಕದಲ್ಲಿ ಬಿಜೆಪಿಯನ್ನು ಅಧಿಕಾರದ ಗದ್ದುಗೆಗೆ ತಂದು ಕೂರಿಸಿದ ಹೆಗ್ಗಳಿಕೆಯೂ ಯಡಿಯೂರಪ್ಪ ಅವರದ್ದು. ಸಮ್ಮಿಶ್ರ ಸರ್ಕಾರ ಪತನಗೊಂಡಾಗಲೂ ಬೇಸರದಿಂದ ಒಂದು ಕ್ಷಣ ಮನೆಯಲ್ಲಿ ಕೂರಲಿಲ್ಲ. ಮತ್ತೆ ಹೋರಾಟಕ್ಕೆ ಧುಮುಕಿದರು. ವಚನಭ್ರಷ್ಟತೆ ವಿಷಯವನ್ನೇ ಮುಂದಿಟ್ಟುಕೊಂಡು ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡಿದರು. ಪರಿಣಾಮವಾಗಿ ರಾಷ್ಟ್ರೀಯ ನಾಯಕರೇ ನಿಬ್ಬೆರಗಾಗುವಂತೆ ರಾಜ್ಯದಲ್ಲಿ 110 ಶಾಸಕರನ್ನು ಗೆಲ್ಲಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಅಷ್ಟೇ ಅಲ್ಲ, ಮುಖ್ಯಮಂತ್ರಿಯಾಗಿ ಅಧಿಕಾರ ಗದ್ದುಗೆಗೇರಿದರು.
ಪ್ರಧಾನಿ ಮೆಚ್ಚುಗೆ: ಸಂಧ್ಯಾ ಸುರಕ್ಷಾ ಯೋಜನೆಯಡಿ 65 ವರ್ಷ ಮೇಲ್ಪಟ್ಟ ಕಡು ಬಡವರಿಗೆ ಮಾಸಿಕ 400 ರೂ. ಪಿಂಚಣಿ, ನೇಕಾರರ ಒಂದು ಲಕ್ಷ ರೂ.ವರೆಗೆ ಸಾಲಮನ್ನಾ, ಮೀನುಗಾರರ ಸಾಲಮನ್ನಾ, ರೈತ ಸುರಕ್ಷಾ ಫಸಲ್ ಭಿಮಾ ಯೋಜನೆಯಡಿ ವಿಮಾ ಕಂತು ಪಾವತಿ, ಕೆರೆಗಳ ಪುನಶ್ಚೇತನ, ಕಿಸಾನ್ ಸಮ್ಮಾನ್ ನಿಧಿಯಡಿ ರಾಜ್ಯದ ಪಾಲು ಪ್ರಕಟಿಸಿ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ಪಡೆದರು. ಕರೊನಾ ರೋಗಕ್ಕೆ ತಂದೆ/ತಾಯಿ/ಪೋಷಕರನ್ನು ಕಳೆದುಕೊಂಡು ಅನಾಥರಾದ ಮಕ್ಕಳಿಗೆ ಶಿಕ್ಷಣ ಒದಗಿಸಲು ಮಾಸಿಕ ಮೂರು ಸಾವಿರ ಒದಗಿಸಲೆಂದು ‘ಮುಖ್ಯಮಂತ್ರಿ ಬಾಲ ಸೇವಾ ಯೋಜನೆ’ ಅನುಷ್ಠಾನಕ್ಕೆ ತಂದರು. ಪೌರಕಾರ್ವಿುಕರು, ವೈದ್ಯರು, ಶುಶ್ರೂಷಕರು, ಪೊಲೀಸ್ ಸಿಬ್ಬಂದಿಯನ್ನು ಕರೊನಾ ಮುಂಚೂಣಿ ಯೋಧರು ಎಂದು ಕರೆದು ಜೀವ ಪಣಕ್ಕಿಟ್ಟು ಜನರ ಜೀವ, ಜೀವನ ಉಳಿಸಲು ಹೋರಾಡಿದವರ ಬೆನ್ನಿಗೆ ನಿಂತದ್ದು ಬಿ.ಎಸ್. ಯಡಿಯೂರಪ್ಪ ವ್ಯಕ್ತಿತ್ವದ ವೈಶಿಷ್ಟ್ಯ.
