

ಕೋಲಾರ: ಕೋಲಾರ ಮೀಸಲು ಲೋಕಸಭಾ ಕ್ಷೇತ್ರದ ಮತ ಎಣಿಕೆ ಪ್ರಕ್ರಿಯೆಯು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ಸುಸೂತ್ರವಾಗಿ ನಡೆಯಿತು.
ಬೆಳಗ್ಗೆ 7.30 ಗಂಟೆಗೆ ಭದ್ರತಾ ಕೊಠಡಿಗಳನ್ನು ತೆರೆದು ಮೊದಲಿಗೆ ಅಂಚೆ ಮತ ಹಾಗೂ ಇಪಿಪಿಟಿಎಸ್ ಮತಗಳ ಎಣಿಕೆ ನಡೆಯಿತು. ಆನಂತರ ವಿದ್ಯುನ್ ಮತಯಂತ್ರಗಳ ಎಣಿಕೆ 8ರಿಂದ ಆರಂಭವಾಯಿತು. ಆಗ ಕೇಂದ್ರದ ಬಳಿ ಬೆರಳೆಣಿಕೆ ಜನರಿದ್ದರು. ಸಮಯ ಕಳೆದಂತೆ ಜನಜಂಗುಳಿ ಹೆಚ್ಚುತ್ತಾ ಹೋಯಿತು. ಎಣಿಕೆ ಮಧ್ಯದಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರದ ತಲಾ 5 ಬೂತ್ನ ಮತ ಖಾತ್ರಿ ಯಂತ್ರದಲ್ಲಿನ (ವಿ.ವಿ ಪ್ಯಾಟ್) ಮತಗಳನ್ನು ಎಣಿಕೆ ಮಾಡಲಾಯಿತು. ನಂತರ ಇವಿಎಂ ಮತಗಳೊಂದಿಗೆ ತಾಳೆ ಹಾಕಲಾಯಿತು.
ಮತ ಎಣಿಕೆ ಮುಂದುವರಿದಂತೆ ಅಭ್ಯರ್ಥಿಗಳು ಹಾಗೂ ಕಾರ್ಯಕರ್ತರ ಎದೆಯಲ್ಲಿ ಸೋಲು ಗೆಲುವಿನ ಢವ ಢವ ಶುರುವಾಯಿತು. ಕ್ಷೇತ್ರದ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳ ಮತಎಣಿಕೆಗೆ ಕಾಲೇಜಿನ ಪ್ರತ್ಯೇಕ ಕೊಠಡಿಗಳಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಒಟ್ಟಾರೆಯಾಗಿ ಶ್ರೀನಿವಾಸಪುರ 21, ಚಿಂತಾಮಣಿ, ಮುಳಬಾಗಿಲು, ಕೋಲಾರ ತಲಾ 20, ಶಿಡ್ಲಟ್ಟ, ಕೋಲಾರ 18, ಕೆಜಿಎ್ 16, ಬಂಗಾರಪೇಟೆ 19 ಸುತ್ತುಗಳಲ್ಲಿ ಎಣಿಕೆ ನಡೆಯಿತು. ಪ್ರತಿ ಸುತ್ತಿನ ಅಂಕಿ ಆಂಶದ ಮಾಹಿತಿಯನ್ನು ಅಧಿಕಾರಿಗಳು ಸಾರ್ವಜನಿಕರಿಗೆ ಪ್ರಕಟಿಸಿದರು.
ಕೋಲಾರ ಕ್ಷೇತ್ರದಿಂದ ಅಂತಿಮ ಕಣದಲ್ಲಿದ್ದ 18 ಅಭ್ಯರ್ಥಿಗಳ ಮಧ್ಯಾಹ್ನ 2 ಗಂಟೆ ಸುಮಾರಿಗೆ ಪ್ರಕಟವಾಯಿತು. ಗೆಲುವು ಸಾಧಿಸಿದ ಜೆಡಿಎಸ್ ಎಂ.ಮಲ್ಲೇಶ್ ಬಾಬು ಎಣಿಕೆ ಕೇಂದ್ರದಿಂದ ಹೊರಬಂದು ಪಕ್ಷದ ಕಾರ್ಯಕರ್ತರು, ಮುಖಂಡರು ಹಾಗೂ ಬೆಂಬಲಿಗರೊಂದಿಗೆ ಸಂತಸ ಹಂಚಿಕೊಂಡರು.
