ನಿರ್ಮಾಪಕರಿಗೆ ಜೀವ ಬೆದರಿಕೆ ಹಾಕಿರುವ ಆರೋಪ:ಛಾಯಾಗ್ರಾಹಕನ ವಿರುದ್ಧ ದೂರು ದಾಖಲು

Crime Logo
Published on

ಬೆಂಗಳೂರು: ಚಿತ್ರೀಕರಣವಾಗಿದ್ದ ಸಿನಿಮಾ ದೃಶ್ಯಗಳಿದ್ದ ಹಾರ್ಡ್ ಡಿಸ್ಕ್ ಕೊಡದೇ ಮತ್ತು ನಿರ್ಮಾಪಕರಿಗೆ ಜೀವ ಬೆದರಿಕೆ ಹಾಕಿರುವ ಆರೋಪದಡಿ ಛಾಯಾಗ್ರಾಹಕನ ವಿರುದ್ಧ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಸಮುದ್ರಂ’ ಸಿನಿಮಾದ ನಿರ್ಮಾಪಕಿ ಪಿ.ಆರ್.ರಾಜಲಕ್ಷ್ಮಿ ನೀಡಿರುವ ದೂರಿನನ್ವಯ ಛಾಯಾಗ್ರಾಹಕ ರಿಷಿಕೇಶ್ ವಿರುದ್ಧ ಎ್ಐಆರ್ ದಾಖಲಾಗಿದೆ. ನಟಿ ಹಾಗೂ ಸಹ ನಿರ್ಮಾಪಕಿ ಅನಿತಾ ಭಟ್ ಮುಖ್ಯ ಭೂಮಿಕೆಯಲ್ಲಿರುವ ‘ಸಮುದ್ರಂ’ ಸಿನಿಮಾವನ್ನು ರಾಜಲಕ್ಷ್ಮಿ ಸಿನಿ ಕ್ರಿಯೇಷನ್ಸ್ ಹೆಸರಿನಲ್ಲಿ ನಿರ್ಮಾಣ ಮಾಡಲಾಗುತ್ತಿತ್ತು. ಈ ಚಿತ್ರಕ್ಕೆ ರಿಷಿಕೇಶ್ ಛಾಯಾಗ್ರಾಹಕನಾಗಿದ್ದು, ರಾಜಲಕ್ಷ್ಮಿ ಅವರು ಬಂಡವಾಳ ಹೂಡಿದ್ದರು. ಚಿತ್ರದ ಸಂಗೀತ, ಡಬ್ಬಿಂಗ್, ರೀ ರೆಕಾರ್ಡಿಂಗ್, ಎಡಿಟಿಂಗ್ ಸೇರಿ ಪ್ರಮುಖ ಜವಬ್ದಾರಿಯನ್ನು ರಿಷಿಕೇಶ್ ವಹಿಸಿಕೊಂಡಿದ್ದರು. ಇದಕ್ಕಾಗಿ ಅವರು ಹಂತ ಹಂತವಾಗಿ ೧೯ ಲಕ್ಷ ರೂ. ಅನ್ನು ಆನ್‌ಲೈನ್ ಮೂಲಕ ಹಾಗೂ ನಗದು ರೂಪದಲ್ಲಿ ಮತ್ತಷ್ಟು ಹಣವನ್ನು ನಿರ್ಮಾಪಕರಿಂದ ಪಡೆದುಕೊಂಡಿದ್ದರು. ಆದರೆ, ಅರ್ಧ ಶೂಟಿಂಗ್ ಮುಗಿಯುವಷ್ಟರಲ್ಲೇ ಚಿತ್ರ ತಂಡದಿಂದ ದೂರ ಸರಿದಿದ್ದ ರಿಷಿಕೇಶ್, ತಾನು ಹೇಳಿದವರನ್ನು ಸಹ ನಿರ್ಮಾಪಕರನ್ನಾಗಿ ಸೇರಿಸಿಕೊಳ್ಳಬೇಕು. ಇಲ್ಲವಾದರೆ ಚಿತ್ರೀಕರಣವಾಗಿರುವ ಚಿತ್ರದ ೪ ಹಾರ್ಡ್ ಡಿಸ್ಕ್‌ಗಳನ್ನು ಕೊಡುವುದಿಲ್ಲ ಹಾಗೂ ಉಳಿದ ಕೆಲಸಗಳನ್ನು ಪೂರ್ಣಗೊಳಿಸುವುದಿಲ್ಲ ಎಂದಿದ್ದರು. ಸುಮಾರು ಹತ್ತು ತಿಂಗಳಿನಿಂದ ಹಾರ್ಡ್ ಡಿಸ್ಕ್ ಕೊಡದೇ ಮತ್ತು ಕರೆ ಮಾಡಿ ವಿಚಾರಿಸಿದರೆ ನನಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಜೀವ ಬೆದರಿಕೆ ಹಾಕುತ್ತಿದ್ದಾನೆ ಎಂದು ನಿರ್ಮಾಪಕಿ ರಾಜಲಕ್ಷ್ಮಿ ಛಾಯಗ್ರಾಹಕ ರಿಶಿಕೇಶ್ ವಿರುದ್ಧ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net