ವಿದ್ಯಾರ್ಥಿಗಳಿಗೆ ಬೈಸಿಕಲ್ ಕೊಡುಗೆ: ಶೈಕ್ಷಣಿಕ ಕ್ರಮಬದ್ಧ ಶ್ರೇಣಿಯಲ್ಲಿ ಪ್ರೌಢ ಶಿಕ್ಷಣ ನಿರ್ಧಾರಕ ಹಂತ. ಆದರೆ, ರಾಜ್ಯದಲ್ಲಿ ಪ್ರೌಢ ಶಿಕ್ಷಣವು ಸಂಪರ್ಕದ ಕೊರತೆ, ಕಡಿಮೆ ಭಾಗವಹಿಸುವಿಕೆ ಮತ್ತು ಸಮಾನತೆ ಹಾಗೂ ಗುಣಮಟ್ಟದ ವಿಷಯಗಳಲ್ಲಿ ಬಾಧಕವಾಗಿತ್ತು. ಕರ್ನಾಟಕದ ಮಕ್ಕಳು ಶಿಕ್ಷಣವನ್ನು ಬಿಟ್ಟು ಹೋಗುವ ದರ ಕಡಿಮೆ ಮಾಡಲು, ಮಕ್ಕಳ ಹಾಜರಾತಿ ಸುಧಾರಿಸಲು ಬಿ.ಎಸ್.ಯಡಿಯೂರಪ್ಪ 2006-07ರಲ್ಲಿ ಅತ್ಯಂತ ಮಹತ್ವಾಕಾಂಕ್ಷಿ ಯೋಜನೆ ಜಾರಿಗೊಳಿಸಿದ್ದರು. ಅದುವೇ ಸರ್ಕಾರಿ ಮತ್ತು ಅನುದಾನಿತ ಶಾಲೆ ವಿದ್ಯಾರ್ಥಿಗಳಿಗೆ ಉಚಿತ ಬೈಸಿಕಲ್ ನೀಡುವ ಕಾರ್ಯಕ್ರಮ. ಈ ಯೋಜನೆ ಎಷ್ಟು ಜನಪ್ರಿಯವಾಯಿತೆಂದರೆ ಶಾಲೆಯಿಂದ ಹೊರಗುಳಿದ ಮಕ್ಕಳು ಬೈಸಿಕಲ್ಗಾಗಿ ಮತ್ತೆ ಶಾಲೆ ಮೆಟ್ಟಿಲು ಹತ್ತಿದರು. ಕೂಲಿ ನಾಲಿ ಮಾಡುತ್ತಿದ್ದ ಮಕ್ಕಳು ಮರಳಿ ಶಾಲೆ ಸೇರಿದರು! ಬೈಸಿಕಲ್ ಪಡೆದ ಹುಡುಗಿಯರು ಹೆಚ್ಚು ಸಮಾಜ ಪರವಾದ/ಸಾಮಾಜಿಕ ಪ್ರವೃತ್ತಿ ಪ್ರದರ್ಶಿಸಿದ್ದು ಅಧ್ಯಯನದಿಂದ ದೃಢಪಟ್ಟಿದೆ. ಅಷ್ಟೇ ಅಲ್ಲ, ಬೈಸಿಕಲ್ ಪಡೆದ ಹುಡುಗಿಯರು ಸ್ವಯಂ ಕಲ್ಪನೆಯಲ್ಲಿನ ಸುಧಾರಣೆಯನ್ನೂ ಅಧ್ಯಯನ ಸಮಿತಿ ಎತ್ತಿ ಹೇಳಿದೆ.