ಜೆಡಿಎಸ್&ಬಿಜೆಪಿ ಪಕ್ಷಗಳ ಕಾರ್ಯಕರ್ತರು ಮಲ್ಲೇಶ್ ಬಾಬು ಅವರನ್ನು ಹೆಗಲ ಮೇಲೆ ಹೊತ್ತು ಸಾಗಿದರು. ಬೆಂಬಲಿಗರು ಅಭ್ಯರ್ಥಿಗಳಿಗೆ ಹೂವಿನ ಹಾರ ಹಾಕಿ ಜೈಕಾರ ಕೂಗಿದರು. ಜತೆಗೆ ಸಿಹಿ ಹಂಚಿ ಸಂಭ್ರಮಿಸಿದರು.
ಮತ ಎಣಿಕೆಗೆ ನಿಯೋಜನೆಗೊಂಡಿದ್ದ ಸಿಬ್ಬಂದಿ ಹಾಗೂ ಭದ್ರತೆ ಕಾರ್ಯದಲ್ಲಿದ್ದ ಪೊಲೀಸರಿಗೆ ಬೆಳಗ್ಗೆ ಉಪಹಾರ, ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಲಾಗಿತ್ತು.
ಕೇಂದ್ರದ ಸುತ್ತಮುತ್ತ ಮುನ್ನೆಚ್ಚರಿಕೆ ಕ್ರಮವಾಗಿ ನಿಷೇಧಾಜ್ಞೆ ಜಾರಿಗೊಳಿಸಿ ಬಿಗಿಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಪೊಲೀಸರು ಹಾಗೂ ಗೃಹರಕ್ಷಕ ದಳ ಸಿಬ್ಬಂದಿ ಸೇರಿದಂತೆ ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿತ್ತು. ಮತ ಎಣಿಕೆ ಹಿನ್ನೆಲೆಯಲ್ಲಿ ಕಾಲೇಜಿನ ಅಕ್ಕಪಕ್ಕದ ಬಂಗಾರಪೇಟೆ ರಸ್ತೆ, ಅಂಚೆ ಕಚೇರಿ ರಸ್ತೆ, ಸರ್ವಜ್ಞ ರಸ್ತೆಯಲ್ಲಿ ಬ್ಯಾರಿಕೇಡ್ ಹಾಕಿ ಸಂಜೆವರೆಗೆ ವಾಹನ ಸಂಚಾರ ನಿರ್ಬಂಧಿಸಲಾಗಿತ್ತು.
ಅಭ್ಯರ್ಥಿಗಳ ಬೆಂಬಲಿಗರು, ಏಜೆಂಟ್ರು ಹಾಗೂ ಪಕ್ಷಗಳ ಕಾರ್ಯಕರ್ತರ ಆರ್ಟಿಒ ಕಚೇರಿ ಆವರಣ, ಸಿ.ಬೈರೇಗೌಡ ನಗರ, ಜಿಪಂ ಮುಂಭಾಗದ ಲಾರಿ ನಿಲ್ದಾಣ, ಮಣಿಘಟ್ಟ ರಸ್ತೆ, ನಚಿಕೇತನ ವಿದ್ಯಾರ್ಥಿನಿಲಯದ ಆವರಣ, ಕೋಲಾರಮ್ಮ ದೇವಸ್ಥಾನದ ಮುಂಭಾಗ, ಇಟಿಸಿಎಂ ವೃತ್ತ, ಕೆಇಬಿ ಕಚೇರಿ ಮುಂದೆ, ಮೆಥೋಡಿಸ್ಟ್ ಶಾಲೆ ಬಳಿ ತಮ್ಮ ವಾಹನಗಳನ್ನು ನಿಲ್ಲಿಸಲು ವ್ಯವವಸ್ಥೆ ಮಾಡಲಾಗಿತ್ತು.