ರೈತರ ಮನೆ ಬಾಗಿಲಲ್ಲೇ ಸಭೆ: ರೈತರ ಸಮಸ್ಯೆಗಳನ್ನು ಎಸಿ ಕೊಠಡಿಯಲ್ಲಿ ಕುಳಿತು ಅರಿಯಲು ಅಸಾಧ್ಯ ಎಂದರಿತ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಮೊದಲ ಅವಧಿಯಲ್ಲಿ ರೈತನ ಮನೆ ಬಾಗಲಿಗೆ ಪ್ರತಿ ತಿಂಗಳು ಭೇಟಿಕೊಟ್ಟು ಅವರ ಸಮಸ್ಯೆ ಆಲಿಸಿ, ರೈತ ಸಮುದಾಯಕ್ಕೆ ಧನಾತ್ಮಕ ಸಂದೇಶ ಕಳಿಸಿದ್ದರು. ಪ್ರತಿ ತಿಂಗಳು ಒಬ್ಬ ರೈತನ ಮನೆ ಬಾಗಿಲಲ್ಲೇ ಸಭೆ ನಡೆಸಿ ಆ ಭಾಗದ ರೈತರ ಸಮಸ್ಯೆಗಳನ್ನು ಖುದ್ದು ಆಲಿಸಿ, ಜತೆಗೆ ಅಧಿಕಾರಿಗಳಿಗೂ ಸಲಹೆ ಸೂಚನೆ ನೀಡುತ್ತಿದ್ದರು. ಯಡಿಯೂರಪ್ಪ ಅವರ ಆ ಪ್ರಯತ್ನ ಅಧಿಕಾರಿಗಳಿಗೂ ತಳಮಟ್ಟದ ಸಮಸ್ಯೆ ಅರಿಯಲು ಕಾರಣವಾಯಿತು.
ಪ್ರತ್ಯೇಕ ಕೃಷಿ ಬಜೆಟ್: ಹಸಿರು ಶಾಲು ಹೊದ್ದು ಪ್ರಮಾಣವಚನ ಸ್ವೀಕಾರ ಮಾಡಿದ್ದಲ್ಲದೆ, ವಿಧಾನಸಭೆ ಒಳಗೆ ಮತ್ತು ಹೊರಗೆ ರೈತ ಪರವಾದ ಧ್ವನಿಯನ್ನು ಮೊಳಗಿಸಿದ ಹೆಮ್ಮೆಯೂ ಯಡಿಯೂರಪ್ಪ ಅವರದ್ದು. ತಾವು ರೈತ ಪರ ಎನ್ನುವುದನ್ನು ಸಾಬೀತು ಮಾಡಲು ಪ್ರತ್ಯೇಕವಾದ ಕೃಷಿ ಬಜೆಟ್ ಮಂಡಿಸಿದ ಮೊದಲ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಯೂ ಅವರದ್ದೆ.
ಹಾಲಿಗೆ ಪ್ರಪ್ರಥಮ ಪ್ರೋತ್ಸಾಹಧನ: 2008ರಲ್ಲಿ ಮುಖ್ಯಮಂತ್ರಿಯಾಗಿ ತೆಗೆದುಕೊಂಡ ರೈತ ಮತ್ತು ಜನಪರ ಕಾರ್ಯಕ್ರಮ ಮನೆ ಮಾತಾಗಿವೆ. ಹಾಲು ಉತ್ಪಾದಕರಿಗೆ ಪ್ರೋತ್ಸಾಹ ನೀಡಲು ಬಿಎಸ್ವೈ ಮುಂದಾಗಿದ್ದಲ್ಲದೆ, ಪ್ರತಿ ಲೀಟರ್ಗೆ 2 ರೂ. ಪ್ರೋತ್ಸಾಹಧನ ಬಜೆಟ್ನಲ್ಲಿ ಘೋಷಿಸಿದರು.
ಧಾರ್ವಿುಕ ಸಂಸ್ಥೆಗಳಿಗೆ ಹಣ: ಬಿಎಸ್ವೈ ಮೊಟ್ಟಮೊದಲ ಬಾರಿಗೆ ಧಾರ್ವಿುಕ ಸಂಸ್ಥೆಗಳು ಮತ್ತು ಮಠ-ಮಾನ್ಯಗಳಿಗೆ ಸರ್ಕಾರದಿಂದಲೇ ನೇರ ಅನುದಾನ ನೀಡುವ ಯೋಜನೆ ಯನ್ನು ರೂಪಿಸಿ ಅನುಷ್ಠಾನಗೊಳಿಸಿದ್ದು ವಿಶೇಷ.
ಸಾರ್ಥಕ ಹೋರಾಟದಿಂದ ದಕ್ಷಿಣದಲ್ಲಿ ಬಾಗಿಲು ತೆರೆದ ಬಿಜೆಪಿ: ಯಡಿಯೂರಪ್ಪ ಅಂದರೆ ಹೋರಾಟ, ಹೋರಾಟವೆಂದರೆ ಯಡಿಯೂರಪ್ಪ ಎನ್ನುವ ಕಾಲಘಟ್ಟವೂ ಇತ್ತು. ಅಷ್ಟರ ಮಟ್ಟಿಗೆ ಅವರ ಹೋರಾಟ ಜನಮಾನಸದಲ್ಲಿ ನೆಲೆಯಾಗಿದ್ದನ್ನು ಯಾರೂ ಮರೆಯುವಂತಿಲ್ಲ.
ಹೋರಾಟವನ್ನೇ ಉಸಿರಾಗಿಸಿಕೊಂಡ ಬಿ.ಎಸ್. ಯಡಿಯೂರಪ್ಪ ಅವರು ರಾಜ್ಯದಲ್ಲಿ ಬಿಜೆಪಿ ಸಂಘಟನೆ ಮಾಡಲು ಹರಿಸಿದ ಬೆವರು ಕಡಿಮೆಯೇನಿಲ್ಲ. ಅದು, ತಾಲೂಕು ಆಗಿರಲಿ, ಜಿಲ್ಲೆಯೇ ಇರಲಿ ಅಥವಾ ಹೋಬಳಿ, ಗ್ರಾಮ ಯಾವುದೇ ಇರಲಿ. ಎಲ್ಲಿ ರೈತರಿಗೆ, ಬಡವರಿಗೆ ಅನ್ಯಾಯವಾಗಿದೆ ಎಂದರೂ, ತಕ್ಷಣವೇ ಅಲ್ಲಿಗೆ ಹೋಗಿ ಪ್ರತಿಭಟಿಸುವ ಮೂಲಕವೇ ಅವರಿಗೆ ನ್ಯಾಯ ಕೊಡಿಸುತ್ತಿದ್ದ ಯಡಿಯೂರಪ್ಪ ಅವರಿಗೆ ಹೋರಾಟ ಎನ್ನುವುದು ಬದುಕಿನ ಮಹತ್ವದ ಭಾಗವೇ ಆಗಿ ಹೋಗಿತ್ತು. ಅವರ ಹೋರಾಟದ ಬದುಕಿನ ಪುಸ್ತಕದಲ್ಲಿ ಲೆಕ್ಕವಿಲ್ಲದಷ್ಟು ಪುಟಗಳಿವೆ. ರೈತರ ವಿಚಾರದಲ್ಲಂತೂ ಅಹೋರಾತ್ರಿ ಧರಣಿಗಳೆಷ್ಟೋ.
ಬದಲಾವಣೆಗೆ ಕೈಹಾಕಿಲ್ಲ: ಆಡಳಿತದ ಚುಕ್ಕಾಣಿ ಯಾವುದೇ ಪಕ್ಷ ಹಿಡಿಯಲಿ, ನೀತಿ-ನಿರ್ಧಾರಗಳಲ್ಲಿ ಸ್ಥಿರತೆ. ದೂರಗಾಮಿ ಪ್ರಯೋಜನಗಳನ್ನು ಒದಗಿಸುವ ‘ಜನಪ್ರಿಯ’ ಯೋಜನೆ/ ಕಾರ್ಯಕ್ರಮಗಳನ್ನು ಬದಲಾವಣೆ ಮಾಡುವ ಸಾಹಸಕ್ಕೆ ಕೈಹಾಕುವುದಿಲ್ಲ ಎನ್ನುವುದು ಕರ್ನಾಟಕ ವೈಶಿಷ್ಟ್ಯ. ಬಿ.ಎಸ್. ಯಡಿಯೂರಪ್ಪ ಅನುಷ್ಠಾನಕ್ಕೆ ತಂದ ‘ಭಾಗ್ಯಲಕ್ಷ್ಮಿ’ ಬಾಂಡ್ ಯೋಜನೆಯ ಮಹತ್ವ, ಲಿಂಗ ಸಮಾನತೆ ಉದ್ದೇಶ ಯಶಸ್ವಿಯಾಗಲಿ ಎಂಬ ಅಪೇಕ್ಷೆಯಿಂದ ಮುಂದುವರಿಸಿ, ಕೆಲವು ನಿಯಮಗಳು, ಷರತ್ತುಗಳನ್ನು ಮಾತ್ರ ಕಾಲಕಾಲಕ್ಕೆ ಬದಲಾಯಿಸುತ್ತಾ ಬಂದಿವೆ. ಭಾರತೀಯ ಜೀವ ವಿಮಾ ನಿಗಮದಲ್ಲಿ ಬಡ್ಡಿ ದರ ಕಡಿಮೆ ಎಂಬ ಕಾರಣಕ್ಕೆ 2020ರಿಂದ ಅಂಚೆ ಇಲಾಖೆಯ ‘ಸುಕನ್ಯಾ ಸಮೃದ್ಧಿ’ ಯೋಜನೆಯಡಿ ಮುಂದುವರಿಸಲಾಗಿದೆ. ಫಲಾನುಭವಿಗಳಿಗೆ ಯಾವುದೇ ರೀತಿಯ ನಷ್ಟ ಉಂಟಾಗದಂತೆ ಯೋಜನೆಯನ್ನು ಮರು ವಿನ್ಯಾಸಗೊಳಿಸಿ ಜಾರಿಗೆ ತಂದಿದೆ. ದೂರದರ್ಶಿತ್ವ, ಹೆಣ್ಣು ಮಕ್ಕಳ ಬಗೆಗಿನ ಯಡಿಯೂರಪ್ಪ ಕಾಳಜಿಗೆ ಕೈಗನ್ನಡಿ ಹಿಡಿದಿದೆ.
ಬಡವರ ಮನೆಗೆ ಭಾಗ್ಯಲಕ್ಷ್ಮಿ: ರೈತರು, ಜನಪರ ಹೋರಾಟದ ಕಟ್ಟಾಳುವಾಗಿ ರಾಜಕೀಯಕ್ಕೆ ಪದಾರ್ಪಣೆ ಮಾಡಿದ ಬಿ.ಎಸ್.ಯಡಿಯೂರಪ್ಪ, ಸುದೀರ್ಘ ಅವಧಿಗೆ ಪ್ರತಿಪಕ್ಷ ನಾಯಕರಾಗಿ ಆಡಳಿತ ಪಕ್ಷವನ್ನು ತುದಿಗಾಲ ಮೇಲೆ ನಿಲ್ಲುವಂತೆ ಮಾಡಿದವರು. ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಡಿಸಿಎಂ ಆಗಿ 2006ರಲ್ಲಿ ಜಾರಿಗೆ ತಂದ ಹಲವು ಜನಪ್ರಿಯ ಕಾರ್ಯಕ್ರಮಗಳಲ್ಲಿ ‘ಭಾಗ್ಯಲಕ್ಷ್ಮಿ’ ಬಾಂಡ್ ಯೋಜನೆಯೂ ಒಂದು. ನಂತರ 2008ರಲ್ಲಿ ಮುಖ್ಯಮಂತ್ರಿಯಾಗಿ ಯೋಜನೆಯನ್ನು ಮಾರ್ಪಾಡು ಮಾಡಿ, ಒಂದು ಕುಟುಂಬದ ಇಬ್ಬರು ಹೆಣ್ಣು ಮಕ್ಕಳಿಗೆ ಯೋಜನೆ ಲಾಭ ಪಡೆಯಲು ಅವಕಾಶ ಕಲ್ಪಿಸಿದರು.
ಬಿಎಸ್ವೈ ದೂರದರ್ಶಿತ್ವದ ಈ ಕಾರ್ಯಕ್ರಮದ ಫಲವೀಗ ಬಡ ಕುಟುಂಬಗಳ ಕೈಗೆ ಸೇರಲಾರಂಭಿಸಿದೆ. ನಿಗದಿತ ಅವಧಿ ಬಳಿಕ ಬಾಂಡ್ಗಳು ಪಕ್ವವಾಗಿದ್ದು, ನಗದು ಅವಕಾಶ ದೊರೆತಿದೆ. ಬಡವರ ಮನೆಗೆ ‘ಭಾಗ್ಯಲಕ್ಷ್ಮಿ’ ಕರುಣಿಸಿದ ಯಡಿಯೂರಪ್ಪ ಎಂದು ಫಲಾನುಭವಿಗಳ ಪಾಲಕರು ನೆನಪಿಸಿಕೊಂಡು ಹಾರೈಸುತ್ತಿದ್ದಾರೆ.
ಉದಾತ್ತ ಉದ್ದೇಶ: ಹೆಣ್ಣು ಭ್ರೂಣ ಹತ್ಯೆ ನಿಯಂತ್ರಣ, ಲಿಂಗ ತಾರತಮ್ಯ ನಿವಾರಣೆ, ಬಡ ಕುಟುಂಬಗಳಿಗೆ ಹೆಣ್ಣು ಪಾಲನೆ ಹೊರೆಯಾಗಬಾರದು ಎನ್ನುವ ಉದಾತ್ತ ಉದ್ದೇಶವನ್ನು ‘ಭಾಗ್ಯಲಕ್ಷ್ಮಿ ಬಾಂಡ್’ ಯೋಜನೆ ಹೊಂದಿದೆ. ತಲರ್ಸ³ ಸ್ಪಂದನೆ, ಮಹಿಳೆಯರ ಸಬಲೀಕರಣ ಆಶಯವನ್ನು ಬಿ.ಎಸ್.ಯಡಿಯೂರಪ್ಪ ಜಾರಿಗೆ ತಂದು, ಉಪ ಮುಖ್ಯಮಂತ್ರಿ, ಮುಖ್ಯಮಂತ್ರಿಯಾಗಿ ವಿಶೇಷ ಛಾಪು ಮೂಡಿಸಿದರು.
ಹೆಣ್ಣು ಮಗುವಿಗೆ 18 ವರ್ಷಗಳು ತುಂಬಿದ ನಂತರ ಮುಂದಿನ ಶಿಕ್ಷಣ ಮತ್ತು ಮದುವೆ ಖರ್ಚಿಗೆ ಹಣ ಹೊಂದಿಸಲು ಬಡ ಕುಟುಂಬಗಳು ಪರದಾಡಬಾರದು, ವಯಸ್ಸಿಗೆ ಬಂದ ಹೆಣ್ಣು ಮಗು ಸ್ವಾವಲಂಬಿ, ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ನೆರವಾಗುವುದು ಯೋಜನೆಯ ತಿರುಳು. ಹೆಣ್ಣು ಮಗು 18 ವರ್ಷ ತುಂಬಿದ ಬಳಿಕ ಮೊದಲ ಫಲಾನುಭವಿಗೆ 1,00,097 ಹಾಗೂ ಎರಡನೇ ಫಲಾನುಭವಿಗೆ 1,00,052 ರೂ. ಪರಿಪಕ್ವ ಮೊತ್ತ ಲಭಿಸುತ್ತದೆ.
ಮನೆ ಮಠ ಕಳೆದುಕೊಂಡವರ ಆಶ್ರಯದಾತ: ಯಡಿಯೂರಪ್ಪ ಅವರಿಗೆ ನಿಜವಾದ ಅಗ್ನಿ ಪರೀಕ್ಷೆ ಕಾಲ ಎಂದರೆ 2019ರಲ್ಲಿ ಅವರು ಮುಖ್ಯಮಂತ್ರಿಯಾಗಿ ನಾಲ್ಕನೇ ಬಾರಿಗೆ ಅಧಿಕಾರ ಹಿಡಿದ ಸಮಯ. ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಸರ್ಕಾರ ಪತನಗೊಂಡಿತ್ತು. ಆ ಹೊತ್ತಿನಲ್ಲಿಯೇ ರಾಜ್ಯದಲ್ಲಿ ಅತಿವೃಷ್ಟಿ. ಆಗಷ್ಟೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದ್ದ ಯಡಿಯೂರಪ್ಪ ಒಂದು ದಿನವೂ ಕೂರಲಿಲ್ಲ. ನಿಂತಲ್ಲಿ ನಿಲ್ಲಲಿಲ್ಲ.
ಆಗ ನಾನಾ ಕಾರಣಕ್ಕಾಗಿ ಕ್ಯಾಬಿನೆಟ್ ಕೂಡ ರಚನೆ ಆಗಿರಲಿಲ್ಲ. ಯಡಿಯೂರಪ್ಪ ಒಬ್ಬರೇ ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದರು. ಉತ್ತರ ಕರ್ನಾಟಕ ಆವರಿಸಿದ್ದ ಪ್ರವಾಹದ ಪರಿಗೆ ರಾಜ್ಯವೇ ಮರುಗಿತ್ತು. ಮನೆ-ಮಠ ಕಳೆದುಕೊಂಡು ಬೀದಿಯಲ್ಲಿದ್ದ ಜನರ ಬದುಕು ನೋಡಿ ಮಮ್ಮಲ ಮರುಗಿದ ಯಡಿಯೂರಪ್ಪ, ಪ್ರತಿ ಸಂತ್ರಸ್ತ ಕುಟುಂಬಗಳಿಗೂ ತಲಾ 10 ಸಾವಿರ ರೂ. ನೆರವು ಘೋಷಿಸಿದರು.
ಕೇಂದ್ರಕ್ಕೆ ನೆರವಿಗಾಗಿ ಪತ್ರ ಬರೆದರು. ಅಲ್ಲಿಂದ ತಕ್ಷಣಕ್ಕೆ ಉತ್ತರ ಬರಲಿಲ್ಲ. ಅದಕ್ಕಾಗಿ ಕಾಯ್ದು ಕೂರದೆ, ಜನರ ನಡುವೆಯೇ ಪಾದಯಾತ್ರೆ ಮಾಡಿ ಒಂದಷ್ಟು ನಿಧಿ ಸಂಗ್ರಹಿಸಿದರು. ಹಣಕಾಸು ಇಲಾಖೆಯನ್ನು ತಡಕಾಡಿ ಒಂದಷ್ಟು ಉಳಿತಾಯವನ್ನು ಒಟ್ಟು ಮಾಡಿದರು. ಮನೆ ಕಟ್ಟಿಕೊಳ್ಳಲು ಇದ್ದ ಕೇವಲ ಒಂದು ಲಕ್ಷ, ಎರಡು ಲಕ್ಷದ ನೆರವನ್ನು ಹೆಚ್ಚಿಸಲು ನಿರ್ಣಯಿಸಲು ನಿರ್ಧರಿಸಿದರು.
ನನ್ನ ಸರ್ಕಾರ ರೈತ ಪರವಾದ ಸರ್ಕಾರ. ರೈತರು, ಮನೆ-ಮಠ ಕಳೆದುಕೊಂಡು ಬೀದಿಯಲ್ಲಿ ನಿಂತಿರುವಾಗ ನಾನು ಅವರ ನೆರವಿಗೆ ಹೋಗದೇ ಇದ್ದರೆ ಪ್ರಯೋಜನವೇನು? ಈ ಅಧಿಕಾರವಾದರೂ ಏಕೆ ಬೇಕು? ಎಂದು ಅಧಿಕಾರಿಗಳ ಸಭೆಯಲ್ಲಿಯೇ ಆರ್ಭಟಿಸಿದ್ದ ಅವರು ಒಂದು ಕ್ಷಣ ಕೂಡ ಹಿಂದು ಮುಂದು ನೋಡದೆ, ಪ್ರತಿ ಮನೆಗೆ 5 ಲಕ್ಷ ರೂ. ಪರಿಹಾರ ಘೋಷಣೆ ಮಾಡಿಯೇ ಬಿಟ್ಟರು. ನಿಜ ಹೇಳಬೇಕು ಎಂದರೆ ಇದು ಐತಿಹಾಸಿಕ ತೀರ್ವನ. ದೇಶದಲ್ಲಿ ಯಾವ ಸರ್ಕಾರಗಳೂ ಇಷ್ಟೊಂದು ಪರಿಹಾರ ನೀಡುವ ನಿರ್ಣಯ ತೆಗೆದುಕೊಂಡಿರಲಿಲ್ಲ. ಆ ಕಾರಣಕ್ಕಾಗಿಯೇ ರೈತಾಪಿ ಜನರು ಈಗಲೂ ಅವರನ್ನು ನೆನೆಯುತ್ತಾರೆ.
ರೈತರ ಹೊಲ ಜಮೀನಿನಲ್ಲಿ ಕೊಚ್ಚಿ ಹೋದ ಬೆಳೆಗೆ ಪರಿಹಾರ ನೀಡಲು ನೂರೆಂಟು ರಗಳೆ, ಹತ್ತಾರು ಕಾನೂನು ತೊಡಕು. ಆಗಲೂ ಯಡಿಯೂರಪ್ಪ ರೈತರ ಪರವಾಗಿ ಸಿಡಿದು ನಿಂತರು. ಎನ್ಡಿಆರ್ಎಫ್ ನಿಯಮಾವಳಿ ಪ್ರಕಾರ ಇಂತಿಷ್ಟೇ ಪರಿಹಾರ ಕೊಡಬೇಕು ಎಂದು ಅಧಿಕಾರಿಗಳು ಸಭೆಯಲ್ಲಿ ವಾದಿಸಿದರೂ, ಅದಕ್ಕೆ ಸೊಪು್ಪ ಹಾಕಲಿಲ್ಲ. ಎನ್ಡಿಆರ್ಎಫ್ ನಿಯಮಾವಳಿ ಪ್ರಕಾರ ಇದ್ದ ಪರಿಹಾರವನ್ನು ದುಪ್ಪಟ್ಟು ಮಾಡಿ ಆದೇಶ ಹೊರಡಿಸಿದರು. ಇದು ಕೂಡ ಯಡಿಯೂರಪ್ಪ ಕಾಲದಲ್ಲಿ ಆದಂಥ ಐತಿಹಾಸಿಕ ತೀರ್ವನ.
ವಿರಮಿಸದ ಹೋರಾಟ: ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ ಅವಧಿಯಲ್ಲಿ ಜಾರಿಗೊಳಿಸಿದ ಯೋಜನೆಗಳನ್ನು ಪಟ್ಟಿ ಮಾಡುತ್ತಾ ಹೋದರೆ, ಅದಕ್ಕೆ ಕೊನೆಯೇ ಇಲ್ಲ. ಸಾಲು ಸಾಲು ಜನಪ್ರಿಯ ಯೋಜನೆಗಳನ್ನು ಜಾರಿಗೊಳಿಸಿದ ಕೀರ್ತಿ, ಹೆಗ್ಗಳಿಕೆ ಅವರದು. ರೈತ ಮತ್ತು ಕಾರ್ವಿುಕ ನಾಡಿನ ಕಣ್ಣುಗಳು ಎಂದು ಒತ್ತಿ ಹೇಳುವ ಬಿಎಸ್ವೈ 2008ರಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡುತ್ತಿದ್ದಂತೆ ರೈತರಿಗೆ 10 ಎಚ್ಪಿ ತನಕ ಉಚಿತ ವಿದ್ಯುತ್ ನೀಡುವುದಾಗಿ ಘೋಷಿಸಿದ್ದಲ್ಲದೆ, ಅನುಷ್ಠಾನಕ್ಕೆ ತಂದರು. ಯಾವುದೇ ಕೆಲಸ ಇರಲಿ, ಅದನ್ನು ಒಂದು ಅಂತ್ಯ ಕಾಣಿಸುವ ತನಕ ವಿರಮಿಸುವುದಿಲ್ಲ. ತಾವು ಜನರಿಗೆ ಹೇಳಿದ್ದನ್ನು, ವಾಗ್ದಾನ ಮಾಡಿದ್ದನ್ನು ಕಾರ್ಯಗತ ಮಾಡಿ ತೋರಿಸುವ ನಿಟ್ಟಿನಲ್ಲಿ ಹೆಜ್ಜೆ ಇಡಬೇಕು ಎನ್ನುವ ನಿಲುವಿನಲ್ಲಿ ಬಿಎಸ್ವೈ ಎಂದೂ ರಾಜೀ ಮಾಡಿಕೊಂಡವರಲ್ಲ.
ಅಧಿಕಾರಕ್ಕೆ ಎಂದೂ ಅಂಟಿ ಕೂರುವ ಜಾಯಮಾನ ಯಡಿಯೂರಪ್ಪ ಅವರದ್ದಲ್ಲ. ಅಧಿಕಾರದ ಕೊನೇ ದಿನದ ತನಕವೂ ಹತ್ತು ಹಲವು ಯೋಜನೆಯನ್ನು ಜಾರಿಗೊಳಿಸಿದ ಕೀರ್ತಿ ಅವರದ್ದು. ಮೈತ್ರಿ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿ, ಹಣಕಾಸು ಇಲಾಖೆ ಜವಾಬ್ದಾರಿ ಹೊತ್ತಿದ್ದ ಸಂದರ್ಭದಲ್ಲಿಯೇ ಜನಪರ ಯೋಜನೆಗಳಿಗೆ ನಾಂದಿಯಾಡಿದರು. ನಾಲ್ಕು ಬಾರಿ ಮುಖ್ಯಮಂತ್ರಿಯಾಗಿ ನಾಡನ್ನು ಆಳುವ ಮೂಲಕ ರಾಜ್ಯವನ್ನು ಸಮರ್ಥವಾಗಿ ಅಭಿವೃದ್ಧಿಯತ್ತ ಮುನ್ನಡೆಸಿದರು.